ಆ್ಯಪ್ನಗರ

ಬಿಇಎಲ್‌ನಲ್ಲಿ ಕೆಲಸದ ಆಮಿಷ: 14 ಮಂದಿಗೆ ಮೋಸ

ಕೇಂದ್ರ ಸರಕಾರಿ ಸ್ವಾಮ್ಯದ ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ನಲ್ಲಿ (ಬಿಇಎಲ್‌) ಕೆಲಸ ಕೊಡಿಸುವುದಾಗಿ ನಂಬಿಸಿ 14 ಜನರಿಂದ ತಲಾ 1.5 ಲಕ್ಷ ರೂ. ಪಡೆದು ನಕಲಿ ನೇಮಕಾತಿ ಪ್ರತಿ ನೀಡಿ ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ.

Vijaya Karnataka 6 Feb 2019, 5:00 am
ಬೆಂಗಳೂರು : ಕೇಂದ್ರ ಸರಕಾರಿ ಸ್ವಾಮ್ಯದ ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ನಲ್ಲಿ (ಬಿಇಎಲ್‌) ಕೆಲಸ ಕೊಡಿಸುವುದಾಗಿ ನಂಬಿಸಿ 14 ಜನರಿಂದ ತಲಾ 1.5 ಲಕ್ಷ ರೂ. ಪಡೆದು ನಕಲಿ ನೇಮಕಾತಿ ಪ್ರತಿ ನೀಡಿ ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ.
Vijaya Karnataka Web person cheated 14 people
ಬಿಇಎಲ್‌ನಲ್ಲಿ ಕೆಲಸದ ಆಮಿಷ: 14 ಮಂದಿಗೆ ಮೋಸ


ಕಾವಲ್‌ಭೈರಸಂದ್ರದ ನಿವಾಸಿ ಗಂಗಾಧರಪ್ಪ ಎಂಬುವರು ಜಾಲಹಳ್ಳಿ ಠಾಣೆಯಲ್ಲಿ ನಯಾಜ್‌ ಪಾಷಾ ಮತ್ತು ಸುಲ್ತಾನ್‌ ಎಂಬುವರ ವಿರುದ್ಧ ದೂರು ನೀಡಿದ್ದಾರೆ.

ಗಂಗಾಧರಪ್ಪ ಅವರಿಗೆ ನಯಾಜ್‌ ಆಕಸ್ಮಿಕವಾಗಿ ಪರಿಚಯವಾಗಿದ್ದ. 'ಬಿಇಎಲ್‌ನಲ್ಲಿ ಮಗನಿಗೆ ಕೆಲಸ ಕೊಡಿಸುವುದಾಗಿ ನಂಬಿಸಿದ್ದ. ಬಿಇಎಎಲ್‌ ಎಂ.ಡಿಗೆ 5 ಲಕ್ಷ ರೂ. ಕೊಡಬೇಕು. ಆಯ್ಕೆ ಪಟ್ಟಿಯಲ್ಲಿ ಹೆಸರು ಪ್ರಕಟವಾದ ವೇಳೆ 1.5 ಲಕ್ಷ ರೂ. ಹಾಗೂ ಕೆಲಸ ಸಿಕ್ಕ ಮೇಲೆ ಬಾಕಿ 3.5 ಲಕ್ಷ ರೂ. ಕೊಡಬೇಕು ಎಂದು ಹೇಳಿದ್ದ' ಎಂದು ದೂರಿನಲ್ಲಿ ವಿವರಿಸಲಾಗಿದೆ.

ಮಗನಿಗೆ ಮಾತ್ರವಲ್ಲದೆ ವಿಶ್ವಾಸಾರ್ಹ ಯುವಕರು ಇದ್ದರೆ ಅವರಿಗೂ ಕೆಲಸ ಕೊಡಿಸುತ್ತೇನೆ ಎಂದು ನಯಾಜ್‌ ಗಂಗಾಧರಪ್ಪರಿಗೆ ಹೇಳಿದ್ದ. ಹೀಗಾಗಿ, ಮಗನಿಗೆ ಪರಿಚಯ ಇರುವ 13 ಜನ ಯುವಕ, ಯುವತಿಯರನ್ನು ಆರೋಪಿಗೆ ಸಂಪರ್ಕ ಮಾಡಿಸಿಕೊಟ್ಟಿದ್ದರು. ಎಲ್ಲರೂ ತಲಾ 1.5 ಲಕ್ಷ ರೂ. ಅನ್ನು ನಯಾಜ್‌ ಪಾಷಾ ಕೊಟ್ಟಿದ್ದರು. ಹಣವನ್ನು ಕೊಳ್ಳೆಗಾಲದ ಐಡಿಬಿಐ ಬ್ಯಾಂಕ್‌ ಖಾತೆಗೆ ಜಮೆ ಮಾಡಲಾಗಿತ್ತು. ಹಣ ಪಡೆದ ಎರಡೂವರೆ ತಿಂಗಳ ಬಳಿಕ ಎಲ್ಲ ಅಭ್ಯರ್ಥಿಗಳ ವಾಟ್ಸ್‌ಆ್ಯಪ್‌ಗೆ 76 ಹೆಸರು ಇರುವ ಆಯ್ಕೆಪಟ್ಟಿಯನ್ನು ಕಳುಹಿಸಿದ್ದ. ಅದರಲ್ಲಿ ಹಣ ಕೊಟ್ಟಿದ್ದ 14 ಉದ್ಯೋಗಾಕಾಂಕ್ಷಿಗಳ ಹೆಸರುಗಳು ಇದ್ದವು. 2018 ನ.28ಕ್ಕೆ ಬಿಇಎಲ್‌ನಲ್ಲಿ ಸಂದರ್ಶನ ಇದೆ. ಎಲ್ಲರೂ ದಾಖಲೆ ಸಮೇತ ತೆರಳುವಂತೆ ಹೇಳಿದ್ದ. ಆದರೆ, ಒಂದು ದಿನ ಮೊದಲು ಕರೆ ಮಾಡಿದ ಸುಲ್ತಾನ ಎಂಬಾಕೆ, ತಾನು ಬಿಎಎಲ್‌ ಎಂ.ಡಿಯ ಆಪ್ತ ಕಾರ್ಯದರ್ಶಿಯಾಗಿದ್ದು, ಸಂದರ್ಶನವನ್ನು ನ.29ಕ್ಕೆ ಮುಂದೂಡಲಾಗಿದೆ ಎಂದು ಮಾಹಿತಿ ನೀಡಿದ್ದಳು. ಅನುಮಾನಗೊಂಡ ಎಲ್ಲರೂ ಬಿಇಎಲ್‌ ಕಚೇರಿಗೆ ತೆರಳಿ ವಿಚಾರಿಸಿದಾಗ ನಯಾಜ್‌ ಪಾಷಾ ಕಳುಹಿಸಿದ್ದು ನಕಲಿ ಆಯ್ಕೆ ಪಟ್ಟಿ ಎಂಬುದು ಗೊತ್ತಾಗಿದೆ.

ನಯಾಜ್‌ ಪಾಷಾಗೆ ಕರೆ ಮಾಡಿ ಪ್ರಶ್ನಿಸಿದಾಗ ಬೆದರಿಸಿದ್ದು, ಇದೀಗ ಫೋನ್‌ ಸ್ವಿಚ್‌ ಆಫ್‌ ಮಾಡಿಕೊಂಡಿದ್ದಾನೆ. ಹೀಗಾಗಿ, ವಂಚನೆ ಮಾಡಿರುವ ಆರೋಪಿ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಗಂಗಾಧರಪ್ಪ ಕೋರಿದ್ದಾರೆ.


ಸಿಂಗಾಪುರದಲ್ಲಿ ಕೆಲಸ ಕೊಡಿಸುವುದಾಗಿ ವಂಚನೆ

ಸಿಂಗಾಪುರದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ವಂಚನೆ ಮಾಡಿರುವ ಕುರಿತು ನಗರದಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

ಈಜಿಪುರದ ಕಾಂಚನಾ ಎಂಬುವರ ವಿರುದ್ಧ ರಾಮಮೂರ್ತಿ ನಗರದ ಬಿ.ಎನ್‌.ಪ್ರವೀಣ್‌ ಮತ್ತು ಎ.ಎಂ.ಪವನ್‌ ತೇಜ ಎಂಬುವವರು ವಿವೇಕನಗರ ಠಾಣೆಗೆ ದೂರು ನೀಡಿದ್ದಾರೆ.

2018ರ ಫೆಬ್ರವರಿಯಲ್ಲಿ ಏಜೆನ್ಸಿಯೊಂದರ ಜಾಹೀರಾತು ನೋಡಿ ಕರೆ ಮಾಡಿದಾಗ ಕಾಂಚನಾ ಎಂಬಾಕೆ ಮಾತನಾಡಿದ್ದಾಳೆ. ಸಿಂಗಾಪುರದಲ್ಲಿ ಕೆಲಸ ಗಿಟ್ಟಿಸಿಕೊಳ್ಳಬೇಕೆಂದರೆ 30 ಸಾವಿರ ರೂ. ಶುಲ್ಕ ಪಾವತಿಸಬೇಕೆಂದು ಹೇಳಿ ಹಣ ಪಡೆದು 15 ದಿನಗಳ ಒಳಗಾಗಿ ಆಫರ್‌ ಲೆಟರ್‌, ವೀಸಾ ಕೊಡುವುದಾಗಿ ಹೇಳಿದ್ದಳು. ಹೀಗಾಗಿ, ಪ್ರವೀಣ್‌ ಮತ್ತು ಪವನ್‌ ತಲಾ 30 ಸಾವಿರ ರೂ. ಪಾವತಿ ಮಾಡಿದ್ದರು. ಐದು ತಿಂಗಳಾದರೂ ಯಾವುದೇ ಪ್ರತಿಕ್ರಿಯೆ ಇರಲಿಲ್ಲ. ಪುನಃ ಕರೆ ಮಾಡಿ ವಿಚಾರಿಸಿದಾಗ ಪೂರ್ಣ ಹಣ ಪಾವತಿಸಿದರೆ 1 ವಾರದಲ್ಲಿ ಸಿಂಗಾಪುರಕ್ಕೆ ಕಳುಹಿಸುವುದಾಗಿ ಹೇಳಿದ್ದಳು. ಉದ್ಯೋಗದ ಆಸೆಯಿಂದ ಪ್ರವೀಣ್‌, 5 ಲಕ್ಷ ರೂ. ಪಾವತಿಸಿದ್ದು, ಹಣ ಪಡೆದ ಮಹಿಳೆ ಸಂಪರ್ಕ ಕಡಿತ ಮಾಡಿಕೊಂಡು ತಲೆಮರೆಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

2.30 ಲಕ್ಷ ರೂ. ವಂಚನೆ : ಸಿಂಗಾಪುರದಲ್ಲಿ ಸಾಫ್ಟ್‌ವೇರ್‌ ಉದ್ಯೋಗ ಕೊಡಿಸುವುದಾಗಿ ನಂಬಿಸಿ 2.30 ಲಕ್ಷ ರೂ. ಪಡೆದು ವಂಚನೆ ಮಾಡಲಾಗಿದೆ ಎಂದು ಆರೋಪಿಸಿ ನಾಗಮಲ್ಲೇಶ್ವರ ರಾವ್‌ ಎಂಬುವರು ಮಾರತ್ತಹಳ್ಳಿ ಠಾಣೆಗೆ ದೂರು ಕೊಟ್ಟಿದ್ದಾರೆ.

ನಗರದ ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ನಾಗೇಶ್ವರ ಅವರಿಗೆ ಪರಿಚಯವಾದ ಲೊಕೇಶ ಮತ್ತು ಜ್ಯೋತಿ ಎಂಬುವರು, ಸಿಂಗಾಪುರದಲ್ಲಿ ಕೆಲಸ ಕೊಡಿಸುತ್ತೇವೆ. ಅಲ್ಲಿಗೆ ಕಳುಹಿಸಲು ವೀಸಾ ಶುಲ್ಕ ಕಟ್ಟಬೇಕು ಎಂದು ಹೇಳಿ ಆನ್‌ಲೈನ್‌ ಮೂಲಕ ಹಂತ ಹಂತವಾಗಿ 2.30 ಲಕ್ಷ ರೂ. ಪಡೆದು ವಂಚಿಸಿದ್ದಾರೆಂದು ದೂರಿನಲ್ಲಿ ಆರೋಪಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ