ಆ್ಯಪ್ನಗರ

ಮಾದಕ ಜಾಲದ ವಿರುದ್ಧ ಮುಂದುವರಿದ ದಾಳಿ

ಬೆಂಗಳೂರು ನಗರ ಕಮಿಷನರೇಟ್‌ ವ್ಯಾಪ್ತಿಯಲ್ಲಿ ಮಾದಕವಸ್ತು ಮಾರಾಟ ಜಾಲದ ವಿರುದ್ಧ ಸಿಸಿಬಿ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದು, ನಾನಾ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ಮೂವರು ಆರೋಪಿಗಳನ್ನು ಬಂಧಿಸಿ ಲಕ್ಷಾಂತರ ರೂ. ಮೌಲ್ಯದ ಮಾದಕ ವಸ್ತು ವಶಪಡಿಸಿಕೊಂಡಿದ್ದಾರೆ.

Vijaya Karnataka 10 Oct 2018, 5:00 am
ಬೆಂಗಳೂರು: ಬೆಂಗಳೂರು ನಗರ ಕಮಿಷನರೇಟ್‌ ವ್ಯಾಪ್ತಿಯಲ್ಲಿ ಮಾದಕವಸ್ತು ಮಾರಾಟ ಜಾಲದ ವಿರುದ್ಧ ಸಿಸಿಬಿ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದು, ನಾನಾ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ಮೂವರು ಆರೋಪಿಗಳನ್ನು ಬಂಧಿಸಿ ಲಕ್ಷಾಂತರ ರೂ. ಮೌಲ್ಯದ ಮಾದಕ ವಸ್ತು ವಶಪಡಿಸಿಕೊಂಡಿದ್ದಾರೆ.
Vijaya Karnataka Web police continued raid over drug mafia
ಮಾದಕ ಜಾಲದ ವಿರುದ್ಧ ಮುಂದುವರಿದ ದಾಳಿ


ಎಚ್‌ಎಸ್‌ಆರ್‌ ಬಡಾವಣೆಯ ಪರಂಗಿಪಾಳ್ಯದ ನಿವಾಸಿ ಬಾಲು (27) , ಸಿಲ್ವರ್‌ ಕೌಂಟಿ ಅಪಾರ್ಟ್‌ಮೆಂಟ್‌ನಲ್ಲಿ ನೆಲೆಸಿರುವ ಸನೋಜ್‌ ಕೃಷ್ಣನ್‌ ಮತ್ತು ವರ್ತೂರಿನ ನಿವಾಸಿ ಸೋಮಣ್ಣ ಬಂಧಿತ ಆರೋಪಿಗಳು. ಇವರಿಂದ ಎಂಡಿಎಂಎ ಮತ್ತು ಗಾಂಜಾ ವಶಪಡಿಸಿಕೊಳ್ಳಲಾಗಿದೆ. ದಾಳಿ ವೇಳೆ ಉಳಿದಿಬ್ಬರು ಆರೋಪಿಗಳು ಪರಾರಿಯಾಗಿದ್ದು, ಅವರ ಬಂಧನಕ್ಕೆ ಕಾರ್ಯಾಚರಣೆ ಮುಂದುವರಿದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಎಚ್‌ಎಸ್‌ಆರ್‌ ಬಡಾವಣೆಯ ಎರಡನೇ ಹಂತದ 24ನೇ ಮುಖ್ಯ ರಸ್ತೆಯ ಉಡುಪಿ ಪ್ಯಾಲೇಸ್‌ ಹೋಟೆಲ್‌ ಮುಂಭಾಗ ಇಬ್ಬರು ಮಾದಕ ವಸ್ತು ಮಾರಾಟ ಮಾಡುತ್ತಿದ್ದಾರೆ ಎನ್ನುವ ಸುಳಿವು ಹಿಡಿದ ಸಿಸಿಬಿ ತಂಡ ಮಫ್ತಿಯಲ್ಲಿ ತೆರಳಿ, ಬಾಲು ಮತ್ತು ಸನೋಜ್‌ ಇಬ್ಬರನ್ನೂ ಬಂಧಿಸಿದ್ದಾರೆ. ಅವರ ಬಳಿ 24 ಗ್ರಾಂ ತೂಕದ ಎಂಡಿಎಂಎ ಮಾತ್ರೆಗಳು ಹಾಗೂ 5 ಕೆ.ಜಿ ತೂಕದ ಗಾಂಜಾ ಪತ್ತೆಯಾಗಿದೆ. ಇವುಗಳ ಮೌಲ್ಯ ಸುಮಾರು 4 ಲಕ್ಷ ರೂ.

ಗ್ರಾಂಗೆ 5 ಸಾವಿರ: ಮಹಾರಾಷ್ಟ್ರ ಮತ್ತು ಗೋವಾದ ಮಾದಕ ವಸ್ತು ಡೀಲರ್‌ಗಳ ಮೂಲಕ 10 ಗ್ರಾಂಗೆ 10 ಸಾವಿರ ರೂ. ಕೊಟ್ಟು ತರುವ ಆರೋಪಿಗಳು, ಬೆಂಗಳೂರಿನಲ್ಲಿ ಪ್ರತೀ ಗ್ರಾಂ ಪ್ರತ್ಯೇಕ ಪ್ಯಾಕೆಟ್‌ಗಳನ್ನು ಮಾಡಿ ಒಂದೊಂದು ಗ್ರಾಂ ಎಂಡಿಎಂಎ ಮಾತ್ರೆಯನ್ನು 5 ಸಾವಿರಕ್ಕೆ ಮಾರಾಟ ಮಾಡುತ್ತಿದ್ದರು. ವಿದ್ಯಾರ್ಥಿಗಳಿಗೆ ಹೆಚ್ಚು ಬೆಲೆಯ ಮಾದಕ ವಸ್ತು ಮಾರಿದರೆ, ಉಳಿದವರಿಗೆ ಕಡಿಮೆ ಬೆಲೆಯ ಗಾಂಜಾ ಮಾರುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಸಿಸಿಬಿಯ ಮತ್ತೊಂದು ತಂಡ ನಡೆಸಿದ ದಾಳಿಯಲ್ಲಿ ವೈಟ್‌ಫೀಲ್ಡ್‌ ಠಾಣೆ ವ್ಯಾಪ್ತಿಯಲ್ಲಿ ಸೋಮಣ್ಣ (36) ಎಂಬುವನನ್ನು ಬಂಧಿಸಿ ಒಂದು ಕೆ.ಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ. ವೈಟ್‌ಫೀಲ್ಡ್‌ ಸಮೀಪದ ಸಿದ್ದಾಪುರದಲ್ಲಿರುವ ಚೆಲ್ಸಾ ಬೇಕರಿ ಮತ್ತು ಸ್ವೀಟ್‌ ಸ್ಟಾಲ್‌ ಎದುರಿಗೇ ತನ್ನ ಕಾಯಂ ಅಡ್ಡ ಮಾಡಿಕೊಂಡಿದ್ದ ಈತ, ಅಲ್ಲಿಗೆ ಟೆಕ್ಕಿಗಳು ಹಾಗೂ ವಿದ್ಯಾರ್ಥಿಗಳನ್ನು ಕರೆಸಿಕೊಂಡು ಗಾಂಜಾ ಮಾರಾಟ ಮಾಡುತ್ತಿದ್ದ. ಈ ಸುಳಿವು ಸಿಕ್ಕ ನಂತರ ಎರಡು ದಿನ ಕಾಲ ಸಿಸಿಬಿ ಸಿಬ್ಬಂದಿ ಮಪ್ತಿಯಲ್ಲಿ ಬೇಕರಿ ಸುತ್ತಮುತ್ತ ನಿಗಾ ಇಟ್ಟಿದ್ದರು. ಈ ವೇಳೆ ಟಾಟಾ ಇಂಡಿಕಾ ಕಾರಿನಲ್ಲಿ ಬಂದ ಆರೋಪಿ ಮಾದಕ ವಸ್ತು ಮಾರಾಟ ಮಾಡುವಾಗ ಸಿಕ್ಕಿ ಬಿದ್ದಿದ್ದಾನೆ. ಈತನಿಂದ 3 ಲಕ್ಷ ರೂ. ಮೌಲ್ಯದ ಗಾಂಜಾ, ಟಾಟಾ ಇಂಡಿಕಾ ಕಾರು ಹಾಗೂ ಮೂರು ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ