ಆ್ಯಪ್ನಗರ

ಹೈಟೆಕ್‌ ಕಳ್ಳಿಗಾಗಿ ಪೊಲೀಸರ ಶೋಧ

ಗ್ರಾಹಕರ ಸೋಗಿನಲ್ಲಿ ಬಂದು ಫ್ಯಾಷನ್‌ ವಸ್ತ್ರ ಮಳಿಗೆಗಳಲ್ಲಿ ಬೆಲೆಬಾಳುವ ವಸ್ತ್ರಗಳನ್ನು ಕಳವು ಮಾಡುತ್ತಿರುವ ಸುಮಾರು 30 ವರ್ಷ ವಯಸ್ಸಿನ ಮಹಿಳೆಗಾಗಿ ನಗರ ಪೊಲೀಸರು ಶೋಧ ನಡೆಸುತ್ತಿದ್ದಾರೆ.

Vijaya Karnataka 17 Jun 2018, 9:57 am
ಬೆಂಗಳೂರು: ಗ್ರಾಹಕರ ಸೋಗಿನಲ್ಲಿ ಬಂದು ಫ್ಯಾಷನ್‌ ವಸ್ತ್ರ ಮಳಿಗೆಗಳಲ್ಲಿ ಬೆಲೆಬಾಳುವ ವಸ್ತ್ರಗಳನ್ನು ಕಳವು ಮಾಡುತ್ತಿರುವ ಸುಮಾರು 30 ವರ್ಷ ವಯಸ್ಸಿನ ಮಹಿಳೆಗಾಗಿ ನಗರ ಪೊಲೀಸರು ಶೋಧ ನಡೆಸುತ್ತಿದ್ದಾರೆ.
Vijaya Karnataka Web police investigation


ಶಂಕಿತ ಮಹಿಳೆ ಇಬ್ಬಲೂರಿನ ಮಳಿಗೆಯೊಂದರಲ್ಲಿ ಸುಮಾರು 1 ಲಕ್ಷ ರೂ. ಮೌಲ್ಯದ ಸೀರೆ ಹಾಗೂ ಬ್ಲೌಸ್‌ಗಳನ್ನು ಕಳವು ಮಾಡಿದ್ದು, ಅದೇ ರೀತಿ ಸುಮಾರು ಆರು ವಸ್ತ್ರ ಮಳಿಗೆಗಳಲ್ಲಿ ತನ್ನ ಕೈಚಳಕ ತೋರಿಸಿರುವ ಶಂಕೆ ಇದೆ. ಗ್ರಾಹಕರ ಸೋಗಿನಲ್ಲಿ ಬಂದು ಕಳ್ಳತನ ಮಾಡುವ ಮಹಿಳೆಯ ಕೃತ್ಯ ಮಳಿಗೆಯೊಂದರಲ್ಲಿನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಇಬ್ಬಲೂರಿನಲ್ಲಿರುವ ಮಾರ್ಷಲ್‌ ಲೇಕ್‌ ವ್ಯೂ ಅಪಾರ್ಟ್‌ಮೆಂಟ್‌ ಪಕ್ಕದಲ್ಲೇ ಇರುವ ಕಟ್ಟಡವೊಂದರಲ್ಲಿ ಇಂದ್ರಾಣಿ ರಾಯನ್‌ ಎಂಬುವರು ವಸ್ತ್ರ ಮಳಿಗೆ ನಡೆಸುತ್ತಿದ್ದಾರೆ. ಜೂ.12ರಂದು ನೇಹಾ ಎಂದು ಹೆಸರು ಹೇಳಿ ಪರಿಚಯ ಮಾಡಿಕೊಂಡ ಮಹಿಳೆ, ''ಕೆಲವು ವಸ್ತ್ರಗಳು ಬೇಕಿವೆ, ನಿಮ್ಮ ಮಳಿಗೆಯ ವಿಳಾಸ ನೀಡಿ'' ಎಂದು ಕರೆ ಮಾಡಿದ್ದರು. ಹತ್ತು ನಿಮಿಷ ಬಿಟ್ಟು ಕರೆ ಮಾಡಿ ಎಂದು ಇಂದ್ರಾಣಿ ಹೇಳಿದ್ದಾರೆ. ಆದರೆ, ಕೆಲ ಹೊತ್ತಿನಲ್ಲೇ ಆ ಮಹಿಳೆ ಮಳಿಗೆಗೆ ಬಂದಿದ್ದರು ಎಂದು ಮಳಿಗೆ ಮಾಲೀಕ ಧೀರೇನ್‌ ತಿಳಿಸಿದರು.

ನಾವು ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಂನಲ್ಲಿ ಗ್ರಾಹಕರ ಸಂಪರ್ಕಕ್ಕಾಗಿ ಹಾಕಿರುವ ಫೋನ್‌ ನಂಬರ್‌ಗೆ ಕರೆ ಮಾಡುವ ಗ್ರಾಹಕರು ವಿಳಾಸ ಕೇಳಿಕೊಂಡು ಬರುತ್ತಾರೆ. ಆ ದಿನ ಬಂದ ಮಹಿಳೆ, ಸಂಬಂಧಿಕರ ಮದುವೆ ಇರುವ ಕಾರಣ ಕೆಲವು ಆರ್ಡರ್‌ಗಳನ್ನು ನೀಡಬೇಕಿದೆ ಎಂದು ಪತ್ನಿ ಇಂದ್ರಾಣಿಗೆ ಹೇಳಿದ್ದಳು. ಕೆಲ ಹೊತ್ತು ಮಾತನಾಡಿದ ಬಳಿಕ ಕುಡಿಯಲು ನೀರು ಕೊಡಿ ಎಂದು ಕೇಳಿದ್ದಾಳೆ. ನೀರು ತರಲು ಪತ್ನಿ ಮನೆಗೆ ಹೋಗಿದ್ದರು. ಹತ್ತೇ ನಿಮಿಷದಲ್ಲಿ ತಂದು ಕೊಟ್ಟ ನೀರು ಕುಡಿದ ಆಕೆ, ಯಾವುದೇ ವಸ್ತ್ರ ಖರೀದಿಸದೆ ಮಳಿಗೆಯಿಂದ ಹೊರಟು ಹೋಗಿದ್ದಾಳೆ ಎಂದು ಇಂದ್ರಾಣಿ ಪತಿ ಧಿರೇನ್‌ ತಿಳಿಸಿದರು.

ಅನಾರ್ಕಲಿ ಬ್ಲೌಸ್‌ ಕಳವು

ಅಪರಿಚಿತ ಮಹಿಳೆ ಹೊರಟ ಬಳಿಕ ಮಳಿಗೆಯಲ್ಲಿದ್ದ ಅನಾರ್ಕಲಿ ಬ್ಲೌಸ್‌ ಮತ್ತು ಸೀರೆ ಕಳವಾಗಿರುವುದು ಗೊತ್ತಾಗಿದೆ. ಹೀಗಾಗಿ, ಸಿಸಿ ಕ್ಯಾಮೆರಾ ಪರಿಶೀಲನೆ ನಡೆಸಿದಾಗ ನೇಹಾ ಎಂದು ಹೇಳಿಕೊಂಡು ಬಂದಿದ್ದ ಮಹಿಳೆಯೇ, ಒಂದು ಬ್ಯಾಗ್‌ನಲ್ಲಿ ಸೀರೆ ಮತ್ತು ಬ್ಲೌಸ್‌ಗಳನ್ನು ಹಾಕಿಕೊಂಡು ಮಳಿಗೆಯಿಂದ ಹೊರ ಹೋಗುತ್ತಿರುವುದು ಕಾಣಿಸಿದೆ. ಹೀಗಾಗಿ, ಕೂಡಲೇ ಆಕೆ ಫೋನ್‌ ಮಾಡಿದ್ದ ಸಂಖ್ಯೆಗೆ ಕರೆ ಮಾಡಿದಾಗ ಸ್ವಿಚ್ಡ್‌ ಆಫ್‌ ಬಂದಿದೆ. ಈ ಸಂಬಂಧ ಬೆಳ್ಳಂದೂರು ಠಾಣೆಗೆ ದೂರು ನೀಡಿರುವುದಾಗಿ ಧೀರೇನ್‌ ತಿಳಿಸಿದರು.

ಹಲವು ಕಡೆ ಕಳವು

ಖರೀದಿ ಸೋಗಿನಲ್ಲಿ ಬರುವ ಮಹಿಳೆಯ ಬಗ್ಗೆ ಎಚ್ಚರದಿಂದ ಇರಿ ಎಂದು ಬೇರೆ ಮಳಿಗೆಯ ಮಾಲೀಕರಿಗೆ ಮಾಹಿತಿ ನೀಡಲು ಮುಂದಾದಾಗ, ಇನ್ನಷ್ಟು ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿವೆ. ಒಟ್ಟು ಆರು ಮಳಿಗೆಗಳಲ್ಲಿ ಮಹಿಳೆ ಕಳ್ಳತನ ಮಾಡಿದ್ದು, ಈ ಪೈಕಿ ಒಂದು ಮಳಿಗೆಯಲ್ಲಿ ರೆಡ್‌ ಹ್ಯಾಂಡಾಗಿ ಸಿಕ್ಕಿದ್ದರು. ಆಗ ಮಾಲೀಕರು ಆಕೆಗೆ ಎಚ್ಚರಿಕೆ ನೀಡಿ ಕಳುಹಿಸಿ ಕೊಟ್ಟಿದ್ದರು ಎಂದು ಗೊತ್ತಾಗಿದೆ ಎಂದು ಧೀರೇನ್‌ ತಿಳಿಸಿದರು.

ಶಂಕಿತ ವಸ್ತ್ರ ಕಳವು ಆರೋಪಿ, ಎಚ್‌ಎಸ್‌ಆರ್‌ ಲೇಔಟ್‌ 2ನೇ ಸೆಕ್ಟರ್‌ನಲ್ಲಿರುವ ಮಳಿಗೆಯೊಂದರಲ್ಲೂ ಇದೇ ರೀತಿ ಸುಮಾರು 40 ಸಾವಿರ ರೂ. ಮೌಲ್ಯದ ಲೆಹಂಗಾ ಕಳ್ಳತನ ಮಾಡಿರುವ ಕುರಿತು ದೂರು ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ