ಆ್ಯಪ್ನಗರ

ಒಂದೊಂದಾಗಿ ಬಯಲಾಗುತ್ತಿದೆ ಕೊಲೆ ಹಿಂದಿನ ರಹಸ್ಯ

ರೌಡಿ ಲಕ್ಷ್ಮಣನ ಕೊಲೆಯ ಸಿಕ್ಕುಗಳು ಒಂದೊಂದಾಗಿ ಬಿಡಿಸಿಕೊಳ್ಳುತ್ತಿದ್ದು, ಪೊಲೀಸರಿಗೆ ಕೊಲೆ ಹಿಂದಿನ ರಹಸ್ಯಗಳು ಗೋಚರಿಸತೊಡಗಿವೆ.

Vijaya Karnataka 11 Mar 2019, 5:00 am
ಬೆಂಗಳೂರು : ರೌಡಿ ಲಕ್ಷ್ಮಣನ ಕೊಲೆಯ ಸಿಕ್ಕುಗಳು ಒಂದೊಂದಾಗಿ ಬಿಡಿಸಿಕೊಳ್ಳುತ್ತಿದ್ದು, ಪೊಲೀಸರಿಗೆ ಕೊಲೆ ಹಿಂದಿನ ರಹಸ್ಯಗಳು ಗೋಚರಿಸತೊಡಗಿವೆ.
Vijaya Karnataka Web rowdy lakshmana murder police got important information
ಒಂದೊಂದಾಗಿ ಬಯಲಾಗುತ್ತಿದೆ ಕೊಲೆ ಹಿಂದಿನ ರಹಸ್ಯ


ಕ್ಯಾಟ್‌ ರಾಜನ ವಿಚಾರಣೆ ವೇಳೆ ತನಿಖಾ ತಂಡಕ್ಕೆ ಹಲವು ಮಹತ್ವದ ಸಂಗತಿಗಳು ಗೊತ್ತಾಗಿದ್ದು, ಮಂಡ್ಯದ ಜಡೇಜಾ ರವಿ ಕೊಲೆ ಪ್ರಕರಣದ ಆರೋಪಿ ಹೇಮಂತ ಮತ್ತು ಮರಿಯಪ್ಪನಪಾಳ್ಯದ ನಿವಾಸಿ ರೂಪೇಶನ ಸುತ್ತಲೇ ಅನುಮಾನ ಸುತ್ತುತ್ತಿವೆ. ಕೊಲೆ ನಡೆದ ಸಂದರ್ಭದಲ್ಲಿ ಸಿ.ಡಿ.ನರಸಿಂಹ ಸೇರಿ ಮಾಗಡಿ ರಸ್ತೆಯ ರೌಡಿ ಆಸಾಮಿಗಳ ಬಗ್ಗೆ ಪೊಲೀಸರು ಅನುಮಾನ ಪಟ್ಟಿದ್ದರು. ಈಗ ಆ ಎಲ್ಲರ ಹೆಸರುಗಳೂ ಪಕ್ಕಕ್ಕೆ ಸರಿದು ಹೊಸ ಹೊಸ ಹೆಸರುಗಳು ಪೊಲೀಸರ ಕಿವಿಗೆ ಬೀಳುತ್ತಿವೆ.

ಅನ್ನದಾನಿ ಮನೆ ಕಳ್ಳತನ

ಲಕ್ಷ್ಮಣನ ಕೊಲೆ ಪ್ರಕರಣವು 2018ರ ಜೂನ್‌ನಲ್ಲಿ ನಡೆದಿದ್ದ ಮಳವಳ್ಳಿ ಶಾಸಕ ಅನ್ನದಾನಿ ಮನೆ ಕಳ್ಳತನ ಪ್ರಕರಣಕ್ಕೆ ತಳುಕು ಹಾಕಿಕೊಳ್ಳುತ್ತಿದೆ. ಜ್ಞಾನಭಾರತಿ ಪೊಲೀಸ್‌ ಠಾಣೆ ವ್ಯಾಪ್ತಿಯ ನಾಗದೇನಹಳ್ಳಿಯಲ್ಲಿರುವ ಅನ್ನದಾನಿ ಅವರ ಮನೆಯಲ್ಲಿ ಜೂನ್‌ 3 ರಂದು 10 ಲಕ್ಷಕ್ಕೂ ಅಧಿಕ ಮೊತ್ತದ ನಗದು ಹಾಗೂ ಚಿನ್ನಾಭರಣ ಕಳವಾಗಿತ್ತು. ಈ ಪ್ರಕರಣದ ತನಿಖೆ ನಡೆಸಿದ್ದ ಇನ್ಸ್‌ಪೆಕ್ಟರ್‌ ಗಿರಿರಾಜು ನಕಲಿ ಕೀ ಬಳಸಿ ಕಳ್ಳತನ ನಡೆದಿದೆ ಎನ್ನುವುದನ್ನು ಪತ್ತೆ ಹಚ್ಚಿ ರೂಪೇಶ್‌ ಎನ್ನುವ ಕಿಂಗ್‌ಪಿನ್‌ನನ್ನು ಬಂಧಿಸಿದ್ದರು. ದರೋಡೆ, ಕಳ್ಳತನದ ಜತೆಗೆ ಕಿರುತೆರೆಯಲ್ಲೂ ಆಗಾಗ ಕಾಣಿಸಿಕೊಳ್ಳುತ್ತಿದ್ದ ರೂಪೇಶ ತನ್ನ ಸಹಚರರನ್ನು ಬಿಟ್ಟು ಕಳ್ಳತನ ಮಾಡಿಸಿದ್ದ. ಈತನಿಗೆ ಶಾಸಕರ ಮನೆಯ ಕೀ ಎಲ್ಲಿ ಸಿಕ್ಕಿತು ಎನ್ನುವ ಬಗ್ಗೆ ವಿಚಾರಣೆ ನಡೆಸಿದಾಗ, ''ನನ್ನ್ನ ಪಕ್ಕದ ಮನೆಯಲ್ಲಿ ಆ ಕೀ ಇರುತ್ತಿತ್ತು. ಅದನ್ನು ನಾನು ಕದ್ದು ನಕಲಿ ಕೀ ಮಾಡಿಸಿದ್ದೆ '' ಎಂದು ಬಾಯಿ ಬಿಟ್ಟಿದ್ದ. ಶಾಸಕರ ಮನೆಯ ಕೀ ರೂಪೇಶನ ಪಕ್ಕದ ಮನೆಯಲ್ಲಿ ಏಕೆ ಇರುತ್ತಿತ್ತು ಎನ್ನುವ ಬಗ್ಗೆ ಪೊಲೀಸರು ಹೆಚ್ಚಿಗೆ ತಲೆಕೆಡಿಸಿಕೊಳ್ಳಲಿಲ್ಲ. ಕಳ್ಳತನ ಪ್ರಕರಣಕ್ಕಷ್ಟೇ ಸೀಮಿತಗೊಳಿಸಿ ತನಿಖೆ ಮುಗಿಸಿದರು.

ಅನ್ನದಾನಿ ಮನೆಯ ಕೀ ಯಾವ ಮನೆಯಲ್ಲಿ ಇರುತ್ತಿತ್ತೋ ಅದೇ ಮನೆಯ ಯುವತಿಯನ್ನು ರೂಪೇಶ ಇಷ್ಟಪಡುತ್ತಿದ್ದ. ಯುವತಿಯನ್ನು ಮಾತಾಡಿಸುವ ನೆಪದಲ್ಲಿ ಆ ಮನೆಗೆ ಹೋಗುತ್ತಿದ್ದ ರೂಪೇಶನಿಗೆ ಶಾಸಕರ ಮನೆಯ ಕೀ ಅಲ್ಲಿ ಇರುತ್ತಿತ್ತು ಎನ್ನುವ ಸಂಗತಿ ಗೊತ್ತಾಗಿತ್ತು ಎಂದು ತನಿಖಾಧಿಕಾರಿಗಳೇ 'ವಿಜಯ ಕರ್ನಾಟಕ'ಕ್ಕೆ ತಿಳಿಸಿದರು.

ರೂಪೇಶ ಆ ಯುವತಿಯ ಬೆನ್ನು ಬಿದ್ದಿದ್ದು, ಲಕ್ಷ್ಮಣನಿಗೆ ಇಷ್ಟ ಇರಲಿಲ್ಲ. ಇದೇ ಕಾರಣಕ್ಕೆ ರೂಪೇಶನನ್ನು ಕರೆದು, ಆ ಯುವತಿಯ ಸಹವಾಸಕ್ಕೆ ಹೋದರೆ ನಿನ್ನ ಹೆಣ ಬೀಳುತ್ತೆ ಎಂದು ಬೆದರಿಕೆ ಹಾಕಿದ್ದ. ನಂತರ ಆ ಯುವತಿ ಬೆಂಗಳೂರು ಬಿಟ್ಟು ಲಂಡನ್‌ ಸೇರಿದ್ದರು. ಬೆದರಿಕೆ ಹಾಕಿಸಿಕೊಂಡಿದ್ದ ರೂಪೇಶ ಲಕ್ಷ್ಮಣನನ್ನು ಕೊಲೆ ಮಾಡಲು ಹೊಂಚು ಹಾಕಿ ಮದ್ದೂರಿನ ಹೇಮಂತನನ್ನು ಸಂಪರ್ಕಿಸಿದ. ಇಬ್ಬರೂ ಒಟ್ಟಾದರು. ಲಕ್ಷ್ಮಣನಿಗೆ ಕೆ.ಎಂ.ದೊಡ್ಡಿಯ ಯುವತಿ ಸೌಂದರ್ಯ ಗೌಡ (ಹೆಸರು ಬದಲಾಯಿಸಿದೆ) ಜತೆ ಸಂಪರ್ಕ ಇರುವುದು ಗೊತ್ತಿತ್ತು. ಆಕೆಗೆ ರೂಪೇಶನ ಜತೆಗೂ ಆತ್ಮೀಯತೆ ಇತ್ತು. ಮಾ.7 ರಂದು ಸೌಂದರ್ಯರನ್ನು ಭೇಟಿ ಮಾಡಲು ಲಕ್ಷ್ಮಣ ಒಬ್ಬಂಟಿ ಆಗಿ ಬರುತ್ತಿದ್ದಾನೆ ಎನ್ನುವ ಮಾಹಿತಿ ಆಕೆಯ ಮೂಲಕವೇ ರೂಪೇಶನಿಗೆ ಗೊತ್ತಾಗಿ, ರೂಪೇಶ ಆ ಮಾಹಿತಿಯನ್ನು ಹೇಮಂತನಿಗೆ ರವಾನಿಸಿದ್ದಿರಬಹುದು ಎನ್ನುವ ಅನುಮಾನ ಇದೆ. ಈ ದಿಕ್ಕಿನಲ್ಲೂ ಒಂದು ತಂಡ ತನಿಖೆ ಮುಂದುವರಿಸಿದೆ.


ಗೌರಿ ಹತ್ಯೆಯ ಹೊಟ್ಟೆ ನವೀನ

ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಆರೋಪದಲ್ಲಿ ಎಸ್‌ಐಟಿ ಪೊಲೀಸರು ಮದ್ದೂರಿನ ಹೊಟ್ಟೆ ನವೀನನನ್ನು ಬಂಧಿಸಿದ ಸುದ್ದಿ ಕೇಳಿ ಲಕ್ಷ್ಮಣ ಹೆದರಿ ಹೋಗಿದ್ದ. ಮದ್ದೂರು ಕ್ಷೇತ್ರದಲ್ಲೇ ರಾಜಕೀಯ ನೆಲೆ ಕಂಡುಕೊಳ್ಳಲು ಯತ್ನಿಸುತ್ತಿದ್ದ ಲಕ್ಷ್ಮಣ ಬಿಜೆಪಿ ಸೇರಿ ಪಕ್ಷ ಬೆಳೆಸಲು ಓಡಾಟ ಶುರು ಮಾಡಿದ್ದ. ಒಂದು ಹಂತದಲ್ಲಿ ಹೊಟ್ಟೆ ನವೀನ ತಾನಾಗೇ ಬಂದು ಲಕ್ಷ್ಮಣನನ್ನು ಭೇಟಿ ಆಗಿ ನಮ್ಮದೂ ಒಂದು ಭೂಗತ ಸಂಘಟನೆ ಇದೆ. ನಮ್ಮವರೂ ನಿಮ್ಮ ಬೆನ್ನಿಗೆ ಇರ್ತಾರೆ. ಇಲ್ಲಿ ಬಿಜೆಪಿಗೆ ನಿಮ್ಮಂಥ ಒಬ್ಬ ಬೇಕು ಅಂತೆಲ್ಲಾ ಹೇಳಿದ್ದ ಎನ್ನುವ ಸಂಗತಿಯನ್ನು ಲಕ್ಷ್ಮಣನೇ ತನ್ನ ಸಹಚರರ ಎದುರಿಗೆ ಹೇಳಿಕೊಂಡಿದ್ದ. ಆದರೆ ನವೀನನ ಸಂಘಟನೆ ಎಂಥದ್ದು ಎನ್ನುವುದು ಗೊತ್ತಿರದ ಲಕ್ಷ್ಮಣ ಆತ ಗೌರಿ ಹತ್ಯೆ ಆರೋಪದಲ್ಲಿ ಬಂಧಿತನಾದಾಗ ಹೆದರಿ ಹೋಗಿದ್ದ. ಈ ಹೆದರಿಕೆಯನ್ನೂ ತನ್ನ ಸ್ನೇಹಿತರ ಎದುರು ತೋರಿಸಿಕೊಂಡಿದ್ದ.

ಅಂದ್ರಳ್ಳಿ ಅಪ್ಪಿ ಗ್ಯಾಂಗ್‌

ಕೊಲೆಯಲ್ಲಿ ಪೊಲೀಸರ ಬಾಯಲ್ಲಿ ಹರಿದಾಡುತ್ತಿರುವ ಹೇಮಂತ, ಚೇತು ಮತ್ತು ಕ್ಯಾಟ್‌ರಾಜ ಕೆಲ ತಿಂಗಳುಗಳಿಂದ ಅಂದ್ರಳ್ಳಿ ಅಪ್ಪಿ ಎನ್ನುವವನ ಗ್ಯಾಂಗ್‌ನವರು ಎಂದು ಹೇಳಿಕೊಳ್ಳುತ್ತಿದ್ದರು ಎನ್ನುವ ಮಾಹಿತಿ ಪೊಲೀಸರ ಕಿವಿಗೆ ಬಿದ್ದಿದೆ.

ಸಣ್ಣದೊಂದು ವಿಚಾರಕ್ಕೆ ಕೋತಿರಾಮ ಈ ಹೇಮಂತನಿಗೆ ಹೊಡೆದು ಕಳುಹಿಸಿದ್ದ. ಆನಂತರ ಕೋತಿರಾಮ, ಸಿ.ಡಿ.ನರಸಿಂಹ ಎಲ್ಲರಿಂದ ದೂರ ಆದ ಹೇಮಂತ ''ದೊಡ್ಡ ದೊಡ್ಡವರು ಮಾತ್ರ ರಾಜಿ ಮಾಡಿಕೊಂಡು ಆರಾಮಾಗಿರ್ತಾರೆ, ನಮ್ಮನ್ನು ಮುಂದೆ ಬಿಟ್ಟು ಅವರು ಹೆಸರು ತಗೋತಾರೆ'' ಎಂದು ಹೇಳಿಕೊಂಡು ತಿರುಗುತ್ತಿದ್ದ. ಆ ನಂತರವೇ ಆಂದ್ರಳ್ಳಿ ಅಪ್ಪಿ ಎನ್ನುವವನ ಜತೆ ಗುರುತಿಸಿಕೊಂಡಿದ್ದ. ಆದರೆ ಕೊಲೆಯಲ್ಲಿ ಅಪ್ಪಿಯ ಪಾತ್ರ ಏನು ಎನ್ನುವುದು ಇನ್ನೂ ಗೊತ್ತಿಲ್ಲ. ಹೇಮಂತ ಬಂಧಿತನಾದ ನಂತರವೇ ಗೊತ್ತಾಗಬೇಕು ಎನ್ನುತ್ತವೆ ಪೊಲೀಸ್‌ ಮೂಲಗಳು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ