ಆ್ಯಪ್ನಗರ

ತನ್ನದೇ ಮನೆಯಲ್ಲಿ ಕದ್ದವನ ಮೇಲೂ ರೌಡಿಶೀಟ್‌ !

ತನ್ನದೇ ಮನೆಯಲ್ಲಿ ಕದ್ದವನ ಮೇಲೂ ರೌಡಿಶೀಟ್‌ ದಾಖಲಿಸಿರುವುದು ದಕ್ಷಿಣ ವಿಭಾಗದ ಪೊಲೀಸರು ನಡೆಸಿದ ಪರೇಡ್‌ ವೇಳೆ ಬೆಳಕಿಗೆ ಬಂದಿತು. ಡಿಸಿಪಿ ಅಣ್ಣಾಮಲೈ ಅವರು ಕೂಡ ಈ ವಿಷಯ ಕೇಳಿ ಶಾಕ್‌ ಆದರು. ಪ್ರಕರಣದ ಕುರಿತು ಇನ್ನಷ್ಟು ಮಾಹಿತಿ ಪಡೆದು, ಆತನನ್ನು ರೌಡಿಶೀಟ್‌ನಿಂದ ಕೈಬಿಡುವಂತೆ ಸೂಚಿಸಿದರು. ಮೂರಕ್ಕೂ ಹೆಚ್ಚು ವರ್ಷಗಳಿಂದ ರೌಡಿ ಚಟುವಟಿಕೆಗಳಲ್ಲಿ ಭಾಗಿ ಆಗದವರ ಹೆಸರನ್ನು ರೌಡಿ ಪಟ್ಟಿಯನ್ನು ತೆರವುಗೊಳಿಸಲು ಸ್ಥಳದಲ್ಲೇ ಸೂಚಿಸಿದರು.

Vijaya Karnataka 23 Mar 2019, 5:00 am
ಬೆಂಗಳೂರು: ತನ್ನದೇ ಮನೆಯಲ್ಲಿ ಕದ್ದವನ ಮೇಲೂ ರೌಡಿಶೀಟ್‌ ದಾಖಲಿಸಿರುವುದು ದಕ್ಷಿಣ ವಿಭಾಗದ ಪೊಲೀಸರು ನಡೆಸಿದ ಪರೇಡ್‌ ವೇಳೆ ಬೆಳಕಿಗೆ ಬಂದಿತು. ಡಿಸಿಪಿ ಅಣ್ಣಾಮಲೈ ಅವರು ಕೂಡ ಈ ವಿಷಯ ಕೇಳಿ ಶಾಕ್‌ ಆದರು. ಪ್ರಕರಣದ ಕುರಿತು ಇನ್ನಷ್ಟು ಮಾಹಿತಿ ಪಡೆದು, ಆತನನ್ನು ರೌಡಿಶೀಟ್‌ನಿಂದ ಕೈಬಿಡುವಂತೆ ಸೂಚಿಸಿದರು. ಮೂರಕ್ಕೂ ಹೆಚ್ಚು ವರ್ಷಗಳಿಂದ ರೌಡಿ ಚಟುವಟಿಕೆಗಳಲ್ಲಿ ಭಾಗಿ ಆಗದವರ ಹೆಸರನ್ನು ರೌಡಿ ಪಟ್ಟಿಯನ್ನು ತೆರವುಗೊಳಿಸಲು ಸ್ಥಳದಲ್ಲೇ ಸೂಚಿಸಿದರು.
Vijaya Karnataka Web anna


ಗುರುವಾರ ನಡೆಸಿದ ಪರೇಡ್‌ಗೆ ಹಾಜರಾಗಿದ್ದ ಪ್ರತಿಯೊಬ್ಬ ರೌಡಿ ಜತೆಗೂ ಅಣ್ಣಾಮಲೈ ಮಾತಿಗಿಳಿದಿದ್ದರು. ಅವರ ಹಿನ್ನೆಲೆ ವಿಚಾರಿಸುತ್ತಿದ್ದರು. ಈ ವೇಳೆ ಕುಮಾರಸ್ವಾಮಿ ಲೇಔಟ್‌ ಠಾಣೆಯ 'ರೌಡಿ ಶೀಟರ್‌' ಕತೆಯೂ ಬೆಳಕಿಗೆ ಬಂದಿತು. ಆತ ತನ್ನ ಮನೆಯಲ್ಲೇ ಚಿನ್ನಾಭರಣ ಕದ್ದಿದ್ದ. ಆತನ ಮೇಲೆ ಇದ್ದದ್ದು ಅದೊಂದೇ ಪ್ರಕರಣ. ಆದರೂ ಪೊಲೀಸರು ರೌಡಿ ಪಟ್ಟಿಗೆ ಸೇರಿಸಿದ್ದರು. ಸರಗಳ್ಳರ ಪಟ್ಟಿಗೂ ಸೇರಿಸಲಾಗಿತ್ತು. ತನ್ನ ಮನೆಯಲ್ಲೇ ಸರ ಕದ್ದವನು ಹೇಗೆ ರೌಡಿ ಆಗುತ್ತಾನೆ ಎಂದು ಅವರು ಸಿಬ್ಬಂದಿಯನ್ನು ಪ್ರಶ್ನಿಸಿದ್ದಲ್ಲದೆ, ಆತನ ಹೆಸರನ್ನು ರೌಡಿಪಟ್ಟಿಯನ್ನು ತೆಗೆಯುವಂತೆ ಸೂಚಿಸಿದರು.

ಬನಶಂಕರಿಯ ರೌಡಿ ರಾಜು ಅಲಿಯಾಸ್‌ ರಾಜು ಭಾಯ್‌ ವಿಚಾರಣೆ ನಡೆಸಿದಾಗ, ತನ್ನ ಮೇಲೆ ರೌಡಿ ಪಟ್ಟಿ ದಾಖಲಾಗಿ 10 ವರ್ಷವಾಗಿದೆ. ಯಾವುದೇ ದೊಡ್ಡ ಪ್ರಕರಣಗಳಲ್ಲಿ ಭಾಗಿ ಆಗಿಲ್ಲ ಎಂದು ಹೇಳುತ್ತಿದ್ದಂತೆ ಡಿಸಪಿ ಕೆಂಡಾಮಂಡಲರಾದರು. ಮೆಟಾಡರ್‌ ಕುಟ್ಟಿ ಕೊಲೆ ಪ್ರಕರಣದಿಂದ ಹಿಡಿದು ಇತ್ತೀಚಿಗೆ ಯಾವ ಯಾವ ಪ್ರಕರಣದಲ್ಲಿ ಭಾಗಿ ಆಗಿದ್ದ ಎನ್ನುವುದನ್ನೂ ವಿವರಿಸಿ 'ನಿನ್ನ ಹಿಸ್ಟರಿ ನನಗೆ ಗೊತ್ತು. ಸುಳ್ಳು ಹೇಳಬೇಡ' ಎಂದು ಖಡಕ್‌ ಎಚ್ಚರಿಕೆ ನೀಡಿದರು. ಚುನಾವಣೆ ಸಂದರ್ಭದಲ್ಲಿ ಬಾಲ ಬಿಚ್ಚದಂತೆ ಎಚ್ಚರಿಕೆ ನೀಡಿದರು.

ಹಲವಾರು ಮಂದಿ ರೌಡಿ ಪಟ್ಟಿಯಲ್ಲಿದ್ದರೂ ಕಳೆದ ಹಲವಾರು ವರ್ಷಗಳಿಂದ ಯಾವುದೇ ಕೃತ್ಯದಲ್ಲಿ ಭಾಗಿ ಆಗಿರಲಿಲ್ಲ. ಅವರ ಮೇಲೆ ನಾಲ್ಕೈದು ವರ್ಷಗಳಿಂದ ಯಾವುದೇ ಕೇಸುಗಳು ಇರಲಿಲ್ಲ. ಪ್ರತಿ ಗಣೇಶ ಹಬ್ಬ ಮತ್ತು ಚುನಾವಣೆ ಸಂದರ್ಭದಲ್ಲಿ ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ಹಾಕುವ 'ಡೌಟ್‌ ಡಕಾಯ್ತಿ' ಪ್ರಕರಣಗಳ ಹೊರತಾಗಿ ಬೇರೆ ಗುರುತರವಾದ ಕೃತ್ಯಗಳಲ್ಲಿ ಭಾಗಿ ಆಗಿರಲಿಲ್ಲ. ಅಂತಹವರನ್ನು ರೌಡಿ ಪಟ್ಟಿಯಿಂದ ತೆಗೆಯುವಂತೆ ಸೂಚಿಸಿದರು.

ಕೋರ್ಟ್‌ ನಿರ್ದೇಶನ: ಗೂಂಡಾ ಕಾಯಿದೆ ಅಡಿಯಲ್ಲಿ ಯಾರನ್ನೇ ಬಂಧಿಸಬೇಕಿದ್ದರೂ 12 ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಕರ್ನಾಟಕ ಹೈಕೋರ್ಟ್‌ ರಾಜ್ಯ ಪೊಲೀಸರಿಗೆ ಕಳೆದ ವಾರವಷ್ಟೇ ಸೂಚಿಸಿತ್ತು. ಅನಾವಶ್ಯಕವಾಗಿ ಗೂಂಡಾ ಕಾಯಿದೆ ಅಡಿ ಬಂಧಿಸದಂತೆ ತಿಳಿಸಿತ್ತು. ಇದರ ಬೆನ್ನಲ್ಲೇ ಡಿಸಿಪಿ ಅಣ್ಣಾಮಲೈ, ಸುಧಾರಣೆಯಾದವರನ್ನು ರೌಡಿಶೀಟ್‌ನಿಂದ ಕೈಬಿಡಿ ಎಂದು ಸೂಚಿಸಿದ್ದಾರೆ.

ತಲೆಮರೆಸಿಕೊಂಡವರನ್ನು ಹುಡುಕಿಕೊಂಡು ಬನ್ನಿ: ಫೋನ್‌ ಮಾಡಿದ ಕೂಡಲೇ ಎದ್ದೂ ಬಿದ್ದು ಓಡಿ ಬರುವವರನ್ನೇ ಪ್ರತೀ ರೌಡಿ ಪರೇಡ್‌ಗೆ ಕರೆದುಕೊಂಡು ಬರುವುದು ಬೇಡ. ತಲೆ ಮರೆಸಿಕೊಂಡಿರುವವರು, ಸಾರ್ವಜನಿಕರನ್ನು ಬೆದರಿಸುತ್ತಿರುವವರು, ಯಾರ ಹೆಸರು ಕೇಳಿದರೆ ಸಾರ್ವಜನಿಕರು ಹೆದರುತ್ತಾರೋ ಅಂತಹ ರೌಡಿಗಳನ್ನು ಎಲ್ಲೇ ತಲೆಮರೆಸಿಕೊಂಡಿದ್ದರೂ ಹುಡುಕಿ ತನ್ನಿ ಎಂದು ಠಾಣಾಧಿಕಾರಿಗಳಿಗೆ ಡಿಸಿಪಿ ಸೂಚನೆ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ