ಆ್ಯಪ್ನಗರ

ಜೈಲಲ್ಲೇ ಕುಳಿತು ಕಿಡ್ನ್ಯಾಪ್‌ಗೆ ಸ್ಕೆಚ್‌ : ಆರೋಪಿಗಳ ಬಂಧನ

ಪರಪ್ಪನ ಅಗ್ರಹಾರ ಕಾರಾಗೃಹದಲ್ಲೇ ಕುಳಿತು ಗುತ್ತಿಗೆದಾರರೊಬ್ಬರನ್ನು ಕಿಡ್ನ್ಯಾಪ್‌ ಮಾಡಿಸಿ ಹಣ ಸುಲಿಗೆ ಮಾಡಿದ್ದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

Vijaya Karnataka 27 Jun 2019, 5:00 am
ಬೆಂಗಳೂರು : ಪರಪ್ಪನ ಅಗ್ರಹಾರ ಕಾರಾಗೃಹದಲ್ಲೇ ಕುಳಿತು ಗುತ್ತಿಗೆದಾರರೊಬ್ಬರನ್ನು ಕಿಡ್ನ್ಯಾಪ್‌ ಮಾಡಿಸಿ ಹಣ ಸುಲಿಗೆ ಮಾಡಿದ್ದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
Vijaya Karnataka Web rowdy plans for the kidnap of a contractor
ಜೈಲಲ್ಲೇ ಕುಳಿತು ಕಿಡ್ನ್ಯಾಪ್‌ಗೆ ಸ್ಕೆಚ್‌ : ಆರೋಪಿಗಳ ಬಂಧನ


ಕುಖ್ಯಾತ ರೌಡಿ ನಟರಾಜ ಅಲಿಯಾಸ್‌ ಮುಳ್ಳ ನಟರಾಜ ಗ್ಯಾಂಗ್‌ ಸದ್ಯ ಕೆ.ಪಿ.ಅಗ್ರಹಾರ ಠಾಣೆ ಪೊಲೀಸರ ಬಲೆಗೆ ಬಿದ್ದಿದೆ. ಈ ಗ್ಯಾಂಗ್‌ ಗುತ್ತಿಗೆದಾರ ಶಾಂತರಾಜು ಎನ್ನುವವರನ್ನು ಕಿಡ್ನ್ಯಾಪ್‌ ಮಾಡಿ ಅವರ ಕಾಲಿಗೆ ಚಾಕುವಿನಿಂದ ಇರಿದು 2.5 ಲಕ್ಷ ರೂ ಸುಲಿಗೆ ಮಾಡಿತ್ತು. ಈ ಬಗ್ಗೆ ಮಾಹಿತಿ ತಿಳಿದ ಪೊಲೀಸರು ದಾಸರಹಳ್ಳಿಯ ಮಂಜುನಾಥ್‌(29) , ನವೀನ (28) ಹಾಗೂ ಸುರೇಶ್‌(32) ಹಾಗೂ ಕೆ.ಪಿ. ಅಗ್ರಹಾರದ ಗಣೇಶ(30) ಮತ್ತು ಲಗ್ಗೆರೆಯ ಕಾರ್ತಿಕ್‌(28) ಎನ್ನುವವರನ್ನು ಬಂಧಿಸಿದ್ದಾರೆ. ಇವರಿಂದ 90 ಸಾವಿರ ರೂ. ಹಾಗೂ ಕಾರು ಜಪ್ತಿ ಮಾಡಲಾಗಿದ್ದು ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿರುವ ನಟರಾಜ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.

ಜೈಲಿನಿಂದಲೇ ದರ್ಬಾರು


ಕುಖ್ಯಾತ ರೌಡಿ ನಟರಾಜ ಜೈಲಿನೊಳಗೆ ಇದ್ದುಕೊಂಡೇ ಒಂದು ವರ್ಷದಿಂದ ಬಿಲ್ಡರ್‌ಗಳು, ಗುತ್ತಿಗೆದಾರರನ್ನು ಬೆದರಿಸಿ, ಹಣ ವಸೂಲಿ ಮಾಡುತ್ತಿದ್ದ. ಏಪ್ರಿಲ್‌ ತಿಂಗಳಿನಲ್ಲಿ ಈತ ಗುತ್ತಿಗೆದಾರ ಶಾಂತರಾಜು ಎನ್ನುವವರಿಗೆ ದೂರವಾಣಿ ಕರೆ ಮಾಡಿ ಹಣ ಕೇಳಿದ್ದ. ತನ್ನ ಬಳಿ ಹಣ ಇಲ್ಲ ಎಂದು ಉತ್ತರ ಕೊಟ್ಟಿದ್ದ ಶಾಂತರಾಜು ಸುಮ್ಮನಾಗಿದ್ದರು. ಆದರೆ ಪದೇಪದೆ ಹಣ ಕೇಳಿದರೂ ಕೊಡದೇ ಇದ್ದಾಗ ನಟರಾಜ ಜೈಲಿನಲ್ಲೇ ಇದ್ದು ಸ್ಕೆಚ್‌ ಹಾಕಿದ್ದ.

ಅದರಂತೆ ಏ.30ರಂದು ಗುತ್ತಿಗೆ ವಿಚಾರವಾಗಿ ಮಾತನಾಡುವ ನೆಪದಲ್ಲಿ ರೌಡಿಯ ಸಹಚರರು ಶಾಂತರಾಜುನನ್ನು ಮಾಗಡಿ ರಸ್ತೆಯ ನಿರ್ಜನ ಸ್ಥಳಕ್ಕೆ ಕರೆಸಿಕೊಂಡಿದ್ದರು. ಈ ವೇಳೆ ಅವರನ್ನು ಕಾರಿನಲ್ಲಿ ಕಿಡ್ನ್ಯಾಪ್‌ ಮಾಡಿದ್ದರು. ಮೊದಲಿಗೆ ನೆಲಮಂಗಲಕ್ಕೆ ಕರೆದೊಯ್ದು ಚಿತ್ರಹಿಂಸೆ ನೀಡಿದ್ದಲ್ಲದೆ 2 ದಿನಗಳ ಕಾಲ ಕೂಡಿ ಹಾಕಿಕೊಂಡು ಹಲ್ಲೆ ನಡೆಸಿದ್ದರು. ಇವರ ಕಾಟಕ್ಕೆ ಬೇಸತ್ತ ಶಾಂತರಾಜು ತಮ್ಮ ಸ್ನೇಹಿತರ ಮೂಲಕ 2.5 ಲಕ್ಷ ರೂ. ಅನ್ನು ತರಿಸಿಕೊಂಡು ಆರೋಪಿಗಳಿಗೆ ಕೊಟ್ಟಿದ್ದರು. ಹಣ ಕೈ ಸೇರಿದ ಬಳಿಕ ಗ್ಯಾಂಗ್‌ ಅವರನ್ನು ಬಿಟ್ಟು ಕಳುಹಿಸಿತ್ತು. ಪೊಲೀಸರಿಗೆ ದೂರು ನೀಡಿದರೆ ಜೀವ ಸಹಿತ ಉಳಿಸುವುದಿಲ್ಲ ಎನ್ನುವ ಬೆದರಿಕೆಯನ್ನೂ ಹಾಕಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕುಡಿದಾಗ ಹೊರಬಿತ್ತು

ಶಾಂತರಾಜು ಈ ಬಗ್ಗೆ ಪೊಲೀಸರಿಗೆ ದೂರು ನೀಡಿರಲಿಲ್ಲ. ಕೆಲ ದಿನಗಳ ಹಿಂದೆ ಸ್ನೇಹಿತರ ಜತೆ ಪಾರ್ಟಿ ಮಾಡುವಾಗ ಕುಡಿದ ಅಮಲಿನಲ್ಲಿ ತಮ್ಮ ಮೇಲೆ ನಡೆದಿದ್ದ ಹಲ್ಲೆಯನ್ನು ಸ್ನೇಹಿತರ ಜತೆ ಹೇಳಿಕೊಂಡು ಬೇಸರ ವ್ಯಕ್ತಪಡಿಸಿದ್ದರು. ಬಳಿಕ ಈ ಸಂಗತಿ ಬಾಯಿಂದ ಬಾಯಿಗೆ ಹರಡಿ ಪೊಲೀಸರ ಕಿವಿಗೂ ಮುಟ್ಟಿತ್ತು. ಜೂ.5ರಂದು ಅಪಹರಣ ಮತ್ತು ಸುಲಿಗೆ ಸಂಬಂಧ ಶಾಂತರಾಜು ಅವರಿಂದ ದೂರು ಪಡೆದ ಇನ್‌ಸ್ಪೆಕ್ಟರ್‌ ಶಿವಪ್ರಸಾದ್‌ ನೇತೃತ್ವದ ತಂಡ ಮೊಬೈಲ್‌ ಕರೆಗಳ ಮಾಹಿತಿ ಆಧರಿಸಿ ನಟರಾಜ್‌ ಗ್ಯಾಂಗ್‌ನ್ನು ಬಂಧಿಸಿದ್ದಲ್ಲದೆ ಕಿಡ್ನ್ಯಾಪ್‌ಗೆ ಬಳಸಿದ್ದ ಕಾರನ್ನು ವಶಕ್ಕೆ ಪಡೆದಿದ್ದಾರೆ.

ಸದ್ಯ ಆರೋಪಿಗಳನ್ನು ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು ಸಹಚರರೂ ಕೂಡ ಜೈಲಿನಲ್ಲಿ ನಟರಾಜನ ಜತೆ ಇದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ