ಆ್ಯಪ್ನಗರ

ಪಿಸ್ತೂಲಿನ ಸಮೇತ ರೌಡಿ ಟಾಮಿ ಬಂಧನ

ರೌಡಿಶೀಟರ್‌ ಟಾಮಿ ಜಗದೀಶ್‌ನನ್ನು ಅಕ್ರಮ ಪಿಸ್ತೂಲಿನ ಸಮೇತ ಬಂಧಿಸಿರುವ ಅನ್ನಪೂರ್ಣೇಶ್ವರಿ ಠಾಣೆ ಇನ್ಸ್‌ಪೆಕ್ಟರ್‌ ತಂಡ ಮತ್ತೊಂದು ಸಂಭಾವ್ಯ ಗ್ಯಾಂಗ್‌ವಾರ್‌ ತಪ್ಪಿಸಿದೆ. ನಾಲ್ಕು ವರ್ಷಗಳಿಂದ ಆ್ಯಪಲ್‌ ಸಂತು ಮತ್ತು ಟಾಮಿ ನಡುವೆ ವೈಷಮ್ಯ ಬೆಳೆದಿದ್ದು, ಸಂತುವನ್ನು ಕೊಲೆ ಮಾಡಲಿಕ್ಕಾಗಿಯೇ ಪಿಸ್ತೂಲಿನ ಸಮೇತ ಟಾಮಿ ತಯಾರಿ ನಡೆಸಿದ್ದ ಎಂದು ತಿಳಿದು ಬಂದಿದೆ.

Vijaya Karnataka 29 Jan 2019, 5:00 am
ಬೆಂಗಳೂರು: ರೌಡಿಶೀಟರ್‌ ಟಾಮಿ ಜಗದೀಶ್‌ನನ್ನು ಅಕ್ರಮ ಪಿಸ್ತೂಲಿನ ಸಮೇತ ಬಂಧಿಸಿರುವ ಅನ್ನಪೂರ್ಣೇಶ್ವರಿ ಠಾಣೆ ಇನ್ಸ್‌ಪೆಕ್ಟರ್‌ ತಂಡ ಮತ್ತೊಂದು ಸಂಭಾವ್ಯ ಗ್ಯಾಂಗ್‌ವಾರ್‌ ತಪ್ಪಿಸಿದೆ. ನಾಲ್ಕು ವರ್ಷಗಳಿಂದ ಆ್ಯಪಲ್‌ ಸಂತು ಮತ್ತು ಟಾಮಿ ನಡುವೆ ವೈಷಮ್ಯ ಬೆಳೆದಿದ್ದು, ಸಂತುವನ್ನು ಕೊಲೆ ಮಾಡಲಿಕ್ಕಾಗಿಯೇ ಪಿಸ್ತೂಲಿನ ಸಮೇತ ಟಾಮಿ ತಯಾರಿ ನಡೆಸಿದ್ದ ಎಂದು ತಿಳಿದು ಬಂದಿದೆ.
Vijaya Karnataka Web rowdy tommy arrest
ಪಿಸ್ತೂಲಿನ ಸಮೇತ ರೌಡಿ ಟಾಮಿ ಬಂಧನ


ಟಾಮಿ ಜತೆಗೆ ಈತನ ಗ್ಯಾಂಗ್‌ನ ಕೀರ್ತಿರಾಜ್‌ (26) ನನ್ನೂ ಬಂಧಿಸಲಾಗಿದೆ. ಇವರ ಬಳಿಯಿಂದ ಅಕ್ರಮ ಪಿಸ್ತೂಲು ಮತ್ತು ಬುಲೆಟ್‌ಗಳನ್ನು ವಶಪಡಿಸಿಕೊಂಡಿರುವ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.

ನಾಲ್ಕು ವರ್ಷದ ದ್ವೇಷ: ಕಾಮಾಕ್ಷಿಪಾಳ್ಯ, ಬಸವೇಶ್ವರನಗರ ಮತ್ತು ಅನ್ನಪೂರ್ಣೇಶ್ವರಿನಗರ ಠಾಣೆ ವ್ಯಾಪ್ತಿಯಲ್ಲಿ ಟಾಮಿ ಸಹಚರರ ಹಾವಳಿ ಹೆಚ್ಚಾಗಿರುವ ಬಗ್ಗೆ ಮೇಲಿಂದ ಮೇಲೆ ಪೊಲೀಸರಿಗೆ ಮಾಹಿತಿ ಸಿಗುತ್ತಲೇ ಇತ್ತಾದರೂ ಟಾಮಿ ಮಾತ್ರ ತಲೆತಪ್ಪಿಸಿಕೊಂಡು ತಿರುಗುತ್ತಲೇ ಇದ್ದ. ನಾಲ್ಕು ವರ್ಷಗಳ ಹಿಂದೆ ರಾಜ್‌ಕುಮಾರ್‌ ಸಮಾಧಿ ರಸ್ತೆಯಲ್ಲಿ ಮತ್ತೊಬ್ಬ ರೌಡಿ ಆಸಾಮಿ ಕುಮಾರ ಎಂಬಾತನನ್ನು ಭೀಕರವಾಗಿ ಕೊಲೆ ಮಾಡಿದ್ದಲ್ಲದೆ ಪೆಂಗ ಮಂಜ ಮತ್ತು ಸೀಮೆಎಣ್ಣೆ ವಿಜಿ ಇಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಆರೋಪ ಟಾಮಿ ಮೇಲಿದೆ. ಹುಡುಗಿಯೊಬ್ಬಳ ವಿಚಾರಕ್ಕೆ ಟಾಮಿ ಮತ್ತು ರೌಡಿ ಕುಮಾರನ ನಡುವೆ ಫೋನ್‌ನಲ್ಲಿ ಜಗಳ ನಡೆದಿತ್ತು. ಜಗಳದ ಮುಂದುವರಿಕೆಯಾಗಿ ಟಾಮಿ ಮೇಲೆ ಪೆಂಗಮಂಜ ಮತ್ತು ಸೀಮೆಎಣ್ಣೆ ವಿಜಿ ಜತೆಗೆ ಕುಮಾರ ದಾಳಿ ಮಾಡಿದ್ದ. ಆದರೆ ದಾಳಿಯನ್ನು ಮೊದಲೇ ಅಂದಾಜಿಸಿದ್ದ ಟಾಮಿ ತನ್ನ ಗ್ಯಾಂಗನ್ನೂ ಸಜ್ಜುಗೊಳಿಸಿ ದಾಳಿ ಮಾಡಿದ ಕುಮಾರನನ್ನೇ ಆಟೋದಲ್ಲಿ ಕಿಡ್ನ್ಯಾಪ್‌ ಮಾಡಿ ಸಹಚರರಿಬ್ಬರಿಗೆ ಮಚ್ಚಿನಿಂದ ಹೊಡೆದು ಕಾಮಾಕ್ಷಿಪಾಳ್ಯ ಠಾಣೆ ವ್ಯಾಪ್ತಿಯಲ್ಲಿ ಬಿಸಾಡಿ ಹೋಗಿದ್ದ. ಕುಮಾರನಿಗೆ ಆಟೋದಲ್ಲೇ ಚುಚ್ಚಿ ಚುಚ್ಚಿ ಕೊಲೆ ಮಾಡಿ ಬಸವೇಶ್ವರನಗರ ಪೊಲೀಸ್‌ ಠಾಣೆ ವ್ಯಾಫ್ತಿಯ ನಂದಿನಿ ಲೇಔಟ್‌ ಸಮೀಪ ಬಿಸಾಡಿ ಹೋಗಿದ್ದ. ಈ ಸಂಬಂಧ ಎರಡು ಕೊಲೆಯತ್ನ ಮತ್ತು ಒಂದು ಕೊಲೆ ಪ್ರಕರಣ ಟಾಮಿ ಮೇಲೆ ದಾಖಲಾಗಿತ್ತು.

ಗ್ಯಾಂಗ್‌ವಾರ್‌ ತಪ್ಪಿತು: ಕುಮಾರನ ಕೊಲೆಗೆ ಈತನ ಹತ್ತಿರದ ಸಂಬಂಧಿ ರೌಡಿ ಜಗತ್ತಿನ ಸಂಪರ್ಕದಲ್ಲಿರುವ ಆ್ಯಪಲ್‌ ಸಂತೋಷ್‌ ಪ್ರತೀಕಾರ ತೆಗೆದುಕೊಳ್ಳಬಹುದು ಎನ್ನುವ ಭಯದಲ್ಲೇ ಟಾಮಿ ನಾಲ್ಕು ವರ್ಷಗಳಿಂದ ಕಾಲ ಕಳೆಯುತ್ತಿದ್ದ. ಈ ಕಾರಣಕ್ಕೇ ಜಾಮೀನಿನ ಮೇಲೆ ಹೊರಗೆ ಬಂದು ಸಂತೋಷ್‌ನನ್ನೂ ಮುಗಿಸಲು ಟಾಮಿ ಪಿಸ್ತೂಲು ಪಡೆದುಕೊಂಡಿದ್ದ. ನಾಗರಬಾವಿ 2ನೇ ಹಂತದ ವಿನಾಯಕ ಲೇಔಟ್‌ನ ಬಂಡೆ ಮಾರಮ್ಮ ದೇವಸ್ಥಾನ ಸಮೀಪದ ಬಿಎಂಟಿಸಿ ಬಸ್‌ಸ್ಟಾಂಡ್‌ ಹಿಂಭಾಗದಲ್ಲಿ ಟಾಮಿ ತನ್ನ ಗ್ಯಾಂಗ್‌ ಜತೆಗೆ ಹೊಂಚು ಹಾಕಿ ಕುಳಿತಿರುವ ಸಂಗತಿ ಸಬ್‌ ಇನ್ಸ್‌ಪೆಕ್ಟರ್‌ ಬಿ.ಸಿ.ರಾಜಶೇಖರಯ್ಯ ಕಿವಿಗೆ ಬಿದ್ದಿತ್ತು. ತಕ್ಷಣ ಆ ಜಾಗವನ್ನು ಸುತ್ತುವರಿದು ಟಾಮಿ ಮತ್ತು ಕೀರ್ತಿಯನ್ನು ಬಂಧಿಸಿ ಅವರ ಬಳಿಯಿಂದ ಪಿಸ್ತೂಲು ವಶಪಡಿಸಿಕೊಂಡಿದ್ದು ತೀವ್ರ ವಿಚಾರಣೆ ನಂತರ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಇಬ್ಬರನ್ನೂ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ರವಾನಿಸಿದೆ.

ಆ್ಯಪಲ್‌ ಸಂತು ಬಂಧನ: ಬಂಧಿತ ಟಾಮಿಯಿಂದ ಪಿಸ್ತೂಲು ವಶಪಡಿಸಿಕೊಂಡ ಪೊಲೀಸರು ಆ ಬಗ್ಗೆ ತೀವ್ರ ವಿಚಾರಣೆ ನಡೆಸಿದ್ದರು. ಈ ವೇಳೆ ಆ್ಯಪಲ್‌ ಸಂತೋಷ್‌ನನ್ನು ಕೊಲೆ ಮಾಡಲು ಪಿಸ್ತೂಲು ತಂದಿದ್ದಾಗಿ ಟಾಮಿ ಹೇಳಿದ್ದ. ತಕ್ಷಣ ಆ್ಯಪಲ್‌ ಸಂತೋಷ್‌ನನ್ನೂ ವಶಕ್ಕೆ ಪಡೆದ ಅಧಿಕಾರಿಗಳು ಇಬ್ಬರ ನಡುವಿನ ಹಳೆ ದ್ವೇಷದ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹಿಸಿದ್ದಲ್ಲದೆ ಸಂತೋಷ್‌ನನ್ನೂ ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಹೀಗಾಗಿ ಪಶ್ಚಿಮ ಡಿಸಿಪಿ ವಿಭಾಗದಲ್ಲಿ ನಡೆಯಬಹುದಾಗಿದ್ದ ಎರಡು ರೌಡಿ ಗ್ಯಾಂಗ್‌ಗಳ ನಡುವಿನ ಸಂಭಾವ್ಯ ಗ್ಯಾಂಗ್‌ವಾರ್‌ ತಪ್ಪಿಸಿದಂತಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ