ಆ್ಯಪ್ನಗರ

ದರೋಡೆಕೋರನ ಕಾಲಿಗೆ ಗುಂಡೇಟು

ಬಿಯರ್‌ ಕುಡಿಸಲಿಲ್ಲ ಎನ್ನುವ ಕಾರಣಕ್ಕೆ ಕ್ಯಾಬ್‌ ಚಾಲಕನೊಬ್ಬನನ್ನು ಭೀಕರವಾಗಿ ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ ಕುಖ್ಯಾತ ದರೋಡೆಕೋರನನ್ನು ಬೈಯಪ್ಪನಹಳ್ಳಿ ಠಾಣೆ ಪೊಲೀಸರು ಗುಂಡು ಹೊಡೆದು ಬಂಧಿಸಿದ್ದಾರೆ.

Vijaya Karnataka 14 Dec 2018, 5:00 am
ಬೆಂಗಳೂರು: ಬಿಯರ್‌ ಕುಡಿಸಲಿಲ್ಲ ಎನ್ನುವ ಕಾರಣಕ್ಕೆ ಕ್ಯಾಬ್‌ ಚಾಲಕನೊಬ್ಬನನ್ನು ಭೀಕರವಾಗಿ ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ ಕುಖ್ಯಾತ ದರೋಡೆಕೋರನನ್ನು ಬೈಯಪ್ಪನಹಳ್ಳಿ ಠಾಣೆ ಪೊಲೀಸರು ಗುಂಡು ಹೊಡೆದು ಬಂಧಿಸಿದ್ದಾರೆ.
Vijaya Karnataka Web shootout to murderer
ದರೋಡೆಕೋರನ ಕಾಲಿಗೆ ಗುಂಡೇಟು


ಜೋಗುಪಾಳ್ಯದ ನಿವಾಸಿ ಮುರಳೀಧರನ್‌ (32) ಗುಂಡೇಟು ತಿಂದವನು. ಡಿ.3ರ ತಡರಾತ್ರಿ ನಾಗವಾರಪಾಳ್ಯದಲ್ಲಿ ಕ್ಯಾಬ್‌ ಚಾಲಕ ಮೋಹನ್‌ನನ್ನು ಭೀಕರವಾಗಿ ಕೊಲೆ ಮಾಡಿ ಪರಾರಿಯಾಗಿದ್ದ. ಬುಧವಾರ ತಡರಾತ್ರಿಯಲ್ಲಿ ಈತ ಕತ್ತಾಳಿಪಾಳ್ಯ ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾನೆ ಎನ್ನುವ ಮಾಹಿತಿ ಹಿಡಿದ ತನಿಖಾ ತಂಡ ಬಂಧನಕ್ಕೆ ಮುಂದಾಗಿತ್ತು.ಪೊಲೀಸರ ಮೇಲೇ ಹಲ್ಲೆ ನಡೆಸಿ ಪರಾರಿ ಆಗಲು ಯತ್ನಿಸಿದ್ದರಿಂದ ಈತನ ಕಾಲಿಗೆ ಗುಂಡು ಹೊಡೆದು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಅಪ್ರಾಪ್ತರ ಗ್ಯಾಂಗ್‌ ಲೀಡರ್‌: ಅಪ್ರಾಪ್ತರ ಗ್ಯಾಂಗ್‌ ಕಟ್ಟುವುದರಲ್ಲಿ ಪಳಗಿರುವ ಈತ ಅವರಿಂದಲೇ ರಾತ್ರಿ ದರೋಡೆಗಳನ್ನು ನಡೆಸುತ್ತಿದ್ದ. ಅಪ್ರಾಪ್ತರನ್ನು ನ್ಯಾಯಾಲಯಗಳು ಬೇಗ ಜಾಮೀನಿನ ಮೇಲೆ ಬಿಟ್ಟು ಬಿಡುತ್ತವೆ ಎನ್ನುವುದು ಈತನಿಗೆ ಗೊತ್ತಿದ್ದರಿಂದ ಸ್ಲಂಗಳಲ್ಲಿರುವ ಬಡ ಕುಟುಂಬದ ಅಪ್ರಾಪ್ತರನ್ನು ಪರಿಚಯ ಮಾಡಿಕೊಂಡು ಅವರಿಗೆ ಮಾದಕ ವಸ್ತುವಿನ ಚಟ ಬೆಳೆಸುತ್ತಿದ್ದ. ಚಟಕ್ಕೆ ಬಿದ್ದ ಅಪ್ರಾಪ್ತರು ಮಾದಕ ವಸ್ತುಗಾಗಿ ಹಣ ಹೊಂದಿಸಲು ಈತ ಹೇಳಿದಂತೆ ಕೇಳುತ್ತಿದ್ದರು. ಅಪ್ರಾಪ್ತರ ಮೂಲಕವೇ ಬೈಯಪ್ಪನಹಳ್ಳಿ ಮತ್ತು ಹಲಸೂರು ಸುತ್ತ ಮುತ್ತ 40 ಕ್ಕೂ ಹೆಚ್ಚು ದರೋಡೆ ಪ್ರಕರಣಗಳನ್ನು ಈತ ಮಾಡಿಸಿದ್ದ.

ಡಿ.3 ರ ಕೊಲೆ: ಅರಸೀಕೆರೆ ನಿವಾಸಿಯಾದ ಕ್ಯಾಬ್‌ ಚಾಲಕ ಮೋಹನ್‌ ಡಿ.3 ರಂದು ನಾಗರಪಾಳ್ಯದ ಬಾರ್‌ಗೆ ತನ್ನ ಸ್ನೇಹಿತ ಸಂದೀಪ್‌ ಜತೆ ಮದ್ಯ ಸೇವಿಸಲು ತೆರಳಿದ್ದ. ಮದ್ಯ ಸೇವಿಸಿದ ಬಳಿಕ ಮೋಹನ್‌, ಹೋಟೆಲ್‌ನಲ್ಲಿ ಊಟ ಮತ್ತು ರೆಡ್‌ಬುಲ್‌ ಪಾನೀಯವನ್ನು ಪಾರ್ಸಲ್‌ ತೆಗೆದುಕೊಂಡು ಮನೆಗೆ ತೆರಳುತ್ತಿದ್ದ. ಈ ವೇಳೆ ದಾರಿಯಲ್ಲಿ ಈತನನ್ನು ಅಡ್ಡಗಟ್ಟಿದ ಮುರಳಿಯ ದರೋಡೆ ಗ್ಯಾಂಗ್‌ ರೆಡ್‌ಬುಲ್‌ ಮತ್ತು ಬಿಯರ್‌ ಬಾಟಲುಗಳನ್ನು ಕೊಡುವಂತೆ ಕೇಳಿತ್ತು. ಇದಕ್ಕೆ ಮೋಹನ್‌ ತಕರಾರು ವ್ಯಕ್ತಪಡಿಸಿದಾಗ ಮಾರಕಾಸ್ತ್ರಗಳಿಂದ ಕೊಲೆ ಮಾಡಿದ್ದ ಮುರಳೀಧರ್‌ ಪರಾರಿ ಆಗಿದ್ದ. ತನಿಖೆಗೆ ಇಳಿದ ಇನ್ಸ್‌ಪೆಕ್ಟರ್‌ ರಮೇಶ್‌ ನೇತೃತ್ವದ ತಂಡ ಮೊದಲು ಈತನ ಗ್ಯಾಂಗ್‌ನ ಪೀಟರ್‌ ಎಂಬಾತನ ಸಮೇತ ಇಬ್ಬರು ಅಪ್ರಾಪ್ತರನ್ನೂ ವಶಕ್ಕೆ ಪಡೆದಿದ್ದರು. ಇವರ ವಿಚಾರಣೆ ವೇಳೆ ಮುರಳಿಯೇ ಕೊಲೆಯ ಮುಖ್ಯ ಆರೋಪಿ ಎನ್ನುವುದು ಗೊತ್ತಾಗಿತ್ತು.

ಗುಂಡೇಟು ತಿಂದ ಮುರಳಿ ಸದ್ಯ ಬೌರಿಂಗ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಚೇತರಿಸಿಕೊಂಡ ನಂತರ ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ