ಆ್ಯಪ್ನಗರ

ಐಪಿಎಸ್‌ ಅಧಿಕಾರಿ ಎಂದು ಹೇಳಿ ವಂಚಿಸುತ್ತಿದ್ದ ಮಹಿಳಾ ಪೇದೆ

ಉದ್ಯೋಗಾಕಾಂಕ್ಷಿಗಳಿಂದ 18 ಕೋಟಿ ರೂ. ಸಂಗ್ರಹಿಸಿ ವಂಚಿಸಿದ ಪ್ರಕರಣದಲ್ಲಿ ಬಂಧಿತರಾಗಿರುವ ಐವರ ಪೈಕಿ ಎಸಿಪಿ ಕಚೇರಿಯ ಮಹಿಳಾ ಮುಖ್ಯಪೇದೆ ಶಬಾನ ಬೇಗಂ, ತಾನು ಐಎಎಸ್‌ ಮತ್ತು ಐಪಿಎಸ್‌ ಅಧಿಕಾರಿಯೆಂದು ಹೇಳಿ ವಂಚಿಸುತ್ತಿದ್ದದ್ದು ಸಿಸಿಬಿ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

Vijaya Karnataka 13 Jul 2018, 5:00 am
ಬೆಂಗಳೂರು: ಉದ್ಯೋಗಾಕಾಂಕ್ಷಿಗಳಿಂದ 18 ಕೋಟಿ ರೂ. ಸಂಗ್ರಹಿಸಿ ವಂಚಿಸಿದ ಪ್ರಕರಣದಲ್ಲಿ ಬಂಧಿತರಾಗಿರುವ ಐವರ ಪೈಕಿ ಎಸಿಪಿ ಕಚೇರಿಯ ಮಹಿಳಾ ಮುಖ್ಯಪೇದೆ ಶಬಾನ ಬೇಗಂ, ತಾನು ಐಎಎಸ್‌ ಮತ್ತು ಐಪಿಎಸ್‌ ಅಧಿಕಾರಿಯೆಂದು ಹೇಳಿ ವಂಚಿಸುತ್ತಿದ್ದದ್ದು ಸಿಸಿಬಿ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
Vijaya Karnataka Web money1


ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪಶ್ಚಿಮ ಸಿಎಆರ್‌ ಕಚೇರಿಯ ಪೇದೆ ಲೋಕೇಶ್‌, ಸಿಎಆರ್‌ ದಕ್ಷಿಣ ಕಚೇರಿಯ ಪೇದೆ ಬಿ.ಕೆ ಲಕ್ಷೀಕಾಂತ, ಪೊಲೀಸ್‌ ನೇಮಕಾತಿ ಮತ್ತು ತರಬೇತಿ ವಿಭಾಗದಲ್ಲಿ ಕಚೇರಿ ಅಧೀಕ್ಷಕರಾಗಿದ್ದ ಪಿ.ರಾಜೇಶ್‌, ನಿವೃತ್ತ ಸ್ಟೆನೋ ಗ್ರಾಫರ್‌ ಎಚ್‌.ನಾಗರಾಜ್‌ ಮತ್ತು ಶಬಾನ ಬೇಗಂ ಅವರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ಉದ್ಯೋಗಾಕಾಂಕ್ಷಿಗಳಿಂದ ಲಕ್ಷಾಂತರ ರೂ. ಪಡೆಯುತ್ತಿದ್ದ ಆರೋಪಿಗಳು ಕೆಲಸ ಕೊಡಿಸುತ್ತಿರಲಿಲ್ಲ. ಪದೇಪದೆ ಕೆಲಸ ಕೊಡಿಸುವಂತೆ ಒತ್ತಡ ಹಾಕಿದಾಗ ನಂಬಿಸಲು, ''ನೇರವಾಗಿ ಉನ್ನತ ಅಧಿಕಾರಿಯ ಜತೆ ಮಾತನಾಡು,'' ಎಂದು ಶಬಾನ ಬೇಗಂ ಅವರಿಗೆ ಕಾನ್ಫರೆನ್ಸ್‌ ಕಾಲ್‌ ಹಾಕುತ್ತಿದ್ದರು.

ಕೆಲವರಲ್ಲಿ ಐಪಿಎಸ್‌ ಇನ್ನೂ ಕೆಲವರಲ್ಲಿ ಐಎಎಸ್‌ ಅಧಿಕಾರಿಯೆಂದು ಶಬಾನಂ ಪರಿಚಯ ಮಾಡಿಕೊಳ್ಳುತ್ತಿದ್ದರು. ''ನಮ್ಮ ಬಗ್ಗೆ ನಂಬಿಕೆ ಇಲ್ಲವೇ, ನಾನು ಸೀನಿಯರ್‌ ಆಫೀಸರ್‌, ಕೆಲಸ ಕೊಟ್ಟೇ ಕೊಡಿಸುತ್ತೇವೆ. ಕಾಯಬೇಕಾಗುತ್ತದೆ, ಒತ್ತಡ ಹಾಕಿದರೆ ಸಿಕ್ಕಿ ಬೀಳುತ್ತೀರಿ,'' ಎಂದು ದಬಾಯಿಸುತ್ತಿದ್ದರು. ಹೀಗಾಗಿ ಹಣ ನೀಡಿದವರು ಮರು ಮಾತನಾಡುತ್ತಿರಲಿಲ್ಲ ಎಂದು ಸಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ಹಲವು ಕೇಸ್‌ಗಳ: ಕೆಲಸ ಕೊಡಿಸುವುದಾಗಿ ವಂಚಿಸಿದ ಹಲವು ಪ್ರಕರಣಗಳು ನಗರದ ವಿವಿಧ ಠಾಣೆಗಳಲ್ಲಿ ದಾಖಲಾಗಿವೆ. ಆ ಪ್ರಕರಣದಲ್ಲೂ ಆರೋಪಿಗಳು ಭಾಗಿಯಾಗಿರುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ ಎಂದು ಸಿಸಿಬಿಯ ಹಿರಿಯ ಅಧಿಕಾರಿ ತಿಳಿಸಿದರು.

''ಮೋಸ ಹೋದವರ ಪೈಕಿ ಕೆಲವರು ಮಾತ್ರ ದೂರು ನೀಡಿದ್ದಾರೆ. ಇನ್ನೂ ಸಾಕಷ್ಟು ಜನ ಇದ್ದು ಹಿಂದೆ ಸರಿಯುತ್ತಿದ್ದಾರೆ. ದೂರು ನೀಡಿದರೆ ಲಂಚ ನೀಡಿದ ಆರೋಪದಲ್ಲಿ ತಾವು ಕೂಡ ಸಿಕ್ಕಿ ಬೀಳುತ್ತೇವೆ ಎಂಬ ಆತಂಕ ಅವರದ್ದು. ಪಾಲಕರು ಅಥವಾ ಸಂಬಂಧಿಕರ ಮೂಲಕ ಹಣ ನೀಡಿದವರು ಮಾತ್ರ ಧೈರ್ಯ ನೀಡುತ್ತಿದ್ದಾರೆ,'' ಅಧಿಕಾರಿಗಳು ತಿಳಿಸಿದ್ದಾರೆ.

''ವಂಚನೆಗೊಳಗಾದವರ ಪೈಕಿ ಬಹುತೇಕರು ಉತ್ತರ ಕರ್ನಾಟಕ ಮೂಲದವರು. ಹಣ ಪಡೆದ ವಂಚಕರು, ಬಳಿಕ ಅವರನ್ನು ಬೆದರಿಸಿ ದೂರು ನೀಡದಂತೆ ನೋಡಿಕೊಂಡಿದ್ದಾರೆ,'' ಎಂದು ಹಿರಿಯ ಪೊಲೀಸ್‌ ಅಧಿಕಾರಿ ತಿಳಿಸಿದರು.

ಮೂವರು ಅಮಾನತು, ನ್ಯಾಯಾಂಗ ಬಂಧನ: ಬಂಧಿತರಾಗಿರುವ ಲೋಕೇಶ್‌, ಲಕ್ಷ್ಮೇಕಾಂತ ಹಾಗೂ ಶಬಾನ ಬೇಗಂ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಈ ಪೈಕಿ ಲಕ್ಷ್ಮೇಕಾಂತ, ಶಬಾನ ಅವರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಉಳಿದ ಮೂವರನ್ನು ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ.

''ಐವರ ವಿರುದ್ಧ ಇಲಾಖಾ ವಿಚಾರಣೆ ಸೇರಿದಂತೆ ಈ ಹಿಂದೆ ದಾಖಲಾಗಿರುವ ದೂರುಗಳ ಕುರಿತು ಮಾಹಿತಿ ಕೋರಿ ಸಂಬಂಧಪಟ್ಟ ಮೇಲಧಿಕಾರಿಗಳಿಗೆ ಪತ್ರ ಬರೆಯುತ್ತೇವೆ. ಒಬ್ಬರ ವಿರುದ್ಧ ಲೋಕಾಯುಕ್ತ ಸಂಸ್ಥೆಯಲ್ಲಿ ದೂರು ದಾಖಲಾಗಿರುವ ಮಾಹಿತಿ ಇದ್ದು ಇನ್ನೂ ಖಚಿತವಾಗಿಲ್ಲ,'' ಎಂದು ಸಿಸಿಬಿ ಡಿಸಿಪಿ ಜೀನೇಂದ್ರ ಖನಗಾವಿ ತಿಳಿಸಿದರು.

ನೇಮಕಾತಿ ಘಟಕದಲ್ಲಿ ಕೆಲಸ ಮಾಡಿದ್ದ: ನಿವೃತ್ತ ಸ್ಟೆನೋ ಗ್ರಾಫರ್‌ ಎಚ್‌. ನಾಗರಾಜ್‌ ಈ ಹಿಂದೆ ಪೊಲೀಸ್‌ ನೇಮಕಾತಿ ಮತ್ತು ತರಬೇತಿ ಘಟಕದಲ್ಲಿ ಹಾಗೂ ಡಿಜಿ ಕಚೇರಿಯಲ್ಲೂ ಕೆಲಸ ಮಾಡಿದ್ದರು. ಕೆಲ ಕಾಲ ಹಿರಿಯ ಪೊಲೀಸ್‌ ಅಧಿಕಾರಿಯ ಆಪ್ತ ಸಹಾಯಕರಾಗಿಯೂ ಕೆಲಸ ಮಾಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ