ಆ್ಯಪ್ನಗರ

ಪತಿ-ಅತ್ತೆ ಕಿರುಕುಳ ಆರೋಪ: ಟೆಕ್ಕಿ ಆತ್ಮಹತ್ಯೆ

28 ವರ್ಷದ ಸಾಫ್ಟ್‌ವೇರ್‌ ಎಂಜಿನಿಯರ್‌ ರಶ್ಮಿ ಎಂಬುವರು ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Vijaya Karnataka Web 26 Feb 2018, 4:00 am

ಬೆಂಗಳೂರು: 28 ವರ್ಷದ ಸಾಫ್ಟ್‌ವೇರ್‌ ಎಂಜಿನಿಯರ್‌ ರಶ್ಮಿ ಎಂಬುವರು ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪತಿ ಮತ್ತು ಅತ್ತೆಯ ಕಿರುಕುಳದಿಂದಲೇ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ರಶ್ಮಿ ತಾಯಿ ರಾಮಮೂರ್ತಿನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕೋಲಾರ ಮೂಲದ ರಶ್ಮಿ ತನ್ನದೇ ಊರಿನ ಸತೀಶ್‌ ಎಂಬುವರನ್ನು 3 ವರ್ಷಗಳ ಹಿಂದೆ ಮದುವೆ ಮಾಡಿಕೊಂಡಿದ್ದರು. ಮಹದೇವಪುರದ ಪ್ರತಿಷ್ಠಿತ ಸಾಫ್ಟ್‌ವೇರ್‌ ಕಂಪನಿಯಲ್ಲಿ ಅವರಿಬ್ಬರೂ ಟೆಕ್ಕಿಗಳಾಗಿ ಕೆಲಸ ಮಾಡಿಕೊಂಡಿದ್ದರು. ದಂಪತಿಗೆ ಒಂದು ವರ್ಷದ ಮಗು ಇದೆ. ಶನಿವಾರ ರಾತ್ರಿ ತಾಯಿ ಮನೆಗೆ ತೆರಳಿದ್ದ ರಶ್ಮಿ ಮಗುವನ್ನು ಅಲ್ಲೇ ಬಿಟ್ಟು ವಾಪಾಸ್‌ ಬಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ದಂಪತಿ ರಾಮಮೂರ್ತಿನಗರದ ಕೆಂಪೇಗೌಡ ರಸ್ತೆಯಲ್ಲಿರುವ ಸಫೈರ್‌ ಅಪಾರ್ಟ್‌ಮೆಂಟ್‌ನಲ್ಲಿ ನೆಲೆಸಿದ್ದರು. ಮೃತರ ತಾಯಿ ಕೊಟ್ಟ ದೂರಿನ ಮೇರೆಗೆ ಪೊಲೀಸರು ಆರೋಪಿ ಪತಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

''ಅಳಿಯ ಮತ್ತು ಅತ್ತೆ ಸೇರಿಕೊಂಡು ಸಣ್ಣ ಪುಟ್ಟ ವಿಷಯಗಳಿಗೂ ಮಗಳಿಗೆ ಕಿರಿಕಿರಿ ಮಾಡುತ್ತಿದ್ದರು. ಅವರಿಂದ ಹಿಂಸೆ ಅನುಭವಿಸುತ್ತಿರುವುದಾಗಿ ಮಗಳು ಹೇಳಿಕೊಂಡಿದ್ದಳು. ಶನಿವಾರ ರಾತ್ರಿಯೂ ತುಂಬಾ ಬೇಸರದಿಂದ ಪತಿಯ ವರ್ತನೆಯನ್ನು ಹೇಳಿಕೊಂಡಿದ್ದಳು. ಇದಾಗಿ ಕೆಲ ಹೊತ್ತಿನಲ್ಲೇ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ,'' ಎಂದು ರಶ್ಮಿ ತಾಯಿ ಹೇಳಿಕೆ ನೀಡಿದ್ದಾರೆ.

''ನಾನು ಕೆಲಸಕ್ಕೆ ಹೋಗಿದ್ದೆ. ನನ್ನ ತಾಯಿ ಸಂಬಂಧಿಕರ ಮನೆಗೆ ಹೋಗಿದ್ದರು. ಪತ್ನಿ ತಾಯಿ ಮನೆಗೆ ಹೋಗುತ್ತಿರುವುದಾಗಿ ಹೇಳಿದ್ದರು. ನಸುಕಿನ 2 ಗಂಟೆ ಸುಮಾರಿಗೆ ಕೆಲಸದಿಂದ ವಾಪಸಾದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಯಿತು. ನಮ್ಮ ನಡುವೆ ಮನಸ್ತಾಪ ಇರಲಿಲ್ಲ. ಆತ್ಮಹತ್ಯೆಗೆ ಕಾರಣ ಗೊತ್ತಿಲ,್ಲ'' ಎಂದು ಪತಿ ಸತೀಶ್‌ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ