ಆ್ಯಪ್ನಗರ

ಜಗಳೂರು: ಬಾಡುತ್ತಿವೆ ಮೆಕ್ಕೆಜೋಳ, ಜೋಳ, ಶೇಂಗಾ ಬೆಳೆ

ಕಳೆದ ಒಂದು ತಿಂಗಳಿಂದ ಮಳೆ ಬಾರದೆ ಮೆಕ್ಕೆಜೋಳ, ಹೈಬ್ರಿಡ್‌ಜೋಳ, ಶೇಂಗಾ ಬೆಳೆ ಒಣಗುತ್ತಿವೆ. ಕಾಳು ಕಟ್ಟುವ ಹಂತದಲ್ಲಿ ಬೆಳೆ ಬಾಡುತ್ತಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿ ಮತ್ತೊಮ್ಮೆ ಬರದ ಭೀತಿ ಎದುರಾಗಿದೆ.

ವಿಕ ಸುದ್ದಿಲೋಕ 20 Aug 2016, 2:14 pm
ಜಗಳೂರು: ಕಳೆದ ಒಂದು ತಿಂಗಳಿಂದ ಮಳೆ ಬಾರದೆ ಮೆಕ್ಕೆಜೋಳ, ಹೈಬ್ರಿಡ್‌ಜೋಳ, ಶೇಂಗಾ ಬೆಳೆ ಒಣಗುತ್ತಿವೆ. ಕಾಳು ಕಟ್ಟುವ ಹಂತದಲ್ಲಿ ಬೆಳೆ ಬಾಡುತ್ತಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿ ಮತ್ತೊಮ್ಮೆ ಬರದ ಭೀತಿ ಎದುರಾಗಿದೆ.
Vijaya Karnataka Web
ಜಗಳೂರು: ಬಾಡುತ್ತಿವೆ ಮೆಕ್ಕೆಜೋಳ, ಜೋಳ, ಶೇಂಗಾ ಬೆಳೆ


ಸತತ ಬರಗಾಲಕ್ಕೆ ತುತ್ತಾಗುತ್ತಾ ಬಂದ ಜಗಳೂರು ತಾಲೂಕಿನಲ್ಲಿ ಈ ಬಾರಿ ಮುಂಗಾರಿನಲ್ಲಿ ಹದ ಮಳೆಯಾಗಿತ್ತು. ಹಾಗಾಗಿ ರೈತರು ಸಾಲಸೂಲ ಮಾಡಿ ಬೀಜ, ಗೊಬ್ಬರ ಖರೀದಿಸಿ ಬಿತ್ತನೆ ಮಾಡಿದರು.

ಕಳೆದ ಒಂದು ತಿಂಗಳಿಂದ ಪುನರ್ವಸು ಹಾಗೂ ಆಶ್ಲೇಷ ಮಳೆ ಕೈಕೊಟ್ಟಿವೆ. ಇದೀಗ ಮಘ ಮಳೆಯೂ ಸಹ ಸುರಿಯದೆ ಬಿಸಿಲಿನ ತಾಪ ಹೆಚ್ಚಾಗಿ ಬೆಳೆಗಳು ಒಣಗುತ್ತಿವೆ.

ಮೆಕ್ಕೆಜೋಳ:

ದಾವಣಗೆರೆ ಜಿಲ್ಲೆ ಮೆಕ್ಕೆಜೋಳದ ಕಣಜ. ತಾಲೂಕಿನ ರೈತ ಕೂಡ ಹತ್ತಿ ಬದಲಿ ಮೆಕ್ಕೆಜೋಳ ಬೆಳೆಗೆ ವಾಲಿದ್ದಾನೆ. 18 ಸಾವಿರ ಹೆಕ್ಟೇರ್‌ನಲ್ಲಿ ಮೆಕ್ಕೆಜೋಳ ಬಿತ್ತಲಾಗಿದೆ. ಈಗಾಗಲೇ ತೆನೆ ಬಿಚ್ಚಿಕೊಂಡು ಕಾಳು ಕಟ್ಟುತ್ತಿದ್ದು, ಮಳೆಯಿಲ್ಲದೆ ಫಸಲು ಒಣಗಿ ಹೋಗುತ್ತಿದೆ.

ಕೇವಲ ಇನ್ನೊಂದು ವಾರ ಹೀಗೆ ಮಳೆ ಹೋದರೆ ಬೆಳೆ ಪೂರ್ತಿ ಒಣಗುವ ಹಂತ ತಲುಪಲಿವೆ. ಈಗಾಗಲೇ ತಾಲೂಕಿನ ಕೆಲವೆಡೆ ಇದೀಗ ಮಳೆ ಸುರಿದರೂ ಬೆಳೆಗೆ ಲಾಭವಿಲ್ಲ. ಮೆಕ್ಕೆಜೋಳ, ಹತ್ತಿ, ಶೇಂಗಾ ದ್ವಿದಳ ಧಾನ್ಯಗಳನ್ನು ಬೆಳೆಯುವ ಈ ಭಾಗದಲ್ಲಿ ಪ್ರತಿವರ್ಷ ಮಳೆಯ ಕೊರತೆ ತಪ್ಪಿಲ್ಲ.

ಬೋರ್‌ವೆಲ್‌ಗಳಲ್ಲಿ ಅಂತರ್ಜಲ ಕುಸಿದಿದೆ. ಬಿತ್ತನೆ ಮಾಡಿದ್ದ ಈರುಳ್ಳಿ , ಹತ್ತಿ ಬೆಳೆಗೂ ಸಮರ್ಪಕ ನೀರಿಲ್ಲ. ಈಗಾಗಲೇ ಮಳೆ ಸಂಪೂರ್ಣ ಕೈಕೊಟ್ಟ ಬೆಳೆ ಕೈ ಸೇರುವುದೇ ಅನುಮಾನಕ್ಕೀಡು ಮಾಡಿದೆ.

ಗುಳೆ ಹೋಗುವತ್ತ:

ತಾಲೂಕಿನಲ್ಲಿ ಸಕಾಲಕ್ಕೆ ಮಳೆ ಬಾರದೇ ಸಂಕಷ್ಟವನ್ನು ಪಡುವಂತಾಗಿದ್ದು ದುಡಿಯುವ ಕೂಲಿ ಕಾರ್ಮಿಕರು ಮಲೆನಾಡು, ಕಾಫಿಸೀಮೆ, ದೊಡ್ಡ ನಗರಗಳಿಗೆ ಕೆಲಸವನ್ನರಸಿ ಗುಳೆ ಹೋಗುವಂತಾಗಿದೆ. ಸದಾ ಬರಗಾಲ ಅನುಭವಿಸುತ್ತಾ ಬಂದಿರುವ ತಾಲೂಕಿಗೆ ಬರ ಒಂದು ಶಾಪವಾಗಿ ಹೋಗಿದೆ. ಇದರ ವಿಮೋಚನೆಗೆ ಭದ್ರಾ ಮೇಲ್ದಂಡೆಯೊಂದೇ ದಾರಿ ಎನ್ನುತ್ತಾರೆ ರೈತರು.


ಈ ಬಾರಿ 18ಸಾವಿರ ಹೆಕ್ಟೇರ್‌ ಮೆಕ್ಕೆಜೋಳ ಬಿತ್ತನೆ ಮಾಡಲಾಗಿದೆ. ಒಂದು ತಿಂಗಳಿಂದ ಎರಡು ಮಳೆ ಕೈಕೊಟ್ಟಿವೆ. ಒಂದೆರಡು ದಿನಗಳಲ್ಲಿ ಮಳೆ ಬಂದರೆ ಸ್ವಲ್ಪ ಪ್ರಮಾಣದ ಬೆಳೆ ಸಿಗಬಹುದು. ಸಕಾಲಕ್ಕೆ ಮಳೆಯಾದರೆ ಎಲ್ಲಾ ಬೆಳೆಗಳಿಗೂ ಸಹಕಾರಿಯಾಗಲಿದೆ.

-ಕೆ.ಟಿ. ಬಸಣ್ಣ, ಎಡಿ ಕೃಷಿ ಇಲಾಖೆ ಜಗಳೂರು


ಕಳೆದ ವರ್ಷ ಆವರಿಸಿದ ಬರ ಮರೆತು ಈ ವರ್ಷ ಉತ್ತಮ ಬೆಳೆಯ ನಿರೀಕ್ಷೆಯಿತ್ತು. ಸಾಲಸೂಲ ಮಾಡಿ ಬಿತ್ತನೆ ಮಾಡಿದ ಬೆಳೆಗಳು ಮಳೆ ಇಲ್ಲದೆ ಒಣಗಿ ಹೋಗುತ್ತಿವೆ. ಸರಕಾರ ರೈತರ ನೆರವಿಗೆ ಬರಬೇಕು.

-ಕಾನನಕಟ್ಟೆ ತಿಪ್ಪೇಸ್ವಾಮಿ, ಹಸಿರು ಸೇನೆ ಮುಖಂಡ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ