ಆ್ಯಪ್ನಗರ

ಏರಿದ ತುಂಗಭದ್ರಾ, ಜನಜೀವನ ಅಸ್ತವ್ಯಸ್ತ

ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಜಿಟಿ, ಜಿಟಿ ಮಳೆ ಹಾಗೂ ಏರುತ್ತಿರುವ ತುಂಗಭದ್ರಾ ನದಿ ನೀರಿನಿಂದಾಗಿ ತಾಲೂಕಿನ ಜನ ಜೀವನವನ್ನು ಅಸ್ತವ್ಯಸ್ತಗೊಳಿಸುತ್ತಿದೆ. ಏರುತ್ತಿರುವ ನದಿ ನೀರಿನ ಮಟ್ಟ ನದಿ ಅಂಚಿನ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿ ಮಾಡಿದೆ.

Vijaya Karnataka 9 Aug 2019, 5:00 am
ಹರಿಹರ : ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಜಿಟಿ, ಜಿಟಿ ಮಳೆ ಹಾಗೂ ಏರುತ್ತಿರುವ ತುಂಗಭದ್ರಾ ನದಿ ನೀರಿನಿಂದಾಗಿ ತಾಲೂಕಿನ ಜನ ಜೀವನವನ್ನು ಅಸ್ತವ್ಯಸ್ತಗೊಳಿಸುತ್ತಿದೆ. ಏರುತ್ತಿರುವ ನದಿ ನೀರಿನ ಮಟ್ಟ ನದಿ ಅಂಚಿನ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿ ಮಾಡಿದೆ.
Vijaya Karnataka Web a rising tungabhadra a life threatening chaos
ಏರಿದ ತುಂಗಭದ್ರಾ, ಜನಜೀವನ ಅಸ್ತವ್ಯಸ್ತ


ನದಿ ಹಿನ್ನೀರಿನಿಂದಾಗಿ ತಾಲೂಕಿನ ಸಾರಥಿ-ಚಿಕ್ಕಬಿದರಿ, ಉಕ್ಕಡಗಾತ್ರಿ ಹಾಗೂ ರಾಣೆಬೆನ್ನೂರು ತಾಲೂಕಿನ ಫತೆಪುರ ನಡುವಿನ ರಸ್ತೆ ಸಂಪರ್ಕ ಕಡಿದುಕೊಂಡಿದೆ. ಸಾರಥಿ- ಚಿಕ್ಕಬಿದರಿ ನಡುವಿನ ಹಿರೇಹಳ್ಳದ ಸೇತುವೆ ನದಿ ಹಿನ್ನೀರಿನಿಂದಾಗಿ ಜಲಾವೃತವಾಗಿದ್ದು ಸೇತುವೆ ಮೇಲೆ ಏಳೆಂಟು ಅಡಿ ನೀರು ಹರಿಯುತ್ತಿದೆ.

ಸುಕ್ಷೇತ್ರ ಉಕ್ಕಡಗಾತ್ರಿ-ಫತೆಪುರ ನಡುವಿನ ಸಂಪರ್ಕ ರಸ್ತೆ ಜಲಾವೃತವಾಗಿವೆ. ಬುಧವಾರ ಬೆಳಿಗ್ಗೆಯಿಂದಲೆ ಸಾರಥಿ ಸೇತುವೆ ಹಾಗೂ ಉಕ್ಕಡಗಾತ್ರಿ-ಫತೆಪುರ ನಡುವಿನ ರಸ್ತೆ ಸಂಚಾರ ಬಂದ್‌ ಆಗಿವೆ. ಜನರು ಸುತ್ತು ಬಳಸಿ ಬರಬೇಕಾದ ಸ್ಥಿತಿ ಎದುರಾಗಿದೆ.

ಗಂಗಾನಗರ, ಗಂಗಾಮಯ:
ನಗರದ ಎಪಿಎಂಸಿ ಹಿಂಭಾಗದ ಗಂಗಾನಗರದಲ್ಲಿ ನದಿ ನೀರು ನುಗ್ಗುತ್ತಿದ್ದು, ಬುಧವಾರದಿಂದಲೆ ಎಪಿಎಂಸಿ ಮಾರುಕಟ್ಟೆಯಲ್ಲಿ ಗಂಜಿ ಕೇಂದ್ರ ಆರಂಭಿಸಲಾಗಿದೆ. ಈ ಭಾಗದ 11 ಕುಟುಂಬಗಳ 22 ಮಕ್ಕಳು ಸೇರಿದಂತೆ 58 ಜನರು ಗಂಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ. ತಾಲೂಕು ಆಡಳಿತ ಇವರಿಗೆ ಆಹಾರ, ವಸತಿ ವ್ಯವಸ್ಥೆ ಮಾಡಿದೆ.

11 ಮನೆ ಹಾನಿ, ವಿದ್ಯುತ್‌ ವ್ಯತ್ಯಯ:
ಸತತ ಮಳೆಯಿಂದಾಗಿ ನಗರ ಹಾಗೂ ತಾಲೂಕಿನ ನಾನಾ ಗ್ರಾಮಗಳಲ್ಲಿ 11 ಮನೆಗಳು ಭಾಗಶಃ ಜಖಂಗೊಂಡಿವೆ. ಮಳೆ ಹಾಗೂ ಗಾಳಿ ಹೆಚ್ಚಾದಾಗ ಮುಂಜಾಗ್ರತಾ ಕ್ರಮವಾಗಿ ಬೆಸ್ಕಾಂನವರು ವಿದ್ಯುತ್‌ ಸಂಪರ್ಕ ಕಡಿತಗೊಳಿಸುತ್ತಿದ್ದಾರೆ. ಈಗಾಗಲೆ ಹತ್ತಾರು ಮರಗಳು ಬಿದ್ದು ವಿದ್ಯುತ್‌ ಕಂಬ ಹಾಗೂ ತಂತಿಗಳಿಗೆ ಹಾನಿಯಾಗಿದೆ. ಬೆಳಗ್ಗೆಯಿಂದ ಸಂಜೆವರೆಗೆ ಐದಾರು ಬಾರಿ ವಿದ್ಯುತ್‌ ಸರಬರಾಜಿನಲ್ಲಿ ವಿದ್ಯುತ್‌ ವ್ಯತ್ಯಯವಾಗುತ್ತಿದೆ.

ವ್ಯಾಪಾರ ಥಂಡಾ:
ಜಿಟಿ, ಜಿಟಿ ಮಳೆಯಿಂದಾಗಿ ಫುಟ್‌ಪಾತ್‌ ವ್ಯಾಪಾರಿಗಳಿಗೆ ಗದಾ ಪ್ರಹಾರ ಬಿದ್ದಿದೆ. ಅವರ ಮಾರಾಟ ವಸ್ತುಗಳು ಹಾಗೂ ನಿಂತು ವ್ಯಾಪಾರ ಮಾಡಲು ಮಳೆ ಅಡ್ಡಿಯಾಗಿದೆ. ಇನ್ನು ಸುಸಜ್ಜಿತ ಅಂಗಡಿಗಳ ವ್ಯಾಪಾರಿಗಳೂ ಕೂಡ ಗ್ರಾಹಕರಿಲ್ಲದೆ ನಷ್ಟ ಅನುಭವಿಸುತ್ತಿದ್ದಾರೆ.

ಗಣ್ಯರ ಭೇಟಿ:
ಬೆಳಗ್ಗೆ ಎಸಿ ಕುಮಾರಸ್ವಾಮಿ ಮತ್ತು ತಹಸೀಲ್ದಾರ್‌ ರೆಹಾನ್‌ ಪಾಷಾರವರು ಗಂಗಾನಗರದ ಗಂಜಿ ಕೇಂದ್ರ, ತುಂಗಭದ್ರ ಸೇತುವೆ, ರಾಘವೇಂದ್ರ ಮಠ, ಸಾರಥಿ ಹಳ್ಳ ಸೇರಿದಂತೆ ನದಿ ತೀರದ ವಿವಿಧ ಜನವಸತಿ ಪ್ರದೇಶಗಳಿಗೆ ಭೇಟಿ ನೀಡಿದ್ದರು. ಮಧ್ಯಾಹ್ನ ಎಸ್ಪಿ ಆರ್‌.ಚೇತನ್‌ ಕೂಡ ಭೇಟಿ ನೀಡಿ ಪ್ರವಾಹ ಪರಿಸ್ಥಿತಿಯ ಅವಲೋಕನ ಮಾಡಿದರು.

ನೆರೆ ಭೀತಿ ಆತಂಕ
ನಂದಿಗುಡಿ, ಎಳೆಹೊಳೆ, ಧೂಳೆಹೊಳೆ, ಹುಲಗಿನ ಹೊಳೆ, ಬಿಳಸನೂರು, ರಾಜನಹಳ್ಳಿ, ಹಲಸಬಾಳು, ಗುತ್ತೂರು, ಸಾರಥಿ, ಚಿಕ್ಕಬಿದರಿ ಸೇರಿ ಹತ್ತಕ್ಕೂ ಹೆಚ್ಚು ಗ್ರಾಮಗಳು ನದಿ ದಡದಲ್ಲಿವೆ. ನದಿಯಲ್ಲಿನ ನೀರಿನ ಹರಿವು ಮತ್ತಷ್ಟು ಹೆಚ್ಚಾದರೆ ನೀರು ಗ್ರಾಮದೊಳಗೆ ನುಗ್ಗುವ ಭೀತಿ ಎದುರಿಸುತ್ತಿದ್ದಾರೆ. ಈಗಾಗಲೆ ತಾಲೂಕು ಆಡಳಿತ ಈ ಗ್ರಾಮಗಳಲ್ಲಿ ಟಾಂಟಾಂ ಹೊಡೆಸಿ ದನಕರು ಮೇಯಿಸಲು, ಸ್ನಾನ ಮಾಡಲು, ಬಟ್ಟೆ ಒಗೆಯಲು ನದಿ ದಡಕ್ಕೆ ಹೋಗದಂತೆ ಎಚ್ಚರಿಕೆ ಮೂಡಿಸಿದೆ.

ರಕ್ಷ ಣಾ ಪಡೆ ಆಗಮನ
ಬೆಂಗಳೂರಿನಿಂದ ತಾಲೂಕಿಗೆ ರಕ್ಷ ಣಾ ಕಾರ್ಯದಲ್ಲಿ ತೊಡಗುವ ಪಡೆಯನ್ನು ಕರೆಸಲಾಗಿದೆ. ಈ ಪಡೆಯು ಜಿಲ್ಲೆಯ ನದಿ ತೀರದ ತಾಲೂಕುಗಳಾದ ಹರಿಹರ, ಹೊನ್ನಾಳಿಯಲ್ಲಿ ಪ್ರವಾಹ, ಮಳೆಯಿಂದ ತೊಂದರೆಯಲ್ಲಿದ್ದವರಿಗೆ ರಕ್ಷ ಣೆ ಮಾಡುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ