ಆ್ಯಪ್ನಗರ

ದಾವಣಗೆರೆ: ಯುಗಾದಿ ಹಬ್ಬದ ಮೇಲೆ ಕೊರೊನಾ ಎಫೆಕ್ಟ್!

ದೇಶದ ಬಹುದೊಡ್ಡ ಹಬ್ಬ ಯುಗಾದಿ ಮೇಲೂ ಕೊರಾನಾ ಎಫೆಕ್ಟ್ ಬಿದ್ದಿದೆ. ಹಬ್ಬದ ಸಂಭ್ರಮವನ್ನು ಸೋಂಕಿನ ಭಯ ನುಂಗಿ ಹಾಕಿದೆ. ಜನರಿಂದ ತುಂಬಿ ತುಳುಕುತ್ತಿದ್ದ ಜವಳಿ ಅಂಗಡಿಗಳು ಜಿಲ್ಲಾಡಳಿತದ ನಿರ್ದೇಶನದ ಮೇರೆಗೆ ಬಾಗಿಲು ಮುಚ್ಚಿವೆ. ಜನತೆ ಖರೀದಿ ಮಾಡಲು ಮುಂದಾದರೂ ಅಂಗಡಿಗಳು ತೆರೆದಿಲ್ಲ..!!

Vijaya Karnataka Web 17 Mar 2020, 7:50 am
ಯಳನಾಡು ಮಂಜು ದಾವಣಗೆರೆ
Vijaya Karnataka Web ugadhi

ದಾವಣಗೆರೆ: ಹೊಸ ವರ್ಷವಾಗಿ ಆಚರಿಸುವ ದೇಶದ ಬಹುದೊಡ್ಡ ಹಬ್ಬ ಯುಗಾದಿ ಮೇಲೂ ಕೊರೊನಾ ಎಫೆಕ್ಟ್ ಬಿದ್ದಿದೆ. ಹಬ್ಬಕ್ಕೆ ಇನ್ನು ಒಂಬತ್ತು ದಿನ ಬಾಕಿ ಉಳಿದಿದ್ದು, ಈ ಹೊತ್ತಿಗೆ ಖರೀದಿ ಭರಾಟೆ ಜೋರಿರುತ್ತಿತ್ತು. ಆದರೀಗ ಹಬ್ಬದ ಸಂಭ್ರಮವನ್ನೂ ಸೋಂಕಿನ ಭಯ ನುಂಗಿ ಹಾಕಿದೆ.

ಯುಗಾದಿ ಹಬ್ಬ ಹತ್ತಿರ ಆಗುತ್ತಿದ್ದು, ಈ ಹೊತ್ತಿಗೆ ಮಾಲ್‌, ಮಾರುಕಟ್ಟೆ ಪ್ರಮುಖವಾಗಿ ಜವಳಿ ಅಂಗಡಿಗಳು ತುಂಬಿ ತುಳುಕುತ್ತಿದ್ದವು. ಆದರೆ, ಈಗ ಜನರಿಂದ ತುಂಬಿ ತುಳುಕುತ್ತಿದ್ದ ಜವಳಿ ಅಂಗಡಿಗಳು ಜಿಲ್ಲಾಡಳಿತದ ನಿರ್ದೇಶನದ ಮೇರೆಗೆ ಬಾಗಿಲು ಮುಚ್ಚಿವೆ. ಜನತೆ ಖರೀದಿ ಮಾಡಲು ಮುಂದಾದರೂ ಅಂಗಡಿಗಳು ತೆರೆದಿಲ್ಲ, ಕೆಲ ಸಣ್ಣ ಅಂಗಡಿಗಳು ತೆರೆದಿದ್ದರೂ ಅಲ್ಲಿಒಮ್ಮೆ ಖರೀದಿಗೆ ಒಳ ಹೋಗಲು ಸಂಖ್ಯೆಯ ನಿಯಂತ್ರಣ ಹೇರಿರುವುದರಿಂದ ಕೊರೊನಾ ಭೀತಿ ಸೇರಿ ಯುಗಾದಿ ಹಬ್ಬವನ್ನು ಡಲ್‌ ಆಗಿಸುವ ಲಕ್ಷಣಗಳು ಗೋಚರಿಸಿವೆ.

ಜವಳಿ ಅಂಗಡಿ ಬಾಗಿಲು
ಮಧ್ಯ ಕರ್ನಾಟಕದಲ್ಲಿ ಯುಗಾದಿ ಹಬ್ಬ ಖದರ್‌ ಜೋರಿರುತ್ತದೆ. ಇಲ್ಲಿ ಮೂರು ದಿನ ಹಬ್ಬವನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಹೊಸ ಬಟ್ಟೆ ತೊಟ್ಟು, ಹೋಳಿಗೆ ಸವಿ ಸವಿದು ಸಂಭ್ರಮದಿಂದ ಹಬ್ಬ ಆಚರಿಸುವ ವಾಡಿಕೆಯಿದೆ. ಹೊಸ ಬಟ್ಟೆ ಖರೀದಿಗೆ ಜವಳಿ ಅಂಗಡಿಗಳೇ ತೆರೆದಿಲ್ಲ. ರಾಜ್ಯಾದ್ಯಂತ ಇಲ್ಲಿಗೆ ಖರೀದಿಗೆ ಬರುವ ಪ್ರಮುಖ ಜವಳಿ ಅಂಗಡಿಯಾದ ಬಿ.ಎಸ್‌.ಚನ್ನಬಸಪ್ಪ ಅಂಡ್‌ ಸನ್ಸ್‌ ಕೂಡ ಬಾಗಿಲು ಮುಚ್ಚಿದೆ. ಇದೇ ರೀತಿ ಹೆಸರು ಮಾಡಿರುವ ಕೆಲ ಪ್ರಮುಖ ಜವಳಿ ಅಂಗಡಿಗಳು ಕೂಡ ಬಾಗಿಲು ಮುಚ್ಚಿವೆ.

ರಿಲಾಯನ್ಸ್‌ ಮಾರ್ಟ್‌ ಸೇರಿ ಕೆಲ ಮಾಲ್‌ಗಳು ಬಾಗಿಲು ಮುಚಿದ್ದರೆ, ಮೋರ್‌ಗಳಲ್ಲಿ ಒಮ್ಮೆ ಕೇವಲ ಐದು ಜನ ಮಾತ್ರ ಖರೀದಿಗೆ ಒಳ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಜನತೆ ಕೂಡ ಹಬ್ಬದ ಮೂಡ್‌ನಿಂದ ಕೊರೊನಾ ಭೀತಿಗೆ ಜಾರಿದ್ದು, ಅಗತ್ಯ ವಸ್ತುಗಳನ್ನು ಮಾತ್ರ ಖರೀದಿಸಲು ಮುಂದಾಗಿದ್ದಾರೆ.

ಉಚ್ಚೆಂಗಮ್ಮ ಜಾತ್ರೆ ರದ್ದು
ಕರೊನಾ ಮುಂಜಾಗ್ರತಾ ಕ್ರಮವಾಗಿ ಮಾ.24 ರಂದು ನಡೆಯಬೇಕಿದ್ದ ಹರಪನಹಳ್ಳಿ ತಾಲೂಕು ಉಚ್ಚಂಗಿದುರ್ಗದ ಉಚ್ಚೆಂಗೆಮ್ಮ ಜಾತ್ರೆಯನ್ನು ರದ್ದು ಮಾಡಲಾಗಿದೆ. ಜ. 23 ರಿಂದ 27 ರವರೆಗೆ ಈ ಜಾತ್ರೆ ನಡೆಯಬೇಕಿತ್ತು. ಹೊನ್ನಾಳಿ ಕುಂದೂರು ಗ್ರಾಮದ ಶ್ರೀ ಆಂಜನೇಯ ಸ್ವಾಮಿ ರಥೋತ್ಸವ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಎಂದಿನಂತೆ ನಡೆಯಲಿವೆ. ಮಾ.18ರಂದು ರಥೋತ್ಸವ ಸೇರಿ ಮಾ.20ರವರೆಗೂ ನಡೆಯಬೇಕಿದ್ದ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಆದರೆ ಮಾ.20, 21ರಂದು ನಡೆಯಬೇಕಿದ್ದ ಜಂಗಿ ಕುಸ್ತಿಯನ್ನು ರದ್ದು ಪಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಜಿಲ್ಲೆಯಲ್ಲಿ ಕೊರೊನಾ ಇಲ್ಲ, ಎಂಟು ಜನರ ಮೇಲೆ ನಿಗಾ
ಜಿಲ್ಲೆಯಲ್ಲಿ ಸೋಮವಾರ 8 ಜನರನ್ನು ಹೊಸದಾಗಿ ಕೊರೊನಾ ಸೋಂಕು ಅವಲೋಕನೆಗೆ ಪಟ್ಟಿ ಮಾಡಲಾಗಿದೆ. ಈವರೆಗೂ ಜಿಲ್ಲೆಯಲ್ಲಿ 49 ಪ್ರಕರಗಳನ್ನು ಅವಲೋಕನಕ್ಕೆ ಪಟ್ಟಿ ಮಾಡಿದಂತಾಗಿದೆ. ಈವರೆಗೂ ಜಿಲ್ಲೆಯಲ್ಲಿ ಯಾವುದೇ ಸೋಂಕು ಪ್ರಕರಣ ವರದಿಯಾಗಿಲ್ಲ ಎಂದು ಡಿಸಿ ಮಹಾಂತೇಶ್‌ ಬೀಳಗಿ ತಿಳಿಸಿದ್ದಾರೆ. ಒಂದು ಪ್ರಕರಣದಲ್ಲಿ 28 ದಿನಗಳ ಅವಲೋಕನ ಮುಗಿದಿದ್ದರೆ, 14 ಪ್ರಕರಣಗಳಲ್ಲಿ14 ದಿನಗಳ ಅವಲೋಕನ ಮುಗಿದಿದೆ. ಯಾವುದೇ ಸೋಂಕು ಪ್ರಕರಣ ಪತ್ತೆಯಾಗಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ