ಆ್ಯಪ್ನಗರ

ಕರೆಂಟ್‌ ಕಟ್‌ಗೆ ನೀರಿಲ್ಲದೆ ಒಣಗಿದ ಭತ್ತ ಬೆಳೆ!

ನದಿ ದಡದಲ್ಲಿದ್ದರೂ ವಿದ್ಯುತ್‌ ಸಮಸ್ಯೆಯಿಂದ ಸಮರ್ಪಕವಾಗಿ ನೀರು ಸರಬರಾಜು ಮಾಡಲಾಗದೆ ಇಬ್ಬರು ಸಹೋದರರ 7 ಎಕರೆ ಭತ್ತದ ಬೆಳೆ ಒಣಗಿರುವ ಘಟನೆ ತಾಲೂಕಿನ ರಾಜನಹಳ್ಳಿ ಗ್ರಾಮದಲ್ಲಿ ನಡೆದಿದೆ.

Vijaya Karnataka 10 Jun 2019, 5:00 am
ಹರಿಹರ : ನದಿ ದಡದಲ್ಲಿದ್ದರೂ ವಿದ್ಯುತ್‌ ಸಮಸ್ಯೆಯಿಂದ ಸಮರ್ಪಕವಾಗಿ ನೀರು ಸರಬರಾಜು ಮಾಡಲಾಗದೆ ಇಬ್ಬರು ಸಹೋದರರ 7 ಎಕರೆ ಭತ್ತದ ಬೆಳೆ ಒಣಗಿರುವ ಘಟನೆ ತಾಲೂಕಿನ ರಾಜನಹಳ್ಳಿ ಗ್ರಾಮದಲ್ಲಿ ನಡೆದಿದೆ.
Vijaya Karnataka Web dried paddy crop without water for current cut
ಕರೆಂಟ್‌ ಕಟ್‌ಗೆ ನೀರಿಲ್ಲದೆ ಒಣಗಿದ ಭತ್ತ ಬೆಳೆ!


ಚನ್ನಬಸಪ್ಪ ಗೌಡ್ರು ಮತ್ತು ರಾಮಕೃಷ್ಣ ಗೌಡ್ರು ಸಹೋದರರು ಒಟ್ಟು ಏಳು ಎಕರೆ ಪ್ರದೇಶದಲ್ಲಿ ಭತ್ತದ ಬೆಳೆ 4 ತಿಂಗಳ ಹಿಂದೆ ಬೆಳೆದಿದ್ದರು. ಇವರಿಗೆ ಸೇರಿದ ಎರಡು ಪಂಪ್‌ಸೆಟ್‌ಗಳಿವೆ. ಪ್ರತಿ ಬಾರಿಯಂತೆ ಇವರು ನದಿಯಲ್ಲಿನ ನೀರು ಆಶ್ರಯಿಸಿದ್ದಾರೆ.

ಎರಡು ಪಂಪ್‌ಸೆಟ್‌ಗಳಿಂದ ನೀರು ಹರಿಸಿದರೂ ಇವರ ಜಮೀನಿಗೆ ಆ ನೀರು ಸಾಲದಾಯಿತು. ಪರಿಣಾಮವಾಗಿ ಕಣ್ಣೆದುರೆ ಕಷ್ಟಪಟ್ಟು ಬಿತ್ತನೆ ಮಾಡಿ, ಪೋಷಿಸಿದ ಭತ್ತದ ಬೆಲೆ ಒಣಗಿ ಹೋಗಿದೆ.

8 ಗಂಟೆ ವಿದ್ಯುತ್‌ ಸಾಲದು:

ಒಂದು ದಿನಕ್ಕೆ ಬೆಸ್ಕಾಂನವರು ಪಂಪ್‌ಸೆಟ್‌ಗಳಿಗೆ 8 ಗಂಟೆ ನೀರು ಕೊಡುತ್ತಾರೆ. ಅದೂ ನಿರಂತರವಾಗಿರಲ್ಲ. ಮಧ್ಯ ವ್ಯತ್ಯಯವಾಗುತಿರುತ್ತದೆ. ಹೀಗಾಗಿ ಇವರಿಗೆ ಸಮರ್ಪಕವಾಗಿ ನೀರು ಸಿಗಲಿಲ್ಲ ಎಂದು ನಷ್ಟಕ್ಕೀಡಾದ ರೈತರು ಹೇಳಿದರು. ಈ ಕುರಿತು ಇವರು ಸ್ಥಳ ಪರಿಶೀಲನೆ ಹಾಗೂ ಪರಿಹಾರಕ್ಕಾಗಿ ತಹಸೀಲ್ದಾರ್‌ ಹಾಗೂ ಸಹಾಯಕ ಕೃಷಿ ನಿರ್ದೇಶಕರಿಗೆ ಗುರುವಾರ ಅರ್ಜಿ ನೀಡಿದ್ದಾರೆ. ಅವರು ಜಮೀನಿಗೆ ಭೇಟಿ ನೀಡಿ ಮುಂದಿನ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

ಅಂದಾಜು 2 ಲಕ್ಷ ರೂ. ಖರ್ಚು ಮಾಡಿದ್ದೆವು. ಹರಿಸಿದ ನೀರು ಸಾಕಾಗಲಿಲ್ಲ. ಈ ಹಿಂದೆ ಸಿಎಂ ಕುಮಾರಸ್ವಾಮಿಯವರು ಪಂಪ್‌ಸೆಟ್‌ಗಳಿಗೆ 10 ಗಂಟೆ ವಿದ್ಯುತ್‌ ಹರಿಸಲು ಕ್ರಮಕೈಗೊಳ್ಳುತ್ತೇವೆ ಎಂದು ನೀಡಿದ್ದ ಭರವಸೆ ಆಧರಿಸಿ 7 ಎಕರೆ ಭತ್ತ ಬಿತ್ತನೆ ಮಾಡಿದ್ದೆವು. ಆದರೆ ನಾವು ನಷ್ಟಕ್ಕೀಡಾದೆವು.
-ಚನ್ನಬಸಪ್ಪಗೌಡ್ರು, ರೈತ, ರಾಜನಹಳ್ಳಿ.

ಇವರು ಸಾಲ, ಸೂಲ ಮಾಡಿ ಬಿತ್ತನೆ ಮಾಡಿದ್ದರು. ಭತ್ತ ಒಣಗಲು ಆರಂಭಿಸಿದಾಗ ಇವರ ಕುಟುಂಬದವರು ಮನೆಯಿಂದ ಹೊರಕ್ಕೆ ಬರುತ್ತಿರಲಿಲ್ಲ. ಧೈರ್ಯ ತುಂಬಿ ಪರಿಹಾರ ಕೋರಿ ಅರ್ಜಿ ಸಲ್ಲಿಸಿದ್ದೇವೆ. ಕಂದಾಯ ಮತ್ತು ಕೃಷಿ ಇಲಾಖೆಯವರು ತುರ್ತಾಗಿ ಇವರ ಸಹಾಯಕ್ಕೆ ಬರಬೇಕಿದೆ.
- ಪರಶುರಾಮ ಹಾವಗಾರ್‌, ರೈತ ಸಂಘದ ಮುಖಂಡ, ರಾಜನಹಳ್ಳಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ