ಆ್ಯಪ್ನಗರ

ಬರ, ಬಿಸಿಲಿಗೆ 6 ಸಾವಿರ ಹೆ.ಅಡಕೆ ನಾಶ!

ನಿರಂತರ ಬರ ಕೃಷಿ ಮೇಲೆ ತೀವ್ರ ದುಷ್ಪರಿಣಾಮ ಬೀರುತ್ತಿದ್ದು, ತೋಟಗಾರಿಕೆ ಬೆಳೆಗಳನ್ನು ಆಪೋಶನ ತೆಗೆದುಕೊಳ್ಳುತ್ತಿದೆ. ಈ ವರ್ಷದ ಬರ, ಬಿರು ಬೇಸಿಗೆಯ ಬಿಸಿಲಿನ ತೀವ್ರತೆಗೆ ಜಿಲ್ಲೆಯಲ್ಲಿ 6 ಸಾವಿರ ಹೆಕ್ಟೇರ್‌ ಅಡಕೆ ತೋಟ ಒಣಗಿ ಹೋಗಿದೆ. ಮೇ ತಿಂಗಳಲ್ಲೂ ಮಳೆ ಬಾರದೆ ಇದೇ ರೀತಿ ತಾಪಮಾನ ಮುಂದುವರಿದರೆ 20 ಸಾವಿರ ಹೆಕ್ಟೇರ್‌ನಲ್ಲಿನ ಬೆಳೆ ಹಾಳಾಗಬಹುದು ಎಂದು ತೋಟಗಾರಿಕೆ ಇಲಾಖೆ ಅಂದಾಜಿಸಿದೆ.

Vijaya Karnataka 27 Apr 2019, 5:00 am
ದಾವಣಗೆರೆ : ನಿರಂತರ ಬರ ಕೃಷಿ ಮೇಲೆ ತೀವ್ರ ದುಷ್ಪರಿಣಾಮ ಬೀರುತ್ತಿದ್ದು, ತೋಟಗಾರಿಕೆ ಬೆಳೆಗಳನ್ನು ಆಪೋಶನ ತೆಗೆದುಕೊಳ್ಳುತ್ತಿದೆ. ಈ ವರ್ಷದ ಬರ, ಬಿರು ಬೇಸಿಗೆಯ ಬಿಸಿಲಿನ ತೀವ್ರತೆಗೆ ಜಿಲ್ಲೆಯಲ್ಲಿ 6 ಸಾವಿರ ಹೆಕ್ಟೇರ್‌ ಅಡಕೆ ತೋಟ ಒಣಗಿ ಹೋಗಿದೆ. ಮೇ ತಿಂಗಳಲ್ಲೂ ಮಳೆ ಬಾರದೆ ಇದೇ ರೀತಿ ತಾಪಮಾನ ಮುಂದುವರಿದರೆ 20 ಸಾವಿರ ಹೆಕ್ಟೇರ್‌ನಲ್ಲಿನ ಬೆಳೆ ಹಾಳಾಗಬಹುದು ಎಂದು ತೋಟಗಾರಿಕೆ ಇಲಾಖೆ ಅಂದಾಜಿಸಿದೆ.
Vijaya Karnataka Web drought toll rises to 6000 hectares
ಬರ, ಬಿಸಿಲಿಗೆ 6 ಸಾವಿರ ಹೆ.ಅಡಕೆ ನಾಶ!


ಜಿಲ್ಲೆ ನಿರಂತರ ನಾಲ್ಕು ವರ್ಷದ ಬರದ ಸಂಕಷ್ಟದಲ್ಲಿ ಬೇಯುತ್ತಿದೆ. ಈ ವರ್ಷ ಮುಂಗಾರು ಕೊರತೆ ಜತೆ ಹಿಂಗಾರು ಸಂಪೂರ್ಣ ಕಾಣೆಯಾಗಿದ್ದರಿಂದ ಬೇಸಿಗೆಯಲ್ಲಿ ಅದರ ಎಫೆಕ್ಟ್ ಗಂಭೀರವಾಗಿದೆ. ಅಂತರ್ಜಲ ಪಾತಾಳ ಸೇರಿ ಕೊಳವೆ ಬಾವಿಗಳು ಬತ್ತಿ ಹೋಗುತ್ತಿವೆ. ಅಲ್ಪಸ್ವಲ್ಪ ನೀರಿದ್ದರೂ ತಾಪಮಾನ 40 ಡಿಗ್ರಿ ಮುಟ್ಟಿರುವುದರಿಂದ ಬಿಸಿಲ ಝಳಕ್ಕೆ ತೋಟಗಾರಿಕೆ ಬೆಳೆಗಳು ಕೂಡ ನಾಶವಾಗುತ್ತಿವೆ.

6 ಸಾವಿರ ಹೆಕ್ಟೇರ್‌:

ಜಿಲ್ಲೆಯಲ್ಲಿ 47, 895 ಹೆಕ್ಟೇರ್‌ ಪ್ರದೇಶದಲ್ಲಿ ಅಡಕೆ ಬೆಳೆಯಿದೆ. ಅಡಕೆ ಸೂಕ್ಷ್ಮ ಬೆಳೆಯಾಗಿದ್ದು ನಿರಂತರ ನಾಲ್ಕು ವರ್ಷದ ಬರ, ಬಿಸಿಲಿನಿಂದ 6 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಅಡಕೆ ತೋಟ ಒಣಗಿ ಹೋಗಿದೆ. ಇದೇ ಪ್ರಮುಖ ಆದಾಯ ಮೂಲವಾಗಿದ್ದ ರೈತರು ದಿಕ್ಕುತೋಚದಂತಾಗಿದ್ದಾರೆ.

ಜಗಳೂರು ತಾಲೂಕಿನಲ್ಲಿ ಅತಿ ಹೆಚ್ಚು ತೋಟಗಳು ಹಾಳಾಗಿವೆ. ಈ ತಾಲೂಕಲ್ಲಿ ಒಟ್ಟು 2108 ಹೆಕ್ಟೇರ್‌ ಪ್ರದೇಶದಲ್ಲಿ ಅಡಕೆ ಬೆಳೆಯಿದ್ದು, ಇದರಲ್ಲಿ ಸುಮಾರು 1300 ಹೆಕ್ಟೇರ್‌ನಲ್ಲಿ ತೋಟಗಳು ಒಣಗಿ ಹೋಗಿವೆ. ಇನ್ನು ಅತಿ ಹೆಚ್ಚು ಅಡಕೆ ಬೆಳೆಯುವ ಅಡಕೆ ಕಣಜ ಎಂದೇ ಹೆಸರಾದ ಚನ್ನಗಿರಿ ತಾಲೂಕಿನ ಸಂತೆಬೆನ್ನೂರು, ದೇವರಹಳ್ಳಿ ಭಾಗದಲ್ಲಿ ಸುಮಾರು 250 ಹೆಕ್ಟೇರ್‌ ಹಾಳಾಗಿದೆ. ಈ ತಾಲೂಕಿನಲ್ಲೂ ಇತರೆಡೆ ಸೇರಿ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಪ್ರದೇಶದಲ್ಲಿ ತೋಟಗಳು ಸಂಕಷ್ಟದಲ್ಲಿವೆ. ದಾವಣಗೆರೆ ತಾಲೂಕಿನಲ್ಲಿ ಸುಮಾರು 500 ಹೆಕ್ಟೇರ್‌ ಒಣಗಿದೆ ಎಂದು ಅಂದಾಜಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 5 ರಿಂದ 6 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಅಡಕೆ ತೋಟ ಹಾಳಾಗಿದೆ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಲಕ್ಷ್ಮೇಕಾಂತ್‌ ವಿಕಗೆ ಮಾಹಿತಿ ನೀಡಿದರು.

ಮಳೆಯೂ ಇಲ್ಲ:

ನಿರಂತರ ಬರದ ಕಾರಣಕ್ಕೆ ಭೂಮಿಯಲ್ಲಿ ತನುವಿಲ್ಲ, ಇನ್ನೊಂದೆಡೆ ಈ ಬಾರಿ ಬಿಸಿಲು ಕೂಡ 38 ಡಿಗ್ರಿಗಿಂತ ಕೆಳಗಿಳಿದಿಲ್ಲ, ಇತ್ತೀಚಿನ ದಿನಗಳಲ್ಲಂತೂ 41 ಡಿಗ್ರಿ ಮುಟ್ಟಿದೆ. ಈ ಬಿಸಿಲಿನ ತೀವ್ರತೆಗೆ ಅಡಕೆ ತೋಟಗಳಿಗೆ ಡ್ರಿಪ್‌ ಮೂಲಕ ನೀಡುವ ನೀರು ಕೂಡ ಸಾಲುತ್ತಿಲ್ಲ. ಬಿಸಿಲಿನ ಝಳಕ್ಕೆ ಗರಿಗಳು ಕೆಂಪಾಗುತ್ತಿವೆ. ಇನ್ನು ನೀರಿಲ್ಲದ ಕಡೆ ತೋಟಗಳು ಒಣಗಿ ಹೋಗಿವೆ.

ರಾಜ್ಯದ ಇತರೆಡೆ ಒಂದೆರಡು ಬಾರಿ ಬೇಸಿಗೆ ಮಳೆ ಸುರಿದಿದೆ. ಆದರೆ, ಜಿಲ್ಲೆಯಲ್ಲಿ ಈವರೆಗೂ ಒಮ್ಮೆಯೂ ಒಂದು ಹದ ಮಳೆ ಸುರಿದಿಲ್ಲ. ಹಾಗಾಗಿ ಹಿಂಗಾರು ಮಳೆ ಸುರಿಯದೆ ಆರಂಭವಾದ ಬರ ಇನ್ನು ಮುಂದುವರಿದಿದ್ದು ಹಾನಿ ಹೆಚ್ಚುತ್ತಲೇ ಇದೆ. ಮೇ ತಿಂಗಳ ಒಳಗೆ ಬೇಸಿಗೆ ಮಳೆ ಸುರಿಯದೇ ಇದ್ದರೆ ಅಡಕೆ ತೋಟಗಳು ಇನ್ನಷ್ಟು ಹಾನಿಗೆ ಒಳಗಾಗಲಿವೆ. ತೋಟಗಾರಿಕೆ ಇಲಾಖೆ ಅಂದಾಜಿಸಿರುವ ಪ್ರಕಾರ 20 ಸಾವಿರಕ್ಕೂ ಹೆಚ್ಚು ಹೆಕ್ಟೇರ್‌ ಪ್ರದೇಶದ ತೋಟಗಳು ಒಣಗಿ ಹೋಗಲಿದೆ. ಚನ್ನಗಿರಿ ತಾಲೂಕು ಒಂದರಲ್ಲಿ 9 ಸಾವಿರಕ್ಕಿಂತ ಹೆಚ್ಚು ಪ್ರದೇಶದಲ್ಲಿ ಹಾನಿ ಆಗಲಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

ಪರಿಹಾರದ ನಿರೀಕ್ಷೆ

ಬರದಿಂದ ಹಾಳಾಗಿರುವ ಅಡಕೆ ಬೆಳೆಯಿಂದ ಆದಾಯದ ಮೂಲ ಕಳೆದುಕೊಂಡಿರುವ ರೈತರು ಅಪಾರ ಆದಾಯ ಕಳೆದುಕೊಂಡಿದ್ದಾರೆ. ಮತ್ತೆ ಅಡಕೆ ತೋಟ ಕಟ್ಟಿ ಬೆಳೆಸಬೇಕಾದರೆ ಕನಿಷ್ಟ ಐದರಿಂದ ಆರು ವರ್ಷ ಬೇಕು. ಹಾನಿಗೊಳಗಾದ ತೋಟಕ್ಕೆ ಸರಕಾರ ಪರಿಹಾರ ನೀಡಬಹುದಾ ಎಂದು ಎದುರು ನೋಡುತ್ತಿದ್ದಾರೆ.

-----

ಕೇಂದ್ರ ತಂಡ ಭೇಟಿ

ಬರ ವೀಕ್ಷಣೆಗೆ ಜಿಲ್ಲೆಗೆ ಆಗಮಿಸಿದ್ದ ಕೇಂದ್ರದ ಅಧಿಕಾರಿಗಳ ತಂಡ ಜಗಳೂರು ತಾಲೂಕಿನ ಅಡಕೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಹಾನಿಯನ್ನು ದಾಖಲಿಸಿಕೊಂಡಿದೆ. ಬರ ಪರಿಹಾರದಲ್ಲಿ ಪ್ರತಿ ಎಕರೆ ಅಡಕೆಗೆ 16 ಸಾವಿರ ರೂ. ಪರಿಹಾರ ನೀಡಲು ಅವಕಾಶವಿದೆ. ಆದರೆ, ಈವರೆಗೂ ಈ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ.

---

ಹಾನಿಗೆ ಪರಿಹಾರ ಇಲ್ಲ

ಅಡಕೆ ಬೆಳೆಗೆ ಬೆಂಬಲ ನೀಡುವುದನ್ನು ಸರಕಾರ ನಿಲ್ಲಿಸಿದೆ, ಗೋರಖ್‌ಸಿಂಗ್‌ ವರದಿ ಪ್ರಕಾರ ನೀರಿನ ಸಮಸ್ಯೆಯಿರುವ ಬಯಲು ಸೀಮೆ ಪ್ರದೇಶದಲ್ಲಿ ಅಡಕೆ ಬೆಳೆ ಸೂಕ್ತ ಅಲ್ಲ. ಈ ಬೆಳೆ ಬೆಳೆಯುವುದನ್ನು ಕಡಿಮೆ ಮಾಡಬೇಕು ಎಂದು ವರದಿ ನೀಡಿದೆ. ಹಾಗಾಗಿ ಇಲ್ಲಿ ಬೆಳೆ ಹಾನಿಯಾದರೆ ಪರಿಹಾರ ಸಿಗುವುದಿಲ್ಲವೇ ಎಂಬ ಪ್ರಶ್ನೆಯೂ ಎದ್ದಿದೆ. ಅಧಿಕಾರಿಗಳು ಕೂಡ ಇದನ್ನೇ ಹೇಳುತ್ತಿದ್ದಾರೆ. ಸರಕಾರ ಕೂಡ ಇತ್ತ ಗಮನ ಹರಿಸದೆ ಇರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

--

ಬರ ಮತ್ತು ಬಿಸಿಲಿ ತೀವ್ರತೆಗೆ ಅಡಕೆ ಬೆಳೆಗೆ ಅಪಾರ ಹಾನಿ ಆಗುತ್ತಿದೆ. ಮೇ ತಿಂಗಳಲ್ಲಿ ಮಳೆ ಬಾರದೆಯಿದ್ದರೆ ಸುಮಾರು 20 ಹೆಕ್ಟೇರ್‌ ಪ್ರದೇಶದಲ್ಲಿನ ತೋಟಗಳು ಒಣಗಿ ಹೋಗುವ ಅಪಾಯವಿದೆ.

- ಲಕ್ಷ್ಮೇಕಾಂತ್‌, ಉಪನಿರ್ದೇಶಕ, ತೋಟಗಾರಿಕೆ ಇಲಾಖೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ