ಆ್ಯಪ್ನಗರ

ಕೇವಲ 11 ಗುಂಟೆ ಜಮೀನಲ್ಲಿ 17 ವಿಧದ ಬೆಳೆ ಬೆಳೆದ ರೈತ! ಲಕ್ಷಗಳಲ್ಲಿ ಸಂಪಾದನೆ!

ಖರ್ಚು ಹಾಗೂ ಕೂಲಿ ಕಾರ್ಮಿಕರ ಕೊರತೆಯಿಂದಾಗಿ ರೈತರು ಕೃಷಿಯಿಂದ ವಿಮುಖರಾಗುತ್ತಿರುವ ಹೊತ್ತಿನಲ್ಲಿ ಇಲ್ಲೊಬ್ಬ ಅನ್ನದಾತ ಎಲ್ಲರಿಗೂ ಮಾದರಿಯಾಗಿದ್ದಾರೆ. ಸಮಗ್ರ ಕೃಷಿ ಪದ್ಧತಿ, ಸಾವಯವ ಸಮಗ್ರ ಕೃಷಿಯಡಿ ಇವರು ಕೇವಲ 11 ಗುಂಟೆ ಜಮೀನಿನಲ್ಲಿ ನಾನಾ ರೀತಿಯ 17 ಬೆಳೆ ಬೆಳೆದು ವರ್ಷಕ್ಕೆ ಲಕ್ಷಾಂತರ ರೂಪಾಯಿ ಸಂಪಾದಿಸುತ್ತಿದ್ದಾರೆ.

Edited byಬಾನುಪ್ರಸಾದ ಕೆ.ಎನ್\u200c. | Vijaya Karnataka Web 30 May 2022, 12:45 pm

ಹೈಲೈಟ್ಸ್‌:

  • ಕವಳಿ ತಾಂಡದ ಪ್ರಗತಿಪರ ರೈತ ಮೋತಿನಾಯ್ಕ್‌
  • ಸಮಗ್ರ ಕೃಷಿ ಪದ್ಧತಿ ಅಳವಡಿಕೆ
  • 2 ಎಕರೆಯಲ್ಲಿ ವರ್ಷಕ್ಕೆ 15 ಲಕ್ಷ ರೂ. ಆದಾಯ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web crop
ವಿ.ಲಿಂಗರಾಜ್‌ ಬಸವಾಪಟ್ಟಣ
ಖರ್ಚು ಹಾಗೂ ಕೂಲಿ ಕಾರ್ಮಿಕರ ಕೊರತೆಯಿಂದಾಗಿ ರೈತರು ಕೃಷಿಯಿಂದ ವಿಮುಖರಾಗುತ್ತಿರುವ ಹೊತ್ತಿನಲ್ಲಿ ಇಲ್ಲೊಬ್ಬ ಅನ್ನದಾತ ಎಲ್ಲರಿಗೂ ಮಾದರಿಯಾಗಿದ್ದಾರೆ. ಸಮಗ್ರ ಕೃಷಿ ಪದ್ಧತಿ, ಸಾವಯವ ಸಮಗ್ರ ಕೃಷಿಯಡಿ ಇವರು ಕೇವಲ 11 ಗುಂಟೆ ಜಮೀನಿನಲ್ಲಿ ನಾನಾ ರೀತಿಯ 17 ಬೆಳೆ ಬೆಳೆದು ವರ್ಷಕ್ಕೆ ಲಕ್ಷಾಂತರ ರೂಪಾಯಿ ಸಂಪಾದಿಸುತ್ತಿದ್ದಾರೆ.
ಹೌದು, ಆ ಮಾದರಿಯ ಕೃಷಿಕ ಚನ್ನಗಿರಿ ತಾಲೂಕಿನ ಕವಳಿ ತಾಂಡದ 57 ವರ್ಷದ ಮೋತಿನಾಯ್ಕ್‌. ಇವರ ಸಾವಯವ ಸಮಗ್ರ ಕೃಷಿ ಪದ್ಧತಿ ಯುವ ರೈತರಿಗೆ ಮಾದರಿಯಾಗಿದೆ. ಬಸವಾಪಟ್ಟಣದಿಂದ ಸುಮಾರು 8 ಕಿ.ಮೀ. ದೂರದ ಕವಳಿತಾಂಡದಲ್ಲಿ ಇವರ ಜಮೀನಿದೆ. ಅನಕ್ಷರಸ್ಥರಾದರೂ ಇವರ ಮಾದರಿಯ ಕೃಷಿ ಸಾಕ್ಷರತೆ ಎಲ್ಲರಿಗೂ ಆದರ್ಶಪ್ರಾಯವಾಗಿದೆ.

ಎರಡು ಎಕರೆ ಅಡಕೆ ತೋಟ:
ಮೋತಿನಾಯ್ಕ್‌ ಅವರಿಗೆ ಕೇವಲ ಎರಡು ಎಕರೆ ಅಡಕೆ ತೋಟವಿದ್ದು, ಅದರಲ್ಲಿ 11 ಗುಂಟೆ ಜಮೀನಲ್ಲಿ ಮಾತ್ರ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು, ಕಾಫಿ ಗಿಡ, ಕಾಳುಮೆಣಸು, ದಾಳಿಂಬೆ, ಅರಿಸಿಣ, ಬಾಳೆ, ಸಪೋಟಾ, ಪಪ್ಪಾಯಿ, ಸೀತಾಫಲ, ಪೇರಲ, ಶುಂಠಿ, ಕಿತ್ತಳೆ, ಬೀನ್ಸ್‌, ಟೊಮೆಟೊ, ನಿಂಬೆಹಣ್ಣು, ಮೆಣಸಿನ ಗಿಡ, ಬೆಂಡೆ, ಆಂಧ್ರದ ಸೇಬು, ದ್ರಾಕ್ಷಿ ಬೆಳೆಯುತ್ತಿದ್ದಾರೆ.

ತೋಟಕ್ಕೆ ಹೊಂದಿರುವಂತೆ ತೇಗ, ಸಿಲವರ್‌, ಹಲಸಿನ ಮರ ಬೆಳೆದಿದ್ದಾರೆ. ಜತೆಗೆ ತೋಟ ಮತ್ತು ಮನೆ ಸುಂದರವಾಗಿ ಕಾಣುವುದಕ್ಕೆ ಗುಲಾಬಿ, ಡೇರೆ, ಮಲ್ಲಿಗೆ, ಸೇವಂತಿಗೆ ಸೇರಿ ನಾನಾ ರೀತಿ ಪುಷ್ಪ ಬೆಳೆಸಿದ್ದು, ಹೂವಿನ ಸಸಿಗಳು ಮಾರಾಟಕ್ಕೆ ಸಿದ್ಧವಾಗಿವೆ.

ಮುಂಗಾರಿನ ಅಭಿಷೇಕಕೆ ಮಿದುವಾಯಿತು ನೆಲವು.. ಕೇರಳ ಕರಾವಳಿಗೆ 3 ದಿನ ಮುನ್ನವೇ ಮಾರುತ ಪ್ರವೇಶ..!

ವಾರ್ಷಿಕ 15 ಲಕ್ಷ ರೂ. ಆದಾಯ:
ಮನೆ ಮುಂದೆ ಇರುವ ಭದ್ರಾ ಉಪ ಕಾಲುವೆಯಿಂದ ನೀರುಣಿಸುತ್ತಾರೆ. ಕೊಟ್ಟಿಗೆ ಗೊಬ್ಬರ ಬಳಸಿ ಸಾವಯವ ಕೃಷಿ ಮೂಲಕ ಹಲವು ಬೆಳೆ ಬೆಳೆಯುತ್ತಾರೆ. ಸುಮಾರು 48 ವರ್ಷದ ತೋಟದ ಅಡಕೆ ಗೊಟುಗಳಿಂದ ಪ್ರತಿ ವರ್ಷ ಲಕ್ಷ್ಮೀ ತಳಿಯ 10 ಸಾವಿರ ಅಡಕೆ ಸಸಿ ಬೆಳೆಸಿ, 25 ರೂ.ಗೆ ಒಂದರಂತೆ ಮಾರಾಟ ಮಾಡಿ 2.5 ಲಕ್ಷ ರೂ. ಸಂಪಾದಿಸುತ್ತಾರೆ. ಸಪೋಟಾ, 45 ಕೆಜಿ ತೂಕದ ಬಾಳೆಗೊನೆಗಳು, ಕಾಳುಮೆಣಸು, ಕಾಫಿ, ಹಲಸು, ವಿಳ್ಯದೆಲೆ, ಗೆಣಸು, ತರಕಾರಿ ಮಾರಾಟದಿಂದ 3ರಿಂದ 4 ಲಕ್ಷ ರೂ., ಹೂವಿನ ಸಸಿ, ಅಲಂಕಾರಿಕ ಸಸಿಗಳಿಂದ 2 ಲಕ್ಷ ರೂ. ಮತ್ತು ಅಡಕೆ ಬೆಳೆಯಿಂದ 6 ಲಕ್ಷ ರೂ. ಸೇರಿ ವಾರ್ಷಿಕ 14ರಿಂದ 15 ಲಕ್ಷ ರೂ. ಆದಾಯ ಗಳಿಸುತ್ತಾರೆ.

ಮೋತಿ ನಾಯ್ಕ್‌ ಕೃಷಿಗೆ ಪತ್ನಿ ಪ್ರೇಮಾ ಬಾಯಿ ಸಾಥ್‌ ನೀಡುತ್ತಾರೆ. 2018-19ರಲ್ಲಿ ತಾಲೂಕು ಮಟ್ಟದ ಮತ್ತು 2019- 2021ರಲ್ಲಿ ಜಿಲ್ಲಾ ಮಟ್ಟದ ಆತ್ಮ ಯೋಜನೆ ಅಡಿ ತೋಟಗಾರಿಕೆ ವಿಭಾಗದಲ್ಲಿ ಶ್ರೇಷ್ಠ ಕೃಷಿಕ ಪ್ರಶಸ್ತಿ ಪಡೆದಿದ್ದಾರೆ.

ಗಗನಕ್ಕೇರಿದ ಕೊಟ್ಟಿಗೆ ಗೊಬ್ಬರದ ಬೆಲೆ! ಸಾವಯವ ಗೊಬ್ಬರಕ್ಕೆ ಈಗ ಎಲ್ಲಿಲ್ಲದ ಡಿಮ್ಯಾಂಡ್‌

ಕ್ವಿಂಟಲ್‌ ಕಾಳುಮೆಣಸು 35 ಸಾವಿರ ರೂ.
ಕಾಳುಮೆಣಸನ್ನು ದಾವಣಗೆರೆ ಮಾರುಕಟ್ಟೆಗೆ, ಕಾಫಿಯನ್ನು ಚಿಕ್ಕಮಗಳೂರಿಗೆ, ಹಣ್ಣು- ಹೂವುಗಳನ್ನು ಸ್ಥಳೀಯ ವ್ಯಾಪಾರಿಗಳಿಗೆ ಮಾರುತ್ತಾರೆ. ಕಾಳು ಮೆಣಸಿಗೆ ಈ ವರ್ಷ ಕ್ವಿಂಟಲ್‌ಗೆ 35 ಸಾವಿರ ರೂ. ದರವಿದೆ. ರಾಜ್ಯ ಸರಕಾರ ಈ ಬಗ್ಗೆ ಗಮನ ನೀಡಿ ಬೆಳೆಗಳಿಗೆ ಸೂಕ್ತ ಬೆಲೆ ನೀಡಿ ಪ್ರೋತ್ಸಾಹಿಸಬೇಕು ಎನ್ನುತ್ತಾರೆ ರೈತ ಮೋತಿನಾಯ್ಕ್‌

ಮುಂದಿನ ದಿನಗಳಲ್ಲಿ ಕೋಳಿ ಸಾಕಾಣಿಕೆ ಸೇರಿ ಹೈನುಗಾರಿಕೆ ಕೃಷಿ ಮಾಡುವ ಹಂಬಲವಿದೆ. ಆದರೆ, ಸರಕಾರದಿಂದ ಇದುವರಿಗೂ ಯಾವುದೇ ಸೌಲಭ್ಯಗಳು ದೊರೆತಿಲ್ಲ. ಸರಕಾರದಿಂದ ಸಮಗ್ರ ಕೃಷಿ ಪದ್ಧತಿಗೆ ಪ್ರೋತ್ಸಾಹ, ಸೌಲಭ್ಯ ನೀಡಬೇಕು. ಇದು ಉಳಿದ ರೈತರಿಗೂ ಪ್ರೇರಣೆ ಆಗಲಿದೆ.
- ಮೋತಿನಾಯ್ಕ್‌ ಪ್ರಗತಿಪರ ರೈತ, ಕವಳಿತಾಂಡ
ಲೇಖಕರ ಬಗ್ಗೆ
ಬಾನುಪ್ರಸಾದ ಕೆ.ಎನ್\u200c.
ವಿಜಯ ಕರ್ನಾಟಕ ಡಿಜಿಟಲ್\u200c ಪತ್ರಕರ್ತ. ವಿಜ್ಞಾನ ತಂತ್ರಜ್ಞಾನ, ರಾಷ್ಟ್ರೀಯ- ಅಂತಾರಾಷ್ಟ್ರೀಯ, ಸಾಹಿತ್ಯ-ಕಲೆ, ಶಿಕ್ಷಣ, ಆಸಕ್ತಿಯ ವಿಷಯಗಳು... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ