ಆ್ಯಪ್ನಗರ

ಸೂಳೆಕೆರೆಯಲ್ಲಿ ₹1347 ಕೋಟಿಯ ಜಲವಿದ್ಯುತ್‌ ಯೋಜನೆಗೆ ಶಾಸಕರಿಂದಲೇ ವಿರೋಧ!

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನಲ್ಲಿರುವ ಏಷ್ಯಾದ ಎರಡನೇ ಅತಿದೊಡ್ಡ ಕೆರೆ ಸೂಳೆಕೆರೆಯಲ್ಲಿ ಜಲ ವಿದ್ಯುತ್‌ ಉತ್ಪಾದನೆ ಆರಂಭಕ್ಕೆ ಸಿದ್ಧತೆ ನಡೆದಿದೆ. ಈ ಯೋಜನೆಗೆ ರಾಜ್ಯ ಉಚ್ಚ ಮಟ್ಟದ ಅನುಮೋದನಾ ಸಮಿತಿ ಮುದ್ರೆ ಒತ್ತಿದ್ದರೂ ಸ್ಥಳೀಯ ಶಾಸಕರಿಂದ ವಿರೋಧ ವ್ಯಕ್ತವಾಗಿದೆ.

Vijaya Karnataka Web 13 Aug 2020, 6:17 pm
ಯಳನಾಡು ಮಂಜು
Vijaya Karnataka Web Shanti Sagara tank

ದಾವಣಗೆರೆ:
ಜಿಲ್ಲೆಯ ಚನ್ನಗಿರಿ ತಾಲೂಕಿನಲ್ಲಿರುವ ಏಷ್ಯಾದ ಎರಡನೇ ಅತಿದೊಡ್ಡ ಕೆರೆ ಸೂಳೆಕೆರೆಯ ನೀರು ಬಳಸಿಕೊಂಡು ಜೋಗ ಜಲಪಾತ ಮಾದರಿಯಲ್ಲಿ ವಿದ್ಯುತ್‌ ಉತ್ಪಾದನೆ ಆರಂಭಕ್ಕೆ ಸಿದ್ಧತೆ ನಡೆದಿದೆ. ಖಾಸಗಿ ಕಂಪನಿ ಸಲ್ಲಿಸಿರುವ ಈ ಪ್ರಸ್ತಾವಕ್ಕೆ ಸಿಎಂ ಅಧ್ಯಕ್ಷತೆಯ ರಾಜ್ಯ ಉಚ್ಚ ಮಟ್ಟದ ಅನುಮೋದನಾ ಸಮಿತಿ ಮುದ್ರೆ ಒತ್ತಿದೆ.

ಬಯಲು ಸೀಮೆಯಲ್ಲಿ ಗಾಳಿಯ ವೇಗ ಹೆಚ್ಚಿರುವುದರಿಂದ ದಾವಣಗೆರೆ, ಚಿತ್ರದುರ್ಗ ಅವಳಿ ಜಿಲ್ಲೆಯಲ್ಲಿ ಪವನ ವಿದ್ಯುತ್‌ ತಯಾರಿಕೆಯ ನೂರಾರು ಘಟಕಗಳಿವೆ. ಇದೇ ಮೊದಲ ಬಾರಿಗೆ ಜಲ ವಿದ್ಯುತ್‌ ಯೋಜನೆ ಆರಂಭದ ಪ್ರಸ್ತಾವ ಬಂದಿದೆ.

ಏನಿದು ಯೋಜನೆ?
ನವೀಕರಿಸಬಹುದಾದ ಇಂಧನ ಮೂಲ ಕಾರ್ಯಕ್ರಮದಡಿ ಸೆರೊಲಿನ್‌ ಎನರ್ಜಿ ಸಲ್ಯೂಷನ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿ ಕಿರು ಜಲ ವಿದ್ಯುತ್‌ ಯೋಜನೆ ಆರಂಭಿಸುವ ಪ್ರಸ್ತಾವ ಸರಕಾರಕ್ಕೆ ಸಲ್ಲಿಸಿದ್ದು, ರಾಜ್ಯದ ಹೈಪವರ್‌ ಕಮಿಟಿ ಮುದ್ರೆ ಒತ್ತಿದೆ. ಭೂಮಿ ಇನ್ನಿತರೆ ವಿಷಯಗಳ ಪರಿಶೀಲನೆಗೆ ಜಿಲ್ಲಾಡಳಿತಕ್ಕೆ ರವಾನಿಸಿದೆ.

ಏನಿದು ಪಾರದರ್ಶಕ ತೆರಿಗೆ ನೀತಿ? ಹೇಗಿರಲಿದೆ ಹೊಸ ತೆರಿಗೆ ವಿಧಾನ?

1347 ಕೋಟಿ ರೂ:
ಪರ್ವ ಜನರೇಷನ್‌ ಪಂಪ್‌ ಸ್ಟೋರೇಜ್‌ ಪ್ರಾಜೆಕ್ಟ್ ಹೆಸರಲ್ಲಿ13447. 63 ಕೋಟಿ ರೂ. ಈ ಯೋಜನೆಯ ವೆಚ್ಚವಾಗಿದೆ. ಚನ್ನಗಿರಿ ತಾಲೂಕಿನ ಸೋಮಶೆಟ್ಟಿಹಳ್ಳಿ , ಸಿದ್ಧಾಪುರ ಮತ್ತು ಅರಿಶಿನ ಘಟ್ಟದಲ್ಲಿಯೋಜನೆ ಅನುಷ್ಠಾನಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ. ಸೂಳೆಕೆರೆಯಿಂದ 0.279 ಟಿಎಂಸಿ ನೀರನ್ನು ಬಳಸಿಕೊಂಡು ಅಲ್ಲಿನ ಗುಡ್ಡಕ್ಕೆ ಪಂಪ್‌ ಮಾಡಿ ಅಲ್ಲಿಂದ ನೀರನ್ನು ಲಿಂಗನಮಕ್ಕಿ ಯೋಜನೆ ರೀತಿಯಲ್ಲಿದುಮ್ಮಿಕ್ಕಿಸಿ ಗರಿಷ್ಠ 25 ಮೆಗಾವ್ಯಾಟ್‌ವರೆಗೂ ವಿದ್ಯುತ್‌ ಉತ್ಪಾದನೆ ಮಾಡುವ ಗುರಿ ಹೊಂದಲಾಗಿದೆ.

201 ಎಕರೆ ಭೂಮಿ:
ಈ ಯೋಜನೆಗೆ 201 ಎಕರೆ ಭೂಮಿ ಅಗತ್ಯವಿದೆ. ಇದರಲ್ಲಿ 67 ಎಕರೆ ಖಾಸಗಿ ಜಮೀನು ಗುರುತಿಸಲಾಗಿದೆ. ಇಲ್ಲಿನ ಮೀಸಲು ಅರಣ್ಯದಲ್ಲಿ 134 ಎಕರೆ ನೀಡಲು ಅವಕಾಶ ಕೋರಿ ಕಂಪನಿ ಪ್ರಸ್ತಾವ ಮುಂದಿಟ್ಟಿದೆ. ಈ ಪ್ರಸ್ತಾವ ಜಿಲ್ಲಾಡಳಿತಕ್ಕೆ ರವಾನೆ ಆಗಿದ್ದು ಪರಿಶೀಲನೆ ನಡೆಯುತ್ತಿದೆ. ಅರಣ್ಯ ಭೂಮಿ ನೀಡುವ ವಿಷಯ ಭದ್ರಾವತಿ ಅರಣ್ಯ ವಿಭಾಗಕ್ಕೆ ಅರ್ಜಿ ಸಲ್ಲಿಕೆಯಾಗುವ ಹಂತದಲ್ಲಿದೆ.

ಕಾಶ್ಮೀರ ವಿಚಾರದಲ್ಲಿ ಪಾಕ್‌ನಿಂದ‌ ಪದೇ ಪದೇ ಸುಳ್ಳು: ಚೀನಾ ಲೇಖನಕ್ಕೆ ಭಾರತದ ಖಡಕ್‌ ತಿರುಗೇಟು

"ಜಿಲ್ಲೆಯ ಶಾಂತಿಸಾಗರದ ನೀರು ಬಳಸಿಕೊಂಡು ವಿದ್ಯುತ್‌ ಉತ್ಪಾದಿಸುವ ಕಿರು ಜಲ ವಿದ್ಯುತ್‌ ಯೋಜನೆ ಸ್ಥಾಪನೆಗೆ ಸ್ಟೇಟ್‌ ಹೈ ಲೆವೆಲ್‌ ಕಮಿಟಿ ಅನುಮೋದನೆ ನೀಡಿದೆ. ಈ ಪ್ರಸ್ತಾವ ಭೂಮಿ ಪರಿಶೀಲನೆಗೆ ಜಿಲ್ಲಾಡಳಿತಕ್ಕೆ ರವಾನೆ ಆಗಿದೆ."
- ಜಯಪ್ರಕಾಶ ನಾರಾಯಣ, ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಘಟಕ.

ಯೋಜನೆ ಏನೇನು?
  • ಕಂಪನಿ-ಸೆರೊಲಿನ್‌ ಎನರ್ಜಿ ಪ್ರೈವೇಟ್‌ ಲಿಮಿಟೆಡ….
  • ಬಂಡವಾಳ ಹೂಡಿಕೆ- 1347.63 ಕೋಟಿ.
  • ಒಟ್ಟು ಭೂಮಿ-201 ಎಕರೆ.
  • ಉದ್ಯೋಗಾವಕಾಶ- 1700
  • ನೀರು ಬಳಕೆ-0.279 ಟಿಎಂಸಿ.
  • ಟರ್ನ್‌ ಓವರ್‌ -1443.39 ಕೋಟಿ.

ಜನಾಂದೋಲನದ ಎಚ್ಚರಿಕೆ
ಇದು ಕುಡಿಯುವ ನೀರು ಮತ್ತು ಕೃಷಿಗೆ ಮೀಸಲಿಟ್ಟಿರುವ ಕೆರೆಯಾಗಿದ್ದು, ಇಲ್ಲಿಜಲ ವಿದ್ಯುತ್‌ ಯೋಜನೆ ಸರಿಯಲ್ಲ. ಈ ಯೋಜನೆಗೆ ನನ್ನ ವಿರೋಧವಿದ್ದು, ಸಿಎಂ ಹಾಗೂ ಕೈಗಾರಿಕಾ ಇಲಾಖೆ ಕಾರ್ಯದರ್ಶಿ ಯೋಜನೆ ಅನುಷ್ಠಾನ ಬೇಡವೆಂದು ತಿಳಿಸಿದ್ದೇನೆ ಎಂದು ಚನ್ನಗಿರಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ತಿಳಿಸಿದ್ದಾರೆ. ಈ ಯೋಜನೆಯಿಂದ ಕುಡಿಯುವ ನೀರು ಮಾಲಿನ್ಯ ಆಗಲಿದೆ. ಜತೆಗೆ ಇಲ್ಲಿನ ಪರಿಸರವೂ ಹಾಳಾಗಲಿದೆ. ರೈತರಿಗೆ ತೊಂದರೆ ಆಗಲಿದೆ. ಈ ಯೋಜನೆ ಇಲ್ಲಿಗೆ ಸೂಕ್ತವಲ್ಲ. ಇದನ್ನೂ ಮೀರಿ ಸರಕಾರ ಯೋಜನೆ ಅನುಷ್ಠಾನಕ್ಕೆ ಮುಂದಾದರೆ ಪ್ರತಿಭಟನೆ ಮಾಡಲಾಗುವುದು, ಜನಾಂದೋಲನ ರೂಪಿಸಲಾಗುವುದು ಎಂದು ಶಾಸಕರು ವಿಕಗೆ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ