ಆ್ಯಪ್ನಗರ

ಎಸ್ಟಿ ಮೀಸಲು ಹೋರಾಟ ಶುರು

ಪರಿಶಿಷ್ಟ ಪಂಗಡದ ಮೀಸಲು ಶೇ.3 ರಿಂದ ಶೇ.7.5 ಹೆಚ್ಚಳಕ್ಕೆ ಆಗ್ರಹಿಸಿ ಹರಿಹರದ ರಾಜನಹಳ್ಳಿಯಿಂದ ಬೆಂಗಳೂರಿಗೆ ಹಮ್ಮಿಕೊಂಡಿರುವ ಪಾದಯಾತ್ರೆಗೆ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಆವರಣದಲ್ಲಿ ಭಾನುವಾರ ವಾಲ್ಮೀಕಿ ಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ಚಾಲನೆ ನೀಡಿದರು.

Vijaya Karnataka 10 Jun 2019, 5:00 am
ಹರಿಹರ : ಪರಿಶಿಷ್ಟ ಪಂಗಡದ ಮೀಸಲು ಶೇ.3 ರಿಂದ ಶೇ.7.5 ಹೆಚ್ಚಳಕ್ಕೆ ಆಗ್ರಹಿಸಿ ಹರಿಹರದ ರಾಜನಹಳ್ಳಿಯಿಂದ ಬೆಂಗಳೂರಿಗೆ ಹಮ್ಮಿಕೊಂಡಿರುವ ಪಾದಯಾತ್ರೆಗೆ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಆವರಣದಲ್ಲಿ ಭಾನುವಾರ ವಾಲ್ಮೀಕಿ ಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ಚಾಲನೆ ನೀಡಿದರು.
Vijaya Karnataka Web st exclusive fight begins
ಎಸ್ಟಿ ಮೀಸಲು ಹೋರಾಟ ಶುರು


ಲಿಂ.ಪುಣ್ಯಾನಂದಪುರಿ ಶ್ರೀಗಳ ಕರ್ತೃ ಗದ್ದುಗೆಗೆ ಪೂಜೆ ಸಲ್ಲಿಸಿದ ನಂತರ ಪಾದಯಾತ್ರೆಗೆ ಚಾಲನೆ ನೀಡಿದ ಶ್ರೀಗಳು, ಜನಸಂಖ್ಯೆಗೆ ಅನುಗುಣವಾಗಿ ಪರಿಶಿಷ್ಟ ಪಂಗಡಕ್ಕೆ ಅಗತ್ಯ ಮೀಸಲಾತಿ ಕಲ್ಪಿಸುವುದು ಸರಕಾರದ ಕರ್ತವ್ಯ. ಕೂಡಲೇ ಎಸ್ಟಿ ವರ್ಗದ ಮೀಸಲಾತಿಯನ್ನು ಶೇ.7.5ಕ್ಕೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.

ಎಸ್ಟಿ ಪಂಗಡಕ್ಕೆ ಮೀಸಲಾತಿ ಹೆಚ್ಚಿಸುವಂತೆ ಸುಪ್ರೀಂ ಕೋರ್ಟ್‌ ಈಗಾಗಲೆ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗೆ ನಿರ್ದೇಶನ ನೀಡಿದ್ದರೂ ನ್ಯಾಯಾಲಯದ ಆದೇಶ ಕಡೆಗಣಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಶ್ರೀಗಳು, ನಮ್ಮ ಹೋರಾಟಕ್ಕೆ ಕಾಗಿನೆಲೆ, ವೀರಶೈವ ಲಿಂಗಾಯತ ಪಂಚಮಸಾಲಿ ಪೀಠ, ನಂದಿಗುಡಿ ಮಠ, ಬಸವಪ್ರಭು ಸ್ವಾಮೀಜಿ ಸೇರಿ ನಾಡಿನ ಅನೇಕ ಮಠಾಧೀಶರು ಬೆಂಬಲ ವ್ಯಕ್ತಪಡಿಸಿದ್ದಾರೆ. ಹೋರಾಟಕ್ಕೆ ಸರಕಾರ ಸ್ಪಂದಿಸದಿದ್ದರೆ ನಿರಂತರ ಧರಣಿ ಮುಂದುವರಿಯಲಿದೆ ಎಂದು ಸ್ವಾಮೀಜಿ ಎಚ್ಚರಿಸಿದರು.

ಸಮಾಜಕ್ಕೆ ಅನ್ಯಾಯ:
ಅರಣ್ಯ ಸಚಿವ ಸತೀಶ್‌ ಜಾರಕಿಹೊಳಿ ಮಾತಾಡಿ, ವಾಲ್ಮೀಕಿ ಜನಾಂಗಕ್ಕೆ ಮೀಸಲಾತಿಯಲ್ಲಿ ಅನ್ಯಾಯವಾಗಿದೆ ಎಂಬುದನ್ನು ಹಿಂದಿನಿಂದಲೂ ಎಲ್ಲ ಸರಕಾರಗಳಿಗೆ ಮನವರಿಕೆ ಮಾಡುತ್ತಲೇ ಬಂದಿದ್ದೇವೆ. ಹಿಂದಿನ ಹಾಗೂ ಇಂದಿನ ಸರಕಾರಕ್ಕೂ ಹಲವು ಸಲ ಮನವಿ ಮಾಡಿದ್ದೇವೆ. ಆದರೂ ಸೂಕ್ತ ಸ್ಪಂದನೆ ಸಿಕ್ಕಿಲ್ಲ. ಈ ಕುರಿತು ಅಧ್ಯಯನ ಮಾಡಿರುವ ವರದಿಗಳು, ಕಾನೂನು ಎಲ್ಲವೂ ನಮ್ಮ ಪರವಾಗಿರುವುದರಿಂದಲೇ ವಾಲ್ಮೀಕಿ ಸ್ವಾಮೀಜಿ ಪಾದಯಾತ್ರೆ ಮೂಲಕ ಸರಕಾರದ ಗಮನ ಸೆಳೆಯಲು ಮುಂದಾಗಿದ್ದಾರೆ ಎಂದು ತಿಳಿಸಿದರು.

ಪಕ್ಷಾತೀತವಾಗಿ ಹೋರಾಟ:
ಮಾಜಿ ಸಚಿವ, ಶಾಸಕ ಬಿ.ಶ್ರೀರಾಮುಲು ಮಾತನಾಡಿ, ವಾಲ್ಮೀಕಿ ಶ್ರೀಗಳ ಮೀಸಲಾತಿ ಹೋರಾಟವನ್ನು ಸಮಾಜದ ಶಾಸಕರೆಲ್ಲಾ ಪಕ್ಷಾತೀತವಾಗಿ ಬೆಂಬಲಿಸುತ್ತೇವೆ. ಶ್ರೀಗಳ ಪಾದಯಾತ್ರೆಯಲ್ಲಿ ಸ್ವತಃ ನಾನು ಭಾಗಿಯಾಗುವುದಲ್ಲದೆ ಬೇಡಿಕೆ ಈಡೇರುವವರೆಗೂ ಶ್ರೀಗಳ ಬೆನ್ನಿಗೆ ನಿಲ್ಲುವುದಾಗಿ ತಿಳಿಸಿದರು.

ಪಾದಯಾತ್ರೆಯಲ್ಲಿ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿ, ಭಗೀರಥಿ ಪೀಠದ ಪುರುಷೋತ್ತಮನಾನಂದ ಶ್ರೀ, ಹೊಸಹಳ್ಳಿ ವೇಮನ ಮಠದ ಬಸವಕುಮಾರ ಶ್ರೀ, ಬಸವಪ್ರಭು ಕೇತೇಶ್ವರಶ್ರೀ, ದಯಾನಂದ ಶ್ರೀಗಳು ಭಾಗವಹಿಸಿದ್ದರು.

ಶಾಸಕರಾದ ಎಸ್‌.ರಾಮಪ್ಪ, ಎಸ್‌.ವಿ. ರಾಮಚಂದ್ರ, ಎಂ.ಪಿ. ರೇಣುಕಾಚಾರ್ಯ, ಟಿ.ರಘುಮೂರ್ತಿ, ಗಣೇಶ್‌, ಬಳ್ಳಾರಿ ಸಂಸದ ದೇವೇಂದ್ರಪ್ಪ, ಮಾಜಿ ಶಾಸಕರಾದ ಬಿ.ಪಿ. ಹರೀಶ್‌, ಎಚ್‌.ಎಸ್‌. ಶಿವಶಂಕರ್‌, ಜಿಪಂ ಸದಸ್ಯರಾದ ಬಿ.ಎಂ. ವಾಗೀಶ್‌ಸ್ವಾಮಿ, ನಿರ್ಮಲಾ ಮುಕುಂದ್‌, ಜೆಡಿಎಸ್‌ ಎಸ್ಟಿ ರಾಜ್ಯ ಘಟಕದ ಅಧ್ಯಕ್ಷ ಹೊದಿಗೆರೆ ರಮೇಶ್‌, ಕಾಂಗ್ರೆಸ್‌ ಎಸ್ಟಿ ರಾಜ್ಯ ಘಟಕದ ಅಧ್ಯಕ್ಷ ಕೆ.ಪಿ. ಪಾಲಯ್ಯ, ವಾಲ್ಮೀಕಿ ಗುರುಪೀಠದ ಆಡಳಿತಾಧಿಕಾರಿ ಟಿ.ಓಬಳಪ್ಪ, ಸಮಾಜದ ಅಧ್ಯಕ್ಷ ರಾದ ಕೆ.ಬಿ.ಮಂಜುನಾಥ್‌, ಜಿಗಳಿ ರಂಗಪ್ಪ, ನಗರಸಭೆ ಸದಸ್ಯ ದಿನೇಶ್‌ ಬಾಬು, ಬಾವಿಕಟ್ಟಿ ಜಯದೇವಪ್ಪ, ಮೆಣಿಸಿನಹಾಳ್‌ ಗಂಗಾಧರ, ಪ್ರಕಾಶ್‌ ಮಾಳಗಿ, ಹಂಚಿನ ನಾಗಣ್ಣ, ಜಿಗಳಿ ಆನಂದಪ್ಪ, ಮಕರಿ ಪಾಲಾಕ್ಷ ಪ್ಪ, ಎಂ.ಎಚ್‌.ಬಸವರಾಜು ಇತರರು ಇದ್ದರು.


ಬೆಂಗಳೂರಿನವರೆಗೆ ಪಾದಯಾತ್ರೆ ಪೂರ್ಣಗೊಂಡ ನಂತರ ಅಲ್ಲಿ ಸಿಎಂ ಜತೆ ಸಭೆ ಮಾಡಿ, ವಾಲ್ಮೀಕಿ ಜನಾಂಗಕ್ಕೆ ಮೀಸಲಾತಿ ನೀಡುವ ಬಗ್ಗೆ ಚರ್ಚೆ ಮಾಡುತ್ತೇವೆ. ಅನ್ಯಾಯಕ್ಕೆ ಒಳಗಾಗಿರುವ ವಾಲ್ಮೀಕಿ ನಾಯಕ ಜನಾಂಗಕ್ಕೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಶ್ರೀಗಳೊಂದಿಗೆ ನಾವೆಲ್ಲರೂ ಸದಾ ಇರುತ್ತೇವೆ.
- ಸತೀಶ್‌ ಜಾರಕಿಹೊಳಿ, ಅರಣ್ಯ ಸಚಿವ.


ಜೂ.24ಕ್ಕೆ ಬೆಂಗಳೂರಿಗೆ

ರಾಜನಹಳ್ಳಿಯ ವಾಲ್ಮೀಕಿ ಪೀಠದಿಂದ 16 ದಿನಗಳ ಅವಧಿಯ ಪಾದಯಾತ್ರೆಯ ಮೂಲಕ ಜೂ.24 ರಂದು ಬೆಂಗಳೂರು ತಲುಪಿ, ಜೂ.25 ರಂದು ಫ್ರೀಡಂ ಪಾರ್ಕ್‌ನಲ್ಲಿ ಶ್ರೀಗಳ ನೇತೃತ್ವದಲ್ಲಿ ಧರಣಿ ನಡೆಸಲಾಗುತ್ತದೆ. ಆಗಲೂ ಸರಕಾರ ಸ್ಪಂದಿಸದಿದ್ದರೆ ವಿಧಾನಸೌಧ ಮುತ್ತಿಗೆ ಹಾಕುವ ಯೋಜನೆಯೂ ಇದೆ. ಸುಮಾರು 10 ಸಾವಿರ ಜನ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವ ಹಾಗೂ ಧರಣಿಯಲ್ಲಿ ಲಕ್ಷಾಂತರ ಜನರು ಭಾಗವಹಿಸುವ ನಿರೀಕ್ಷೆ ಇದೆ. ಅಂಬುಲೆನ್ಸ್‌ ಮತ್ತಿತರೆ ಸಹಾಯಕ್ಕಾಗಿ ಮನವಿ ಮಾಡಲಾಗಿದೆ. ಔಷಧಿ, ಮಾತ್ರೆ ವ್ಯವಸ್ಥೆ ಕೂಡ ಇರಲಿದೆ ಎಂದು ಸಮಾಜದ ಮುಖಂಡ ಕೆ.ಬಿ. ಮಂಜುನಾಥ್‌ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ