ಆ್ಯಪ್ನಗರ

ವೈಭವದ ಶ್ರೀಹರಿಹರೇಶ್ವರಸ್ವಾಮಿ ಬ್ರಹ್ಮರಥೋತ್ಸವ

ಗುಹಾರಣ್ಯ, ದಕ್ಷಿಣ ಕಾಶಿ ಖ್ಯಾತಿಯ ಶ್ರೀ ಹರಿಹರೇಶ್ವರಸ್ವಾಮಿ ಬ್ರಹ್ಮ ರಥೋತ್ಸವ ನಗರದಲ್ಲಿ ಮಂಗಳವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಡಗರ, ಸಂಭ್ರಮದಿಂದ ನಡೆಯಿತು.

Vijaya Karnataka 20 Feb 2019, 5:00 am
ಹರಿಹರ : ಗುಹಾರಣ್ಯ, ದಕ್ಷಿಣ ಕಾಶಿ ಖ್ಯಾತಿಯ ಶ್ರೀ ಹರಿಹರೇಶ್ವರಸ್ವಾಮಿ ಬ್ರಹ್ಮ ರಥೋತ್ಸವ ನಗರದಲ್ಲಿ ಮಂಗಳವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಡಗರ, ಸಂಭ್ರಮದಿಂದ ನಡೆಯಿತು.
Vijaya Karnataka Web the glorious sri srihareshwaraswamy brahmarathotsava
ವೈಭವದ ಶ್ರೀಹರಿಹರೇಶ್ವರಸ್ವಾಮಿ ಬ್ರಹ್ಮರಥೋತ್ಸವ


ಮೇಷ ಲಗ್ನದ ಶುಭ ಮುಹೂರ್ತದಲ್ಲಿ ಬೆಳಗ್ಗೆ 11.35ಕ್ಕೆ ಗಣ್ಯರ ಸಮ್ಮುಖದಲ್ಲಿ ಪೂಜೆ ಸಲ್ಲಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ದೇವಸ್ಥಾನ ರಸ್ತೆಯ ತೇರುಗಡ್ಡೆ ವೃತ್ತದಿಂದ ಶಿವಮೊಗ್ಗ ವೃತ್ತದವರೆಗೆ ಭಕ್ತರು ಹರ ಹರ ಮಹದೇವ್‌, ಗೋವಿಂದಾ... ಗೋವಿಂದಾ... ಎಂದು ನಾಮಸ್ಮರಣೆ ಮಾಡುತ್ತಾ ರಥ ಎಳೆದರು.

ಕೆಲವರು ತೇರಿನ ಮುಕುಟಕ್ಕೆ ಬಾಳೆಹಣ್ಣು, ಹೂವು, ಉತ್ತತ್ತಿ ಎಸೆದರು. ತೇರಿನ ಗಾಲಿಗಳಿಗೆ ತೆಂಗಿನಕಾಯಿ ಒಡೆದು ಹರಕೆ ತೀರಿಸಿದರು. ರಥೋತ್ಸವದಲ್ಲಿ ಸರ್ವ ಧರ್ಮಿಯರೂ ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಬೆಂಗಳೂರು, ಹಾಸನ, ಅರಸೀಕೆರೆ, ಕಡೂರು, ಬೀರೂರು ಸೇರಿದಂತೆ ನಾಡಿನ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ರಥೋತ್ಸವದಲ್ಲಿ ಭಾಗವಹಿಸಿದ್ದರು.

ರಥೋತ್ಸವಕ್ಕೂ ಮುನ್ನ ಪುರಾಣ ಪ್ರಸಿದ್ಧ ಹರಿಹರೇಶ್ವರ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿಟ್ಟು ತೇರು ಬೀದಿಯಲ್ಲಿ ಮೆರವಣಿಗೆ ನಡೆಸಿ ನಂತರ ತೇರಿನೊಳಗೆ ಅಲಂಕರಿಸಲಾಯಿತು. ರಥೋತ್ಸವದಲ್ಲಿ ನಗರ ಹಾಗೂ ತಾಲೂಕಿನ ನಾನಾ ಭಾಗಗಳಿಂದ ದಾಸ ಪರಂಪರೆ ಅನುಯಾಯಿಗಳು ಶ್ವೇತವಸ್ತ್ರ ಧಾರಿಗಳಾಗಿ ಭಾಗಿಯಾಗಿ ಕೀರ್ತನೆಗಳನ್ನು ಹಾಡಿದ್ದು ಜನಮನ ಸೆಳೆಯಿತು.

ಫೆಬ್ರುವರಿ 15ರ ಮಾಘ ಶುಕ್ಲ ದಶಮಿಯಿಂದಲೇ ರಥೋತ್ಸವದ ಕಾರ್ಯಕ್ರಮಗಳು ಆರಂಭವಾಗಿದ್ದು, ಫೆ.20 ಕ್ಕೆ ಮುಗಿಯಲಿವೆ. ಸಂಘ ಸಂಸ್ಥೆಗಳ ಸಹಯೋಗದಲ್ಲಿ ಸಮೀಪದ ಬಿರ್ಲಾ ಕಲ್ಯಾಣ ಮಂಟಪ, ಶಿಬಾರ ವೃತ್ತ, ನಡುವಲ ಪೇಟೆ ಹಾಗೂ ಸುತ್ತಲ ಪ್ರದೇಶಗಳಲ್ಲಿ ಭಕ್ತಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಬಿಸಿಲಿನ ಧಗೆ ತಣಿಸಲು ಮಜ್ಜಿಗೆ, ಶರಬತ್‌ ವಿತರಿಸಲಾಯಿತು.

ರಥೋತ್ಸವದಲ್ಲಿ ಶಾಸಕ ಎಸ್‌.ರಾಮಪ್ಪ, ನಗರಸಭಾಧ್ಯಕ್ಷೆ ಸುಜಾತಾ ರೇವಣಸಿದ್ದಪ್ಪ, ತಹಸೀಲ್ದಾರ್‌ ರೆಹಾನ್‌ಪಾಷಾ, ದೇವಸ್ಥಾನದ ಕಾರ್ಯದರ್ಶಿ ಎಚ್‌.ವೆಂಕಟೇಶ್‌, ಮುಜರಾಯಿ ಶಿರಸ್ತೆದಾರ ಎಂ.ಚನ್ನವೀರ ಸ್ವಾಮಿ, ಶಾನಭೋಗರಾದ ಎಸ್‌.ಗಣಪತಿರಾವ್‌, ಪಟೇಲರಾದ ಜಿ.ಚನ್ನಬಸಪ್ಪ, ಗುರುಪ್ರಸಾದ್‌, ಜನಪ್ರತಿನಿಧಿಗಳು ಭಾಗವಹಿಸಿದ್ದರು.

ದನಗಳ ಜಾತ್ರೆ
ಏಳೆಂಟು ದಶಕಗಳ ಹಿಂದೆ ಸಂಗಮೇಶ್ವರ ದೇವರ ಉತ್ಸವ ನಿಮಿತ್ತ ಆಯೋಜಿಸಲಾಗುತ್ತಿದ್ದ ದನಗಳ ಜಾತ್ರೆಯನ್ನು ಈ ಬಾರಿಯಿಂದ ಶ್ರೀ ಹರಿಹರೇಶ್ವರ ಜಾತ್ರೆ ನಿಮಿತ್ತ ನಡೆಸಲಾಯಿತು. ದನಗಳ ಜಾತ್ರೆ ಫೆ.21ರವರೆಗೆ ಬಿರ್ಲಾ ಕಲ್ಯಾಣ ಮಂಟಪದ ಹಿಂಭಾಗದ ನದಿ ದಡದಲ್ಲಿ ನಡೆಯುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ