ಆ್ಯಪ್ನಗರ

ಧಾರಾಕಾರ ಮಳೆ: ಮನೆಗಳಿಗೆ ನುಗ್ಗಿದ ನೀರು

ಜಿಲ್ಲೆಯ ಕೆಲವೆಡೆ ಶನಿವಾರ ಸಂಜೆ ಉತ್ತಮ ಮಳೆಯಾಗಿದೆ. ದಾವಣಗೆರೆ ನಗರದಲ್ಲಿ ಕೆಲ ಕಾಲ ಮಳೆ ಬಿತ್ತು, ಹರಿಹರ ನಗರದಲ್ಲಿ ಧಾರಾಕಾರ ಮಳೆ ಸುರಿಯಿತು. ಬಿಸಿಲಿನ ಝಳದಿಂದ ಜನತೆಗೆ ಮುಕ್ತಿ ಸಿಗುವ ಜತೆಗೆ ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿತು.

Vijaya Karnataka 7 Oct 2018, 5:00 am
ದಾವಣಗೆರೆ: ಜಿಲ್ಲೆಯ ಕೆಲವೆಡೆ ಶನಿವಾರ ಸಂಜೆ ಉತ್ತಮ ಮಳೆಯಾಗಿದೆ. ದಾವಣಗೆರೆ ನಗರದಲ್ಲಿ ಕೆಲ ಕಾಲ ಮಳೆ ಬಿತ್ತು, ಹರಿಹರ ನಗರದಲ್ಲಿ ಧಾರಾಕಾರ ಮಳೆ ಸುರಿಯಿತು. ಬಿಸಿಲಿನ ಝಳದಿಂದ ಜನತೆಗೆ ಮುಕ್ತಿ ಸಿಗುವ ಜತೆಗೆ ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿತು.
Vijaya Karnataka Web torrential rain water flowing to homes
ಧಾರಾಕಾರ ಮಳೆ: ಮನೆಗಳಿಗೆ ನುಗ್ಗಿದ ನೀರು


ದಾವಣಗೆರೆ ನಗರದಲ್ಲಿ ಮಧ್ಯಾಹ್ನದ ನಂತರ ಬಿರು ಮಳೆ ಸುರಿಯಿತು. ಪಿಬಿ ರಸ್ತೆ, ಕೆಎಸ್‌ಆರ್‌ಟಿಸಿ ಮುಂಭಾಗದಲ್ಲಿ ನೀರು ಹರಿಯಿತು. ಬಸ್‌ ನಿಲ್ದಾಣದ ಆವರಣಕ್ಕೂ ಕೊಂಚ ನೀರು ನುಗ್ಗಿತು. ನಗರದ ಹೊರ ವಲಯ ಹಾಗೂ ಮಾಯಕೊಂಡದಲ್ಲೂ ಉತ್ತಮ ಮಳೆ ಸುರಿದಿದೆ. ನ್ಯಾಮತಿ ಭಾಗದಲ್ಲೂ ಮಳೆಯಾಗಿದೆ. ಚನ್ನಗಿರಿ, ಹೊನ್ನಾಳಿ, ಹರಪನಹಳ್ಳಿಯಲ್ಲಿ ಮಧ್ಯಾಹ್ನ ಮಳೆ ಇರಲಿಲ್ಲ, ರಾತ್ರಿ ಎಂಟು ಗಂಟೆ ವೇಳೆಗೆ ಮೋಡ ಕವಿದ ಮಳೆಯ ವಾತಾವರಣ ನಿರ್ಮಾಣವಾಗಿತ್ತು.

ಹರಿಹರದಲ್ಲಿ ಉತ್ತಮ ಮಳೆ

ಹರಿಹರ ನಗರದಲ್ಲಿ ಉತ್ತಮ ಮಳೆಯಾಗಿದೆ. ಮಧ್ಯಾಹ್ನ 2.30ರಿಂದ ಸಣ್ಣಗೆ ಆರಂಭವಾದ ಮಳೆ 3ರ ನಂತರ ಧಾರಾಕಾರ ಸುರಿಯಿತು. ಕಳೆದ 20 ದಿನಗಳಿಂದ ಬಿರು ಬಿಸಿಲಿನಿಂದ ಬಸವಳಿದಿದ್ದ ಜನತೆಗೆ ತಣ್ಣನೆ ಗಾಳಿ ಹಾಗೂ ಮಳೆ ಹಿತವಾದ ಅನುಭವ ನೀಡಿತು. ಧಗೆಯಿಂದ ಆನ್‌ ಆಗಿದ್ದ ಫ್ಯಾನ್‌ಗಳು ಆಫ್‌ ಆದವು. ಗೂಡು ಸೇರಿದ್ದ ಕೊಡೆ, ಜರ್ಕಿನ್‌ಗಳು ಮತ್ತೆ ಹೊರ ಬಂದವು.

ಅನಿರೀಕ್ಷಿತ ಹಾಗೂ ಧಾರಾಕಾರ ಮಳೆಯ ಆರಂಭದ ಚಿತ್ರಣವಾದರೆ, ಚರಂಡಿಗಳು ತುಂಬಿ ರಸ್ತೆಗಳು ಜಲಾವೃತವಾಗಿದ್ದು, ತಗ್ಗು ಪ್ರದೇಶ ಹಾಗೂ ಬ್ಲಾಕ್‌ ಆದ ಚರಂಡಿ, ಅವೈಜ್ಞಾನಿಕವಾಗಿ ಚರಂಡಿ ನಿರ್ಮಿತ ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿ ಅವಾಂತರವೂ ಸೃಷ್ಟಿಸಿತು.

ಶೋಭಾ ಟಾಕೀಸ್‌ ಸಮೀಪದ 21ನೇ ವಾರ್ಡಿನ ಹಳ್ಳದ ರಸ್ತೆಯಲ್ಲಿ(ಜೆಸಿ ಬಡಾವಣೆ 1ನೇ ಮೇನ್‌, 4ನೇ ಕ್ರಾಸ್‌) ಹನುಮಂತಪ್ಪ, ರೂಪಮ್ಮ, ರುಕ್ಮಣಮ್ಮರ ಮನೆಗಳಿಗೆ ನೀರು ನುಗ್ಗಿತು. ಈ ಭಾಗದಲ್ಲಿ ಚರಂಡಿ ಪೂರ್ಣವಾಗಿ ನಿರ್ಮಿಸದೆ ಇರುವುದು ಸಮಸ್ಯೆಗೆ ಕಾರಣವಾಗಿದೆ. ಈ ವಾರ್ಡಿನ ನಗರಸಭಾ ಸದಸ್ಯರು, ಎಂಜಿನಿಯರ್‌ಗಳಿಗೆ ಹಲವು ಬಾರಿ ಹೇಳಿದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ದೂರಿದರು.

ಹೆದ್ದಾರಿ ಜಲಾವೃತ:

ಶಿವಮೊಗ್ಗ ವೃತ್ತದಿಂದ ಕೆಳ ಭಾಗದಲ್ಲಿ ಹೊಸಪೇಟೆ-ಶಿವಮೊಗ್ಗ ಹೆದ್ದಾರಿ ಇಕ್ಕೆಲಗಳಲ್ಲಿ ಚರಂಡಿ ಇದ್ದರೂ ಆ ಚರಂಡಿಗಳಿಗೆ ನೀರು ಹಿಂಗುವ ಕಿಂಡಿಗಳು ಬ್ಲಾಕ್‌ ಆಗಿರುವುದರಿಂದ ನೀರು ರಸ್ತೆ ಮೇಲೆ ಹಳ್ಳದಂತೆ ನಿಂತಿತ್ತು. ಇದರಿಂದಾಗಿ ಎರಡು ಗಂಟೆಗೂ ಹೆಚ್ಚು ಕಾಲ ಈ ಭಾಗದಲ್ಲಿ ರಸ್ತೆ ಸಂಚಾರ ಅಸ್ತವ್ಯಸ್ತವಾಗಿತ್ತು.

ಮಧ್ಯಾಹ್ನದಿಂದಲೆ ಮಳೆ ಆರಂಭವಾದ್ದರಿಂದ ಫುಟ್‌ಪಾತ್‌ನಲ್ಲಿ ತರಕಾರಿ, ಹಣ್ಣು, ಹಂಪಲು, ಹೂವು ವ್ಯಾಪಾರ ಮಾಡುವವರು ತಮ್ಮ ವಸ್ತುಗಳನ್ನು ಹರಿಯುವ ನೀರಿನಿಂದ ರಕ್ಷಿಸಿಕೊಳ್ಳಲು ಹರಸಾಹಸಪಟ್ಟರು. ಶನಿವಾರವಾದ್ದರಿಂದ ಶಾಲೆಗಳು ಮಧ್ಯಾಹ್ನಕ್ಕೆ ಮುಗಿದವು. ಶಾಲಾ, ಕಾಲೇಜುಗಳಿಂದ ಮನೆಗೆ, ಬಸ್‌ ನಿಲ್ದಾಣಕ್ಕೆ ವಿದ್ಯಾರ್ಥಿಗಳು ತೆರಳಲು ಅಡ್ಡಿಯುಂಟಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ