ಆ್ಯಪ್ನಗರ

ವೀರಶೈವ-ಲಿಂಗಾಯತರ ಬೃಹತ್‌ ಪ್ರತಿಭಟನೆ

ಕಾಂಗ್ರೆಸ್‌ ಮುಖಂಡ, ಜಿಪಂ ಮಾಜಿ ಅಧ್ಯಕ್ಷ ಡಾ.ವೈ. ರಾಮಪ್ಪ ವಿರುದ್ಧ ವೀರಶೈವ-ಲಿಂಗಾಯತ ಸಮುದಾಯದಿಂದ ನಗರದಲ್ಲಿ ಗುರುವಾರ ಬೃಹತ್‌ ಪ್ರತಿಭಟನೆ ನಡೆಯಿತು. ಸಮುದಾಯ ಕುರಿತು ಆಡಿರುವ ಮಾತುಗಳಿಗೆ ನೇರ್ಲಿಗೆ ಗ್ರಾಮದಲ್ಲಿಯೇ ಬಹಿರಂಗ ಕ್ಷಮೆ ಯಾಚಿಸಬೇಕು, ಸರಕಾರ ಇವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ತಹಸೀಲ್ದಾರ್‌ಗೆ ಸಲ್ಲಿಸಿರುವ ಮನವಿಯಲ್ಲಿ ಒತ್ತಾಯಿಸಲಾಗಿದೆ.

Vijaya Karnataka 26 Apr 2019, 5:00 am
ದಾವಣಗೆರೆ : ಕಾಂಗ್ರೆಸ್‌ ಮುಖಂಡ, ಜಿಪಂ ಮಾಜಿ ಅಧ್ಯಕ್ಷ ಡಾ.ವೈ. ರಾಮಪ್ಪ ವಿರುದ್ಧ ವೀರಶೈವ-ಲಿಂಗಾಯತ ಸಮುದಾಯದಿಂದ ನಗರದಲ್ಲಿ ಗುರುವಾರ ಬೃಹತ್‌ ಪ್ರತಿಭಟನೆ ನಡೆಯಿತು. ಸಮುದಾಯ ಕುರಿತು ಆಡಿರುವ ಮಾತುಗಳಿಗೆ ನೇರ್ಲಿಗೆ ಗ್ರಾಮದಲ್ಲಿಯೇ ಬಹಿರಂಗ ಕ್ಷಮೆ ಯಾಚಿಸಬೇಕು, ಸರಕಾರ ಇವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ತಹಸೀಲ್ದಾರ್‌ಗೆ ಸಲ್ಲಿಸಿರುವ ಮನವಿಯಲ್ಲಿ ಒತ್ತಾಯಿಸಲಾಗಿದೆ.
Vijaya Karnataka Web veerashaiva lingayatara mass protests
ವೀರಶೈವ-ಲಿಂಗಾಯತರ ಬೃಹತ್‌ ಪ್ರತಿಭಟನೆ


ಲಿಂಗಾಯತ ವೀರಶೈವ ಸಮಾನ ಮನಸ್ಕರ ವೇದಿಕೆ ನೇತೃತ್ವದಲ್ಲಿ ಹದಡಿ ರಸ್ತೆಯ ಅಂಬೇಡ್ಕರ್‌ ವೃತ್ತದಲ್ಲಿ ಜಮಾಯಿಸಿದ ಸಮುದಾಯದ ಮುಖಂಡರು ಹಾಗೂ ಜಿಲ್ಲೆಯ ನಾನಾ ಭಾಗಗಳಿಂದ ಬಂದಿದ್ದ ಸಮುದಾಯದ ಜನತೆ ಪ್ರತಿಭಟನೆ ನಡೆಸಿದರು. ಅಲ್ಲಿಂದ ಜಯದೇವ ವೃತ್ತದಲ್ಲಿನ ಜಯದೇವಶ್ರೀಗೆ ಪುಷ್ಪಮಾಲೆ ಅರ್ಪಿಸಿದರು. ನಂತರ ಅಲ್ಲಿಂದ ಮೆರವಣಿಗೆಯಲ್ಲಿ ತೆರಳಿ ಎಸಿ ಕಚೇರಿಗೆ ಆಗಮಿಸಿ, ತಹಸೀಲ್ದಾರ್‌ ಗಿರೀಶ್‌ಬಾಬುಗೆ ಮನವಿ ಸಲ್ಲಿಸಿದರು.

ಮೆರವಣಿಗೆಯುದ್ದಕ್ಕೂ ಆಕ್ರೋಶ

ಪ್ರತಿಭಟನಾಕಾರರು ಮೆರವಣಿಗೆ ಉದ್ದಕ್ಕೂ ಹತ್ತಾರು ಬಗೆಯ ಘೋಷಣೆ ಕೂಗುತ್ತಾ ಆಕ್ರೋಶ ವ್ಯಕ್ತಪಡಿಸಿದರು. ಗುಂಪು, ಗುಂಪಾಗಿ ಘೋಷಣೆ ಕೂಗುತ್ತಾ ಸಾಗಿದರು. ಕೆಲವರು ರಾಮಪ್ಪ ಅವರ ಭಾವಚಿತ್ರವಿರುವ ಬ್ಯಾನರ್‌ ಸುಟ್ಟುಹಾಕಿದರು. ಎಸಿ ಕಚೇರಿ ಬಳಿ ಬಂದಾಗ ಸಮುದಾಯದ ಕೆಲ ಮುಖಂಡರು ಜನರನ್ನು ಉದ್ದೇಶಿಸಿ ಮಾತನಾಡಿದರು.

ಮತದಾನದ ದಿನದಂದು ಜಿಪಂ ಮಾಜಿ ಅಧ್ಯಕ್ಷ ಡಾ.ವೈ. ರಾಮಪ್ಪ ನೇರ್ಲಿಗೆ ಗ್ರಾಮದಲ್ಲಿ ವೀರಶೈವ ಲಿಂಗಾಯತ ಸಮುದಾಯದ ಬಗ್ಗೆ ಅವಹೇಳನಕಾರಿಯಾಗಿ ನಿಂದಿಸಿ ಮಾತನಾಡಿದ್ದಾರೆ. ಎಲ್ಲ ಸಂದರ್ಭದಲ್ಲಿಯೂ ನೀವೇ ರಾಜಕೀಯ ಮಾಡಬೇಕೆ. ಇನ್ನು ಮುಂದೆ ನಿಮ್ಮ ರಾಜಕೀಯ ಏನೂ ನಡೆಯುವುದಿಲ್ಲ. ನಿಮಗೆ ಅಷ್ಟೇ ಶಿವ-ಈಶ್ವರ ಇದ್ದಾನೆ, ನೀವುಗಳು ಹೀಗೆ ಮಾಡಿದರೆ ರಕ್ತಪಾತ ಆಗುತ್ತದೆ ಎಂದು ವೀರಶೈವ ಸಮುದಾಯ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ವೀರಶೈವ ಲಿಂಗಾಯತ ಜಾತಿಯನ್ನು ಏಕವಚನದಲ್ಲಿ ಈಶ್ವರ ದೇವರನ್ನೂ ಸೇರಿಸಿಕೊಂಡು ಮಾತನಾಡಿದ್ದಾರೆ. ಜಾತಿ, ಧರ್ಮ, ದೇವರಿಗೆ ಅಗೌರವ ತೋರಿರುವ ಇವರ ವಿರುದ್ಧ ಸರಕಾರ ಕ್ರಮ ತೆಗೆದುಕೊಳ್ಳಬೇಕು. ನೇರ್ಲಿಗೆ ಗ್ರಾಮದ ಬಸ್‌ ನಿಲ್ದಾಣದಲ್ಲಿ ಬಹಿರಂಗವಾಗಿ ಕ್ಷಮೆ ಯಾಚಿಸಬೇಕು. ಆ ಮೂಲಕ ನೊಂದಿರುವ ವೀರಶೈವ ಲಿಂಗಾಯತ ಸಮುದಾಯಕ್ಕೆ ನ್ಯಾಯ ಕೊಡಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ವೀರಶೈವ ಲಿಂಗಾಯತ ಸಮುದಾಯದ ಮುಖಂಡರಾದ ದೇವರಮನೆ ಶಿವಕುಮಾರ್‌, ಎಪಿಎಂಸಿ ನಿರ್ದೇಶಕ ಮುದೇಗೌಡ್ರ ಗಿರೀಶ್‌, ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ಶಿವನಹಳ್ಳಿ ರಮೇಶ್‌, ಶಿವಗಂಗಾ ಬಸವರಾಜ್‌, ಮುಖಂಡರಾದ ಲೋಕಿಕೆರೆ ನಾಗರಾಜ್‌, ಶಶಿಧರ ಹೆಮ್ಮನಬೇತೂರು, ಧನಂಜಯ ಕಡ್ಲೇಬಾಳು, ಶಿವಮೂರ್ತಪ್ಪ, ಶಿವಯೋಗಪ್ಪ, ಸಂಗಪ್ಪ, ಚನ್ನಬಸಪ್ಪ ಅಲೂರು ಸೇರಿದಂತೆ ಅನೇಕ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ