ಆ್ಯಪ್ನಗರ

ಮೇ 30ರವರೆಗೆ ಭದ್ರಾ ನಾಲೆಗೆ ನೀರು ಹರಿಸಿ

ಭದ್ರಾ ಅಚ್ಚುಕಟ್ಟಿನ ಕೊನೆ ಭಾಗದಲ್ಲಿ ಭತ್ತದ ಬೆಳೆ ದುಂಡು ಹಾಗೂ ಕಾಳು ಕಟ್ಟುವ ಹಂತದಲ್ಲಿರುವುದರಿಂದ ಭದ್ರಾ ಬಲದಂಡೆ ನಾಲೆಯಲ್ಲಿ ಮೇ 30ರವರೆಗೆ ನೀರು ಮುಂದುವರೆಸುವಂತೆ ಕೊನೇ ಭಾಗದ ರೈತರು ಒತ್ತಾಯಿಸಿದ್ದಾರೆ.

Vijaya Karnataka 6 May 2019, 5:00 am
ಮಲೆಬೆನ್ನೂರು : ಭದ್ರಾ ಅಚ್ಚುಕಟ್ಟಿನ ಕೊನೆ ಭಾಗದಲ್ಲಿ ಭತ್ತದ ಬೆಳೆ ದುಂಡು ಹಾಗೂ ಕಾಳು ಕಟ್ಟುವ ಹಂತದಲ್ಲಿರುವುದರಿಂದ ಭದ್ರಾ ಬಲದಂಡೆ ನಾಲೆಯಲ್ಲಿ ಮೇ 30ರವರೆಗೆ ನೀರು ಮುಂದುವರೆಸುವಂತೆ ಕೊನೇ ಭಾಗದ ರೈತರು ಒತ್ತಾಯಿಸಿದ್ದಾರೆ.
Vijaya Karnataka Web water to bhadra river till may 30
ಮೇ 30ರವರೆಗೆ ಭದ್ರಾ ನಾಲೆಗೆ ನೀರು ಹರಿಸಿ


ಕೊನೇ ಭಾಗದ ಅಚ್ಚುಕಟ್ಟಿನಲ್ಲಿ ಬೆಳೆ ಉಳಿಸಿಕೊಳ್ಳಲು ಭದ್ರಾ ನಾಲೆಯಲ್ಲಿ ಈ ತಿಂಗಳ ಅಂತ್ಯದವರೆಗೆ ನೀರು ಹರಿಸುವಂತೆ, ಭಾನುವಳ್ಳಿ ಹಾಗೂ ಹೊಳೆಸಿರಿಗೆರೆ ರೈತರ ನಿಯೋಗ ಮೇ 7ರಂದು ಮೈಲಾರಕ್ಕೆ ಆಗಮಿಸುವ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ಅವರನ್ನು ಭೇಟಿಯಾಗಿ ಒತ್ತಾಯಿಸಲಿದೆ. ಅಂದು ಕನಕ ಪೀಠದ ಕಾರ್ಯಕ್ರಮಕ್ಕೆ ಸಚಿವರು ಹೂವಿನಹಡಗಲಿ ತಾಲೂಕು ಮೈಲಾರಕ್ಕೆ ಆಗಮಿಸುವರು.

ಭದ್ರಾ ಅಚ್ಚುಕಟ್ಟಿನ ಕೊನೇ ಭಾಗಕ್ಕೆ ತಡವಾಗಿ ನೀರು ತಲುಪಿದ ಹಿನ್ನೆಲೆ ಕಡೆ ಭಾಗದ ಭಾನುವಳ್ಳಿ, ಕಮಲಾಪುರ, ಹೊಳೆಸಿರಿಗೆರೆ, ಕೆಎನ್‌ ಹಳ್ಳಿ, ಲಕ್ಕಶೆಟ್ಟಿಹಳ್ಳಿ, ನಂದಿತಾವರೆಯಲ್ಲಿ ಒಂದರಿಂದ ಒಂದೂವರೆ ತಿಂಗಳು ತಡವಾಗಿ ಭತ್ತ ನಾಟಿಯಾಗಿದೆ. ಇದೀಗ ಭತ್ತದ ಬೆಳೆ ದುಂಡು ಹಾಗೂ ಕಾಳು ಕಟ್ಟುವ ಹಂತದಲ್ಲಿರುವುದರಿಂದ ಇನ್ನು 25 ದಿನ ನೀರಿನ ಅವಶ್ಯಕತೆ ಇದೆ. ಯಾವುದೇ ಕಾರಣಕ್ಕೂ ನಾಲೆಗೆ ನೀರು ಬಂದ್‌ ಮಾಡದೆ, ಈ ತಿಂಗಳ ಅಂತ್ಯದವರೆಗೂ ನೀರು ಮುಂದುವರೆಸಬೇಕೆಂದು ರೈತರು ಒತ್ತಾಯಿಸಿದ್ದಾರೆ.

ಮೇ 10 ಅಥವಾ ಮೇ 15ಕ್ಕೆ ನಾಲೆಗೆ ನೀರು ನಿಲುಗಡೆ ಮಾಡಿದರೆ, ಕೊನೇ ಭಾಗದ ಸಾವಿರಾರು ಹೆಕ್ಟೇರ್‌ ಭತ್ತದ ಬೆಳೆ ನೀರಿಲ್ಲದೆ, ನಾಶವಾಗಿ ಭತ್ತ ಬೆಳೆಗಾರರು ಆರ್ಥಿಕ ಸಂಕಷ್ಟಕ್ಕೀಡಾಗುವ ಸಾಧ್ಯತೆ ಇದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

ಭದ್ರಾ ಜಲಾಶಯದಲ್ಲಿ ಪ್ರಸ್ತುತ 134.2 ಅಡಿ ನೀರಿದ್ದು, ಮೇ 30ರವರೆಗೆ ನೀರು ಹರಿಸಲು ಯಾವುದೇ ತೊಂದರೆಯಿಲ್ಲ. ಕೊನೆ ಭಾಗಕ್ಕೆ ಮಾತ್ರ ನೀರು ಬೇಕಾಗಿರುವುದರಿಂದ ಜಲಾಶಯದಿಂದ ಕಡಿಮೆ ಪ್ರಮಾಣದಲ್ಲಿ ನೀರು ಹರಿಸಿದರೆ, ಹೆಚ್ಚಿನ ನೀರು ಪೋಲಾಗುವುದಿಲ್ಲ ಎನ್ನುತ್ತಾರೆ ರೈತರು.

ಭಾನುವಳ್ಳಿ, ಹೊಳೆಸಿರಿಗೆರೆ ರೈತರ ನಿಯೋಗ ಮೇ 7ರಂದು ಮೈಲಾರಕ್ಕೆ ಆಗಮಿಸಲಿರುವ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ನ್ನು ಭೇಟಿ ಮಾಡಿ, ಭದ್ರಾ ನಾಲೆಗೆ ಮೇ 30ರವರೆಗೆ ನೀರು ಮುಂದುವರೆಸುವಂತೆ ಒತ್ತಾಯಿಸುತ್ತೇವೆ.
- ಬಸವರಾಜ್‌, ಭತ್ತ ಬೆಳೆಗಾರ, ಭಾನುವಳ್ಳಿ.

ಭದ್ರಾ ನಾಲೆಗೆ ಮೇ 15ರ ವರೆಗೆ ನೀರು ಮುಂದುವರೆಸುವ ಕುರಿತು ಯಾವುದೇ ಅಧಿಕೃತ ನಿರ್ಧಾರವಾಗಿಲ್ಲ. ಬೆಂಗಳೂರಿನ ನೀರಾವರಿ ನಿಗಮದ ಎಂಡಿ ಕಚೇರಿಯಲ್ಲಿ ಮೇ 9ರಂದು ಇಲಾಖೆಯ ಇತರೆ ವಿಷಯಗಳು ಕುರಿತು ನಡೆಯಲಿರುವ ಅಧಿಕಾರಿಗಳ ಸಭೆಯಲ್ಲಿ ನೀರಿನ ವಿಷಯವೂ ಚರ್ಚೆಯಾಗಲಿದೆ. ಅಂದು ಬಹುತೇಕ ಭದ್ರಾ ನಾಲೆಗೆ ನೀರು ಮುಂದುವರೆಸುವ ಅಥವಾ ನಿಲುಗಡೆ ಮಾಡುವ ದಿನಾಂಕ ನಿರ್ಧಾರವಾಗಲಿದೆ.
- ರಾಜೇಂದ್ರ ಪ್ರಸಾದ್‌, ಪ್ರಭಾರಿ ಇಇ, ಭದ್ರಾ ನಾಲಾ ವಿಭಾಗ, ಮಲೆಬೆನ್ನೂರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ