ಆ್ಯಪ್ನಗರ

ಡ್ಯಾಂನಿಂದ 6,200 ಕ್ಯುಸೆಕ್‌ ನೀರು ಹೊರಕ್ಕೆ | ಮಂಗಳವಾರ ಮಧ್ಯಾಹ್ನ 4 ಕ್ರಸ್ಟ್‌ ಗೇಟ್‌ ಓಫನ್‌

ಜಿಲ್ಲೆಯ ಜನರ ಜೀವನಾಡಿಯಾದ ಭದ್ರಾ ಡ್ಯಾಂ ತುಂಬಿದ್ದು ಮಂಗಳವಾರ ಮಧ್ಯಾಹ್ನದಿಂದ ನದಿಗೆ ನೀರು ಹರಿಸಲಾಗಿದೆ. ಇನ್ನೊಂದೆಡೆ ತುಂಗಾ ಜಲಾಶಯದಿಂದಲೂ ನೀರನ್ನು ನದಿಗೆ ಹರಿಸಿರುವುದರಿಂದ ಜಿಲ್ಲೆಯ ನೀರಿನ ದಾಹ ತೀರಿಸುವ ತುಂಗಭದ್ರಾ ನದಿ ತುಂಬಿ ಹರಿಯುತ್ತಿದೆ. ಅಚ್ಚುಕಟ್ಟು ಪ್ರದೇಶದ ರೈತರೂ ಸೇರಿದಂತೆ ನದಿ ದಂಡೆಯ ಮೇಲಿನ ಗ್ರಾಮದ ಜನತೆ ಕೂಡ ಒಂದೆಡೆ ಹರ್ಷ ಚಿತ್ತರಾಗಿದ್ದಾರೆ, ಇನ್ನೊಂದೆಡೆ ಅಪಾಯದ ಮಟ್ಟ ಮೀರಿದರೆ ಎಂಬ ಆತಂಕವೂ ಇದೆ.

Vijaya Karnataka 25 Jul 2018, 5:00 am
ದಾವಣಗೆರೆ : ಜಿಲ್ಲೆಯ ಜನರ ಜೀವನಾಡಿಯಾದ ಭದ್ರಾ ಡ್ಯಾಂ ತುಂಬಿದ್ದು ಮಂಗಳವಾರ ಮಧ್ಯಾಹ್ನದಿಂದ ನದಿಗೆ ನೀರು ಹರಿಸಲಾಗಿದೆ. ಇನ್ನೊಂದೆಡೆ ತುಂಗಾ ಜಲಾಶಯದಿಂದಲೂ ನೀರನ್ನು ನದಿಗೆ ಹರಿಸಿರುವುದರಿಂದ ಜಿಲ್ಲೆಯ ನೀರಿನ ದಾಹ ತೀರಿಸುವ ತುಂಗಭದ್ರಾ ನದಿ ತುಂಬಿ ಹರಿಯುತ್ತಿದೆ. ಅಚ್ಚುಕಟ್ಟು ಪ್ರದೇಶದ ರೈತರೂ ಸೇರಿದಂತೆ ನದಿ ದಂಡೆಯ ಮೇಲಿನ ಗ್ರಾಮದ ಜನತೆ ಕೂಡ ಒಂದೆಡೆ ಹರ್ಷ ಚಿತ್ತರಾಗಿದ್ದಾರೆ, ಇನ್ನೊಂದೆಡೆ ಅಪಾಯದ ಮಟ್ಟ ಮೀರಿದರೆ ಎಂಬ ಆತಂಕವೂ ಇದೆ.
Vijaya Karnataka Web water to the filled bhadra river
ಡ್ಯಾಂನಿಂದ 6,200 ಕ್ಯುಸೆಕ್‌ ನೀರು ಹೊರಕ್ಕೆ | ಮಂಗಳವಾರ ಮಧ್ಯಾಹ್ನ 4 ಕ್ರಸ್ಟ್‌ ಗೇಟ್‌ ಓಫನ್‌


ಕಳೆದ ಮೂರು ವರ್ಷ ಡ್ಯಾಂ ತುಂಬುವುದು ಇರಲಿ, ಕೃಷಿ ಮತ್ತು ಕುಡಿವ ನೀರಿಗೂ ಸಾಕಾಗುವಷ್ಟು ನೀರು ಶೇಖರಣೆ ಆಗಿರಲಿಲ್ಲ. ಇತ್ತ ನದಿಯಲ್ಲೂ ನೀರು ಇರಲಿಲ್ಲ. ಈ ವರ್ಷ ಜುಲೈ ತಿಂಗಳಿನಲ್ಲಿಯೇ ಎರಡೂ ಡ್ಯಾಂಗಳು ತುಂಬಿದ್ದು ನದಿಗೆ ಸಾಕಷ್ಟು ನೀರು ಹರಿ ಬಿಡಲಾಗಿದೆ. ಇದೇ ರೀತಿ ಮಳೆಯಿದ್ದು, ಇಷ್ಟೇ ಪ್ರಮಾಣದಲ್ಲಿ ಒಳ ಹರಿವು ಇದ್ದರೆ ಇನ್ನೂ ಒಂದು ತಿಂಗಳು ನದಿಗೆ ಇದೇ ರೀತಿ ನೀರು ಹರಿಬಿಡುವ ಸಾಧ್ಯತೆಯೂ ಇದೆ.

73 ಅಡಿ ನೀರು

ಈ ಬಾರಿ ಡ್ಯಾಂನ ನೀರಿನ ಮಟ್ಟ 110.3 ಅಡಿಗೆ ಕುಸಿದು 11.638 ಟಿಎಂಸಿ ನೀರಿತ್ತು. ಮುಂಗಾರು ಆರಂಭದ ಮೊದಲೇ ದಿನದಿಂದಲೂ ಡ್ಯಾಂಗೆ ನಿರಂತರ ನೀರು ಹರಿದು ಬಂದಿದೆ. ಎರಡು ತಿಂಗಳಲ್ಲಿ ಒಟ್ಟು 73 ಅಡಿ ನೀರು ಹರಿದು ಬಂದು 183.3 ಅಡಿ ತಲುಪಿ 68.111 ಟಿಎಂಸಿ ನೀರಿದೆ. ಕಳೆದ ವರ್ಷ ಇದೇ ದಿನ ಡ್ಯಾಂ ನೀರಿನಮಟ್ಟ 138.8 ಅಡಿಯಿತ್ತು. ಡ್ಯಾಂನ ನೀರಿನ ಮಟ್ಟ ಏರುತ್ತಿರುವ ಹಿನ್ನೆಲೆಯಲ್ಲಿ ಮಂಗಳವಾರ ಮಧ್ಯಾಹ್ನದಿಂದ ನದಿಗೆ ನೀರು ಬಿಡಲಾಗಿದೆ.

ತುಂಗಭದ್ರಾಗೆ ಜೀವ ಕಳೆ

ಈಗಾಗಲೇ ತುಂಗಾ ಜಲಾಶಯ 15 ದಿನದ ಹಿಂದೆಯೇ ಭರ್ತಿಯಾಗಿ ನದಿಗೆ ನೀರು ಹರಿಸಲಾಗುತ್ತಿದೆ. ಮಂಗಳವಾರ ಈ ಜಲಾಶಯದಿಂದ 40 ಸಾವಿರ ಕ್ಯುಸೆಕ್‌ ನೀರು ನದಿಗೆ ಹರಿಯುತ್ತಿದೆ. ಇದರ ಜತೆ ಈಗ ಭದ್ರಾ ಡ್ಯಾಂನಿಂದಲೂ 6,200 ಕ್ಯುಸೆಕ್‌ ನೀರು ಹೊರ ಬಿಡಲಾಗಿದ್ದು ತುಂಗಭದ್ರಾ ನದಿ ಈಗ ಇನ್ನಷ್ಟು ಮೈ ದುಂಬಿದೆ.

ನದಿಯ ಪೂರ್ಣ ಮಟ್ಟ 10.5 ಮೀಟರ್‌ ಇದ್ದು ತುಂಗಾ ಜಲಾಶಯದಿಂದ ನೀರು ಹರಿಸಿದಾಗ 5 ಮೀಟರ್‌ ಮಟ್ಟದಲ್ಲಿ ನೀರು ಹರಿಯುತ್ತಿತ್ತು. ಈಗ ಭದ್ರಾ ಜಲಾಶಯದಿಂದಲೂ ನೀರು ಹರಿಯ ಬಿಟ್ಟಿರುವುದರಿಂದ ನದಿ ನೀರಿನ ಮಟ್ಟ 5.50 ರಿಂದ ಮೀಟರ್‌ಗೆ ಏರಿಕೆ ಆಗಲಿದೆ.

ಮಲೆನಾಡಿನ ಭಾಗದಲ್ಲಿ ಮಳೆ ಹೆಚ್ಚಾಗಿ ನದಿಗೆ ಹರಿಸುವ ನೀರಿನ ಪ್ರಮಾಣದಲ್ಲಿ ಏರಿಕೆಯಾದರೆ ನದಿ ಅಪಾಯದ ಮಟ್ಟ ಮೀರಿ ಹರಿಯಲಿದೆ. ಹರಿಹರ ತಾಲೂಕಿನ ಸಾರಥಿ ಸೇರಿ ಒಂದೆರಡು ಗ್ರಾಮಗಳು ಸಂಪರ್ಕ ಕಡಿದುಕೊಳ್ಳಲಿವೆ. ಈಗ ನದಿ ತುಂಬಿ ಹರಿಯುತ್ತಿರುವುದು ಜಿಲ್ಲೆಯ ಜನರಲ್ಲಿ ಹರ್ಷ ಮೂಡಿಸಿದೆ.


ನದಿಪಾತ್ರದ ಜನರಿಗೆ ಸೂಚನೆ

ಭದ್ರಾ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆ ಅಗುತ್ತಿರುವುದರಿಂದ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದ ನೀರು ಹರಿದು ಬರುತ್ತಿದ್ದು ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ. ಪ್ರವಾಹ ಪರಿಸ್ಥಿತಿ ನಿಯಂತ್ರಣಕ್ಕಾಗಿ ಡ್ಯಾಂ ನಿಂದ ನದಿಗೆ ನೀರು ಹರಿಸಲಾಗಿದೆ. ನದಿ ಪಾತ್ರದಲ್ಲಿ ಸಾರ್ವಜನಿಕರು ತಿರುಗಾಡುವುದು, ದನಕರುಗಳನ್ನು ಮೇಯಿಸುವುದು, ತೋಟಗಾರಿಕೆ ಮಾಡುವುದು, ಪಂಪ್‌ಸೆಟ್‌ಗಳಿಂದ ನೀರೆತ್ತುವುದು ಇತ್ಯಾದಿಗಳ ಚಟುವಟಿಕೆ ಕೈಗೊಳ್ಳದಂತೆ ಡಿಸಿ ಡಿ.ಎಸ್‌.ರಮೇಶ್‌ ನದಿ ಪಾತ್ರದ ಜನತೆಗೆ ಸೂಚನೆ ನೀಡಿದ್ದಾರೆ.

----

ನೀರಿಗೆ ಬರವಿಲ್ಲ

ತುಂಗಭದ್ರಾ ನದಿ ನೀರು ನೆಚ್ಚಿಕೊಂಡು ಹಲವಾರು ಯೋಜನೆಗಳನ್ನು ಜಿಲ್ಲೆಯಲ್ಲಿ ಜಾರಿಗೊಳಿಸಲಾಗಿದೆ. ಇನ್ನೊಂದೆಡೆ ನದಿ ತಟದ ಗ್ರಾಮಗಳ ರೈತರು ಈ ನದಿಯಿಂದ ನೀರು ಪಂಪ್‌ ಮಾಡಿ ಭತ್ತ, ತೋಟಗಾರಿಕೆ ಬೆಳೆ ಬೆಳೆಯುವುದರಿಂದ ಎಲ್ಲದಕ್ಕೂ ಈ ಬಾರಿ ಅನುಕೂಲ ಆಗಿದೆ. ಏತ ನೀರಾವರಿ ಯೋಜನೆ ಮೂಲಕ ಜಿಲ್ಲೆಯಲ್ಲಿ ಹಲವಾರು ಕೆರೆಗಳನ್ನು ತುಂಬಿಸುವ ಯೋಜನೆ ರೂಪಿಸಲಾಗಿದೆ. ಇದರ ಜತೆ ದಾವಣಗೆರೆ, ಹರಿಹರ, ಹೊನ್ನಾಳಿ, ಹರಪನಹಳ್ಳಿ ನಗರ, ಪಟ್ಟಣ ಸೇರಿದಂತೆ ನೂರಾರು ಹಳ್ಳಿಗಳಿಗೆ ಕುಡಿವ ನೀರು ಒದಗಿಸುವ 27 ಬಹುಗ್ರಾಮ ಕುಡಿವ ನೀರು ಯೋಜನೆಗಳು ನದಿಯನ್ನು ಅವಲಂಭಿಸಿವೆ. ಈಗ ನದಿ ತುಂಬಿ ಹರಿಯುವುದರಿಂದ ಇನ್ನೂ ಆರು ತಿಂಗಳು ನೀರಿಗೆ ಬರವಿಲ್ಲಎಂಬ ಮಾತುಗಳು ಕೇಳಿ ಬರುತ್ತಿವೆ.

---

ಅಪಾಯದ ಮಟ್ಟ ?

ಈಗ ತುಂಗಾ ಡ್ಯಾಂನಿಂದ 40 ಸಾವಿರ, ಭದ್ರಾದಿಂದ 6,200 ಕ್ಯುಸೆಕ್‌ ನೀರು ಸೇರಿ 46,200 ಕ್ಯುಸೆಕ್‌ ನೀರು ನದಿಗೆ ಬಿಡಲಾಗಿದೆ. ಇದರ ಜತೆ ಮಳೆ ನೀರು ಸೇರಿ ಈಗ ನದಿಯಲ್ಲಿ 6 ಮೀಟರ್‌ ನೀರು ಹರಿಯುತ್ತಿದೆ. ಒಂದೊಮ್ಮೆ ಮಲೆನಾಡಿನಲ್ಲಿ ಮಳೆ ಜಾಸ್ತಿಯಾಗಿ ಡ್ಯಾಂಗಳಿಂದ ನದಿಗೆ ನೀರು ಹರಿಸುವ ಪ್ರಮಾಣ ಹೆಚ್ಚಿದರೆ ನದಿ ಅಪಾಯದ ಮಟ್ಟ ಮೀರಿ ಹರಿಯುವ ಸಾಧ್ಯತೆಯಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ