ಆ್ಯಪ್ನಗರ

ರಾಜ್ಯದಲ್ಲಿ 17% ಜನರಿಗೆ ಮೊದಲ ಡೋಸ್, 62% ಜನರಿಗೆ 2ನೇ ಡೋಸ್ ಕೊಡಬೇಕು: ಸುಧಾಕರ್‌

ಲಸಿಕೆ ಖರೀದಿಗೆ ರಾಜ್ಯ ಸರಕಾರದಿಂದ ಒಂದು ರೂಪಾಯಿಯೂ ನೀಡಿಲ್ಲ. ಕರ್ನಾಟಕದಲ್ಲಿ ಅತಿ ಕಡಿಮೆ ಲಸಿಕೆಯನ್ನು ಮಾರ್ಚ್‌ ನಲ್ಲಿ ನೀಡಲಾಗಿತ್ತು. ಸೆಪ್ಟೆಂಬರ್‌ನಲ್ಲಿ 1.48 ಕೋಟಿ ನೀಡಲಾಗಿತ್ತು. ಒಂದೇ ದಿನ 31.75 ಲಕ್ಷ ಲಸಿಕೆಯನ್ನು ಸೆಪ್ಟೆಂಬರ್ 17 ರಂದು ನೀಡಲಾಗಿತ್ತು

Vijaya Karnataka Web 22 Oct 2021, 6:54 pm
ಹುಬ್ಬಳ್ಳಿ: ಇಡೀ ಜಗತ್ತಿನಲ್ಲಿ ಉಚಿತ ಹಾಗೂ ಬೇರೆ ದೇಶಗಳಿಗಿಂತ ಹೆಚ್ಚು ಪಟ್ಟು ಲಸಿಕೆಯನ್ನು ಭಾರತದಲ್ಲಿ ನೀಡಿರುವುದು ಮೈಲುಗಲ್ಲಾಗಿದೆ. ಇನ್ನೂ ಉಳಿದವರಿಗೆ ವೇಗವಾಗಿ ಲಸಿಕೆ ನೀಡಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಹೇಳಿದರು.
Vijaya Karnataka Web ಸುಧಾಕರ್‌
ಸುಧಾಕರ್‌


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ರಾಜ್ಯದಲ್ಲಿ ಶೇ.83 ಜನರಿಗೆ ಮೊದಲ ಡೋಸ್ ಹಾಗೂ ಶೇ.38 ಜನರಿಗೆ ಎರಡನೇ ಡೋಸ್ ನೀಡಲಾಗಿದೆ. ಭಾರತದಲ್ಲಿ ಅಮೆರಿಕದ ಎರಡೂವರೆ ಪಟ್ಟು, ಬ್ರೆಜಿಲ್ ನ 4 ಪಟ್ಟು, ಜಪಾನ್ ನ 8 ಪಟ್ಟು, ಇಂಗ್ಲೆಂಡ್‌ನ 10 ಪಟ್ಟು, ಯುರೋಪ್ ದೇಶಗಳ 2 ಪಟ್ಟು ಅಧಿಕ ಜನರಿಗೆ ಲಸಿಕೆ ನೀಡಲಾಗಿದೆ. ದೇಶದಲ್ಲಿ ಎರಡೂ ಡೋಸ್ ಪಡೆದವರ ಸಂಖ್ಯೆ 27.4 ಕೋಟಿ. ಅನೇಕ ದೇಶಗಳಲ್ಲಿ ಹಣ ಕೊಟ್ಟು ಖರೀದಿ ಮಾಡುವ ವ್ಯವಸ್ಥೆ ಇದ್ದು, ಭಾರತದಲ್ಲಿ ಉಚಿತ ಲಸಿಕೆ ನೀಡಲಾಗಿದೆ. ಇದಕ್ಕಾಗಿ 35 ಸಾವಿರ ಕೋಟಿ ರೂ. ನೀಡಲಾಗಿದೆ ಎಂದರು.

ಲಸಿಕೆ ಖರೀದಿಗೆ ರಾಜ್ಯ ಸರಕಾರದಿಂದ ಒಂದು ರೂಪಾಯಿಯೂ ನೀಡಿಲ್ಲ. ಕರ್ನಾಟಕದಲ್ಲಿ ಅತಿ ಕಡಿಮೆ ಲಸಿಕೆಯನ್ನು ಮಾರ್ಚ್‌ ನಲ್ಲಿ ನೀಡಲಾಗಿತ್ತು. ಸೆಪ್ಟೆಂಬರ್‌ನಲ್ಲಿ 1.48 ಕೋಟಿ ನೀಡಲಾಗಿತ್ತು. ಒಂದೇ ದಿನ 31.75 ಲಕ್ಷ ಲಸಿಕೆಯನ್ನು ಸೆಪ್ಟೆಂಬರ್ 17 ರಂದು ನೀಡಲಾಗಿತ್ತು ಎಂದರು.

ರಾಜ್ಯದಲ್ಲಿ ಇನ್ನೂ ಶೇ.17 ರಷ್ಟು ಜನರಿಗೆ ಮೊದಲ ಡೋಸ್ ಹಾಗೂ ಶೇ.62 ಜನರಿಗೆ 2ನೇ ಡೋಸ್ ನೀಡಬೇಕಿದೆ. ರಾಜ್ಯದಲ್ಲಿ ಈಗ 60 ಲಕ್ಷ ಲಸಿಕೆ ದಾಸ್ತಾನು ಇದೆ. ಒಂದನೇ ಡೋಸ್ ಪಡೆದವರು ಎರಡನೇ ಡೋಸ್ ಪಡೆಯಲು ಉದಾಸೀನ ತೋರಬಾರದು. ಒಂದೇ ಡೋಸ್ ನಿಂದ ಸಂಪೂರ್ಣ ರೋಗ ನಿರೋಧಕ ಶಕ್ತಿ ದೊರೆಯುವುದಿಲ್ಲ. ಎರಡನೇ ಡೋಸ್ ಅನ್ನು 52 ಲಕ್ಷ ಜನರು ಪಡೆಯಬೇಕಿದ್ದು, ಅವರು ಆದಷ್ಟು ಬೇಗ ಬಂದು ಲಸಿಕೆ ಪಡೆಯಬೇಕು ಎಂದರು.

100 ಕೋಟಿ ಕೋವಿಡ್ ಲಸಿಕೆಯ ದೊಡ್ಡ ಮೈಲಿಗಲ್ಲನ್ನು ದೇಶ ತಲುಪಿದೆ. ಲಸಿಕೆ ಆವಿಷ್ಕರಿಸಿದ ವಿಜ್ಞಾನಿಗಳು, ಆರೋಗ್ಯ ಸಿಬ್ಬಂದಿ, ಪೊಲೀಸ್ ಇಲಾಖೆ ಎಲ್ಲರೂ ಇದಕ್ಕಾಗಿ ಶ್ರಮಿಸಿದ್ದಾರೆ. ಇದಕ್ಕಾಗಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ.

ಬಿಸಿಜಿ ಲಸಿಕೆ ಆವಿಷ್ಕಾರವಾದ 24 ವರ್ಷಗಳ ಬಳಿಕ ಭಾರತಕ್ಕೆ ಬಂತು. ಹೆಪಟೈಟಿಸ್-ಬಿ 15 ವರ್ಷದ ಬಳಿಕ ಬಂದಿತ್ತು. 12 ರೋಗಗಳ ಲಸಿಕೆಗಳು ಬೇರೆ ದೇಶಗಳಿಂದ ಭಾರತಕ್ಕೆ ಬರಲು ಅನೇಕ ವರ್ಷ ಬೇಕಾಯಿತು. ಆದರೆ ಕೊರೊನಾ ಲಸಿಕೆಯನ್ನು 2021ರ ಜನವರಿ 16 ರಂದು ಮೊದಲು ನೀಡಲಾಯಿತು. ಪ್ರಧಾನಿ ನರೇಂದ್ರ ಮೋದಿಯವರ ಬದ್ಧತೆ, ದೂರದೃಷ್ಟಿ, ನಾಯಕತ್ವದಿಂದ ಇದನ್ನು ಸಾಧಿಸಲು ಸಾಧ್ಯವಾಗಿದೆ ಎಂದರು.

ಪ್ರಗತಿಗೆ ವಿರೋಧಿ

ಸಿದ್ದರಾಮಯ್ಯ ಯಾವುದೇ ಪ್ರಗತಿ ಕಾರ್ಯವನ್ನು ವಿರೋಧಿಸುತ್ತಾರೆ. ವಿರೋಧ ಪಕ್ಷದ ನಾಯಕರಾಗಿ ಅಲ್ಲದಿದ್ದರೂ, ಒಬ್ಬ ಭಾರತೀಯರಾಗಿ ಕೋವಿಡ್ ಲಸಿಕೆಯ ಸಾಧನೆಯನ್ನು ಶ್ಲಾಘಿಸಬಹುದಿತ್ತು. ಸರಕಾರ ನೀಡುವ ಅಂಕಿ, ಸಂಖ್ಯೆಯನ್ನು ಬುಡಮೇಲು ಮಾಡಿ ಅವರದ್ದೇ ಆದ ಅಂಕಿ, ಸಂಖ್ಯೆ ನೀಡಿದ್ದಾರೆ. ಅವರು ಕೂಡ ಮುಖ್ಯಮಂತ್ರಿಯಾಗಿದ್ದು, ಆಗಲೂ ಇದೇ ಇಲಾಖೆ ಅಂಕಿ ಅಂಶ ನೀಡುತ್ತಿತ್ತು. ಇಂತಹ ನಾಯಕರಿಂದ ಈ ರೀತಿಯ ಪ್ರತಿಕ್ರಿಯೆ ನಿರೀಕ್ಷಿಸಿರಲಿಲ್ಲ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ