ಆ್ಯಪ್ನಗರ

ಸೋಲಿಗೆ ಬೆನ್ನು ತೋರಿಸಿ ಕೂಡುವುದಿಲ್ಲ

ಧಾರವಾಡ :ಕಳೆದ ಚುನಾವಣೆಯಲ್ಲಿ ಸೋಲನ್ನು ನಾನೂ ನಿರೀಕ್ಷಿಸಿರಲಿಲ್ಲ. ನಾನು ಅಧಿಕಾರದಲ್ಲಿ ಇದ್ದಾಗ ಮಾಡಿದ ನನ್ನ ತಪ್ಪು ನನಗೇ ಗೊತ್ತಾಗಲಿಲ್ಲ, ಬೇರೆಯವರು ಕೂಡ ಹೇಳಲಿಲ್ಲ. ಒಂದು ವೇಳೆ ಈ ಅವಧಿಯಲ್ಲಿ ನನ್ನಿಂದ ಏನಾದರು ತಪ್ಪಾಗಿದ್ದರೆ ಕ್ಷಮಿಸಿ ಎಂದು ಭಾವನಾತ್ಮಕ ಮಾತುಗಳನ್ನಾಡಿದ ಮಾಜಿ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಗದ್ಗದಿತರಾಗಿ ಭಾಷಣ ಮೊಟಕುಗೊಳಿಸಿ ಕಣ್ಣೀರಿಟ್ಟರು.

Vijaya Karnataka 28 May 2018, 5:00 am
ಧಾರವಾಡ :ಕಳೆದ ಚುನಾವಣೆಯಲ್ಲಿ ಸೋಲನ್ನು ನಾನೂ ನಿರೀಕ್ಷಿಸಿರಲಿಲ್ಲ. ನಾನು ಅಧಿಕಾರದಲ್ಲಿ ಇದ್ದಾಗ ಮಾಡಿದ ನನ್ನ ತಪ್ಪು ನನಗೇ ಗೊತ್ತಾಗಲಿಲ್ಲ, ಬೇರೆಯವರು ಕೂಡ ಹೇಳಲಿಲ್ಲ. ಒಂದು ವೇಳೆ ಈ ಅವಧಿಯಲ್ಲಿ ನನ್ನಿಂದ ಏನಾದರು ತಪ್ಪಾಗಿದ್ದರೆ ಕ್ಷಮಿಸಿ ಎಂದು ಭಾವನಾತ್ಮಕ ಮಾತುಗಳನ್ನಾಡಿದ ಮಾಜಿ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಗದ್ಗದಿತರಾಗಿ ಭಾಷಣ ಮೊಟಕುಗೊಳಿಸಿ ಕಣ್ಣೀರಿಟ್ಟರು.
Vijaya Karnataka Web do not show back to defeat
ಸೋಲಿಗೆ ಬೆನ್ನು ತೋರಿಸಿ ಕೂಡುವುದಿಲ್ಲ


ನಗರದ ರಪಾಟಿ ಕಲ್ಯಾಣಮಂಟಪದಲ್ಲಿ ಭಾನುವಾರ ನಡೆದ ಮತದಾರರ ಕೃತಜ್ಞತಾ ಸಭೆಯಲ್ಲಿ ಭಾಷಣ ಆರಂಭಿಸಿದ ಮಾಜಿ ಸಚಿವರು, ವೈಯಕ್ತಿಕ, ಊರಿನ ಕೆಲಸ ಮಾಡಿಕೊಟ್ಟಿದ್ದೇನೆ. ನಿರೀಕ್ಷೆ ಮೀರಿ ಅಭಿವೃದ್ಧಿ ಮಾಡಿದ್ದೇನೆ. ಇಷ್ಟಾದರೂ ನಾನು ಸೋತೆ.. ಏನಾಯಿತು ಗೊತ್ತಾಗುತ್ತಿಲ್ಲ ಎಂದ ಅವರು, ಉಮ್ಮಳಿಸಿ ಬಂದ ದುಖಃ ತಡೆಯಲಾಗದೇ ಅರ್ಧಕ್ಕೆ ಮಾತು ನಿಲ್ಲಿಸಿ ಕುಳಿತುಕೊಂಡರು.

ಚುನಾವಣೆಯಲ್ಲಿ ನೀಡಿದ ಜನರ ತೀರ್ಪಿಗೆ ತಲೆಬಾಗುತ್ತೇನೆ. ನಾನು ಅಧಿಕಾರದಲ್ಲಿ ಇರಲಿ ಬಿಡಲಿ ನಿಮ್ಮ ಜತೆಯಂತೂ ಇರುತ್ತೇನೆ. ನನಗೆ ಗೊತ್ತಿಲ್ಲದೇ ಮಾಡಿದ ತಪ್ಪಿನಿಂದ ಮನಸ್ಸಿಗೆ ನೋವಾಗಿ ಮತದಾರ ನನಗೆ ವೋಟ್‌ ಹಾಕಿರಲಿಕ್ಕಿಲ್ಲ. ಇದರಲ್ಲಿ ನಾನು ಯಾರನ್ನೂ ದ್ವೇಷಿಸುವುದಿಲ್ಲ. ಸೋಲಿಗೆ ಬೆನ್ನು ತೋರಿಸಿ ಕುಳಿತುಕೊಳ್ಳುವುದಿಲ್ಲ. ಅನ್ಯಾಯದ ವಿರುದ್ಧ ನನ್ನ ಹೋರಾಟ ನಿರಂತರವಾಗಿ ಇರಲಿದೆ ಎಂದರು ವಿನಯ.

'ನಿಜವಾಗಲೂ ಹೇಳುತ್ತೇನೆ. ನಾನು ಎಂದೂ ದುಡ್ಡಿನ ಹಿಂದೆ ಬಿದ್ದಿಲ್ಲ. ಸಾಲ ಮಾಡಿ ಕಳೆದ ಚುನಾವಣೆ ಎದುರಿಸಿದ್ದೇನೆ. ಎಷ್ಟೋ ಜನ ವಿನಯ ಹಣ ಮಾಡಿದ್ದಾನೆ ಅಂದುಕೊಂಡಿರುವುದು ನನಗೆ ಗೊತ್ತು. ಆನೆ ಭಾರ ಆನೆಗೆಯೇ' ಎಂದು ಹೇಳಿದರು.

ಗ್ರಾಮೀಣ ಕ್ಷೇತ್ರದಲ್ಲಿ ನೂರಾರು ಕೋಟಿ ರೂ. ವೆಚ್ಚದ ಕಾಮಗಾರಿ ಮಾಡಿದ್ದೇನೆ. ಇನ್ನೂ 65ಕೋಟಿ ರೂ. ದುಡ್ಡು ಖಜಾನೆಯಲ್ಲಿದ್ದು ಕಾಮಗಾರಿ ಆರಂಭವಾಗಬೇಕಿದೆ. ಜಾತಿ, ಅಂತಸ್ತು ನೋಡದೇ ಪ್ರತಿಯೊಬ್ಬರಿಗೂ ಸಹಾಯ ಮಾಡಿದ್ದೇನೆ. ನಾನು ಸೋತಿರುವುದು ನನಗೆ ದುಖಃವಿಲ್ಲ. ಆದರೆ, ಮಾಜಿ ಸಿಎಂ ಸಿದ್ದರಾಮಯ್ಯ ಮಾಡಿದ ಕೆಲಸವನ್ನು ಜನ ಗುರುತಿಸಲಿಲ್ಲವಲ್ಲ ಎಂಬ ನೋವು ಇದೆ ಎಂದರು.

ಒಳಹೊಡೆತದಿಂದ ಸೋಲು

ಪಾಲಿಕೆ ಸದಸ್ಯ ಸುಭಾಷ ಸಿಂಧೆ ಮಾತನಾಡಿ, ಕಳೆದ ಚುನಾವಣೆಯಲ್ಲಿ ನಮ್ಮ ಕೆಲವರಿಂದ ಶೋ ಮಾತ್ರ ಆಯಿತು. ಆದರೆ, ಮತದಾರರ ಮನ ಮುಟ್ಟುವ ಕೆಲಸ ಆಗಲಿಲ್ಲ. ಏನೆಲ್ಲ ಅಭಿವೃದ್ಧಿ ಮಾಡಿದ ಸಚಿವರಿಗೆ ಸೋಲು ಹೇಗಾಯಿತು ಎಂಬುದನ್ನು ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕು. ಒಳ ಹೊಡೆತದಿಂದ ನಾವು ಸೋತಿದ್ದೇವೆ. ಮುಂದೆ ಹೀಗಾಗಬಾರದು. ಕಾಂಗ್ರೆಸ್‌ ಹೈಕಮಾಂಡ್‌ ವಿನಯ ಕುಲಕರ್ಣಿ ಅವರನ್ನು ಎಂಎಲ್‌ಸಿ ಮಾಡುವ ವಿಶ್ವಾಸವಿದೆ ಎಂದರು.

ಎಪಿಎಂಸಿ ಅಧ್ಯಕ್ಷ ಸಿದ್ದಣ್ಣ ಪ್ಯಾಟಿ ಮಾತನಾಡಿ, ವಿನಯ ಸೋಲು ಕಾರ್ಯಕರ್ತರ ಸೋಲು. ಇದು ಮುಂದಿನ ನಮ್ಮ ಗೆಲುವಾಗಬೇಕು. ಸರಕಾರದಲ್ಲಿ ಅವರಿಗೆ ಸ್ಥಾನಮಾನ ಸಿಗುವ ವಿಶ್ವಾಸವಿದೆ ಎಂದರು.

ಎಸ್‌.ಎಸ್‌. ಫೀರಜಾಧೆ, ಕಿತ್ತೂರ ಸಂಸ್ಥಾನ ಹಾಳಾಗಲು ಕುತಂತ್ರ ಹೇಗೆ ಕಾರಣವೋ ವಿನಯ ಸೋಲಿಗೂ ಕುತಂತ್ರವೇ ಕಾರಣ ಎಂದರು.

ಹು-ಧಾ ಮಹಾನಗರ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಅಲ್ತಾಫ್‌ ಹಳ್ಳೂರ, ಮುಖಂಡರಾದ ಈಶ್ವರ ಶಿವಳ್ಳಿ, ಶಾಂತಮ್ಮ ಗುಜ್ಜಳ ಮಾತನಾಡಿದರು. ಅನ್ವರ ಮುಧೋಳ, ಯಾಸೀನ ಹಾವೇರಪೇಟ, ನಿಂಗಪ್ಪ ಘಾಟೀನ, ಶಿವಶಂಕರ ಹಂಪಣ್ಣವರ, ಕಲ್ಲಪ್ಪ ಪುಡಕಲಕಟ್ಟಿ, ರೇಣುಕಾ ಕಳ್ಳಿಮನಿ, ಮಲ್ಲಮ್ಮ ಗೌಡರ ಸೇರಿದಂತೆ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ