ಆ್ಯಪ್ನಗರ

ಕವಿವಿಗೆ ಪರೀಕ್ಷಾ ಶುಲ್ಕ ನೀಡದ ಸರಕಾರ!

ನಿಜಗುಣಿ ದಿಂಡಲಕೊಪ್ಪ ಧಾರವಾಡ: ಅನುದಾನ ಕೊರತೆ ನೆಪ ಹೇಳುತ್ತಿರುವ ಸರಕಾರ ಎಸ್‌ಸಿ/ಎಸ್‌ಟಿ, ಪ್ರವರ್ಗ 1 ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕ ಪಾವತಿಗೆ ಹಿಂದೇಟು ಹಾಕುತ್ತಿದೆ. ಕಳೆದ ನಾಲ್ಕು ವರ್ಷಗಳಿಂದ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಪಾವತಿಸಬೇಕಾದ ಕೋಟ್ಯಂತರ ರೂ. ಪರೀಕ್ಷಾ ಶುಲ್ಕ ಬಾಕಿ ಉಳಿಸಿಕೊಂಡು ವಿವಿ ಅಭಿವೃದ್ಧಿಗೆ ಬರೆ ಎಳೆದಿದೆ.

Vijaya Karnataka 5 Jul 2019, 5:00 am
ನಿಜಗುಣಿ ದಿಂಡಲಕೊಪ್ಪ ಧಾರವಾಡ: ಅನುದಾನ ಕೊರತೆ ನೆಪ ಹೇಳುತ್ತಿರುವ ಸರಕಾರ ಎಸ್‌ಸಿ/ಎಸ್‌ಟಿ, ಪ್ರವರ್ಗ 1 ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕ ಪಾವತಿಗೆ ಹಿಂದೇಟು ಹಾಕುತ್ತಿದೆ. ಕಳೆದ ನಾಲ್ಕು ವರ್ಷಗಳಿಂದ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಪಾವತಿಸಬೇಕಾದ ಕೋಟ್ಯಂತರ ರೂ. ಪರೀಕ್ಷಾ ಶುಲ್ಕ ಬಾಕಿ ಉಳಿಸಿಕೊಂಡು ವಿವಿ ಅಭಿವೃದ್ಧಿಗೆ ಬರೆ ಎಳೆದಿದೆ.
Vijaya Karnataka Web govt not giving exam fee to poet
ಕವಿವಿಗೆ ಪರೀಕ್ಷಾ ಶುಲ್ಕ ನೀಡದ ಸರಕಾರ!


ವಿವಿ ಅಧೀನದಲ್ಲಿರುವ ಸ್ನಾತಕ, ಸ್ನಾತಕೋತ್ತರ ಪದವಿ ಕಾಲೇಜುಗಳಲ್ಲಿ ಓದುತ್ತಿರುವ ಎಸ್‌ಸಿ/ಎಸ್‌ಟಿ, ಪ್ರವರ್ಗ-1 ವಿದ್ಯಾರ್ಥಿಗಳಿಗೆ ಸರಕಾರ ಪರೀಕ್ಷಾ ಶುಲ್ಕದಿಂದ ವಿನಾಯಿತಿ ನೀಡಿದೆ. ವಿದ್ಯಾರ್ಥಿಗಳು ನೀಡಬೇಕಾದ ಈ ಶುಲ್ಕವನ್ನು ಸರಕಾರ ಪಾವತಿಸುತ್ತ ಬಂದಿದೆ. ಆದರೆ, 2015-16ನೇ ಸಾಲಿನಿಂದ ಇಲ್ಲಿಯವರೆಗೆ ಸರಕಾರ ನಯಾಪೈಸೆ ಹಣ ನೀಡದೆ ನಿರ್ಲಕ್ಷ್ಯ ತೋರಿದೆ. ಇದರಿಂದ ಈ ಹಣ ಬಳಸಿಕೊಂಡು ಪರೀಕ್ಷಾ ವ್ಯವಸ್ಥೆ ಸುಧಾರಣೆ ಹಾಗೂ ನಾನಾ ಅಭಿವೃದ್ಧಿ ಕೈಗೊಳ್ಳಬೇಕೆಂಬ ವಿವಿ ಆಶಯಕ್ಕೆ ಆರ್ಥಿಕ ಪೆಟ್ಟು ಬಿದ್ದಂತಾಗಿದೆ.

20 ಕೋಟಿಗೂ ಹೆಚ್ಚು ಬಾಕಿ?: ಎಸ್‌ಸಿ, ಎಸ್‌ಟಿ ವರ್ಗದ ಬಿಎ/ಬಿಕಾಂ ವಿದ್ಯಾರ್ಥಿಗಳಿಗೆ (ಪ್ರತಿ ಸೆಮಿಸ್ಟರ್‌) 715 ರೂ. ಪಿಜಿ ವಿದ್ಯಾರ್ಥಿಗಳಿಗೆ 605ರಿಂದ 785 ರೂ. ವರೆಗೆ ಪರೀಕ್ಷಾ ಶುಲ್ಕವನ್ನು ಸರಕಾರ ಕಾಲೇಜುಗಳ ಪ್ರಾಚಾರ್ಯರ ಖಾತೆಗಳಿಗೆ ಪಾವತಿಸಬೇಕು. ಅವರ ಮೂಲಕ ಅದು ವಿಶ್ವವಿದ್ಯಾಲಯದ ಖಜಾನೆ ಸೇರಲಿದೆ. ಹೀಗೆ 2015-16ನೇ ಸಾಲಿನಲ್ಲಿ ಸರಕಾರ 11.70 ಕೋಟಿ ರೂ. ಪಾವತಿಸಬೇಕಿತ್ತು. ಆದರೆ, 2.35 ಕೋಟಿ ರೂ. ಮಾತ್ರ ನೀಡಿ 9.35 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ.

ಅದೇ ರೀತಿ 2016-17ನೇ ಸಾಲಿನಲ್ಲಿ 4.52 ಕೋಟಿ ರೂ. ಬಾಕಿ ಇದೆ. 2017-18, 2018-19ನೇ ಸಾಲಿನ ಆಡಿಟ್‌ ಆಗದ ಹಿನ್ನೆಲೆಯಲ್ಲಿ ಈ ಅವಧಿಯ ಬಾಕಿ ಮೊತ್ತದ ಲೆಕ್ಕ ಗೊತ್ತಾಗಿಲ್ಲ. ಹೀಗೆ ನಾಲ್ಕು ವರ್ಷಗಳ ಅವಧಿಯಲ್ಲಿ ಸಾವಿರಾರು ವಿದ್ಯಾರ್ಥಿಗಳ ಅಂದಾಜು 20 ಕೋಟಿ ರೂ. ಗೂ ಹೆಚ್ಚು ಹಣವನ್ನು ಸರಕಾರ ಕೊಡಬೇಕಿದೆ.

ಪ್ರಾಚಾರ್ಯರಿಗೆ ಪತ್ರ: 2015-16 ಹಾಗೂ 2016-17ನೇ ಸಾಲಿನ ಆಡಿಟ್‌ ವೇಳೆ ಈ ವಿಷಯ ಚರ್ಚೆಗೆ ಬಂದಿದೆ. ಇಷ್ಟೊಂದು ಹಣವನ್ನು ಬಾಕಿ ಉಳಿಸಿಕೊಂಡಿದ್ದು ಏಕೆ? ದುಡ್ಡು ಇಲ್ಲದೇ ನೀವು ಪರೀಕ್ಷೆ ಹೇಗೆ ನಡೆಸುತ್ತಿದ್ದೀರಿ? ಅದಕ್ಕೆ ಯಾವ ಅನುದಾನ ಬಳಸಲಾಗುತ್ತಿದೆ? ವಿವಿ ಅಭಿವೃದ್ಧಿಗೆ ಇದು ಕುಂಠಿತವಾಗಲ್ಲವೇ ಎಂದು ತಕರಾರು ತೆಗೆದಿರುವ ಲೆಕ್ಕಪರಿಶೋಧಕರು ಕವಿವಿ ಆಡಳಿತ ಮಂಡಳಿಗೆ ಸ್ಪಷ್ಟೀಕರಣ ಕೇಳಿದ್ದಾರೆ.

ಹೀಗಾಗಿ ಇದೀಗ ಸಂಬಂಧಿಸಿದ ಎಲ್ಲ ಕಾಲೇಜು ಪ್ರಾಚಾರ್ಯರಿಗೆ ಪತ್ರ ಬರೆದಿರುವ ಕವಿವಿ, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಿ ಬಾಕಿ ಹಣ ಪಾವತಿಸಲು ಆದ್ಯತೆ ನೀಡಬೇಕು ಎಂದು ಸೂಚನೆ ನೀಡಿದೆ. ಸರಕಾರಕ್ಕೂ ಬಾಕಿ ಮೊತ್ತ ನೀಡುವಂತೆ ವಿನಂತಿಸಿಕೊಂಡಿದೆ ಎಂದು ಕವಿವಿ ಹಿರಿಯ ಅಧಿಕಾರಿಗಳು 'ವಿಕ'ಕ್ಕೆ ತಿಳಿಸಿದ್ದಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ