ಆ್ಯಪ್ನಗರ

ಹಮಾಲರ ಪ್ರತಿಭಟನೆ, ಎಪಿಎಂಸಿ ವಹಿವಾಟು ಬಂದ್‌

ಹುಬ್ಬಳ್ಳಿ: ಆಶ್ರಯ ಮನೆ, ಪಿಂಚಣಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಹಮಾಲರು ಮಂಗಳವಾರ ಮುಷ್ಕರ ನಡೆಸಿದ ಪರಿಣಾಮ ಅಮರಗೋಳ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ಸಂಪೂರ್ಣ ಸ್ಥಗಿತಗೊಂಡಿತ್ತು.

ವಿಕ ಸುದ್ದಿಲೋಕ 22 Nov 2017, 5:00 am

ಹುಬ್ಬಳ್ಳಿ: ಆಶ್ರಯ ಮನೆ, ಪಿಂಚಣಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಹಮಾಲರು ಮಂಗಳವಾರ ಮುಷ್ಕರ ನಡೆಸಿದ ಪರಿಣಾಮ ಅಮರಗೋಳ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ಸಂಪೂರ್ಣ ಸ್ಥಗಿತಗೊಂಡಿತ್ತು.

ಇದೇ ವೇಳೆ, ಬೆಳಗಾವಿ ಅಧಿವೇಶನದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲು 2000ಕ್ಕೂ ಹೆಚ್ಚು ಹಮಾಲರು ಹುಬ್ಬಳ್ಳಿಯಿಂದ ಬೆಳಗಾವಿ ಸುವರ್ಣಸೌಧಕ್ಕೆ ತೆರಳಿದರು. ಹಮಾಲರ ಮುಷ್ಕರದಿಂದ ಎಪಿಎಂಸಿಯ ಬಹುತೇಕ ಅಂಗಡಿಗಳು ಮುಚ್ಚಿದ್ದವು. ಹೀಗಾಗಿ ಧಾರವಾಡ, ಹಾವೇರಿ, ವಿಜಯಪುರ, ಬೆಳಗಾವಿ, ಬಾಗಲಕೋಟ ಜಿಲ್ಲೆಗಳಿಂದ ಈರುಳ್ಳಿ, ಶೇಂಗಾ, ಹೆಸರು, ಉದ್ದು, ಗೋವಿನ ಜೋಳ ಮಾರಾಟ ಮಾಡಲು ಬಂದಿದ್ದ ರೈತರು ಪರದಾಡಬೇಕಾಯಿತು.

ಸೋಯಾಬಿನ್‌, ಹೆಸರು, ಅಲಸಂದಿ, ಗೋವಿನ ಜೋಳ, ಉದ್ದು, ಶೇಂಗಾ ಸೇರಿದಂತೆ ಬಹಳಷ್ಟು ಬೆಳೆಗಳ ದರ ಕುಸಿದಿದ್ದರಿಂದ ಕಂಗಾಲಾದ ರೈತರಿಗೆ ಮಾರುಕಟ್ಟೆ ಬಂದ್‌ ಆಗಿರುವುದು ಗಾಯದ ಮೇಲೆ ಬರೆ ಎಳೆದಂತಾಗಿತ್ತು.

ಸೋಯಾಬಿನ್‌ಗೆ ಮೊದಲೇ ಬೆಲೆ ಕಡಿಮೆ ಇದೆ. ಮಾರಿಕೊಂಡು ಹೋದರಾಯಿತು ಎಂದು ಬಂದರೆ ಮಾರುಕಟ್ಟೆ ಬಂದ್‌ ಆಗಿದೆ. ನಷ್ಟದಲ್ಲೇ ಸೋಯಾಬಿನ್‌ ಮಾರುವ ಪರಿಸ್ಥಿತಿ ಇರುವಾಗ ಮಾರುಕಟ್ಟೆಯಲ್ಲಿ 2-3 ದಿನ ಉಳಿಯುವುದರಿಂದ ಖರ್ಚು ಹೆಚ್ಚಾಗಿ ಮತ್ತಷ್ಟು ನಷ್ಟ ಅನುಭವಿಸುವಂತಾಗಿದೆ ಎನ್ನುತ್ತಾರೆ ಹಾವೇರಿಯ ರೈತ ಶಿವಾನಂದ ಪೂಜಾರ.

ಪ್ರತಿಭಟನೆಯಿಂದ ರೈತರಿಗೆ ನಷ್ಟ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬೇಡಿಕೆಗಾಗಿ ಪ್ರತಿಭಟಿಸುವುದು ಸಹಜ. ಆದರೆ, ನಮ್ಮ ಪ್ರತಿಭಟನೆ ರೈತರಿಗೆ ತೊಂದರೆಯಾಗಬಾರದು. ಮಾರುಕಟ್ಟೆಯಲ್ಲಿ ವ್ಯಾಪಾರಸ್ಥರೇ ಕಡಿಮೆ ಮತ್ತು ಪ್ರತಿಯೊಂದು ಬೆಳೆಯ ದರ ಕುಸಿತವಾಗಿದ್ದರಿಂದ ರೈತ ಸಂಕಷ್ಟದಲ್ಲಿದ್ದಾನೆ. ಇಂತಹ ಸಂದರ್ಭದಲ್ಲಿ ಪ್ರತಿಭಟನೆಯ ಅಗತ್ಯ ಇರಲಿಲ್ಲ ಎನ್ನುತ್ತಾರೆ ಎಪಿಎಂಸಿ ಅಧ್ಯಕ್ಷ ಈಶ್ವರಪ್ಪ ಕಿತ್ತೂರ.

ಹಮಾಲರು ಪ್ರತಿಭಟನೆ ಮಾಡುತ್ತೇವೆ ಎಂದಾಗ, ಮಾರುಕಟ್ಟೆಯಲ್ಲಿ 2000ಕ್ಕೂ ಹೆಚ್ಚು ಹಮಾಲರು ಕೆಲಸ ಮಾಡುತ್ತಾರೆ. ಅದರಲ್ಲಿ ಅರ್ಧದಷ್ಟು ಜನ ಪ್ರತಿಭಟನೆಗೆ ಹೋಗಿ ಉಳಿದವರು ಕೆಲಸಕ್ಕೆ ಹಾಜರಾಗಿ ಎಂದು ಸಲಹೆ ನೀಡಿದ್ದೆ ಆದರೆ, ಅವರು ಅದಕ್ಕೆ ಒಪ್ಪದೆ ಮಾರುಕಟ್ಟೆ ಬಂದ್‌ ಮಾಡಿದ್ದಾರೆ ಎಂದು ತಿಳಿಸಿದರು.

ಈ ಮಾರುಕಟ್ಟೆಯಲ್ಲಿ ಬೆಳೆ ಹೊತ್ತುಕೊಂಡು ಬಂದ ರೈತ ಬರಿಗೈಯಲ್ಲಿ ಮರಳಿ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಡಿಮೆ ವ್ಯಾಪಾರಸ್ಥರು ಇರುವುದರಿಂದ ರೈತರ ಬೆಳೆಗೆ ಬೆಲೆಯೇ ಇಲ್ಲದಂತಾಗಿದೆ. ಪ್ರತಿಭಟನೆಯಿಂದ ರೈತನಿಗೆ ಅನ್ಯಾಯವಾಗುತ್ತಿದೆ ಹೊರತು ಬೇರೆ ಯಾರಿಗೆ ನಷ್ಟವಾಗುತ್ತಿಲ್ಲ ಎಂದು ಆರೋಪಿಸಿದರು.

ಸರಕಾರದ ಸ್ಪಂದನೆ ಇಲ್ಲ: ಅನೇಕ ವರ್ಷದಿಂದ ಹಮಾಲರ ಸಂಘದ ಬೇಡಿಕೆ ಈಡೇರಿಸುವಂತೆ ಮನವಿ ಸಲ್ಲಿಸುತ್ತಾ ಬಂದರೂ ಸರಕಾರ ನಮಗೆ ಸ್ಪಂದಿಸುತ್ತಿಲ್ಲ. ಆದ್ದರಿಂದ ಒಂದು ದಿನ ಮಾರುಕಟ್ಟೆ ಬಂದ್‌ ಮಾಡಿಕೊಂಡು ಬೆಳಗಾವಿ ಸುವರ್ಣಸೌಧದ ಎದುರು ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ನ.22ರಂದು ಎಂದಿನಂತೆ ಕೆಲಸಕ್ಕೆ ಹಾಜರಾಗುತ್ತೇವೆ ಎನ್ನುತ್ತಾರೆ ಎಪಿಎಂಸಿ ಹಮಾಲರ ಸಂಘದ ಅಧ್ಯಕ್ಷ ಹನುಮಂತ ಅಂಬಿಗೇರ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ