ಆ್ಯಪ್ನಗರ

ಜನರಿಂದ ಅಂತರ ಕಾಯ್ದುಕೊಂಡ ‘ಅಂತರಾ’

ಹುಬ್ಬಳ್ಳಿ : ಜನಸಂಖ್ಯೆ ಬೆಳವಣಿಗೆ ನಿಯಂತ್ರಣ ಮತ್ತು ಕುಟುಂಬ ಯೋಜನೆಗೆ ಪೂರಕವಾಗಿ ಮಹಿಳೆಯರಿಗೆ ಸಹಾಯ ಒದಗಿಸಲು ಕೇಂದ್ರ, ರಾಜ್ಯ ಸರಕಾರ ಆರಂಭಿಸಿರುವ 'ಅಂತರಾ' ಉಚಿತ ಯೋಜನೆಯು ಜಿಲ್ಲೆ ಆರೋಗ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ, ನಿರಾಸಕ್ತಿಯಿಂದಾಗಿ ನಿಂತ ನೀರಾಗಿದೆ.

Vijaya Karnataka 29 May 2019, 5:00 am
ಹುಬ್ಬಳ್ಳಿ : ಜನಸಂಖ್ಯೆ ಬೆಳವಣಿಗೆ ನಿಯಂತ್ರಣ ಮತ್ತು ಕುಟುಂಬ ಯೋಜನೆಗೆ ಪೂರಕವಾಗಿ ಮಹಿಳೆಯರಿಗೆ ಸಹಾಯ ಒದಗಿಸಲು ಕೇಂದ್ರ, ರಾಜ್ಯ ಸರಕಾರ ಆರಂಭಿಸಿರುವ 'ಅಂತರಾ' ಉಚಿತ ಯೋಜನೆಯು ಜಿಲ್ಲೆ ಆರೋಗ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ, ನಿರಾಸಕ್ತಿಯಿಂದಾಗಿ ನಿಂತ ನೀರಾಗಿದೆ.
Vijaya Karnataka Web injection


ಇದರಿಂದ ಬಡ ಮಹಿಳೆಯರು ದುಬಾರಿ ಹಣ ತೆರಬೇಕಾಗಿದೆ. ಅಷ್ಟಕ್ಕೂ ಮಹಿಳೆಯರಿಗೆ ಇಂಥದ್ದೊಂದು ಯೋಜನೆ ಇದೆ ಎಂದು ತಿಳಿಸಲು ಕೂಡ ಇಲಾಖೆ ಅಧಿಕಾರಿಗಳು ಬೇಜವಾಬ್ದಾರಿ ವಹಿಸಿದ್ದಾರೆ. ಹೀಗಾಗಿ ಸರಕಾರದ ಯೋಜನೆಗಳು ನಿರೀಕ್ಷಿತ ಮಟ್ಟದಲ್ಲಿ ಜನರಿಗೆ ತಲುಪುತ್ತಿಲ್ಲ ಎಂಬ ಆರೋಪಗಳಿಗೆ ಮತ್ತಷ್ಟು ಪುಷ್ಠಿ ನೀಡುವಂತಾಗಿದೆ.

ಹೌದು, ಅನಪೇಕ್ಷಿತ ಮತ್ತು ಎರಡು ಅಥವಾ ಮೂರನೇ ಮಗುವಿನ ನಡುವಣ ಅಂತರ ಕಾಯ್ದುಕೊಳ್ಳಲು ಗರ್ಭಧಾರಣೆ ತಡೆಗೆ 'ಅಂತರಾ' ಯೋಜನೆಯನ್ನು ರಾಜ್ಯ ಸರಕಾರ 2017ರಲ್ಲೇ ಆರಂಭಿಸಿದೆ. ಈ ಯೋಜನೆಯಡಿ ಗರ್ಭಧಾರಣೆ ತಡೆಗೆ ಉಚಿತವಾಗಿ 'ಮೆಡ್ರಾಸ್ಕಿ ಪೊ›ಜೆಸ್ಟರನ್‌ ಅಸಿಟೇಟ್‌' (ಎಂಪಿಎ) ಹಾರ್ಮೋನ್‌ ಇಂಜೆಕ್ಷ ನ್‌ ನೀಡಲಾಗುತ್ತದೆ. ಈ ಇಂಜೆಕ್ಷನ್‌ ಮಾರುಕಟ್ಟೆಯಲ್ಲಿ 300-500 ರೂ.ಗಳವರೆಗೂ ದೊರೆಯತ್ತದೆ. ಇಷ್ಟೊಂದು ಹಣ ವ್ಯಯಿಸುವುದು ಸಾಮಾನ್ಯರಿಗೆ ಕಷ್ಟಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಸರಕಾರ ಉಚಿತವಾಗಿ ಪೂರೈಸುತ್ತಿದೆ. ಆದರೆ, ಇಲಾಖೆ ಅಧಿಕಾರಿಗಳು ಇಂಥದ್ದೊಂದು ಯೋಜನೆ ಇದೆ ಎಂದು ಸಾಮಾನ್ಯರಿಗೆ ತಿಳಿಸುವ ಗೋಜಿಗೆ ಹೋಗಿಲ್ಲ. ಹೀಗಾಗಿ ಯೋಜನೆಯು ಕೆಲವರಿಗಷ್ಟೇ ಸೀಮಿತವಾಗಿದೆ ಎಂದು ಸಾರ್ವಜನಿಕರು ಆರೋಪಿಸುತ್ತಾರೆ.

22 ತಿಂಗಳಲ್ಲಿ 1600 ಇಂಜೆಕ್ಷನ್‌

''ಕೇಂದ್ರ ಪ್ರಾಯೋಜಿತ 'ಅಂತಾರಾ'ಯೋಜನೆಯನ್ನು ರಾಜ್ಯ ಸರಕಾರ 2017ರ ಜುಲೈ 19 ರಂದು ಅಧಿಕೃತವಾಗಿ ಜಾರಿಗೊಳಿಸಿದೆ. ಇಲಾಖೆಯ ಮೂಲಗಳ ಪ್ರಕಾರ 22 ತಿಂಗಳ ಅವಧಿಯಲ್ಲಿ ಜಿಲ್ಲೆಯಲ್ಲಿ 1600 ರಷ್ಟು ಜನರಿಗೆ ಮಾತ್ರ ಈ ಯೋಜನೆ ಲಾಭ ತಲುಪಿದೆ. ಕಿಮ್ಸ್‌ದಲ್ಲಿ ತಿಂಗಳಿಗೆ 4-5 ಮಹಿಳೆಯರು ಮಾತ್ರ ಇಂಜೆಕ್ಷನ್‌ ಪಡೆಯುತ್ತಾರೆ'' ಎಂದು ನಿರ್ದೇಶಕ ಡಾ.ರಾಮಲಿಂಗಪ್ಪ ಅಂಟರತಾನಿ ಹೇಳುತ್ತಾರೆ.

ಜಿಲ್ಲಾ ಆರೋಗ್ಯ ಇಲಾಖೆ ಪ್ರಕಾರ, 2017-18ರಲ್ಲಿ 370, 18-19ರಲ್ಲಿ 962 ಹಾಗೂ 2019-20ರ ಮೇ ತಿಂಗಳವರೆಗೆ 131 ಮಹಿಳೆಯರಿಗೆ ಎಂಪಿಎ ಇಂಜೆಕ್ಷನ್‌ ನೀಡಲಾಗಿದೆ. ಈ ಬಗ್ಗೆ ಅಧಿಕೃತವಾಗಿ ಮಾಹಿತಿ ಪಡೆಯಲು ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ದೊಡ್ಡಮನಿ ಅವರ ಮೊಬೈಲ್‌ಗೆ ಕರೆ ಮಾಡಿದರೂ ಸ್ವೀಕರಿಸಿಲ್ಲ. ಎಂಪಿಎ ಇಂಜೆಕ್ಷನ್‌ಗಳನ್ನು ಪ್ರಾಥಮಿಕ/ಸಮುದಾಯ ಆರೋಗ್ಯ ಕೇಂದ್ರ ಹಾಗೂ ಕಿಮ್ಸ್‌ದಲ್ಲಿ ಉಚಿತವಾಗಿ ಪೂರೈಸಲಾಗಿದ್ದು, ಎಲ್ಲ ಕಡೆಗಳಲ್ಲೂ ಸಂಗ್ರಹವಿದೆ ಎಂದು ಅಧಿಕಾರಿಯೊಬ್ಬರು ಹೇಳುತ್ತಾರೆ.

ಅಂತರಾ ಸುರಕ್ಷಿತವೇ?

''ಅನಗತ್ಯ ಗರ್ಭಧಾರಣೆ ತಡೆಗಟ್ಟಲು ಇತರ ವಿಧಾನಗಳಿಗೆ ಹೋಲಿಸಿದರೆ ಎಂಪಿಎ ಇಂಜೆಕ್ಷ ನ್‌ ತುಂಬಾ ಸುರಕ್ಷಿತವಾಗಿದೆ. ಯಾವುದೇ ಅಡ್ಡ ಪರಿಣಾಮಗಳಿರುವುದಿಲ್ಲ. ಋುತುಚಕ್ರದ ಸಮಯದಲ್ಲಿ ನೋವನ್ನು ಕಡಿಮೆ ಮಾಡುತ್ತದೆ, ಭಾರಿ ರಕ್ತಸ್ರಾವದಿಂದ ಬಳಲುತ್ತಿದ್ದರೆ ನಿಯಂತ್ರಣಕ್ಕೆ ಬರಲಿದೆ. ಅಲ್ಲದೇ ಗರ್ಭಾಶಯ ಕ್ಯಾನ್ಸರ್‌ ಅಪಾಯವನ್ನು ಕಡಿಮೆ ಮಾಡಲಿದೆ '' ಎಂದು ಕಿಮ್ಸ್‌ದಲ್ಲಿ ಸ್ತ್ರೀರೋಗ ಮತ್ತು ಪ್ರಸೂತಿ ವೈದ್ಯರಾಗಿರುವ ಡಾ. ವೆಂಕಟೇಶ ಹೇಳುತ್ತಾರೆ.

''ಈಗಾಗಲೇ ಕಾಪರ್‌-ಟಿ, ಕಾಂಡೋಮ್‌, ಮಾಲಾ-ಡಿ ಅಂತಹ ಗರ್ಭ ನಿರೋಧಕಗಳನ್ನು ಬಳಸಲಾಗುತ್ತಿದೆ. ಕೆಲವರಿಗೆ ಕಾಪರ್‌-ಟಿ ಕಳಚಿ ಬೀಳುವ ಸಾಧ್ಯತೆ ಹೆಚ್ಚು. ಕಾಂಡೋಮ್‌ ಅಷ್ಟೊಂದು ಸುರಕ್ಷಿತವಲ್ಲ. ಇನ್ನು ಮಾತ್ರೆಗಳಿಂದ ಕೆಲ ಅಡ್ಡ ಪರಿಣಾಮ ಸಾಧ್ಯತೆಗಳು ಹೆಚ್ಚು. ಹೀಗಾಗಿ ನೋವು ರಹಿತ ಮತ್ತು ಹೆಚ್ಚು ಸುರಕ್ಷತೆಗೆ ಪೊ›ಜೆಸ್ಟೋರೋನ್‌ ಇಂಜೆಕ್ಷನ್‌ ಹೆಚ್ಚು ಪ್ರಯೋಜನ ನೀಡಲಿದೆ. ಆದರೆ, ಋುತುಚಕ್ರ ಮಾತ್ರ ನಿಯಮಿತವಾಗಿ ಬರುವುದಿಲ್ಲ ಎಂಬುದೊಂದೆ ಈ ಇಂಜೆಕ್ಷನ್‌ನ ಸಮಸ್ಯೆ. ಈ ಬಗ್ಗೆ ಮಹಿಳೆಯರಿಗೆ ಸ್ಪಷ್ಟವಾಗಿ ತಿಳಿ ಹೇಳಿದ ಬಳಿಕವೇ ಇಂಜೆಕ್ಷನ್‌ ನೀಡಲಾಗುತ್ತದೆ'' ಎನ್ನುತ್ತಾರೆ ಡಾ. ವೆಂಕಟೇಶ.

ಇಂಜೆಕ್ಷನ್‌ ಯಾವಾಗ?

ಋುತುಚಕ್ರ ಆದ ಐದು ದಿನಗಳೊಳಗೆ ಇಂಜೆಕ್ಷನ್‌ ಪಡೆಯಬಹುದು. ಮತ್ತೆ ಮೂರು ತಿಂಗಳಾದ ಬಳಿಕವೇ ಅದೇ ಅವಧಿಯಲ್ಲಿ ಕಡ್ಡಾಯವಾಗಿ ಪಡೆಯಬೇಕು. ನಿಯಮಿತವಾಗಿ ಇಂಜೆಕ್ಷನ್‌ ಮಾಡಿಸಿಕೊಳ್ಳುವುದರಿಂದ ದುಷ್ಪರಿಣಾಮ ಬೀರುವುದಿಲ್ಲ ಎಂದು ಹೇಳುತ್ತಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ