ಆ್ಯಪ್ನಗರ

ಹುಬ್ಬಳ್ಳಿಯಿಂದಲೇ ಮೋದಿ ಪ್ರಚಾರ ರ‍್ಯಾಲಿ ಆರಂಭ: ಫೆ.10ರಂದು ಬೃಹತ್ ಸಮಾವೇಶ, 3 ಲಕ್ಷ ಜನ ನಿರೀಕ್ಷೆ

ಹುಬ್ಬಳ್ಳಿಯಿಂದಲೇ ರಾಜ್ಯದಲ್ಲಿ ಲೋಕಸಭೆ ಚುನಾವಣೆ ಪ್ರಚಾರ ರ‍್ಯಾಲಿ ಆರಂಭಿಸಲಿರುವ ಪ್ರಧಾನಿ ನರೇಂದ್ರ ಮೋದಿ, ಫೆ. 10ರಂದು ನಗರಕ್ಕೆ ಆಗಮಿಸಲಿದ್ದಾರೆ.

Vijaya Karnataka 4 Feb 2019, 8:38 am
ಹುಬ್ಬಳ್ಳಿ: ಹುಬ್ಬಳ್ಳಿಯಿಂದಲೇ ರಾಜ್ಯದಲ್ಲಿ ಲೋಕಸಭೆ ಚುನಾವಣೆ ಪ್ರಚಾರ ರ‍್ಯಾಲಿ ಆರಂಭಿಸಲಿರುವ ಪ್ರಧಾನಿ ನರೇಂದ್ರ ಮೋದಿ, ಫೆ. 10ರಂದು ನಗರಕ್ಕೆ ಆಗಮಿಸಲಿದ್ದಾರೆ.
Vijaya Karnataka Web modi


'ಮತ್ತೊಮ್ಮೆ ಮೋದಿ, ಮತ್ತೊಮ್ಮೆ ಪ್ರಧಾನಿ' ಘೋಷವಾಕ್ಯ ಅಡಿಯಲ್ಲಿ ಚುನಾವಣೆ ಪ್ರಚಾರ ಆರಂಭಿಸಿದ್ದು, ಅಂದು ಸಂಜೆ 4ಕ್ಕೆ ನಗರದ ಹೊರವಲಯದ ಗಬ್ಬೂರ ಸಮೀಪದ ಕೆಎಲ್‌ಇ ಕಾಲೇಜ್‌ ಆವರಣದಲ್ಲಿ ಬೃಹತ್‌ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಚುನಾವಣೆ ಪ್ರಚಾರ ಉಸ್ತುವಾರಿ ಆರ್‌. ಅಶೋಕ ಸುದ್ದಿಗೋಷ್ಠಿಯಲ್ಲಿ ಭಾನುವಾರ ತಿಳಿಸಿದರು.

3 ಲಕ್ಷ ಜನ ನಿರೀಕ್ಷೆ:

''ಹುಬ್ಬಳ್ಳಿಯಲ್ಲಿ ನಡೆಯುವ ಸಮಾವೇಶದಲ್ಲಿ ಧಾರವಾಡ, ಉತ್ತರ ಕನ್ನಡ ಹಾಗೂ ಹಾವೇರಿ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಸುಮಾರು 3 ಲಕ್ಷ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಸಿದ್ಧತೆಗಾಗಿ ಶಾಮಿಯಾನ, ವಾಹನ, ಪ್ರಚಾರ ವ್ಯವಸ್ಥೆ ಸೇರಿದಂತೆ 33 ತಂಡಗಳನ್ನು ರಚಿಸಲಾಗಿದೆ'' ಎಂದು ತಿಳಿಸಿದರು.

''2ನೇ ಸಮಾವೇಶ ಫೆ. 17ರಂದು ಕಲಬುರಗಿಯಲ್ಲಿ ಆಯೋಜಿಸಲಾಗಿದ್ದು, 3ನೇ ಸಮಾವೇಶದ ದಿನಾಂಕ ಇನ್ನೂ ಗೊತ್ತುಪಡಿಸಬೇಕಿದೆ. ಕೇಂದ್ರ ಸರಕಾರದ ಸಾಧನೆ ಮತ್ತು ಅಭಿವೃದ್ಧಿ ವಿಷಯಗಳನ್ನು ಪ್ರಸ್ತಾಪಿಸಲಾಗುತ್ತದೆ. ಫೆ. 19 ಮತ್ತು 27ರಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ ಶಾ ಈ ಭಾಗಕ್ಕೆ ಆಗಮಿಸಲಿದ್ದು, ಪ್ರಮುಖರು, ಕಾರ್ಯಕರ್ತರೊಂದಿಗೆ ಚರ್ಚಿಸಲಿದ್ದಾರೆ'' ಎಂದರು.

ಕೇಂದ್ರದ ಬಜೆಟ್‌ನ್ನು 'ಬಜೆಟ್‌ ಸಿರಿ ಕಾಂಗ್ರೆಸ್‌ಗೆ ಉರಿ' ಎಂದು ಬಣ್ಣಿಸಿದ ಅಶೋಕ, ''ಬಜೆಟ್‌ ಮಂಡನೆಯಿಂದ ಪ್ರತಿಪಕ್ಷಗಳಿಗೆ ಬಾಯಿಗೆ ಬೀಗ ಹಾಕಿದಂತಾಗಿದೆ. ಯಾರೊಬ್ಬರೂ ಚಕಾರ ಎತ್ತುತ್ತಿಲ್ಲ'' ಎಂದು ಟೀಕಿಸಿದರು.

''ರಾಜ್ಯ ಸಮ್ಮಿಶ್ರ ಸರಕಾರ ಜನರ ಪಾಲಿಗೆ ಅಕ್ಷರಶಃ ಸತ್ತಿದೆ. ಯಾವೊಬ್ಬ ಅಧಿಕಾರಿಗಳು ಕೆಲಸ ಮಾಡುತ್ತಿಲ್ಲ. ಕಾಂಗ್ರೆಸ್‌ ಧೋರಣೆಗೆ ಭ್ರಮನಿರಸನಗೊಂಡಿರುವ ಸಿಎಂ ಕುಮಾರಸ್ವಾಮಿ, ಕೆಲಸ ಮಾಡದಿದ್ದರೆ ನೇಣಿಗೆ ಹಾಕುವುದಾಗಿ ಅಧಿಕಾರಿಗಳಿಗೆ ಬೆದರಿಕೆ ಹಾಕುತ್ತಿದ್ದಾರೆ'' ಎಂದು ಛೇಡಿಸಿದರು.

ಅವಿಶ್ವಾಸ ಇಲ್ಲ:

''ರಾಜ್ಯ ಬಜೆಟ್‌ ಅಧಿವೇಶನದಲ್ಲಿ ಸರಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸುವ ವಿಚಾರ ಬಿಜೆಪಿ ಮುಂದಿಲ್ಲ. ಬಜೆಟ್‌ನ್ನು ಅಧಿಕೃತ ಸಿಎಂ ಅಥವಾ ಅನಧಿಕೃತ ಸಿಎಂ ಮಂಡಿಸುತ್ತಾರೋ ಗೊತ್ತಿಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ತಾವು ಹೇಳಿದಂತೆ ಬಜೆಟ್‌ನ್ನು ಮಂಡಿಸಬೇಕೆಂದು ಒತ್ತಡ ಹೇರುತ್ತಿದ್ದಾರೆ'' ಎಂದು ಹೇಳಿದರು.

''ರಾಜ್ಯದಲ್ಲಿ ಮತ್ತೆ ಬಿಜೆಪಿ ಸರಕಾರ ರಚಿಸುವ ಆಸೆ ಇದೆ. ಆ ಕಾಲ ಕೂಡಿ ಬರುತ್ತದೆ'' ಎನ್ನುವ ಮೂಲಕ ಸಮ್ಮಿಶ್ರ ಸರಕಾರ ಉರುಳುವ ಮುನ್ಸೂಚನೆಯನ್ನು ಅಶೋಕ ನೀಡಿದರು.

ಮಹದಾಯಿ ಸ್ಪಷ್ಟೀಕರಣ:

ಇದೇ ವೇಳೆ ಮಾತನಾಡಿದ ಶಾಸಕ ಬಸವರಾಜ ಬೊಮ್ಮಾಯಿ, ''ಮಹದಾಯಿ ವಿಚಾರದಲ್ಲಿ ರಾಜ್ಯ ಸರಕಾರ ಸ್ಪಷ್ಟತೆ ಹೊಂದಿಲ್ಲ. ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವ ಬಗ್ಗೆ ಯಾವುದೇ ತೀರ್ಮಾನ ತೆಗೆದುಕೊಳ್ಳುತ್ತಿಲ್ಲ. ಹೀಗಾಗಿ ಕೇಂದ್ರ ಸರಕಾರ ತೀರ್ಪಿನ ಅಧಿಸೂಚನೆ ಹೊರಡಿಸಿಲ್ಲ'' ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾ. ನಾಗರಾಜ, ನಾಗೇಶ ಕಲಬುರ್ಗಿ, ಈರಣ್ಣ ಜಡಿ, ಮಲ್ಲಿಕಾರ್ಜುನ ಸಾವಕಾರ ಸೇರಿದಂತೆ ಹಲವರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ