ಆ್ಯಪ್ನಗರ

ತಗ್ಗಿದ ಮಳೆ, ಪ್ರವಾಹ ಯಥಾಸ್ಥಿತಿ

ಹುಬ್ಬಳ್ಳಿ : ಉತ್ತರ ಕರ್ನಾಟಕ ಭಾಗದಲ್ಲಿ ಹಲವು ದಿನಗಳಿಂದ ಸುರಿದ ಕುಂಭದ್ರೋಣ ಮಳೆ ಉತ್ತರ ಕನ್ನಡ, ಧಾರವಾಡ, ಹಾವೇರಿ ಹಾಗೂ ಗದಗ ಜಿಲ್ಲೆಗಳಲ್ಲಿ ಶುಕ್ರವಾರ ಸ್ವಲ್ಪ ಮಟ್ಟಿಗೆ ತಗ್ಗಿದೆ. ಆದರೆ ನದಿ,ಹೊಳೆ,ಹಳ್ಳಗಳಲ್ಲಿನ ಪ್ರವಾಹದ ಸ್ಥಿತಿ ಮುಂದುವರಿದೆ.

Vijaya Karnataka 10 Aug 2019, 5:46 pm
ಹುಬ್ಬಳ್ಳಿ : ಉತ್ತರ ಕರ್ನಾಟಕ ಭಾಗದಲ್ಲಿ ಹಲವು ದಿನಗಳಿಂದ ಸುರಿದ ಕುಂಭದ್ರೋಣ ಮಳೆ ಉತ್ತರ ಕನ್ನಡ, ಧಾರವಾಡ, ಹಾವೇರಿ ಹಾಗೂ ಗದಗ ಜಿಲ್ಲೆಗಳಲ್ಲಿ ಶುಕ್ರವಾರ ಸ್ವಲ್ಪ ಮಟ್ಟಿಗೆ ತಗ್ಗಿದೆ. ಆದರೆ ನದಿ,ಹೊಳೆ,ಹಳ್ಳಗಳಲ್ಲಿನ ಪ್ರವಾಹದ ಸ್ಥಿತಿ ಮುಂದುವರಿದೆ.
Vijaya Karnataka Web reduced rainfall flooding
ತಗ್ಗಿದ ಮಳೆ, ಪ್ರವಾಹ ಯಥಾಸ್ಥಿತಿ


ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ನದಿಗಳ ಒಳಹರಿವು ಹೆಚ್ಚಳದಿಂದ ಹಲವೆಡೆ ಪ್ರವಾಹದ ಆತಂಕ ಇನ್ನೂ ಇದೆ.

ಕಾಳಿ ನದಿಗೆ ಕದ್ರಾ ಜಲಾಶಯದಿಂದ ಶುಕ್ರವಾರ ಮತ್ತೆ 2.2 ಲಕ್ಷ ಕ್ಯುಸೆಕ್‌ ನೀರು ಹೊರಬಿಡಲಾಗಿದೆ. ಗಂಗಾವಳಿಯಲ್ಲಿ ಪ್ರವಾಹದ ಸ್ಥಿತಿ ಮುಂದುವರಿದಿದೆ. ಅಂಕೋಲಾ ತಾಲೂಕಿನ ಬಹುತೇಕ ಗ್ರಾಮಗಳು ಜಲ ಸಂಕಷ್ಟದಿಂದ ಹೊರಗೆ ಬಂದಿಲ್ಲ. ತಾಲೂಕಿನ ರಾಮನಗುಳಿ ಗುಳ್ಳಾಪುರ ನಡುವಿನ ಸೇತುವೆ ಮುಳುಗಿಹೋಗಿದ್ದು ಸಂಪರ್ಕ ಕಡಿದ ಕಾರಣ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ನಡುವೆ ನಡುಗಡ್ಡೆಯಂತಾಗಿರುವ ಗ್ರಾಮಗಳಿಗೆ ಹವಾಮಾನ ವೈಪರೀತ್ಯದಿಂದಾಗಿ ಹೆಲಿಕಾಪ್ಟರ್‌ ಮೂಲಕ ಆಹಾರ ಸಾಮಗ್ರಿ ವಿತರಣೆ ಸಾಧ್ಯವಾಗಲಿಲ್ಲ. ಹೊನ್ನಾವರ-ಬೆಂಗಳೂರು ರಸ್ತೆ ಗೇರುಸೊಪ್ಪ ಸಮೀಪ ಕುಸಿದಿದ್ದು ಸಂಚಾರ ಅಸ್ತವ್ಯಸ್ತವಾಗಿದೆ. ಶಿರಸಿ ತಾಲೂಕಿನ ಭಾಶಿ ಪಂಚಾಯಿತಿ ವ್ಯಾಪ್ತಿಯ ಮೊಗಳ್ಳಿ ಸೇರಿದಂತೆ ಹಲವು ಗ್ರಾಮಗಳ ಕೃಷಿ ಭೂಮಿ ಜಲಾವೃತವಾಗಿವೆ. ವಾನಳ್ಳಿ ಸಮೀಪದ ಜಾಜಿಗುಡ್ಡೆ ಬಳಿ ಗುಡ್ಡ ಕುಸಿದಿದೆ. ಇಲ್ಲಿನ ನಾಲ್ಕು ಕುಟುಂಬಗಳನ್ನು ಸ್ಥಳಾಂತರಗೊಳಿಸುವಂತೆ ಸಹಾಯಕ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಸೂಚನೆ ನೀಡಿದ್ದಾಗಿ ಗ್ರಾಮಸ್ಥರು ತಿಳಿಸಿದ್ದಾರೆ. ನರೂರು ಸಮೀಪದ ಹೊಸ್ಕೆರೆ ಕೆರೆಯ ಒಡ್ಡು ಒಡೆದು ನೂರಾರು ಎಕರೆ ಕೃಷಿ ಭೂಮಿ ಹಾನಿಯಾಗಿದೆ. ಯಲ್ಲಾಪುರ-ಮುಂಡಗೋಡ ಮಧ್ಯದ ಶಿಡ್ಲಗುಂಡಿ ಸೇತುವೆ ನೀರಿನ ರಭಸಕ್ಕೆ ಕೊಚ್ಚಿ ಹೋಗಿದೆ.

ಧಾರವಾಡ ಜಿಲ್ಲೆಯಲ್ಲಿ ಶುಕ್ರವಾರ ಮಳೆ ಆಗೊಮ್ಮೆ , ಈಗೊಮ್ಮೆ ಬಂದು ಹೋಗುವ ಮೂಲಕ ಜಿಲ್ಲೆಯ ಜನತೆಗೆ ತುಸು ನೆಮ್ಮದಿ ತಂದಿದೆ. ಅಳ್ನಾವರ ತಾಲೂಕಿನ ಹುಲಿಕೇರಿಯ ಕೆರೆ ಉಕ್ಕಿ ಹರಿಯುತ್ತಿರುವುದರಿಂದ ಅಳ್ನಾವರ ಪಟ್ಟಣದ ತಗ್ಗು ಪ್ರದೇಶಗಳಲ್ಲಿ ವಾಸಿಸುತ್ತಿದ್ದ 700 ಕ್ಕೂ ಹೆಚ್ಚು ಜನರನ್ನು ಧಾರವಾಡ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.

ನವಲಗುಂದ ತಾಲೂಕಿನಲ್ಲಿ ಬೆಣ್ಣಿಹಳ್ಳ, ತುಪ್ಪರಿಹಳ್ಳಗಳ ನೆರೆಯ ಅಬ್ಬರ ಶುಕ್ರವಾರ ಕಡಿಮೆಯಾಗಿದೆ. ಆದರೆ ನೆರೆಯಿಂದಾಗಿ ಸಾವಿರಾರು ಎಕರೆ ಬೆಳೆ ನೀರಿಗಾಹುತಿಯಾಗಿವೆ.

ಧಾರವಾಡ ತಾಲೂಕಿನ ತೇಗೂರು, ಬೋಗೂರು, ಮುಗಳಿ, ಗರಗ, ಹಂಗರಕಿ, ಲೋಕೂರು, ಶಿಬಾರಗಟ್ಟಿ, ಯಾದವಾಡ, ಮುಳಮುತ್ತಲ, ಕಬ್ಬೇನೂರು, ಕಲ್ಲೆ , ಹಾರೋಬೆಳವಡಿ, ಪುಡಕಲಕಟ್ಟಿ, ಕರಡಿಗುಡ್ಡ, ಮರೆವಾಡ, ಕಲ್ಲೂರು ಕೊಟಬಾಗಿ, ತಡಕೋಡ, ಹೊಸಟ್ಟಿ, ಕುರುಬಗಟ್ಟಿ, ನರೇಂದ್ರ ಸೇರಿದಂತೆ ಗ್ರಾಮೀಣ ಭಾಗದಲ್ಲಿ ದಿನದಿಂದ ದಿನಕ್ಕೆ ಕುಸಿಯುತ್ತಿರುವ ಮನೆಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ಜನ ಆಶ್ರಯಕ್ಕಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಕುಂದಗೋಳ ತಾಲೂಕಿನಲ್ಲಿ ಬೆಣ್ಣಿಹಳ್ಳದ ಒಳಹರಿವೂ ಹೆಚ್ಚಾಗಿ ಹಳ್ಳದ ಅಕ್ಕ ಪಕ್ಕದ ರಸ್ತೆ ಹಾಗೂ ಗ್ರಾಮಗಳ ಮನೆಗಳಿಗೆ ನೀರು ನುಗ್ಗಿ ಜಲಾವೃತಗೊಂಡಿವೆ.

ಗದಗ ಜಿಲ್ಲೆಯಲ್ಲಿ ಮಲಪ್ರಭೆಯ ಅಬ್ಬರ ಶುಕ್ರವಾರ ಮತ್ತಷ್ಟು ಜೋರಾಗಿದ್ದು ನರಗುಂದ ಮತ್ತು ರೋಣ ತಾಲೂಕಿನಲ್ಲಿ ನೆರೆ ಭೀತಿ ಮತ್ತಷ್ಟು ಹೆಚ್ಚಿದೆ. ಜನರ ರಕ್ಷಣೆ ಪರಿಹಾರ ಕಾರ್ಯಗಳೂ ಭರದಿಂದ ಸಾಗಿವೆ. ಜಿಲ್ಲೆಯಲ್ಲಿ ಶುಕ್ರವಾರ ಮಳೆ ಸ್ವಲ್ಪ ಬಿಡುವು ನೀಡಿದರೂ ನವಿಲುತೀರ್ಥ ಜಲಾಶಯದಿಂದ 1.10 ಲಕ್ಷಕ್ಕೂ ಹೆಚ್ಚು ಕ್ಯುಸೆಕ್‌ ನೀರು ಹೊರಬಿಟ್ಟಿದ್ದರಿಂದ ನೆರೆ ಭೀತಿ ಮತ್ತಷ್ಟು ಹೆಚ್ಚಾಗಿತ್ತು. ತುಂಗಭದ್ರಾ ನದಿಯೂ ಉಕ್ಕಿ ಹರಿಯುತ್ತಿದ್ದು ಮುಂಡರಗಿ ತಾಲೂಕಿನ ನದಿ ಪಾತ್ರದ ಗ್ರಾಮಗಳಲ್ಲಿ ನೆರೆ ಭೀತಿ ಸೃಷ್ಟಿಯಾಗಿದೆ.

ಮನೆಯ ಛಾವಣಿ ಕುಸಿದು ಸೊರಟೂರಿನಲ್ಲಿ ಒಂದು ಎತ್ತು ಹಾಗೂ ಯಲಿಶಿರುಂದದಲ್ಲಿ 2ಆಕಳು ಸಾವನ್ನಪ್ಪಿವೆ. ಶಿರಹಟ್ಟಿ ತಾಲೂಕಿನಲ್ಲಿ ನೂರಾರು ಎಕರೆ ಬೆಳೆ ನಷ್ಟವಾಗಿದೆ.

ಹಾವೇರಿ ಜಿಲ್ಲಾದ್ಯಂತ ಮಳೆರಾಯನ ಅಬ್ಬರ ಮಿತಿ ಮೀರಿದೆ. ಜಿಲ್ಲೆಯ ನಾಲ್ಕು ನದಿಗಳು ಭೋರ್ಗರೆವ ಮೂಲಕ ಜಲ ಪ್ರಹಾರ ನದಿ ಪಾತ್ರದ ಗ್ರಾಮಗಳನ್ನು ಜಲಾವೃತಗೊಳಿಸಿದೆ.

ಜಿಲ್ಲೆಯಲ್ಲಿ ಗುರುವಾರ ಒಂದೇ ರಾತ್ರಿಯಲ್ಲಿ 990 ಮನೆಗಳು ಕುಸಿದಿವೆ. ಸವಣೂರು ತಾಲೂಕಿನಲ್ಲಿ ಹಲವು ಗ್ರಾಮಗಳು ನಡುಗಡ್ಡೆಯಾಗಿವೆ. ರಟ್ಟೀಹಳ್ಳಿ ತಾಲೂಕಿನಲ್ಲಿ ಮಳೆ ಆರ್ಭಟಕ್ಕೆ ಕುಮದ್ವತಿ ನದಿ ನೀರಿನ ಮಟ್ಟ ಮತ್ತಷ್ಟು ಹೆಚ್ಚಾಗಿದ್ದು, ಅನೇಕ ಸೇತುವೆಗಳು ಮುಳುಗಿವೆ.

ವಿಶೇಷ ರೈಲಿನಲ್ಲಿ ಪಾರು:
ಗದಗ ಜಿಲ್ಲೆ ರೋಣ ತಾಲೂಕಿನ ಹೊಳೆಆಲೂರ ಭಾಗದ ಜನರನ್ನು ವಿಶೇಷ ರೈಲ್ವೆ ಮೂಲಕ ಗದಗ ನಗರಕ್ಕೆ ಕರೆತಂದು ಆಶ್ರಯ ನೀಡಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ