ಆ್ಯಪ್ನಗರ

ಜಲಮೂಲಗಳ ವೃದ್ಧಿಗೆ ಸಹಕರಿಸಿ

ಧಾರವಾಡ : ಹುಬ್ಬಳ್ಳಿ ನಗರಕ್ಕೆ ಕುಡಿವ ನೀರಿನ ಮೂಲವಾಗಿದ್ದ ನೀರಸಾಗರ ಕೆರೆ ಇದೀಗ ಬತ್ತಿಹೋಗಿದೆ. ಹೀಗಾಗಿ ಖಾಸಗಿ ಕಂಪನಿಗಳ ಸಿಎಸ್‌ಆರ್‌ ಅನುದಾನ ಬಳಸಿ ಇಲ್ಲಿ ಹೂಳೆತ್ತಲು ಯೋಜಿಸಲಾಗಿದೆ. ಇದಕ್ಕೀಗ ಟಾಟಾ ಹಿಟಾಚಿ ಕಂಪನಿ ಮುಂದೆ ಬಂದಿದ್ದು, ಸದ್ಯ ಕನಿಷ್ಠ 100 ಎಕರೆ ಪ್ರದೇಶದಲ್ಲಿನ 12 ಲಕ್ಷ ಕ್ಯೂಬಿಕ್‌ ಮೀಟರ್‌ ಹೂಳು ತೆಗೆಯಲು ನಿರ್ಧರಿಸಲಾಗಿದೆ.

Vijaya Karnataka 23 Jun 2019, 5:00 am
ಧಾರವಾಡ : ಹುಬ್ಬಳ್ಳಿ ನಗರಕ್ಕೆ ಕುಡಿವ ನೀರಿನ ಮೂಲವಾಗಿದ್ದ ನೀರಸಾಗರ ಕೆರೆ ಇದೀಗ ಬತ್ತಿಹೋಗಿದೆ. ಹೀಗಾಗಿ ಖಾಸಗಿ ಕಂಪನಿಗಳ ಸಿಎಸ್‌ಆರ್‌ ಅನುದಾನ ಬಳಸಿ ಇಲ್ಲಿ ಹೂಳೆತ್ತಲು ಯೋಜಿಸಲಾಗಿದೆ. ಇದಕ್ಕೀಗ ಟಾಟಾ ಹಿಟಾಚಿ ಕಂಪನಿ ಮುಂದೆ ಬಂದಿದ್ದು, ಸದ್ಯ ಕನಿಷ್ಠ 100 ಎಕರೆ ಪ್ರದೇಶದಲ್ಲಿನ 12 ಲಕ್ಷ ಕ್ಯೂಬಿಕ್‌ ಮೀಟರ್‌ ಹೂಳು ತೆಗೆಯಲು ನಿರ್ಧರಿಸಲಾಗಿದೆ.
Vijaya Karnataka Web DRW-22NIJAGUNI5B
ಧಾರವಾಡ ಜಿಲ್ಲೆ ನೀರಸಾಗರ ಕೆರೆ ಹೂಳೆತ್ತುವ ಕಾಮಗಾರಿ ಚಾಲನೆ ಸಂದರ್ಭ ನಡೆದ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಚಿವರಾದ ಆರ್‌.ವಿ. ದೇಶಪಾಂಡೆ, ಪ್ರಹ್ಲಾದ ಜೋಶಿ.


1955ರಲ್ಲಿ ಹುಬ್ಬಳ್ಳಿ ಧಾರವಾಡ ನಗರಕ್ಕೆ ಕುಡಿಯುವ ನೀರು ಪೂರೈಸಲು ನಿರ್ಮಿಸಲಾಗಿರುವ ನೀರಸಾಗರ ಕೆರೆಯಲ್ಲಿನ 7.72 ಲಕ್ಷ ಕ್ಯೂಬಿಕ್‌ ಮೀಟರ್‌ ಹೂಳನ್ನು ತೆಗೆಯಲು 2003ರಲ್ಲಿ ಸರಕಾರ ಸುಮಾರು 4 ಕೋಟಿ ವೆಚ್ಚ ಭರಿಸಿತ್ತು. ಇದೀಗ ಅಂತಹದೇ ಪ್ರಯತ್ನಕ್ಕೆ ಕೈ ಹಾಕಿರುವ ಸರಕಾರವು ಇದಕ್ಕೆ ಖಾಸಗಿ ಕಂಪನಿಗಳ ಸಿಎಸ್‌ಆರ್‌ ಅನುದಾನದ ನೆರವು ಕೇಳಿದೆ.

ಮೊದಲ ಹಂತವಾಗಿ ಟಾಟಾ ಹಿಟಾಚಿ ಕಂಪನಿಯು ಹೂಳೆತ್ತಲು ಮೂರು ಜೆಸಿಬಿ ಪೂರೈಸಿದ್ದು, ರೈತರು ತಮ್ಮ ಟ್ಯಾಕ್ಟರ್‌ಗಳಲ್ಲಿ ಅಲ್ಲಿನ (ಹೂಳು) ಮಣ್ಣನ್ನು ತೆಗೆದುಕೊಂಡು ಹೋಗಬಹುದು. ಕಂದಾಯ ಸಚಿವ ಆರ್‌.ವಿ. ದೇಶಪಾಂಡೆ ಹಾಗೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಶನಿವಾರ ವಿಶೇಷ ಪೂಜೆ ಸಲ್ಲಿಸುವ ಮೂಲಕ ಖಾಸಗಿ ಸಹಭಾಗಿತ್ವದ ಹೂಳೆತ್ತುವ ಕಾಮಗಾರಿಗೆ ಚಾಲನೆ ನೀಡಿದರು. ಜಲಮೂಲ ರಕ್ಷಣೆ ಕುರಿತಂತೆ ಜಿಲ್ಲಾಧಿಕಾರಿಗಳಿಗೆ ಕೆಲ ಸಲಹೆ- ಸೂಚನೆಗಳನ್ನು ನೀಡಿದರು.

ನಿಂತ ನೀರು ಪೂರೈಕೆ

181.08 ಚದರ ಕಿ.ಮೀ ಅಚ್ಚುಕಟ್ಟು ಪ್ರದೇಶ ಹೊಂದಿರುವ ನೀರಸಾಗರ ಕೆರೆಯ ನೀರು 1,087 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದೆ. ಇಲ್ಲಿ 1ಟಿಎಂಸಿ ನೀರು ಸಂಗ್ರಹ ಆಗಲಿದ್ದು, ಒಮ್ಮೆ ಭರ್ತಿ ಆದರೆ ದಿನಕ್ಕೆ 40 ಎಂಎಲ್‌ಡಿಯಂತೆ ಒಂದೂವರೆ ವರ್ಷ ನೀರು ಪೂರೈಸಬಹುದು ಎಂದು ಜಲಮಂಡಳಿ ಕಾರ್ಯನಿರ್ವಾಹಕ ಅಭಿಯಂತರ ವೆಂಕಟರಾವ್‌ ಸುದ್ದಿಗಾರರಿಗೆ ಮಾಹಿತಿ ನೀಡಿದರು.

2009ರಲ್ಲಿ ಸಂಪೂರ್ಣ (592 ಮೀಟರ್‌) ತುಂಬಿದ್ದ ಈ ಕೆರೆ ಇತ್ತೀಚೆಗೆ ಮಳೆ ಕೊರತೆ ಹಾಗೂ ಅಚ್ಚುಕಟ್ಟು ಪ್ರದೇಶದ ಒತ್ತುವರಿಯಿಂದಾಗಿ ಜಲಮೂಲಗಳು ಬತ್ತಿ ಹೋಗಿ 2-3 ವರ್ಷಗಳಿಂದ ಹುಬ್ಬಳ್ಳಿಗೆ ನೀರು ಸರಬರಾಜು ನಿಂತು ಹೋಗಿದೆ. ಹೀಗಾಗಿ ಈಗ ಕೆರೆ ಹೂಳೆತ್ತಿ ಒತ್ತುವರಿ ತೆರವುಗೊಳಿಸುವ ಮೂಲಕ ನೀರು ಸಂಗ್ರಹ ಹಾಗೂ ಜಲಮೂಲಗಳ ವೃದ್ಧಿಗೆ ಮಾಡುತ್ತಿರುವ ಪ್ರಯತ್ನ ಇದಾಗಿದೆ. ಆದರೆ, ಮಳೆಗಾಲದ ವೇಳೆ ಈ ಕಾಮಗಾರಿ ಕೈಗೊಳ್ಳುತ್ತಿರುವುದು ಸ್ವಲ್ಪ ಅಸಮಂಜಸವೇ ಅನಿಸಿದೆ. ಈ ವಿಚಾರವನ್ನು ಕಲಘಟಗಿ ಶಾಸಕ ಸಚಿವ ದೇಶಪಾಂಡೆ ಅವರನ್ನು ಕೇಳಿದರು ಕೂಡ. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಇದು ಖಾಸಗಿ ಸಹಭಾಗಿತ್ವದ ಕಾರ್ಯಕ್ರಮ. ಎಲ್ಲರೂ ಸಹಕರಿಸಿ ಎಂದು ವಿನಂತಿಸಿದರು.

2-3 ತಿಂಗಳ ಕಾಮಗಾರಿ
ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಸಚಿವ ಆರ್‌.ವಿ.ದೇಶಪಾಂಡೆ, ಟಾಟಾ ಹಿಟಾಚಿ ಕಂಪನಿ ವ್ಯವಸ್ಥಾಪಕ ನಿರ್ದೇಶಕ ರಾಖೇಶ ಸಿಂಗ ಜೊತೆ ಮಾತನಾಡಿ, ಕಂಪನಿಯ ಸಿಎಸ್‌ಆರ್‌ ನಿಧಿಯ ಹಣ ಬಳಕೆ ಮಾಡಿಕೊಂಡು ಉಚಿತವಾಗಿ ಕೆರೆ ಹೂಳು ತೆಗೆದುಕೊಡಲು ವಿನಂತಿಸಲಾಗಿತ್ತು. ಅದಕ್ಕೆ ಸ್ಪಂದನೆ ಸಿಕ್ಕಿದೆ. ಸದ್ಯ 2-3 ತಿಂಗಳ ಈ ಕೆಲಸ ನಡೆಯಲಿದೆ. ರೈತರು ತಮ್ಮ ಟ್ರ್ಯಾಕ್ಟರ್‌ಗಳಲ್ಲಿ ಮಣ್ಣು ಒಯ್ದು ತಮ್ಮ ಜಮೀನಗಳಿಗೆ ಹಾಕಿಕೊಳ್ಳಬೇಕು. ಈಗ ಅಲ್ಪ ಸ್ವಲ್ಪ ಮಳೆಯಾಗಿರುವುದರಿಂದ ಕೆಲ ರೈತರು ಬಿತ್ತನೆ ಮಾಡಿದ್ದಾರೆ. ಮತ್ತು ಇನ್ನು ಕೆಲ ರೈತರು ಬಿತ್ತನೆಗೆ ಭೂಮಿ ಸಿದ್ಧಗೊಳಿಸಿದ್ದಾರೆ. ಆದ್ದರಿಂದ ಕೆರೆಯ ಮಣ್ಣು ತೆಗೆದುಕೊಂಡು ಹೋಗಲು ರೈತರು ಮುಂದೆ ಬರದಿದ್ದರೆ ಅಕ್ಟೋಬರ್‌ನಿಂದ ಈ ಕಾಮಗಾರಿಯನ್ನು ಪುನಃ ಆರಂಭಿಸಲಾಗುವುದು ಎಂದು ಹೇಳಿದರು.

ಕೆರೆಗೆ ನೀರು ಬರುವ ಕಾಲುವೆ, ಹಳ್ಳ, ಕೊಳ್ಳಗಳನ್ನು ಸ್ವಚ್ಛಗೊಳಿಸಲು ಮತ್ತು ಕೆರೆ ಹಾಗೂ ಕೆರೆ ಅಚ್ಚುಕಟ್ಟು ಪ್ರದೇಶ ಒತ್ತುವರಿಯಾಗಿದ್ದಲ್ಲಿ ತೆರವುಗೊಳ್ಳಿಸಲು ಕ್ರಮಕೈಗೊಳ್ಳುವಂತೆ ಸಚಿವ ಆರ್‌.ವಿ.ದೇಶಪಾಂಡೆ ಅವರು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

ಜಿಪಂ ಅಧ್ಯಕ್ಷೆ ವಿಜಯಲಕ್ಷ್ಮಿ ಪಾಟೀಲ, ಜಿಲ್ಲಾಧಿಕಾರಿ ಎಂ.ದೀಪಾ ಚೋಳನ, ಜಿಪಂ ಸಿಇಒ ಡಾ. ಬಿ.ಸಿ. ಸತೀಶ, ಅಪರ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ, ಉಪವಿಭಾಗಾಧಿಕಾರಿ ಮಹಮ್ಮದ ಜುಬೇರ, ಕಲಘಟಗಿ ತಹಸಿಲ್ದಾರ ಅಶೋಕ ಶಿಗ್ಗಾವಿ, ಆರ್‌.ಕೆ.ಉಮೇಶ ಸೇರಿದಂತೆ ವಿವಿಧ ಅಧಿಕಾರಿಗಳು ಜನ ಪ್ರತಿನಿಧಿಗಳು, ಗ್ರಾಪಂ ಸದಸ್ಯರು, ಗ್ರಾಮಸ್ಥರು, ರೈತರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ