ಆ್ಯಪ್ನಗರ

ಮತಎಣಿಕೆಗೆ ಜಿಲ್ಲಾಡಳಿತ ಸಕಲ ಸಜ್ಜು

ಧಾರವಾಡ : ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟಗೊಳ್ಳಲು ದಿನಗಣನೆ ಶುರುವಾಗಿದ್ದು, ಮೇ 23ರಂದು ನಡೆಯುವ ಮತ ಎಣಿಕೆ ಪ್ರಕ್ರಿಯೆಗೆ ಜಿಲ್ಲಾಡಳಿತವೂ ಸಕಲ ರೀತಿಯಿಂದ ಸಿದ್ಧತೆ ಮಾಡಿಕೊಂಡಿದೆ.

Vijaya Karnataka 19 May 2019, 5:00 am
ಧಾರವಾಡ : ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟಗೊಳ್ಳಲು ದಿನಗಣನೆ ಶುರುವಾಗಿದ್ದು, ಮೇ 23ರಂದು ನಡೆಯುವ ಮತ ಎಣಿಕೆ ಪ್ರಕ್ರಿಯೆಗೆ ಜಿಲ್ಲಾಡಳಿತವೂ ಸಕಲ ರೀತಿಯಿಂದ ಸಿದ್ಧತೆ ಮಾಡಿಕೊಂಡಿದೆ.
Vijaya Karnataka Web the district administration is all set for the vote count
ಮತಎಣಿಕೆಗೆ ಜಿಲ್ಲಾಡಳಿತ ಸಕಲ ಸಜ್ಜು


ಶಿಗ್ಗಾವಿ ಸೇರಿದಂತೆ ಒಟ್ಟು 8 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿ ಹೊಂದಿರುವ ಧಾರವಾಡ ಲೋಕಸಭಾ ಕ್ಷೇತ್ರದ ಮತ ಎಣಿಕೆ ಕೃಷಿ ವಿಶ್ವ ವಿದ್ಯಾಲಯದಲ್ಲಿ ನಡೆಯಲಿದೆ. ಒಟ್ಟು 8 ಕೊಠಡಿಗಳಲ್ಲಿ ಒಟ್ಟು 112 ಟೇಬಲ್‌ಗಳನ್ನು ಹಾಕಿ ಮತ ಎಣಿಕೆ ಕಾರ್ಯ ಪೂರ್ಣಗೊಳಿಸಲಾಗುತ್ತಿದೆ. ಮೇ 23ರಂದು ಬೆಳಗ್ಗೆ 8ರಿಂದಲೇ ಈ ಪ್ರಕ್ರಿಯೆ ಆರಂಭಗೊಳ್ಳಲಿದೆ.

ಈ ಕುರಿತಂತೆ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಚುನಾವಣಾ ಅಧಿಕಾರಿಯೂ ಆಗಿರುವ ಡಿಸಿ ಎಂ.ದೀಪಾ ಮಾಹಿತಿ ನೀಡಿದರು. ಪ್ರಥಮವಾಗಿ ಅಗ್ರೋನೋಮಿ ಕಟ್ಟಡದ ಮೊದಲ ಮಹಡಿಯಲ್ಲಿನ ಚುನಾವಣಾಧಿಕಾರಿಗಳ ಕೊಠಡಿಯಲ್ಲಿ ಅಂಚೆ ಹಾಗೂ ಸೇವಾ ಮತದಾರರ ಅಂಚೆ ಮತಪತ್ರಗಳನ್ನು ಒಟ್ಟು 13 ಟೆಬಲ್‌ಗಳಲ್ಲಿ ಎಣಿಕೆ ಮಾಡಲಾಗುವುದು. ನಂತರ ವಿದ್ಯುನ್ಮಾನ ಮತಯಂತ್ರಗಳಲ್ಲಿನ ಮತಗಳ ಎಣಿಕೆ ಪ್ರಕ್ರಿಯೆ ಶುರುವಾಗಲಿದೆ ಎಂದು ಹೇಳಿದರು.

ಪ್ರತಿ ವಿಧಾನಸಭಾ ಮತಕ್ಷೇತ್ರಕ್ಕೆ 14 ಟೆಬಲ್‌ಗಳಂತೆ ಒಟ್ಟು 112 ಟೆಬಲ್‌ಗಳನ್ನು ಹಾಕಿ ಮತ ಎಣಿಕೆ ನಡೆಸಲಾಗುವುದು. ಪ್ರತಿ ಟೇಬಲ್‌ಗೆ ಒಬ್ಬರಂತೆ ಹಾಗೂ ಸಹಾಯಕ ಚುನಾವಣಾಧಿಕಾರಿಗಳ 9 ಟೇಬಲ್‌ಗೆ ತಲಾ ಒಬ್ಬರಂತೆ ಪ್ರತಿ ಅಭ್ಯರ್ಥಿ 128 ಏಜೆಂಟರ್‌ಗಳನ್ನು ನೇಮಿಸಬಹುದು. ಕೌಂಟಿಂಗ್‌ ಸೂಪರವೈಸರ್‌, ಸಹಾಯಕ ಚುನಾವಣಾಧಿಕಾರಿ, ಮೈಕ್ರೋ ಆಬ್ಜರ್ವರ್‌ ಸೇರಿದಂತೆ ಒಟ್ಟು 1250 ಸಿಬ್ಬಂದಿಯನ್ನು ಮತ ಎಣಿಕೆಗೆ ಬಳಸಿಕೊಳ್ಳಲಾಗುತ್ತಿದೆ ಎಂದು ವಿವರಣೆ ನೀಡಿದರು.

40 ವಿವಿಪ್ಯಾಟ್‌ ಪೇಪರ್ಸ್‌ ಸ್ಲಿಪ್‌ ಎಣಿಕೆ : ಇಲ್ಲಿಯವರೆಗೆ ಪ್ರತಿ ಚುನಾವಣೆಯಲ್ಲೂ ವಿಧಾನಸಭಾ ಕ್ಷೇತ್ರಕ್ಕೆ ತಲಾ ಒಂದರಂತೆ ವಿವಿ ಪ್ಯಾಟ್‌ನಲ್ಲಿನ ಪೇಪರ್‌ ಸ್ಲಿಪ್‌ಗಳನ್ನು ಎಣಿಕೆ ಮಾಡಿ ಮತಯಂತ್ರಗಳ ಪಾರದರ್ಶಕತೆ ಖಾತ್ರಿಪಡಿಸಲಾಗುತ್ತಿತ್ತು. ಆದರೆ ಪ್ರಸಕ್ತ ಚುನಾವಣೆಯಲ್ಲಿ ಪ್ರತಿ ವಿಧಾನಸಭೆಗೆ ತಲಾ 5ರಂತೆ ಒಟ್ಟು 40 ವಿವಿ ಪ್ಯಾಟ್‌ಗಳ ಪೇಪರ್‌ ಸ್ಲಿಪ್‌ಗಳನ್ನು ಮತದಾನ ಪ್ರಕ್ರಿಯೆ ಕೊನೆಯ ಸುತ್ತು ಮುಗಿದ ನಂತರ ಎಣಿಕೆ ಮಾಡಲಾಗುತ್ತಿದೆ. ಇದಕ್ಕಾಗಿ ಪ್ರತ್ಯೇಕ ವ್ಯವಸ್ಥೆಯನ್ನೂ ಮಾಡಲಾಗಿದೆ.

ಅದೇ ರೀತಿ ಹು-ಧಾ ಪಶ್ಚಿಮ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ 198 ಹಾಗೂ 249ನೇ ಮತಗಟ್ಟೆಗಳಲ್ಲಿ ಮತದಾನದ ದಿನದಂದು ಅಣಕು ಮತದಾನದ ಫಲಿತಾಂಶವನ್ನು ತೆಗೆದು ಹಾಕದೇ ಮತದಾನ ಮಾಡಲಾಗಿದೆ. ಈ ವಿಚಾರವನ್ನು ಎಲ್ಲ ಅಭ್ಯರ್ಥಿಗಳು ಹಾಗೂ ಚುನಾವಣಾ ಆಯೋಗದ ಗಮನಕ್ಕೆ ತರಲಾಗಿದೆ. ಹೀಗಾಗಿ ಸದರಿ ಮತಗಟ್ಟೆಗಳಲ್ಲಿ ಚಲಾವಣೆಗೊಂಡ ಮತಗಳ ಎಣಿಕೆ ವೇಳೆ ಸಿಯು, ವಿದ್ಯುನ್ಮಾನ ಮತಯಂತ್ರಗಳ ಅಂಕಿ ಅಂಶಗಳನ್ನು ಪರಿಗಣಿಸದೇ ವಿವಿ ಪ್ಯಾಟ್‌ನ ಪೇಪರ್‌ ಸ್ಲಿಪ್‌ಗಳ ಅಂಕಿ ಅಂಶಗಳನ್ನೇ ಗಣನೆಗೆ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ದೀಪಾ ಹೇಳಿದರು.

ಮೊಬೈಲ್‌ ನಿಷೇಧ : ಮತ ಎಣಿಕೆ ಕೇಂದ್ರಕ್ಕೆ ಮೊಬೈಲ್‌ ತೆಗೆದುಕೊಂಡು ಹೋಗುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಆಬ್ಜರ್ವರ್‌ ಹಾಗ ಸೂಚಿತ ಕೆಲವೇ ಅಧಿಕಾರಿಗಳು ಮೊಬೈಲ್‌ ಬಳಸಬಹುದು. ಇನ್ನು ಮಾಧ್ಯಮದವರು ಕೂಡ ಮಾಧ್ಯಮ ಕೇಂದ್ರದವರೆಗೆ ಮಾತ್ರ ಮೊಬೈಲ್‌ ತೆಗೆದುಕೊಂಡ ಹೋಗಬಹುದು. ಮತ ಎಣಿಕೆ ಕೇಂದ್ರ ಪ್ರವೇಶಿಸಲು ಗುರುತಿನ ಚೀಟಿ ಕಡ್ಡಾಯವಾಗಿದೆ. ಏಜೆಂಟರು ನಿಗದಿಪಡಿಸಿದ ವಿಧಾನಸಭಾ ವ್ಯಾಪ್ತಿಯ ಮತ ಎಣಿಕೆ ಟೇಬಲ್‌ ಹೊರತುಪಡಿಸಿ ಬೇರೆ ಮತ ಎಣಿಕೆ ಕೊಠಡಿ, ಟೇಬಲ್‌ಗೆ ಹೋಗಲು ಅವಕಾಶ ಇಲ್ಲ. ಪ್ರತಿ ಸುತ್ತಿನ ಮತ ಎಣಿಕೆಯನ್ನು ಸಾರ್ವಜನಿಕರಿಗೆ ತಿಳಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಡಿಸಿ ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಸುರೇಶ ಇಟ್ನಾಳ, ಡಿಸಿಪಿ ನಾಗೇಶ ಟಿ.ಎಲ್‌, ವಾರ್ತಾ ಇಲಾಖೆ ಹಿರಿಯ ಉಪನಿರ್ದೇಶಕ ಮಂಜುನಾಥ ಡೊಳ್ಳಿನ ಸುದ್ದಿಗೋಷ್ಠಿಯಲ್ಲಿದ್ದರು.

ಬಿಗಿ ಭದ್ರತೆ: ಹು-ಧಾ ಮಹಾನಗರ ಪೊಲೀಸ್‌ ಆಯುಕ್ತ ಎಂ.ಎನ್‌. ನಾಗರಾಜ ಮಾತನಾಡಿ, ಮತ ಎಣಿಕೆ ವೇಳೆ ಯಾವುದೇ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲಾಗಿದೆ. ಕೃಷಿ ವಿವಿ ಮೈದಾನದಲ್ಲಿ ಕಾರು ಹಾಗೂ ಅಲ್ಲಿ ಎಡಗಡೆಯ ಪ್ರದೇಶದಲ್ಲಿ ದ್ವಿ ಚಕ್ರ ವಾಹನಗಳಿಗೆ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗಿದೆ ಎಂದು ವಿವರಣೆ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ