ಆ್ಯಪ್ನಗರ

ಸರಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಬೇಡ

ಧಾರವಾಡ : ರಾಜ್ಯ ಸರಕಾರ ಸರಕಾರಿ ಕನ್ನಡ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಹೇರಿರುವ ಆದೇಶ ಹಿಂಪಡೆಯಲು ಒತ್ತಾಯಿಸಿ ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ನಾಡೋಜ ಪಾಟೀಲ ಪುಟ್ಟಪ್ಪ ನೇತೃತ್ವದಲ್ಲಿ ಶುಕ್ರವಾರ ವಿವಿಧ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಮುಂದೆ ಸಾಂಕೇತಿಕ ಧರಣಿ ನಡೆಸಿದರು.

Vijaya Karnataka 13 Jul 2019, 5:00 am
ಧಾರವಾಡ : ರಾಜ್ಯ ಸರಕಾರ ಸರಕಾರಿ ಕನ್ನಡ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಹೇರಿರುವ ಆದೇಶ ಹಿಂಪಡೆಯಲು ಒತ್ತಾಯಿಸಿ ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ನಾಡೋಜ ಪಾಟೀಲ ಪುಟ್ಟಪ್ಪ ನೇತೃತ್ವದಲ್ಲಿ ಶುಕ್ರವಾರ ವಿವಿಧ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಮುಂದೆ ಸಾಂಕೇತಿಕ ಧರಣಿ ನಡೆಸಿದರು.
Vijaya Karnataka Web DRW-12RANGA-2
ರಾಜ್ಯ ಸರಕಾರ ಸರಕಾರಿ ಕನ್ನಡ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಹೇರಿರುವ ಆದೇಶ ಹಿಂಪಡೆಯುವಂತೆ ಒತ್ತಾಯಿಸಿ ಕರ್ನಾಟಕ ವಿದ್ಯಾವರ್ಧಕ ಸಂಘದ ನೇತೃತ್ವದಲ್ಲಿ ಶುಕ್ರವಾರ ವಿವಿಧ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಮುಂದೆ ಸಾಂಕೇತಿಕ ಧರಣಿ ನಡೆಸಿದರು.


ಸರಕಾರ ಈಗಾಗಲೇ ಆಂಗ್ಲ ಮಾಧ್ಯಮ ಶಾಲೆಗಳಾಗಿ ಪರಿವರ್ತನೆ ಮಾಡಿದ ಒಂದು ಸಾವಿರ ಶಾಲೆಗಳನ್ನು ಮರಳಿ ಕನ್ನಡ ಮಾಧ್ಯಮ ಶಾಲೆಗಳನ್ನಾಗಿ ಪರಿವರ್ತಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸುವುದು ಅನಿವಾರ್ಯ ಆಗಲಿದೆ ಎಂದು ಅಪರ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ನೀಡಿದ ಮನವಿಯಲ್ಲಿ ಎಚ್ಚರಿಕೆ ನೀಡಿದರು.

ಸರಕಾರಿ ಕನ್ನಡ ಶಾಲೆಗಳು ಕರ್ನಾಟಕದ ಸಂಸ್ಕೃತಿಯ ಗಟ್ಟಿಬೇರುಗಳು. ನಾಡಿನ ಅಭಿವೃದ್ಧಿ ಮತ್ತು ಬೆಳವಣಿಗೆಯಲ್ಲಿ ಕನ್ನಡ ಶಾಲೆಗಳು ಅಪರೂಪದ ಕೊಡುಗೆ ನೀಡಿವೆ. ಕರ್ನಾಟಕದ ಹೆಸರಾಂತ ದಿಗ್ಗಜರು ಕನ್ನಡ ಶಾಲೆಗಳಲ್ಲಿ ಓದಿ ಖ್ಯಾತಿ ಪಡೆದಿದ್ದಾರೆ. ಇದನ್ನು ಸರಕಾರ ಮನದಟ್ಟು ಮಾಡಿಕೊಳ್ಳಬೇಕು ಎಂದು ಒಕ್ಕೊರಲಿನಿಂದ ಆಗ್ರಹಿಸಿದರು.

ಕನ್ನಡ ಶಾಲೆಗಳನ್ನು 1ನೇ ತರಗತಿಯಿಂದಲೇ ಆಂಗ್ಲಮಾಧ್ಯಮ ಶಾಲೆಗಳಾಗಿ ಪರಿವರ್ತಿಸಬೇಕೆನ್ನುವುದು ಸರಕಾರದ ತಪ್ಪು ನಿಲುವಾಗಿದೆ. ಈ ನಿಲುವು ಶಿಕ್ಷ ಣ ತಜ್ಞರ ಮತ್ತು ಸಾಮಾಜಿಕ ಚಿಂತಕರ ದೃಷ್ಟಿಯಲ್ಲಿ ಸಂಪೂರ್ಣ ಅವೈಜ್ಞಾನಿಕ. ಜನವಿರೋಧಿ ನಿಲುವಾಗಿದೆ ಎಂದು ದೂರಿದರು.

ಸರಕಾರದ ಈ ನಿಲುವು ಕನ್ನಡ ಭಾಷೆ ಉಳಿವು ಮತ್ತು ಬೆಳವಣಿಗೆ ಮಾರಕವಾಗಿದೆ. ಹೀಗಾಗಿ ಕೂಡಲೇ ಆದೇಶ ಹಿಂಪಡೆದು ಮೊದಲಿನಂತೆ ಕನ್ನಡ ಮಾಧ್ಯಮದಲ್ಲಿಯೇ ಶಿಕ್ಷಣ ನೀಡಬೇಕು ಎಂದು ಪ್ರತಿಭಟನಾಕಾರರು ಮನವಿ ಮಾಡಿಕೊಂಡರು.

ಪ್ರಕಾಶ ಎಸ್‌. ಉಡಿಕೇರಿ, ನಿಂಗಣ್ಣ ಕುಂಠಿ, ಶಿವಣ್ಣ ಬೆಲ್ಲದ, ಕೃಷ್ಣಾ ಜೋಶಿ, ಸದಾನಂದ ಶಿವಳ್ಳಿ, ಎಂ.ಬಿ.ಕಟ್ಟಿ, ಸೇತುರಾಮ ಹುನಗುಂದ, ಡಾ.ಇಸಬೇಲ್ಲಾ ಝೇವಿಯರ್‌, ಶಂಕರ ಕುಂಬಿ , ಕರವೇ ಸ್ವಾಭಿಮಾನಿ ಭಣದ ಪಾಪು ಧಾರೆ, ಕನಸೇ ವಿಭಾಗೀಯ ಅಧ್ಯಕ್ಷ ಕುಮಾರ ಪಾಟೀಲ ಸೇರಿದಂತೆ ವಿದ್ಯಾವರ್ಧಕ ಸಂಘದ ಪದಾಧಿಕಾರಿಗಳು, ಕನ್ನಡ ಅಭಿಮಾನಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ