ಆ್ಯಪ್ನಗರ

ಅಪಘಾತ ತಡೆಗೆ ತ್ರಿವಳಿ ಬೈಪಾಸ್‌!

ಧಾರವಾಡ :ಹು-ಧಾ ಮಹಾನಗರದಲ್ಲಿ ವಾಹನ ದಟ್ಟಣೆ ಹಾಗೂ ರಸ್ತೆ ಅಪಘಾತ ನಿಯಂತ್ರಿಸುವ ನಿಟ್ಟಿನಲ್ಲಿ ಹು-ಧಾ ಹೊರವಲಯದಲ್ಲಿ ಮತ್ತೆ ಮೂರು ಬೈಪಾಸ್‌ ರಸ್ತೆ ನಿರ್ಮಿಸಲು ಉದ್ದೇಶಿಸಲಾಗಿದೆ. ಈ ಕುರಿತು ಎನ್‌ಎಚ್‌ಎಐ (ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ) ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲು ಅಣೆಯಾಗಿದೆ.

Vijaya Karnataka 17 Jul 2018, 5:00 am
ಧಾರವಾಡ :ಹು-ಧಾ ಮಹಾನಗರದಲ್ಲಿ ವಾಹನ ದಟ್ಟಣೆ ಹಾಗೂ ರಸ್ತೆ ಅಪಘಾತ ನಿಯಂತ್ರಿಸುವ ನಿಟ್ಟಿನಲ್ಲಿ ಹು-ಧಾ ಹೊರವಲಯದಲ್ಲಿ ಮತ್ತೆ ಮೂರು ಬೈಪಾಸ್‌ ರಸ್ತೆ ನಿರ್ಮಿಸಲು ಉದ್ದೇಶಿಸಲಾಗಿದೆ. ಈ ಕುರಿತು ಎನ್‌ಎಚ್‌ಎಐ (ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ) ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲು ಅಣೆಯಾಗಿದೆ.
Vijaya Karnataka Web triple bypass to stop accident
ಅಪಘಾತ ತಡೆಗೆ ತ್ರಿವಳಿ ಬೈಪಾಸ್‌!


ಬೆಳಗಾವಿ, ಗದಗ, ಹಾವೇರಿ, ಉತ್ತರ ಕನ್ನಡ ಜಿಲ್ಲೆಗಳಿಂದ ಪ್ರತಿ ದಿನ ಹು-ಧಾ ನಗರ ಮಾರ್ಗವಾಗಿ ಸಾವಿರಾರು ವಾಹನಗಳು ಸಂಚರಿಸುತ್ತಿವೆ. ಹೊರರಾಜ್ಯ, ಜಿಲ್ಲೆಗಳಿಗೆ ತೆರಳುವ ಭಾರಿ ವಾಹನಗಳಿಗೆ ಹು-ಧಾ ಬೈಪಾಸ್‌ ರಸ್ತೆ ನಿರ್ಮಾಣಗೊಂಡರೂ ಅದು ವೈಜ್ಞಾನಿಕವಾಗಿಲ್ಲ. ಪುಣೆ ಬೆಂಗಳೂರು ಚಥುಷ್ಪಥ ಹೆದ್ದಾರಿಯಲ್ಲಿ ಬರುವ ವಾಹನಗಳು ಬೈಪಾಸ್‌ ಡಬಲ್‌ ರಸ್ತೆ ಹೋಗುವುದು ಅನಿವಾರ್ಯವಾಗಿ ಅಪಘಾತಕ್ಕೂ ಕಾರಣ ಆಗುತ್ತಿವೆ. ಹೀಗಾಗಿ ಈ ಸಮಸ್ಯೆಗೆ ಪರಿಹಾರವಾಗಿ ಮೂರು ಬೈಪಾಸ್‌ ರಸ್ತೆಗಳ ನಿರ್ಮಾಣಕ್ಕೆ ಪ್ರಸ್ತಾವನೆ ರೂಪುಗೊಳ್ಳುತ್ತಿದೆ.

ತಡಸ ಕ್ರಾಸ್‌ನಿಂದ ಕಲಘಟಗಿ- ಧಾರವಾಡ- ಹೆಬಸೂರ- ಅಣ್ಣಿಗೇರಿಗೆ ಸಂಪರ್ಕ ಕಲ್ಪಿಸುವ ಬೈಪಾಸ್‌ ರಸ್ತೆ ನಿರ್ಮಾಣದ ಸಾಧ್ಯತಾ ವರದಿಯ ಪಡೆಯಲು ಎನ್‌ಎಚ್‌ಎಐ ಮುಂದಾಗಿದೆ. ಈ ಕುರಿತು ಡಿಪಿಆರ್‌ ಸಿದ್ಧಪಡಿಸಲು ಹೈದರಾಬಾದ್‌ನ ಎಚ್‌ಬಿಎಸ್‌ ಕಂಪೆನಿಗಳಿಗೆ ನೀಡಲಾಗಿದೆ. ಹಾಗೆಯೇ ದಾಂಡೇಲಿ- ಹಳಿಯಾಳ- ಧಾರವಾಡ- ರಾಮದುರ್ಗ- ವಿಜಯಪುರ ಬೈಪಾಸ್‌ ಡಿಪಿಆರ್‌ ಸಿದ್ಧಪಡಿಸಲು ಸಾತ್ರಾ ಕಂಪನಿಗೆ ನೀಡಲಾಗಿದೆ. ಇವೆರಡೂ ಕಂಪನಿಗಳು ಡಿಪಿಆರ್‌ ಸಿದ್ಧಪಡಿಸುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ.

ತೇಗೂರ- ತಡಸ ಹೊಸ ಪ್ರಸ್ತಾವ

ಅಷ್ಟೇ ಅಲ್ಲದೇ, ಈಗಾಗಲೇ ನರೇಂದ್ರ ಬೈಪಾಸ್‌ನಿಂದ ಗಬ್ಬೂರ ಕ್ರಾಸ್‌ವರೆಗೆ ಇರುವಂತೆಯೇ ತಡಸ್‌ಕ್ರಾಸ್‌ನಿಂದ- ಕಲಘಟಗಿ- ತೇಗೂರ ಮಾರ್ಗದಲ್ಲಿ 70 ಕಿ.ಮೀ ಉದ್ದದ ರಸ್ತೆ ನಿರ್ಮಿಸಲು ಯೋಜಿಸಲಾಗಿದೆ. ಇದು ಈಗ ಪ್ರಸ್ತಾಪಗೊಂಡ ಹೊಸ ಯೋಜನೆ. ಇದರಿಂದ ಹು-ಧಾ ಬೈಪಾಸ್‌ ರಸ್ತೆಯ ವಾಹನ ದಟ್ಟನೆ ಕಡಿಮೆ ಮಾಡಬಹುದಾಗಿದೆ. ಹೀಗಾಗಿ ಈ ಬೈಪಾಸ್‌ ನಿರ್ಮಾಣಕ್ಕೆ ಡಿಪಿಆರ್‌ ಸಿದ್ಧಪಡಿಸಲು ಏಜೆನ್ಸಿ ನೇಮಿಸಲು ಸರಕಾರ ಅನುಮೋದನೆ ಪಡೆಯಲಾಗುತ್ತಿದೆ ಎಂದು ಎನ್‌ಎಚ್‌ಎಐ ಅಧಿಕಾರಿಗಳು ವಿಕ ಕ್ಕೆ ತಿಳಿಸಿದ್ದಾರೆ.

ಬೈಪಾಸ್‌ ಯೋಜನೆಗಳ ಅನುಷ್ಠಾನದಿಂದ ಹು-ಧಾ ನಗರದಲ್ಲಿನ ವಾಹನ ದಟ್ಟಣೆ ಪ್ರಮಾಣ ಕಡಿಮೆ ಆಗಲಿದೆ. ಗದಗ, ವಿಜಯಪುರ, ಕಾರವಾರ ಜಿಲ್ಲೆಗಳಿಂದ ಬೆಳಗಾವಿ ಹಾಗೂ ಕಾರವಾರ ಸಂಪರ್ಕಿಸುವ ವಾಹನಗಳು ಹು-ಧಾ ನಗರ ಪ್ರವೇಶಿಸದೇ ನೇರವಾಗಿ ತೆರಳಲಿವೆ. ಇದರಿಂದ ಪ್ರಯಾಣದ ದೂರು ಕಡಿಮೆ ಆಗುವ ಜತೆಗೆ ಇಂದನ ಉಳಿತಾಯವೂ ಆಗಲಿದೆ. ಹೀಗಾಗಿ ಈ ಯೋಜನೆಗಳ ಅನುಷ್ಠಾನಕ್ಕೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಹೇಗೆ ಸ್ಪಂದಿಸಲಿವೆ ಎಂಬುದು ಕುತೂಹಲ ಮೂಡಿಸಿದೆ.

ದಾಂಡೇಲಿ- ವಿಜಯಪೂರ ಬೈಪಾಸ್‌ಗೆ ಪೂರಕವಾಗಿ ಮಾಜಿ ಸಚಿವ ವಿನಯ ಕುಲಕರ್ಣಿ ಅವರು ಮುಮ್ಮಿಗಟ್ಟಿಯಿಂದ ಸವದತ್ತಿ ರಸ್ತೆವರೆಗಿನ 6 ಕಿ.ಮೀ. ಉದ್ದದ ರಸ್ತೆಯಲ್ಲಿ 3.75ಮೀ ಅಗಲದ ರಸ್ತೆ ಕಾಮಗಾರಿ ಪೂರ್ಣಗೊಂಡಿತ್ತು. ಆದರೆ, ಸವದತ್ತಿ ರಸ್ತೆ ಮೂಲಕ ನವಲಗುಂದ ಸೇರುವ ರಸ್ತೆಗೆ ಇನ್ನೂ ಭೂಸ್ವಾಧೀನ ಆಗದೇ ನನೆಗುದಿಗೆ ಬಿದ್ದಿದೆ. ಈಗ ಆ ಯೋಜನೆಯನ್ನೂ ಪೂರ್ಣಗೊಳಿಸಲು ಅಗತ್ಯವಾದ ಹಣ ಹಾಗೂ ಸಾಧ್ಯತಾ ವರದಿಯನ್ನು ಎನ್‌ಎಚ್‌ಎಐ ಅಧಿಕಾರಿಗಳು ಪಡೆಯುತ್ತಿದ್ದಾರೆ. ಹೀಗೆ ಉಳಿದ ಯೋಜನೆಗಳ ಸ್ಥಿತಿ ಆಗಬಾರದು ಎಂಬುದು ಪ್ರಯಾಣಿಕರ ಆಗ್ರಹ.

ಪರ್ಯಾಯ ಆಗ್ದಿದ್ರೆ ಅಪಾಯ ಗ್ಯಾರಂಟಿ

ಪುಣಾ- ಬೆಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ನಂ, 4 ಹು-ಧಾ ನಗರ ಮೂಲಕ ಹೋಗಿದೆ. ಸದ್ಯ ಬೈಪಾಸ್‌ ಆಗಿದ್ದರಿಂದ ಭಾರಿ ವಾಹನಗಳು ನಗರ ಪ್ರವೇಶಿಸುತ್ತಿಲ್ಲ ಅಷೆÜ್ಟ. ಪೊಲೀಸ್‌ ವರದಿ ಪ್ರಕಾರ ಧಾರವಾಡ ಜಿಲ್ಲಾ ವ್ಯಾಪ್ತಿಯ ಎನ್‌ಎಚ್‌- 4 ಒಂದು ರೀತಿ ಮೃತ್ಯು ಕೂಪದಂತಾಗಿದೆ. ಕಳೆದ 10 ವರ್ಷದ ಅಂಕಿ ಸಂಖ್ಯೆ ಗಮನಿಸಿದರೆ ಈ ರಸ್ತೆಯಲ್ಲಿ ಬರೋಬ್ಬರಿ 393 ಮಾರಣಾಂತಿಕ ಅಪಘಾತ 983 ಮಾರಣಾಂತಿಕ ಅಲ್ಲದ ಅಪಘಾತಗಳು ಸಂಭವಿಸಿವೆ. ಇದರಲ್ಲಿ 453 ಜನ ಮೃತಪಟ್ಟಿದ್ದರೆ 2326 ಜನ ಗಾಯಗೊಂಡಿದ್ದಾರೆ. ಹು-ಧಾ ಬೈಪಾಸ್‌ ರಸ್ತೆ ಅಪಘಾತಗಳು ಇದರಲ್ಲಿವೆ. ಹೀಗಾಗಿ ಇದರ ಪ್ರಮಾಣ ತಡೆಗೆ ಪ್ರಸ್ತಾವಿತ ಮೂರು ಬೈಪಾಸ್‌ ರಸ್ತೆಗಳು ಆಗಲೇಬೇಕಾಗಿದೆ. ಇಲ್ಲದಿದ್ದರೆ ಅಪಾಯ ಪ್ರಮಾಣ ಹೆಚ್ಚುವುದು ಗ್ಯಾರಂಟಿ.

ಕಿರಿಕಿರಿ

ಹು-ಧಾ ಮಧ್ಯೆ ನಿರ್ಮಾಣಗೊಂಡ ಬೈಪಾಸ್‌ ರಸ್ತೆ ಖಾಸಗಿ ಸಹಭಾಗಿತ್ವದಲ್ಲಿ ಆಗಿದೆ. ನಂದಿ ಇನ್ಫ್ರಾಸ್ಟಕ್ಷರ್‌ ಕಂಪನಿಯು ಈ ರಸ್ತೆ ನಿರ್ಮಿಸಿದೆ. ಆಗಿನ ಒಪ್ಪಂದದ ಪ್ರಕಾರ 2024ರವರೆಗೆ ಇಲ್ಲಿ ಟೋಲ್‌ ಸಂಗ್ರಹಿಸಲಾಗುತ್ತಿದೆ. ಅಲ್ಲದೇ, ಆ ಒಪ್ಪಂದದ ಪ್ರಕಾರ ಅಲ್ಲಿಯವರೆಗೂ 20 ಕಿ.ಮೀ. ವ್ಯಾಪ್ತಿಯಲ್ಲಿ ಪರ್ಯಾಯ ರಸ್ತೆ ನಿರ್ಮಿಸಬಾರದು. ಹೀಗಾಗಿ ಈಗ ಹೊಸ ಪ್ರಸ್ತಾವಕ್ಕೆ ನಂದಿ ಕಂಪನಿಯು ತಗಾದೆ ತೆಗೆಯುವ ಸಾಧ್ಯತೆಗಳಿವೆ. ಈ ಸಮಸ್ಯೆಯನ್ನು ಬಗೆಹರಿಸಿಕೊಡುವ ಕೆಲಸ ಜನಪ್ರತಿನಿಧಿಗಳಿಂದ ಆಗಬೇಕಿದೆ ಎಂಬುದು ಅಧಿಕಾರಿಗಳ ಅಭಿಪ್ರಾಯ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ