Please enable javascript.ವನ್ಯ ಪ್ರಾಣಿಗಳಿಗೂ ‘ಬರ’ಬಿಸಿ - Wild animals' barabisi - Vijay Karnataka

ವನ್ಯ ಪ್ರಾಣಿಗಳಿಗೂ ‘ಬರ’ಬಿಸಿ

ವಿಕ ಸುದ್ದಿಲೋಕ 14 Mar 2017, 4:00 am
Subscribe

ಕಲಘಟಗಿ: ಈಗಾಗಲೇ ಬಿಸಿಲಿನ ತಾಪದಿಂದ ಜನ ಜಾನುವಾರುಗಳು ತತ್ತರಿಸಿದ್ದು, ವನ್ಯಪ್ರಾಣಿಗಳ ಜೀವಕ್ಕೂ ಸಂಕಷ್ಟ ತಂದಿದೆ. ಅರಣ್ಯಗಳಲ್ಲಿನ ಹೊಂಡಗಳು ಬತ್ತಿದ್ದು, ಕುಡಿಯಲು ನೀರು ಸಿಗದೇ ಪ್ರಾಣಿಗಳು ಸಂಕಷ್ಟ ಅನುಭವಿಸುತ್ತಿವೆ.

wild animals barabisi
ವನ್ಯ ಪ್ರಾಣಿಗಳಿಗೂ ‘ಬರ’ಬಿಸಿ

ಕಲಘಟಗಿ: ಈಗಾಗಲೇ ಬಿಸಿಲಿನ ತಾಪದಿಂದ ಜನ ಜಾನುವಾರುಗಳು ತತ್ತರಿಸಿದ್ದು, ವನ್ಯಪ್ರಾಣಿಗಳ ಜೀವಕ್ಕೂ ಸಂಕಷ್ಟ ತಂದಿದೆ. ಅರಣ್ಯಗಳಲ್ಲಿನ ಹೊಂಡಗಳು ಬತ್ತಿದ್ದು, ಕುಡಿಯಲು ನೀರು ಸಿಗದೇ ಪ್ರಾಣಿಗಳು ಸಂಕಷ್ಟ ಅನುಭವಿಸುತ್ತಿವೆ.

ಇಲ್ಲಿನ ಕಾಯ್ದಿರಿಸಿದ ದಟ್ಟ ಅರಣ್ಯ ಪ್ರದೇಶದಲ್ಲಿನ ಪ್ರಾಣಿಗಳಿಗೆ ಕುಡಿಯುವ ನೀರಿನ ಅಭಾವ ಬಹಳಷ್ಟು ಕಾಡುತ್ತಿದೆ. ಆದ್ದರಿಂದ ಅರಣ್ಯ ಇಲಾಖೆ ಸಿಬ್ಬಂದಿ ಮೂರು ದಿನಕ್ಕೊಮ್ಮೆ ಟ್ಯಾಂಕರ್‌ ಮೂಲಕ ಕುಡಿಯುವ ನೀರನ್ನು ಸಂಗ್ರಹಿಸಿ ಅರಣ್ಯದಲ್ಲಿ ಕೃತಕವಾಗಿ ನಿರ್ಮಿಸಲಾಗಿರುವ ಹೊಂಡಗಳಿಗೆ ತುಂಬಿಸಲಾಗುತ್ತಿದೆ. ಮಲೆನಾಡಿನಲ್ಲಿಯೂ ಈ ಬಾರಿ ಬರದ ಬೇಗೆ ಜನರ ಮೇಲಷ್ಟೇ ಅಲ್ಲದೆ ಕಾಡಿನ ಜೀವ ಸಂಕುಲದ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.

ಈ ಬಾರಿ ಮುಂಗಾರಿನಲ್ಲಿ ಮಳೆ ಸರಿಯಾಗಿ ಆಗದ ಕಾರಣ ಕಾಡಿನಲ್ಲಿನರುವ ಹಾಗೂ ಕಾಡಿನಂಚಿನಲ್ಲಿರುವ ಕೆರೆಗಳು, ಹೊಂಡ, ಸಣ್ಣ ಹಳ್ಳ, ತೊರೆ, ಜರಿಗಳು ಹಾಗೂ ಕೆರೆಗಳು ಬತ್ತಿ ಹೋಗಿದ್ದು, ವನ್ಯಮೃಗಗಳು ನೀರಿಲ್ಲದೆ ಪರದಾಡುವಂತಾಗಿದೆ.

ಕೃತಕ ಹೊಂಡಗಳ ನಿರ್ಮಾಣ: ಇಲ್ಲಿನ ವಲಯ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ವಲಯ ಅರಣ್ಯಾಧಿಕಾರಿಗಳು ವನ್ಯಮೃಗಗಳ ರಕ್ಷ ಣೆಗೆ ಮುಂದಾಗಿದ್ದು, ಕೃತಕ ಹೊಂಡ ನಿರ್ಮಿಸಿ ನೀರು ತುಂಬಿಸುತ್ತಿದ್ದಾರೆ. ಹೊಂಡಗಳಲ್ಲಿನ ನೀರು ಇಂಗದಿರಲೆಂದು ತಳದಲ್ಲಿ ಪಾಲಿಥಿನ್‌ ಹಾಳೆ ಹಾಕಲಾಗಿದೆ. ಹಸರಂಬಿ ಶಾಖೆಯ ಅರಣ್ಯ ಪ್ರದೇಶದಲ್ಲಿ 5, ತುಮರಿಕೊಪ್ಪ ಶಾಖೆಯ 1 ಹೀಗೆ ಸುಮಾರು 8 ಹೊಂಡಗಳನ್ನು ನಿರ್ಮಿಸಿ, ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದರಿಂದ ವನ್ಯ ಮೃಗಗಳು ಕೊಂಚ ನಿರಾಳವಾಗಿವೆ.

ಪ್ರಾಣಿ ಸಂಕುಲ ರಕ್ಷ ಣೆ ಅಗತ್ಯ: ಕಲಘಟಗಿಯ ದಟ್ಟ ಅರಣ್ಯ ಪ್ರದೇಶ ಈಗ ಕಡಿಮೆಯಾಗುತ್ತಿದೆ. ಒಂದು ಕಾಲದಲ್ಲಿ ಕಲಘಟಗಿಯ ಮಳೆ ಎಂದರೆ ಸಾಕಪ್ಪ ಎನ್ನುವಷ್ಟು ಮಳೆ ಸುರಿಯುತ್ತಿತ್ತು. ಆದರೆ ಈಗ ಹತ್ತು ವರ್ಷಗಳಿಂದ ಈಚೇಗೆ ವಾಡಿಕೆಯ ಮಳೆಯ ಪ್ರಮಾಣದಲ್ಲಿ ಹಾಗೂ ಸರಾಸರಿ ಮಳೆಯ ಪ್ರಮಾಣದಲ್ಲಿ ಹೆಚ್ಚು ಕಡಿಮೆಯಾಗುತ್ತಿದೆ. ಇದರಿಂದ ವೈವಿದ್ಯಮಯವಾದ ವನ್ಯ ಜೀವಸಂಕುಲದ ಮೇಲೆ ಪರಿಣಾಮ ಬೀರುತ್ತಿದ್ದು, ಇವುಗಳ ರಕ್ಷ ಣೆಗೆ ಮುಂದಾಗಬೇಕಿದೆ.

ನವಿಲು ಜಿಂಕೆಗಳ ತಾಣ: ಇಲ್ಲಿನ ಅರಣ್ಯ ಪ್ರದೇಶ ರಾಷ್ಟ್ರೀಯ ಪಕ್ಷಿ ನವಿಲುಗಳ ಹಾಗೂ ಜಿಂಕೆ, ನರಿಗಳ, ಕರಡಿಗಳ ತಾಣವಾಗಿದೆ. ಇದರ ಜತೆಗೆ ಹಳಿಯಾಳ, ದಾಂಡೇಲಿ ಅರಣ್ಯ ಪ್ರದೇಶದಲ್ಲಿ ಆನೆ ಹಾಗೂ ಅಪರೂಪಕ್ಕೆ ಚಿರತೆ ಸಂತತಿ ಕಾಣಸಿಗುತ್ತದೆ. ಆದರೆ ಇತ್ತೀಚೆಗೆ ಇವುಗಳ ಸಂತತಿಯೂ ಕ್ಷೀಣಿಸುತ್ತಿದೆ. ಒಟ್ಟಾರೆ ಅರಣ್ಯನಾಶ ಹಾಗೂ ಪರಿಸರ ನಾಶದ ಪರಿಣಾಮ ವನ್ಯಪ್ರಾಣಿಗಳ ಜೀವಕ್ಕೆ ಕುತ್ತು ತಂದಿದೆ.

ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ