ಆ್ಯಪ್ನಗರ

55 ಹಸು ನಿಗೂಢ ಸಾವು: ವರದಿಗೆ ಸೂಚನೆ

ಡಂಬಳ (ಗದಗ): ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹಳೇಕುಮ್ಮಟ ಗ್ರಾಮದಿಂದ ಆಹಾರ ಅರಸಿ ಕಪ್ಪತಗುಡ್ಡಕ್ಕೆ ಬಂದಿದ್ದ 900ಕ್ಕೂ ಗೋವುಗಳಲ್ಲಿ 55 ಹಸುಗಳ ನಿಗೂಢವಾಗಿ ಸಾವನ್ನಪ್ಪಿವೆ ಎಂಬ ದೂರಿನನ್ವಯ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ನೇತೃತ್ವದ ತಂಡ ಗುರುವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿತು.

Vijaya Karnataka 23 Aug 2019, 5:00 am
ಡಂಬಳ (ಗದಗ): ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹಳೇಕುಮ್ಮಟ ಗ್ರಾಮದಿಂದ ಆಹಾರ ಅರಸಿ ಕಪ್ಪತಗುಡ್ಡಕ್ಕೆ ಬಂದಿದ್ದ 900ಕ್ಕೂ ಗೋವುಗಳಲ್ಲಿ 55 ಹಸುಗಳ ನಿಗೂಢವಾಗಿ ಸಾವನ್ನಪ್ಪಿವೆ ಎಂಬ ದೂರಿನನ್ವಯ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ನೇತೃತ್ವದ ತಂಡ ಗುರುವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿತು.
Vijaya Karnataka Web GDG-22DML3


ಹಾರೋಗೇರಿ-ಮುರುಡಿ ಭಾಗದಲ್ಲಿ ಹಸುಗಳನ್ನು ಹೂತಿದ್ದ ಜಾಗವನ್ನು ಜಿಲ್ಲಾಧಿಕಾರಿಗಳು ವೀಕ್ಷಿಸಿದರು. ಹೂತಿರುವ ಜಾನುವಾರುಗಳನ್ನು ಹೊರತೆಗೆದು ಅಂಕಿ-ಸಂಖ್ಯೆಗಳ ಸಮೇತ ವರದಿ ಸಲ್ಲಿಸುವಂತೆ ಅರಣ್ಯಾಧಿಕಾರಿಗಳಿಗೆ ಸೂಚಿಸಿದರು.

ನಂತರ ಹಾರೋಗೇರಿ-ಬಸಾಪುರ ಗ್ರಾಮದ ಮಧ್ಯದಲ್ಲಿದ್ದ ಅನಾರೋಗ್ಯ ಪೀಡಿತ ಗೋವುಗಳನ್ನು ವೀಕ್ಷಿಸಿದರು. ಕಪ್ಪತಗುಡ್ಡ ಅರಣ್ಯ ಪ್ರದೇಶದಲ್ಲಿ ವಿಷಪೂರಿತ ಸಸ್ಯಗಳನ್ನು ತಿಂದು ಕೆಲ ಗೋವು ಮೃತಪಟ್ಟಿರಬಹುದು. ಜಾನುವಾರು ಸಾವು ಸಾಂಕ್ರಾಮಿಕವಾಗಬಹುದು. ಹೀಗಾಗಿ ತಕ್ಷ ಣ ಗೋವುಗಳನ್ನು ಬೇರೆಡೆ ಕರೆದೊಯ್ಯುವಂತೆ ಗೋಪಾಲಕ ಯಂಕಪ್ಪ ಗೊಲ್ಲರ ಅವರಿಗೆ ಜಿಲ್ಲಾಧಿಕಾರಿ ಸೂಚಿಸಿದರು.

''ನಾವು ಅಲೆಮಾರಿ ಗೋಪಾಲಕರು. ನಮ್ಮ ಭಾಗದಲ್ಲಿ ಮಳೆ ಇಲ್ಲದೆ ಮೇವಿಗಾಗಿ ಇಲ್ಲಿಗೆ ಬಂದಿದ್ದೇವೆ. ಈಗ ನಾವು ಎಲ್ಲಿಗೆ ಹೋಗಬೇಕು. ರೋಗದಿಂದ ಬಳಲುತ್ತಿರುವ ಜಾನುವಾರುಗಳಿಗೆ ಪಶು ವೈದ್ಯರು ಚಿಕಿತ್ಸೆ ನೀಡಬೇಕು'' ಎಂದು ಗೊಲ್ಲರ ಮನವಿ ಮಾಡಿಕೊಂಡರು.

ಆಗ ಜಿಲ್ಲಾಧಿಕಾರಿ, ''ಗೋವುಗಳ ಸಾವು ಬಗ್ಗೆ ಪಶು ವೈದ್ಯರಿಂದ ವರದಿ ಬರಲಿದೆ. ಸದ್ಯ ಡೋಣಿ ಗ್ರಾಮದ ಬಳಿ ಗೋಶಾಲೆಯಲ್ಲಿ ಅಥವಾ ಕೊಪ್ಪಳ ತಾಲೂಕಿನ ಅಳವಂಡಿ ಗೋಶಾಲೆಗೆ ಕರೆದೊಯ್ಯಿರಿ. ಮೇವು ಪೂರೈಸುತ್ತೇವೆ ಮತ್ತು ಚಿಕಿತ್ಸೆ ಸಹ ನೀಡಲಾಗುತ್ತದೆ. ಈ ಕುರಿತು ಕೊಪ್ಪಳ ಜಿಲ್ಲಾಧಿಕಾರಿಗೂ ತಿಳಿಸುತ್ತೇನೆ'' ಎಂದು ಹೇಳಿದರು. ಆಗ ಒಂದೆರಡು ದಿನದಲ್ಲಿ ಅಳವಂಡಿ ಗೋಶಾಲೆಗೆ ತೆರಳುವುದಾಗಿ ಯಂಕಪ್ಪ ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಪಶುಪಾಲನೆ ಇಲಾಖೆ ಉಪನಿರ್ದೇಶಕ ಡಾ.ಚೆನ್ನಕೇಶವ, ತಹಸೀಲ್ದಾರ ವೆಂಕಟೇಶ ನಾಯಕ್‌, ಸಿಪಿಐ ಶ್ರೀನಿವಾಸ ಮೇಟಿ, ತಾಲೂಕು ಪಶು ವೈದ್ಯಾಧಿಕಾರಿ ಡಾ.ಎಸ್‌.ವಿ.ತಿಗರಿಮಠ, ಕಂದಾಯ ನಿರೀಕ್ಷ ಕ ಎಸ್‌.ಎಸ್‌.ಬಿಚಾಲಿ ಇದ್ದರು.

ಅಕ್ರಮ ಪ್ರವೇಶ ದೂರು ದಾಖಲು: ಕಪ್ಪತಗುಡ್ಡ ಅರಣ್ಯ ಪ್ರದೇಶವು ಸಂರಕ್ಷಿತ ಪ್ರದೇಶ ಮತ್ತು ವನ್ಯಜೀವಿ ಧಾಮವಾಗಿದೆ. ಒಳಗಡೆ ಹೋಗದಂತೆ ಸೂಚನೆ ನೀಡಿದರೂ ಹೋಗಿದ್ದಾರೆ. ಅಕ್ರಮವಾಗಿ ಪ್ರವೇಶ ಮಾಡಿದ್ದಕ್ಕೆ ಯಂಕಪ್ಪ ಸೇರಿ ಒಟ್ಟು ಮೂವರ ವಿರುದ್ಧ ಅರಣ್ಯ ಇಲಾಖೆ ಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ದೇವೆ. ಈಗ ಬೇರೆಡೆ ಹೋಗದಿದ್ದರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಉಪ ಅರಣ್ಯ ಸಂರಕ್ಷ ಣಾಧಿಕಾರಿ ಸೂರ್ಯ ಸೇನ್‌ ತಿಳಿಸಿದ್ಧಾರೆ.

ಮಾನವೀಯತೆ ಮರೆತರೆ: ಅನಾರೋಗ್ಯದಿಂದ ಬಳಲುತ್ತಿರುವ ಗೋವುಗಳಿಗೆ ಔಷಧೋಪಚಾರ ಮಾಡಿ ಕಾಪಾಡುವಂತೆ ಗೋಪಾಲಕ ಬೇಡಿಕೊಂಡರೂ ಅಧಿಕಾರಿಗಳು ಮಾತ್ರ ಮೂಕ ಪ್ರಾಣಿಗಳ ರೋದನ ಮರೆತು ಕಪ್ಪತಗುಡ್ಡ ಪ್ರದೇಶದಿಂದ ಹೊರಹಾಕಲು ಮುಂದಾಗಿದ್ದಾರೆ ಎಂದು ಹಾರೋಗೇರಿ ಗ್ರಾಮಸ್ಥರು ದೂರಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ