ಆ್ಯಪ್ನಗರ

ಸಮಾಧಾನದ ಮಧ್ಯೆಯೂ ಸಂಭ್ರಮ

ಗದಗ :ಮಹದಾಯಿ, ಕಳಸಾ ಬಂಡೂರಿ ಕುರಿತು ಮಂಗಳವಾರ ನ್ಯಾಯಾಧಿಕರಣ ತೀರ್ಪು ಪ್ರಕಟಗೊಳ್ಳುತ್ತಿದ್ದಂತೆ, ಹೋರಾಟದ ತವರು ಗದಗ ಜಿಲ್ಲೆಯ ಜನರಲ್ಲಿ ಸಮಾಧಾನದ ಮಧ್ಯೆಯೂ ಸಂಭ್ರಮ ಮನೆ ಮಾಡಿತು. ಕರ್ನಾಟಕಕ್ಕೆ ಹನಿ ನೀರೂ ಕೊಡುವುದಿಲ್ಲ ಎಂಬ ಗೋವಾ ರಾಜ್ಯದ ಮೊಂಡು ವಾದಕ್ಕೆ ನ್ಯಾಯಾಧಿಕರದ ತೀರ್ಪು ಭಾರಿ ತಿರುಗೇಟು ನೀಡಿರುವುದು ಸಂಭ್ರಮಕ್ಕೆ ಕಾರಣವಾದರೆ, ರೈತರು ನಿರೀಕ್ಷಿಸಿದಷ್ಟು ನೀರು ಸಿಗದಿರುವುದು ತುಸು ಬೇಸರ ತರಿಸಿದೆ.

Vijaya Karnataka 15 Aug 2018, 5:00 am
ಗದಗ :ಮಹದಾಯಿ, ಕಳಸಾ ಬಂಡೂರಿ ಕುರಿತು ಮಂಗಳವಾರ ನ್ಯಾಯಾಧಿಕರಣ ತೀರ್ಪು ಪ್ರಕಟಗೊಳ್ಳುತ್ತಿದ್ದಂತೆ, ಹೋರಾಟದ ತವರು ಗದಗ ಜಿಲ್ಲೆಯ ಜನರಲ್ಲಿ ಸಮಾಧಾನದ ಮಧ್ಯೆಯೂ ಸಂಭ್ರಮ ಮನೆ ಮಾಡಿತು. ಕರ್ನಾಟಕಕ್ಕೆ ಹನಿ ನೀರೂ ಕೊಡುವುದಿಲ್ಲ ಎಂಬ ಗೋವಾ ರಾಜ್ಯದ ಮೊಂಡು ವಾದಕ್ಕೆ ನ್ಯಾಯಾಧಿಕರದ ತೀರ್ಪು ಭಾರಿ ತಿರುಗೇಟು ನೀಡಿರುವುದು ಸಂಭ್ರಮಕ್ಕೆ ಕಾರಣವಾದರೆ, ರೈತರು ನಿರೀಕ್ಷಿಸಿದಷ್ಟು ನೀರು ಸಿಗದಿರುವುದು ತುಸು ಬೇಸರ ತರಿಸಿದೆ.
Vijaya Karnataka Web exciting in the midst of peace
ಸಮಾಧಾನದ ಮಧ್ಯೆಯೂ ಸಂಭ್ರಮ


ಕುಡಿಯುವ ನೀರಿಗೆ 5.5 ಟಿಎಂಸಿ ಹಾಗೂ ಮಹದಾಯಿ ವಿದ್ಯುತ್‌ ಉತ್ಪಾದನೆ ಯೋಜನೆಗೆ 8 ಟಿಎಂಸಿ ಸೇರಿದಂತೆ ಒಟ್ಟು 13.5 ಟಿಎಂಸಿ ನೀರು ಕರ್ನಾಟಕಕ್ಕೆ ಲಭ್ಯವಾಗಿದೆ. ಆದರೆ ವಿದ್ಯುತ್‌ ಉತ್ಪಾದನೆಗೆ ಬಳಕೆಯಾಗುವ 8 ಟಿಎಂಸಿ ನೀರು ಗೋವಾ ರಾಜ್ಯಕ್ಕೆ ಸೇರುತ್ತದೆ ಎನ್ನುವುದು ರೈತ ಸಮೂಹದ ಅಸಮಾಧಾನಕ್ಕೆ ಕಾರಣವಾಗಿದೆ.

ಕುಡಿಯುವ ನೀರಿಗೆ ಹೆಚ್ಚುವರಿಯಾಗಿ 7.5 ಟಿಎಂಸಿ ಸಹಿತ ಒಟ್ಟು 36.5 ಟಿಎಂಸಿ ನೀರಿನ ಬೇಡಿಕೆಯನ್ನು ಕರ್ನಾಟಕ ಸಲ್ಲಿಸಿತ್ತು. ಅಂತಿಮವಾಗಿ ನ್ಯಾಯಾಧಿಕರಣ 13.5 ಟಿಎಂಸಿ ನೀರು ಬಳಕೆಗೆ ಅವಕಾಶ ಕೊಟ್ಟಿದೆ. ಹನಿ ನೀರೂ ಸಿಗದಂತಹ ಪರಿಸ್ಥಿತಿಯಲ್ಲಿ ಕುಡಿಯುವ ನೀರಿಗಾದರೂ 5.5 ಟಿಎಂಸಿ ನೀರು ಸಿಕ್ಕಿರುವುದು ಹೋರಾಟಕ್ಕೆ ಸಂದ ಜಯ ಎನ್ನುವುದು ರೈತ ಸಮೂಹದ ಅಭಿಪ್ರಾಯ.

ಹೋರಾಟಗಾರರಲ್ಲಿ ಸಂತಸ: ನ್ಯಾಯಾಧಿಕರಣ ತೀರ್ಪು ಹೊರಬೀಳುತ್ತಿದ್ದಂತೆ ಬಂಡಾಯದ ನೆಲ ನರಗುಂದ ಹೋರಾಟ ವೇದಿಕೆಯಲ್ಲಿ ರೈತರು ಸಿಹಿ ಹಂಚಿ, ಬಣ್ಣ ಹಚ್ಚಿ ಸಂಭ್ರಮಿಸಿದ್ದಾರೆ. ನೀರಾವರಿಗೆ ಅಗತ್ಯ ಇರುವಷ್ಟು ನೀರು ಲಭ್ಯವಾಗದಿದ್ದರೂ ರೈತ ಹೋರಾಟದ ಛಲದಿಂದ ಕುಡಿಯುವುದಕ್ಕಾದರೂ ನೀರು ಸಿಕ್ಕಿತು ಎನ್ನುವ ಸಮಾಧಾನದೊಂದಿಗೆ ಸಂಭ್ರಮ ಆಚರಿಸಿದ್ದಾರೆ.

ಅವಳಿ ನಗರದಲ್ಲೂ ಸಂಭ್ರಮ: ನ್ಯಾಯಾಧಿಕರಣ ತೀರ್ಪು ಪ್ರಕಟಗೊಳ್ಳುತ್ತಿದ್ದಂತೆ ಗದಗ-ಬೆಟಗೇರಿ ಅವಳಿ ನಗರದಲ್ಲಿ ಜೆಡಿಎಸ್‌ ಕಾರ್ಯಕರ್ತರು, ಕನ್ನಡ ಪರ ಸಂಘಟನೆಗಳ ಸದಸ್ಯರು ಮಹಾತ್ಮಾ ಗಾಂಧಿ ವೃತ್ತದಲ್ಲಿ ಸಂಭ್ರಮಾಚರಿಸಿದರು. ಕರವೇ ಕಾರ್ಯಕರ್ತರು ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಕ್ಷೀರಾಭಿಷೇಕ ನೆರವೇರಿಸಿ ಸಂತಸ ಹಂಚಿಕೊಂಡರು.

ಹೋರಾಟದ ಗೊಂದಲ: ತೀರ್ಪು ಪ್ರಕಟಗೊಳ್ಳುತ್ತಿದ್ದಂತೆ ರೈತ ಸೇನಾ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಹೋರಾಟವನ್ನು ಅಂತ್ಯಗೊಳಿಸುವುದಾಗಿ ಹೇಳಿಕೆ ನೀಡಿದ್ದರೆ, ನರಗುಂದದ ಕೆಲ ಹೋರಾಟಗಾರರು ಮಹದಾಯಿ ನೀರು ಹರಿಯುವವರೆಗೂ ಹೋರಾಟ ಮುಂದುವರಿಯಲಿದೆ ಎನ್ನುವ ಅಭಿಪ್ರಾಯ ತಿಳಿಸಿರುವುದು ರೈತರ ಗೊಂದಲಕ್ಕೆ ಕಾರಣವಾಗಿದೆ.

ಮೇಲ್ಮನವಿ ಸಲ್ಲಿಕೆಯಾಗಲಿ

ನ್ಯಾಯಾಧಿಕರಣ ತೀರ್ಪು ಹುಬ್ಬಳ್ಳಿ- ಧಾರವಾಡ ಮಹಾನಗರದ ಜನರ ಕುಡಿಯುವ ನೀರಿನ ದಾಹ ನೀಗಿಸುವುದಾಗಿದೆ. ವಿದ್ಯುತ್‌ ಉತ್ಪಾದನೆಗೆ 8 ಟಿಎಂಸಿ, ಕುಡಿಯುವ ನೀರಿಗಾಗಿ 5.5 ಟಿಎಂಸಿ ನೀರು ದೊರೆತಿರುವುದು ರೈತ ಸಮೂಹಕ್ಕೆ ಯಾವುದೇ ಲಾಭವಾಗುವುದಿಲ್ಲ. ತೀರ್ಪು ಗೋವಾ ಮೊಂಡು ವಾದಕ್ಕೆ ತಿರುಗೇಟು ನೀಡಿದೆ ಹೊರತು ರೈತರ ಸಮಸ್ಯೆಗೆ ಪೂರ್ಣ ಪ್ರಮಾಣದ ಪರಿಹಾರ ದೊರೆತಿಲ್ಲ. ನ್ಯಾಯಾಧಿಕರಣದ ತೀರ್ಪನ್ನು ಸಮಗ್ರವಾಗಿ ಅಧ್ಯಯನ ಮಾಡಿ ಮೇಲ್ಮನವಿ ಸಲ್ಲಿಸಿ ಹೆಚ್ಚಿನ ನೀರು ಪಡೆಯಲು ರಾಜ್ಯ ಸರಕಾರ ಮುಂದಾಗಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ