ಆ್ಯಪ್ನಗರ

ಗದಗ: ಸೈಬರ್‌ ವಂಚನೆ ತಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ

ಸೈಬರ್‌ ವಂಚನೆ ತಡೆ ಕುರಿತು ಜಾಗೃತಿ ಕೈಗೊಳ್ಳುವುದು ಇಂದಿನ ಅಗತ್ಯವಾಗಿದೆ. ಸಾಮಾಜಿಕ ಜಾಲತಾಣ ಮಾತ್ರವಲ್ಲದೇ ಕಾಲೇಜುಗಳಿಗೆ ಹೋಗಿಯೂ ಜಾಗೃತಿ ಮಾಡಲಾಗುತ್ತಿದೆ

Vijaya Karnataka Web 17 Jan 2022, 10:50 pm
ಸಲೀಮ್‌ ಬಳಬಟ್ಟಿ ಗದಗ
Vijaya Karnataka Web gadag police awareness programme on cyber crime
ಗದಗ: ಸೈಬರ್‌ ವಂಚನೆ ತಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ


ಸೈಬರ್‌ ವಂಚನೆ ಪ್ರಕರಣಗಳು ದಿನೇದಿನೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಜಿಲ್ಲಾ ಪೊಲೀಸ್‌ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಸರಣಿ ಜಾಗೃತಿ ಆರಂಭಿಸಿದೆ. ಗದಗ ಜಿಲ್ಲಾ ಪೊಲೀಸ್‌ ವತಿಯಿಂದ ಸೈಬರ್‌ ವಂಚನೆ ತಿಳಿವಳಿಕೆ ಅಭಿಯಾನ ಭಾಗ- 1, ಭಾಗ-2 ಎನ್ನವ ಸರಣಿಯನ್ನು ಪೊಲೀಸ್‌ ಇಲಾಖೆ ಆರಂಭಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ನಿಯಮಿತವಾಗಿ ಭಿತ್ತಿಪತ್ರಗಳನ್ನು ಹಂಚಿಕೊಳ್ಳುತ್ತಿದೆ. ಜೊತೆಗೆ ಸೈಬರ್‌ ಅಪರಾಧಗಳ ಬಗ್ಗೆ ದೂರು ನೀಡುವ ವೆಬ್‌ಸೈಟ್‌ ಮಾಹಿತಿ ಮತ್ತು ಆನ್‌ಲೈನ್‌ ವಂಚನೆಯ ತುರ್ತು ಸಂದರ್ಭದಲ್ಲೂ 112 ಸಂಖ್ಯೆಗೆ ಕರೆ ಮಾಡುವ ಮಾಹಿತಿಯನ್ನು ಬಿತ್ತರಿಸುತ್ತಿದೆ.

​30 ರೀತಿಯ ಮಾಹಿತಿ!

ಸೈಬರ್‌ ವಂಚನೆಗೆ ಒಳಗಾಗದಂತೆ ಎಚ್ಚರಿಕೆ ವಹಿಸಲು ಜನರಿಗೆ ಅಗತ್ಯ ಮಾಹಿತಿ ನೀಡಲಾಗುತ್ತಿದೆ. ಬ್ಯಾಂಕಿಂಗ್‌, ಶಾಪಿಂಗ್‌, ಗಿಫ್ಟ್‌, ಸಾಕು ಪ್ರಾಗಳ ಮಾರಾಟದ ಹೆಸರಿನಲ್ಲಿ ನಡೆಯುವಂಥ 30 ರೀತಿಯ ಸೈಬರ್‌ ವಂಚನೆಗಳ ಬಗ್ಗೆ ಜಾಗೃತಿ ಮೂಡಿಸುವಂಥ ಭಿತ್ತಿಪತ್ರಗಳನ್ನು ಸಿದ್ಧವಾಗಿಟ್ಟುಕೊಳ್ಳಲಾಗಿದೆ. ನಿಯಮಿತವಾಗಿ ಅವುಗಳನ್ನು ಫೇಸ್ಬುಕ್‌, ವಾಟ್ಸಾಪ್‌, ಟ್ವಿಟರ್‌ ಮೂಲಕ ಹಂಚಿಕೊಳ್ಳಲಾಗುತ್ತಿದೆ. ಇದರಿಂದ ಯುವ ಸಮೂಹಕ್ಕೆ ಸಾಕಷ್ಟು ಪ್ರಯೋಜನವಾಗಿದೆ. ಹೀಗಾಗಿ ಸರ ರೀತಿಯಲ್ಲಿ ನಿರಂತರವಾಗಿ ಸೈಬರ್‌ ವಂಚನೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಗಳು ನಡೆದಿವೆ ಎನ್ನುತ್ತಾರೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು.

​ಅತ್ಯುಪಯುಕ್ತ ಮಾಹಿತಿ

ಆನ್‌ಲೈನ್‌ನಲ್ಲಿ ಸಾಕು ಪ್ರಾಣಿಗಳ ಮಾರಾಟದ ಹೆಸರಿನಲ್ಲಿ ನಡೆಯುವ ವಂಚನೆ, ಎಟಿಎಂಗಳನ್ನು ಸುರಕ್ಷಿತವಾಗಿ ಬಳಕೆ ಮಾಡುವುದು ಹೇಗೆ?, ಎಟಿಎಂ ಕಾರ್ಡನ್ನು ಸ್ಕಿಮ್ಮಿಂಗ್‌ ಮಾಡಿ ವಂಚಿಸುವ ರೀತಿ, ಯಾವ ಎಟಿಎಂನಲ್ಲಿ ಹಣ ಪಡೆಯಬೇಕು, ಮಕ್ಕಳನ್ನು ಎಟಿಎಂಗೆ ಕಳುಹಿಸುವುದರಿಂದ ಆಗುವ ಸಮಸ್ಯೆ ಕುರಿತು, ಪ್ರತ್ಯೇಕವಾದ ಭಿತ್ತಿಪತ್ರಗಳನ್ನು ಜಿಲ್ಲಾ ಪೊಲೀಸ್‌ ಇಲಾಖೆ ರೂಪಿಸಿದೆ. ಸ್ಪಷ್ಟ ಹಾಗೂ ನಿಖರ ಮಾಹಿತಿಯನ್ನು ಒಳಗೊಂಡಿರುವ ಮಾಹಿತಿಯನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಅಧಿಕೃತ ಟ್ವಿಟರ್‌ ಅಕೌಂಟ್‌, ಜಿಲ್ಲಾ ಪೊಲೀಸ್‌ ಇಲಾಖೆ ಫೇಸ್ಬುಕ್‌ ಪೇಜ್‌ಗಳನ್ನು ಭಿತ್ತಿಪತ್ರಗಳನ್ನು ಪೋಸ್ಟ್‌ ಮಾಡಲಾಗಿದೆ.

​ತಕ್ಷಣ ದೂರು ನೀಡಿ

ಸೈಬರ್‌ ವಂಚನೆಗೆ ಒಳಗಾದವರು ಪೊಲೀಸ್‌ ಠಾಣೆಗೆ ಬಂದು ದೂರು ನೀಡಬಹುದು. ಇಲ್ಲವೇ www.cybercrime.gov.in ಮೂಲಕವೂ ದೂರು ದಾಖಲಿಸಬಹುದು. ಜತೆಗೆ ಬ್ಯಾಂಕಿಂಗ್‌ ವಂಚನೆ, ಓಟಿಪಿ ಮೂಲಕ ಹಣ ವರ್ಗಾವಣೆಯಾಗಿದ್ದರೆ ತಕ್ಷಣ 112 ಸಂಖ್ಯೆಗೆ ಕರೆ ಮಾಡಿ ನೆರವು ಪಡೆಯಬಹುದು. ಇತ್ತೀಚಿನ ದಿನಗಳಲ್ಲಿ ಸೈಬರ್‌ ವಂಚನೆ ಪ್ರಕರಣಗಳನ್ನು ಪೊಲೀಸರು ಯಶಸ್ವಿಯಾಗಿ ಪತ್ತೆ ಹಚ್ಚಿದ್ದು, ಜನ ಯಾವುದೇ ಅಳುಕಿಲ್ಲದೇ ದೂರು ನೀಡಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.

​ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹೇಳಿದ್ದೇನು?

ಸೈಬರ್‌ ವಂಚನೆ ತಡೆ ಕುರಿತು ಜಾಗೃತಿ ಕೈಗೊಳ್ಳುವುದು ಇಂದಿನ ಅಗತ್ಯವಾಗಿದೆ. ಸಾಮಾಜಿಕ ಜಾಲತಾಣ ಮಾತ್ರವಲ್ಲದೇ ಕಾಲೇಜುಗಳಿಗೆ ಹೋಗಿಯೂ ಜಾಗೃತಿ ಮಾಡಲಾಗುತ್ತಿದೆ. ಕೋವಿಡ್‌ ಭೀತಿ ತಗ್ಗಿದ ನಂತರ ದೊಡ್ಡ ಮಟ್ಟದಲ್ಲಿ ಜಾಗೃತಿ ಅಭಿಯಾನ ಕೈಗೊಂಡು, ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ