ಆ್ಯಪ್ನಗರ

ಗದಗದಲ್ಲಿ ಮತ್ತೊಮ್ಮೆ ನೆರೆ ಭೀತಿ..! ಉಕ್ಕಿ ಹರಿಯುತ್ತಿರುವ ಬೆಣ್ಣೆಹಳ್ಳ, ಮಲಪ್ರಭಾ

ಗದಗ ಜಿಲ್ಲೆಯಲ್ಲಿ ವರ್ಷದ ಹಿಂದಷ್ಟೆ ನೆರೆ ಭೀತಿ ಅನುಭವಿಸಿದ್ದ ಜನರಿಗೆ ಉಕ್ಕಿ ಹರಿಯುತ್ತಿರುವ ಬೆಣ್ಣೆಹಳ್ಳ ಮತ್ತು ಮಲಪ್ರಭಾ ನದಿ ಮತ್ತೊಮ್ಮೆ ನೆರೆ ಭೀತಿ ಸೃಷ್ಟಿಸಿದೆ.

Vijaya Karnataka Web 6 Aug 2020, 6:30 pm
ಗದಗ: ವರ್ಷದ ಹಿಂದಷ್ಟೆ ನೆರೆ ಭೀತಿ ಅನುಭವಿಸಿದ್ದ ಜಿಲ್ಲೆಯ ಜನರಿಗೆ ಉಕ್ಕಿ ಹರಿಯುತ್ತಿರುವ ಬೆಣ್ಣೆಹಳ್ಳ ಮತ್ತು ಮಲಪ್ರಭಾ ನದಿ ಮತ್ತೊಮ್ಮೆ ನೆರೆ ಭೀತಿ ಸೃಷ್ಟಿಸಿದೆ. ಕಳೆದ ಮೂರು ದಿನಗಳಿಂದ ಪಶ್ಚಿಮ ಘಟ್ಟ ಸಹಿತ ಉತ್ತರ ಕರ್ನಾಟಕ ಭಾಗದಲ್ಲಿ ಬಿಟ್ಟು ಬಿಡದೆ ಮಳೆ ಸುರಿಯುತಿರುವುದರಿಂದ ಬೆಣ್ಣೆಹಳ್ಳ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಇನ್ನೊಂದೆಡೆ ನವಿಲುತೀರ್ಥ ಜಲಾಶಯ ಭರ್ತಿಗೆ ಕ್ಷಣಗಣನೆ ಆರಂಭವಾಗಿದ್ದು, ಯಾವುದೇ ಸಂದರ್ಭದಲ್ಲೂ ಡ್ಯಾಂನಿಂದ ನೀರು ಹೊರಬಿಡಲಾಗುವುದು ಎಂದು ಡ್ಯಾಂ ಅಧಿಕಾರಿಗಳು ಗುರುವಾರ ಸೂಚನೆ ನೀಡಿರುವುದು ನದಿ ಪಾತ್ರದ ಗ್ರಾಮಸ್ಥರ ಆತಂಕ್ಕೆ ಕಾರಣಾಗಿದೆ.
Vijaya Karnataka Web heavy rain in karnataka floods situation create in gadaga district
ಗದಗದಲ್ಲಿ ಮತ್ತೊಮ್ಮೆ ನೆರೆ ಭೀತಿ..! ಉಕ್ಕಿ ಹರಿಯುತ್ತಿರುವ ಬೆಣ್ಣೆಹಳ್ಳ, ಮಲಪ್ರಭಾ


ಸದ್ಯ, ಧಾರವಾಡ ಮತ್ತು ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದ ಬೆಣ್ಣೆಹಳ್ಳ ರಭಸವಾಗಿ ಹರಿಯುತ್ತಿದ್ದು, ನರಗುಂದ ತಾಲೂಕಿನ ಯಾವಗಲ್ ಗ್ರಾಮದ ಸೇತುವೆಯೊಂದು ಜಲಾವೃತವಾಗಿದೆ. ಇದರಿಂದ ಸಂಚಾರ ಅಸ್ತವ್ಯಸ್ತಗೊಂಡಿದೆ. ನರಗುಂದ ಮತ್ತು ರೋಣ ಸಂಪರ್ಕಿಸುವ ಈ ಸೇತುವೆ ಬೆಣ್ಣೆಹಳ್ಳದ ಪ್ರವಾಹಕ್ಕೆ ಸಿಲುಕಿದೆ. ಅದರ ಜೊತೆಗೆ ನೂರಾರು ಎಕರೆ ಬೆಳೆ ಸಹ ನೀರು ಪಾಲಾಗಿದೆ. ಇದೆಲ್ಲದರ ಜೊತೆಗೆ ಡ್ಯಾಂ ನಿಂದ ನೀರು ಬಿಡಗಡೆಯಾಗುವ ಸಾಧ್ಯತೆಯಿರುವುದು ಜನರನ್ನು ಮತ್ತಷ್ಟು ಚಿಂತೆಗೀಡು ಮಾಡಿದೆ.

​ಗ್ರಾಮಸ್ಥರಿಗೆ ಎಚ್ಚರಿಕೆ

ಬೆಳಗಾವಿ ಜಿಲ್ಲೆ ಖಾನಾಪುರ ಪ್ರದೇಶದಲ್ಲಿ ನಿರಂತರ ಮಳೆಯಾಗುತ್ತಿರುವ ಕಾರಣ ಮಲಪ್ರಭಾ ದಿನ ಉಕ್ಕಿ ಹರಿಯುತ್ತಿದೆ. ಸದ್ಯ ನದಿಗೆ 48821 ಕ್ಯೂಸೆಕ್ ಒಳಹರಿವಿದ್ದು, ಡ್ಯಾಂನಿಂದ ಕೇವಲ 1062 ಕ್ಯೂಸೆಕ್ ನೀರು ಮಾತ್ರ ಹೊರಬಿಡಲಾಗುತ್ತದೆ. 2079.50 ಅಡಿ ಎತ್ತರದ ಜಲಾಶಯದಲ್ಲಿ ಸದ್ಯ (ಆ.6ರ ವರೆಗೆ) 2077.70 ಅಡಿ ನೀರು ಸಂಗ್ರಹಗೊಂಡಿದೆ. ಹೀಗಾಗಿ ನದಿಗೆ ಯಾವುದೇ ಸಂದರ್ಭದಲ್ಲಾದರೂ ನೀರು ಹರಿಬಿಡಲಾಗುವುದು. ನದಿ ಪಾತ್ರದಲ್ಲಿರುವ ಜನ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಡ್ಯಾಂ ಅಧಿಕಾರಿಗಳು, ಬೆಳಗಾವಿ, ಬಾಗಲಕೋಟ, ಗದಗ ಜಿಲ್ಲಾಧಿಕಾರಿಗಳಿಗೆ ಸಂದೇಶ ರವಾನಿಸಿರುವುದು ನದಿ ಪಾತ್ರದ ಜನರಲ್ಲಿ ಆತಂಕ ಸೃಷ್ಟಿಸಿದೆ.

​ಬೆಣ್ಣೆಹಳ್ಳದ ಸಂಕಷ್ಟ

ಬೆಣ್ಣೆಹಳ್ಳ ಉಕ್ಕಿ ಹರಿಯುತ್ತಿರುವ ಕಾರಣ ನರಗುಂದ ಮತ್ತು ರೋಣ ತಾಲೂಕಿನ ಯಾವಗಲ್, ಹದ್ಲಿ, ಖಾನಾಪುರ, ಗಂಗಾಪುರ, ಮಾಡವಾಳ, ಅಸೂಟಿ ಗ್ರಾಮಗಳು ಸಂಕಷ್ಟ ಎದುರಿಸುತ್ತಿವೆ. ಇದರ ಜೊತೆಗೆ ಮಲಪ್ರಭೆಯೂ ಉಕ್ಕಿ ಹರಿದರೆ ಮೆಣಸಗಿ, ಹೊಳೆಆಲೂರ, ಶಿರೋಳ, ಕೊಣ್ಣೂರು ಸೇರಿದಂತೆ 20ಕ್ಕೂ ಹೆಚ್ಚು ಹಳ್ಳಿಗಳು ಮೊದಲ ಹಂತದಲ್ಲಿಯೇ ನೆರೆಗೆ ತುತ್ತಾಗುವ ಸಾಧ್ಯತೆಯಿದೆ. ನವಿಲುತೀರ್ಥ ಜಲಾಶಯದ ಅಧಿಕಾರಿಗಳ ಜೊತೆ ಜಿಲ್ಲಾಡಳಿತ ನಿರಂತರ ಸಂಪರ್ಕದಲ್ಲಿದೆ. ನೀರಿನ ಒಳಹರಿವು ಆಧರಿಸಿ ನೀರು ಹೊರಬಿಡಲಾಗುತ್ತದೆ.

​ಜಿಲ್ಲಾಧಿಕಾರಿ ಭೇಟಿ

ಬೆಣ್ಣೆ ಹಳ್ಳ ಉಕ್ಕಿ ಹರಿದ ಪರಿಣಾಮ ಜಲಾವೃತಗೊಂಡ ಯಾವಗಲ್ ಗ್ರಾಮದ ಸೇತುವೆಗೆ ಜಿಲ್ಲಾಧಿಕಾರಿ ಸುಂದರೇಶ ಬಾಬು ಎಂ., ಜಿಪಂ ಸಿಇಒ ಡಾ. ಆನಂದ ಕೆ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್. ಸಹಿತ ಅನೇಕ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಅಲ್ಲದೇ ನದಿ ಪಾತ್ರದ ಗ್ರಾಮಗಳಿಗೂ ಭೇಟಿ ನೀಡಿ ಪ್ರವಾಹ ಪರಿಸ್ಥಿತಿಯ ಅವಲೋಕನ ನಡೆಸಿದ್ದಾರೆ. ನವಿಲುತೀರ್ಥ ಜಲಾಶಯದ ಅಧಿಕಾರಿಗಳ ಜೊತೆ ಜಿಲ್ಲಾಡಳಿತ ನಿರಂತರ ಸಂಪರ್ಕದಲ್ಲಿದೆ. ನೀರಿನ ಒಳಹರಿವು ಆಧರಿಸಿ ನೀರು ಹೊರಬಿಡಲಾಗುತ್ತದೆ. 20 ಸಾವಿರ ಕ್ಯೂಸೆಕ್ ನೀರು ಹೊರಬಿಟ್ಟಾಗ ಮಾತ್ರ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗುತ್ತದೆ. ಸದ್ಯ ಅಂಥ ಪರಿಸ್ಥಿತಿ ಇಲ್ಲ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.

​​ಎಚ್ಚೆತ್ತುಕೊಳ್ಳದ ಅಧಿಕಾರಿಗಳು, ಜನಪ್ರತಿನಿಧಿಗಳು

ಪಶ್ಚಿಮ ಘಟ್ಟದಲ್ಲಿ ನಿರಂತರವಾಗಿ ಮಳೆಯಾಗುತ್ತಿದೆ. ಕಳೆದೊಂದು ವಾರದಿಂದ ಮಲಪ್ರಭಾ ನದಿಗೆ 30 ಸಾವಿರ ಕ್ಯೂಸೆಕ್ ಒಳಹರಿವು ಇದೆ. ಆದರೂ ನದಿ ಪಾತ್ರಕ್ಕೆ ನೀರು ಹರಿಸುವುದನ್ನು ಬಿಟ್ಟು, ಡ್ಯಾಂ ಭರ್ತಿಯಾಗುವ ವರೆಗೂ ಕಾದು,ಈಗ ಯಾವುದೇ ಸಂದರ್ಭದಲ್ಲಾದರೂ ನೀರು ಹರಿಸುತ್ತೇವೆ ಎನ್ನುವುದು ಎಷ್ಟು ಸರಿ. ಕಳೆದ ವರ್ಷ ಇದೇ ರೀತಿ ಆಗಿದ್ದಕ್ಕೆ ಪ್ರವಾಹ ಎದುರಿಸಬೇಕಾಯಿತು. ಇಷ್ಟಾದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಎಚ್ಚೆತ್ತುಕೊಂಡಿಲ್ಲ ಎನ್ನುವುದಕ್ಕೆ ಈಗಿನ ಪರಿಸ್ಥಿತಿ ಸಾಕ್ಷಿಯಾಗಿದೆ ಎನ್ನುತ್ತಾರೆ ನರಗುಂದ ಭಾಗದ ರೈತರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ