ಆ್ಯಪ್ನಗರ

ಮೆರೆದ ಸಾಂಸ್ಕೃತಿಕ ವೈಭವ

ಗದಗ : ನಗರದಲ್ಲಿ ಮೂರು ದಿನ ಉತ್ಸಾಹದಿಂದ ನಡೆದ ಗದಗ ಉತ್ಸವಕ್ಕೆ ಭಾನುವಾರ ವೈಭವದ ತೆರೆ ಬಿದ್ದಿತು. ನಾಡಿನ ಸಾಂಸ್ಕೃತಿಕ ವೈಭವ ಕಟ್ಟಿ ಕೊಡುವಲ್ಲಿ ಉತ್ಸವ ಯಶಸ್ವಿಯಾಗುವ ಜತೆಗೆ ಪ್ರಗತಿ, ಸಂಸ್ಕೃತಿಯ ರಂಗು ಬೀರಿತು.

ವಿಕ ಸುದ್ದಿಲೋಕ 11 Dec 2017, 5:00 am

ಗದಗ : ನಗರದಲ್ಲಿ ಮೂರು ದಿನ ಉತ್ಸಾಹದಿಂದ ನಡೆದ ಗದಗ ಉತ್ಸವಕ್ಕೆ ಭಾನುವಾರ ವೈಭವದ ತೆರೆ ಬಿದ್ದಿತು. ನಾಡಿನ ಸಾಂಸ್ಕೃತಿಕ ವೈಭವ ಕಟ್ಟಿ ಕೊಡುವಲ್ಲಿ ಉತ್ಸವ ಯಶಸ್ವಿಯಾಗುವ ಜತೆಗೆ ಪ್ರಗತಿ, ಸಂಸ್ಕೃತಿಯ ರಂಗು ಬೀರಿತು.

ಐತಿಹಾಸಿಕ ಹಿನ್ನೆಲೆಯಲ್ಲಿ ಅತ್ಯಂತ ಮಹತ್ವ ಪಡೆದಿರುವ ಜಿಲ್ಲಾ ಕೇಂದ್ರ ಗದಗ ಆಧುನಿಕ ದಿನದಲ್ಲೂ ತನ್ನ ಸಾಂಸ್ಕೃತಿಕ ಹಿರಿಮೆ, ಗರಿಮೆಯನ್ನು ಮುಂದುವರಿಸಿಕೊಂಡು ಬಂದಿರುವುದನ್ನು ಉತ್ಸವ ಸಾಕ್ಷೀಕರಿಸಿತು. ಶ್ರೀವೀರನಾರಾಯಣ ದೇವಸ್ಥಾನ ಆವರಣದಲ್ಲಿ ಕವಿ ಕುಮಾರವ್ಯಾಸ ಕುರಿತ ವಿಚಾರಗೊಷ್ಠಿ, ವಾಟಿಕಾ ವಿನ್ಯಾಸ, ಗಮಕ ವ್ಯಾಖ್ಯಾನ ಮತ್ತು ಕೆ.ಎಚ್‌. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಗರಿಬಿಚ್ಚಿ ಕುಣಿದಾಡಿದ ಸಾಂಪ್ರದಾಯಿಕ ಕಲೆಗಳು, ಶ್ರೀಸಾಮಾನ್ಯರು ಹೆಲಿಕಾಪ್ಟರ್‌ ಹತ್ತುವ ಭಾಗ್ಯ ಕರುಣಿಸಿರುವುದು. ವಿದ್ಯಾದಾನ ಸಮಿತಿ ಮೈದಾನದಲ್ಲಿ ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೂರು ದಿನ ಗದಗ ಉತ್ಸವಕ್ಕೆ ಆಗಮಿಸಿದ್ದ ಸಹಸ್ರಾರು ಜನರ ಪ್ರಮುಖ ಆಕರ್ಷಣೀಯ ಸ್ಥಳಗಳಾಗಿದ್ದವು.

ಮಹಿಳೆಯರಿಗೆ ಅನುಕೂಲ : ಪರಂಪರೆಗೆ ಮತ್ತೊಂದು ಹೆಸರಾಗಿರುವ ಗದಗನಲ್ಲಿ ಹಿಂದೆಂದೂ ನಡೆಯದ ರೀತಿಯಲ್ಲಿ ಅದ್ಧೂರಿಯಾಗಿ ಗದಗ ಉತ್ಸವಕ್ಕೆ ಸಾಕಷ್ಟು ತಯಾರಿ ಮಾಡಲಾಗಿತ್ತು. ಜಿಲ್ಲಾಡಳಿತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೊದ್ಯಮ ಇಲಾಖೆ ಅಧಿಕಾರಿಗಳು ಸಾಕಷ್ಟು ಕಾರ‍್ಯಕ್ರಮ ಆಯೊಜಿಸಿದ್ದರು. ಸ್ಥಳೀಯರು ಹಾಗೂ ಸ್ತ್ರೀ ಶಕ್ತಿ ಸ್ವ ಸಹಾಯ ಗುಂಪಿನ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಿದ್ದ ಜಿಲ್ಲಾಡಳಿತ, ಅಂಗಡಿಗಳನ್ನು ಸ್ಥಾಪಿಸಿ ವ್ಯಾಪಾರ ಮಾಡಲು ಅನುವು ಮಾಡಿಕೊಟ್ಟಿರುವುದು ಎಲ್ಲರಿಗೂ ಅನುಕೂಲವಾಯಿತು.

ಕಣ್ಮನ ಸೆಳೆದ ಸಾಂಸ್ಕೃತಿಕ ಕಾರ‍್ಯಕ್ರಮ :

ಉತ್ಸವದಲ್ಲಿ ರಾಜ್ಯ, ಹೊರ ರಾಜ್ಯದ, ಕಲಾವಿದರು, ಎರಡು ಸಾವಿರಕ್ಕೂ ಹೆಚ್ಚು ಸ್ಥಳೀಯ ಪ್ರತಿಭೆಗಳ ಜತೆಗೆ ರಾಷ್ಟ್ರ, ಅಂತಾರಾಷ್ಟ್ರೀಯ, ಕಲಾವಿದರ ಕಲಾಕೌಶಲ್ಯ ಜನ ಕಣ್ತುಂಬಿಸಿಕೊಂಡರು. ಕೆ.ಎಚ್‌. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಮೂರು ದಿನ ಅಹೋರಾತ್ರಿ ಜನತೆ ಐತಿಹಾಸಿಕ ಗತ ವೈಭವ ಸಾರುವ ಸಾಂಸ್ಕೃತಿಕ ಕಾರ‍್ಯಕ್ರಮಗಳು, ಕಿಕ್ಕಿರಿದು ನೆರೆದಿದ್ದ ಜನರ ಕಣ್ಮನ ಸೆಳೆದವು.

ಕಂಗೊಳಿಸಿದ ದೀಪಾಲಂಕಾರ :

ಗದಗ ಉತ್ಸವ ಪ್ರಯುಕ್ತ ನಗರದ ಪ್ರಮುಖ ವೃತ್ತಗಳಲ್ಲಿ ಝಗಮಗಿಸುವ ವಿದ್ಯುತ್‌ ದೀಪಾಲಂಕಾರ ಕಂಗೊಳಿಸದವು. ಶ್ರೀವೀರನಾರಾಯಣ ದೇವಸ್ಥಾನ, ತ್ರಿಕೋಟೇಶ್ವರ ದೇವಸ್ಥಾನ, ಭೀಷ್ಮಕೆರೆ, ಸಿಂಹದ ಕೆರೆ ಆವರಣ ಜತೆಗೆ ಜಗಜ್ಯೋತಿ ಬಸವೇಶ್ವರರ 111 ಅಡಿ ಎತ್ತರ ಮೂರ್ತಿ ಸೇರಿದಂತೆ ನಗರದ ಪ್ರಮುಖ ರಸ್ತೆಗಳು, ರಾತ್ರಿ ಸಮಯದಲ್ಲಿ ಶೃಂಗರಿಸಲಾಗಿತ್ತು. ಪ್ರಮುಖ ವೃತ್ತಗಳಾದ ಗಾಂಧಿ ವೃತ್ತ, ಪಂ. ಪುಟ್ಟರಾಜ ಗವಾಯಿಗಳ ಪುತ್ಥಳಿ, ಹುಯಿಲಗೋಳ ನಾರಾಯಣರಾಯರ ಪುತ್ಥಳಿ, ಜಿಲ್ಲಾಡಳಿತ ಭವನ, ಸಹಸ್ರಾರ್ಜುನ ವೃತ್ತ, ಕಿತ್ತೂರ ಚೆನ್ನಮ್ಮಾ ವೃತ್ತ, ಕೆ.ಎಚ್‌. ಪಾಟೀಲ ಮೂರ್ತಿ, ಸಾರ್ವಜನಿಕರಿಗೆ ಆಕರ್ಷಣೀಯವಾಗಿದ್ದವು.

ಸಂಚಲನ ಮೂಡಿಸಿದ ವಿಚಾರಗೋಷ್ಠಿಗಳು :

ಶ್ರೀವೀರನಾರಾಯಣ ಸನ್ನಿಧಿಯಲ್ಲಿ ಗದುಗಿನ ಭಾರತ ರಚಿಸಿದ ಕವಿ ಕುಮಾರವ್ಯಾಸರ ಬಗೆಗೆ ನಾಡಿನ ಕವಿಗಳು, ವಿದ್ವಾಂಸರು ಹರಿಸಿದ ವಿದ್ವತ್ತಪೂರ್ಣ ವಿಚಾರಗೊಷ್ಠಿಗಳು ಜನರಲ್ಲಿ ಸಂಚಲನ ಮೂಡಿಸಿದವು. ವಿದ್ಯಾದಾನ ಸಮಿತಿ ಮೈದಾನದಲ್ಲಿ ಫಲಪುಷ್ಪ ಪ್ರದರ್ಶನ, ಕೃಷಿ ಮತ್ತು ತೊಟಗಾರಿಕೆ ಇಲಾಖೆ ಸಂಬಂಧಿಸಿದ ವಸ್ತುಗಳು, ಕರಕುಶಲ ಕರ್ಮಿಗಳು ಸೇರಿ ದಂತೆ ಮಹಿಳಾ ಸ್ವ ಸಹಾಯ ಗುಂಪಿನಿಂದ ತಯಾರಿಸಿದ ತಿನಿಸುಗಳು ಸಾಕಷ್ಟು ಮಾರಾಟವಾದವು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ