ಆ್ಯಪ್ನಗರ

ನ್ಯಾಯಬೆಲೆ ಅಂಗಡಿ ಪಡಿತರ ಕಾರ್ಡ್‌ ಮಾಹಿತಿ ಪಡೆಯಲು ಸೂಚನೆ

ಜಿಲ್ಲಾದ್ಯಂತ ಇರುವ ನ್ಯಾಯಬೆಲೆ ಅಂಗಡಿಗಳಲ್ಲಿ ಎಷ್ಟೆಷ್ಟು ಕಾರ್ಡ್‌ ಹೊಂದಲಾಗಿದೆ ಎಂಬ ಕುರಿತು ತಹಸೀಲ್ದಾರ್‌ ಮತ್ತು ಇಒಗಳು ಪರಿಶೀಲಿಸಿ ಜಿಲ್ಲಾಧಿಕಾರಿಗೆ ವರದಿ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ಅಧಿಕಾರಿಗಳಿಗೆ ಸೂಚಿಸಿದರು.

ವಿಕ ಸುದ್ದಿಲೋಕ 6 Aug 2016, 9:00 am

ಹಾಸನ: ಜಿಲ್ಲಾದ್ಯಂತ ಇರುವ ನ್ಯಾಯಬೆಲೆ ಅಂಗಡಿಗಳಲ್ಲಿ ಎಷ್ಟೆಷ್ಟು ಕಾರ್ಡ್‌ ಹೊಂದಲಾಗಿದೆ ಎಂಬ ಕುರಿತು ತಹಸೀಲ್ದಾರ್‌ ಮತ್ತು ಇಒಗಳು ಪರಿಶೀಲಿಸಿ ಜಿಲ್ಲಾಧಿಕಾರಿಗೆ ವರದಿ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪಂಚಾಯಿತಿಯ ಹೊಯ್ಸಳ ಸಭಾಂಗಣದಲ್ಲಿ 2016-17ನೇ ಸಾಲಿನ ಜೂನ್‌ ಮಾಹೆಯ ಅಂತ್ಯದ 1ನೇ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕರ ದೂರಿಗೆ ಪ್ರತಿಕ್ರಿಯಿಸಿದರು.

ಶಾಸಕ ಎಚ್‌.ಎಸ್‌.ಪ್ರಕಾಶ್‌ ಮಾತನಾಡಿ, ''ನಗರದ ನ್ಯಾಯಬೆಲೆ ಅಂಗಡಿಯೊಂದರಲ್ಲಿ 1,500 ರಿಂದ ಎರಡು ಸಾವಿರ ಕಾರ್ಡ್‌ದಾರರು ಪಡಿತರ ಪಡೆಯಬೇಕಿದೆ. ಕೂಪನ್‌ ವ್ಯವಸ್ಥೆ ಜಾರಿಯಾದ ಬಳಿಕ ಗಂಟೆಗಟ್ಟಲೆ ಕಾಯ್ದು ನಿಲ್ಲುವ ಸ್ಥಿತಿ ನಿರ್ಮಾಣವಾಗಿದೆ. ಚಿಲ್ಲರೆ ಇಲ್ಲ ಎಂದು ಕೈಸುಟ್ಟು ಹೋಗುವಂತಹ ಕಳಪೆ ದರ್ಜೆ ಸೋಪ್‌ ನೀಡುತ್ತಿದ್ದಾರೆ. ಈ ಬಗ್ಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ದೂರು ನೀಡಿ ಒಂದೂವರೆ ವರ್ಷ ಆದರೂ ಕ್ರಮ ಕೈಗೊಂಡಿಲ್ಲ. ಸ್ತ್ರೀಶಕ್ತಿ ಸಂಘಕ್ಕೆ ವಹಿಸಿ ಎಂದರೆ ಅದೂ ಆಗುತ್ತಿಲ್ಲ ಎಂಬುದನ್ನು ಗಮನಿಸಿದರೆ ಅಧಿಕಾರಿಗಳೇ ಸೊಸೈಟಿಯವರೊಂದಿಗೆ ಶಾಮೀಲಾಗಿರುವಂತಿದೆ'' ಎಂದು ಆರೋಪಿಸಿದರು.

ಯಮಶಿಕ್ಷೆ: ''ಪಡಿತರ ಪಡೆಯಲು ಕೂಪನ್‌ ವ್ಯವಸ್ಥೆ ಜಾರಿ ಮಾಡಿರುವುದು ಸಾರ್ವಜನಿಕರ ಪಾಲಿಗೆ ಯಮಯಾತನೆಯಾಗಿದೆ. ಬೆರಳುಮುದ್ರೆ ಒತ್ತಿ ಎಂದು ಒಮ್ಮೆ ಹೇಳಿದರೆ ಮಗದೊಮ್ಮೆ ಕೂಪನ್‌ ಎನ್ನುತ್ತಾರೆ. ಒಟ್ಟಾರೆ ಪಡಿತರ ವಿತರಣಾ ವ್ಯವಸ್ಥೆ ಗೊಂದಲದ ಗೂಡಾಗಿದೆ'' ಎಂದು ಶ್ರವಣಬೆಳಗೊಳ ಕ್ಷೇತ್ರದ ಶಾಸಕ ಸಿ.ಎನ್‌.ಬಾಲಕೃಷ್ಣ ದೂರಿದರು.

ದೂರು ಜಾಸ್ತಿ ಆಯ್ತು: ಅರಸೀಕೆರೆ ಕ್ಷೇತ್ರದ ಶಾಸಕ ಕೆ.ಎಂ.ಶಿವಲಿಂಗೇಗೌಡ ಮಾತನಾಡಿ, ''ಕೆಲ ನ್ಯಾಯಬೆಲೆ ಅಂಗಡಿಯವರು ರಾಜಕೀಯ ಮಾಡಿಕೊಂಡು 600, 700 ಪಡಿತರ ಕಾರ್ಡ್‌ ಹೊಂದಿದ್ದಾರೆ. ಹಳ್ಳಿಯ ಜನರು 50 ರೂ. ಪಡಿತರ ಪಡೆಯಲು ಎರಡು ಕಿ.ಮೀ.ಗೆ 50 ರೂ. ಖರ್ಚು ಮಾಡಿಕೊಂಡು ಬಂದು ಹೋಗುವ ಸ್ಥಿತಿ ಇದೆ. ಈ ಸಮಸ್ಯೆ ಎಲ್ಲ ನಿವಾರಣೆ ಆಗಬೇಕು'' ಎಂದು ಒತ್ತಾಯಿಸಿದರು.

ಶಾಸಕರುಗಳ ದೂರನ್ನು ಆಲಿಸಿದ ಸಚಿವರು, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪನಿರ್ದೇಶಕ ಮಹದೇವಪ್ಪ ಅವರನ್ನು ತರಟೆ ತೆಗೆದುಕೊಂಡರು. 300 ಕಾರ್ಡ್‌ಗಿಂತ ಹೆಚ್ಚಿದ್ದರೆ ಮತ್ತೊಂದು ನ್ಯಾಯಬೆಲೆ ಅಂಗಡಿ ತೆಗೆಯಲು ಕಾನೂನಿನಲ್ಲಿ ಅವಕಾಶವಿದೆ. ಏಕೆ ವಿಂಗಡಣೆ ಮಾಡಬಾರದು? ಎಂದರು. ಅಷ್ಟರಲ್ಲಿ ಮಧ್ಯೆ ಪ್ರವೇಶಿಸಿದ ಶಾಸಕ ಬಾಲಕೃಷ್ಣ, ''ಸೊಸೈಟಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ನ್ಯಾಯಬೆಲೆ ಅಂಗಡಿಗಳ ಬಗ್ಗೆ ದೂರಿಲ್ಲ'' ಎನ್ನುತ್ತಿದ್ದಂತೆ ''ಅವೆಲ್ಲ ನಿಮ್ಮ ಜೆಡಿಎಸ್‌ ಸೊಸೈಟಿಗಳಲ್ವ, ಸೊಸೈಟಿಗಳ ವ್ಯಾಪ್ತಿಯಲ್ಲಿ ನ್ಯಾಯಬೆಲೆ ಅಂಗಡಿಗಳು ಇರಬೇಕೆ, ಬೇಡವೇ ಎಂಬ ಬಗ್ಗೆ ಮತ್ತೆ ಚರ್ಚಿಸೋಣ, ಪ್ರಸ್ತುತ ಇರುವ ಸಮಸ್ಯೆ ಬಗೆಹರಿಸೋಣ'' ಎಂದರು. ನಂತರ ವರದಿ ತರಿಸಿಕೊಂಡು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಚೈತ್ರಾ ಅವರಿಗೆ ತಿಳಿಸಿದರು.

ಉಳಿತಾಯ: ಶಾಸಕರ ದೂರಿಗೆ ಪ್ರತಿಕ್ರಿಯಿಸಿದ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪನಿರ್ದೇಶಕ ಮಹದೇವಪ್ಪ, ''ಕೂಪನ್‌ ವ್ಯವಸ್ಥೆಯಿಂದ ಶೇ.15 ರಷ್ಟು ಸೀಮೆಎಣ್ಣೆ ಅಕ್ರಮವಾಗಿ ಹೋಗುವುದು ತಪ್ಪಿದೆ. ಪಡಿತರ, ಸೀಮೆಎಣ್ಣೆ ಪಡೆದು, ಜತೆಗೆ ಗ್ಯಾಸ್‌ ಸಂಪರ್ಕ ಹೊಂದಿರುವುದನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳಲಾಗಿದೆ. ನ್ಯಾಯಬೆಲೆ ಅಂಗಡಿ ಸ್ತ್ರೀಶಕ್ತಿ ಸಂಘಕ್ಕೆ ನೀಡುವ ಸಂಬಂಧ ಕಡತ ಜಿಲ್ಲಾಧಿಕಾರಿ ಮುಂದಿದೆ'' ಎಂದು ಉತ್ತರಿಸಿದರು.

ಶೇ.8 ಮಳೆ ಕೊರತೆ: ''ಜಿಲ್ಲೆಯಲ್ಲಿ ಮುಂಗಾರು ಮಳೆ ಈ ಬಾರಿ ಶೇ.8 ರಷ್ಟು ಕೊರತೆಯಾಗಿದೆ'' ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ರಾಮಚಂದ್ರಯ್ಯ ಸಭೆಗೆ ಮಾಹಿತಿ ನೀಡಿದರು. ''ಪ್ರಸಕ್ತ ಸಾಲಿನಲ್ಲಿ 2.54 ಲಕ್ಷ ಹೆಕ್ಟೇರ್‌ ನಾನಾ ಬೆಳೆಗಳ ಬಿತ್ತನೆ ಗುರಿ ಹೊಂದಿದ್ದು, ಶೇ.53 ರಷ್ಟು ಸಾಧನೆಯಾಗಿದೆ'' ಎಂದು ವಿವರ ನೀಡಿದರು. ''ಅರಸೀಕೆರೆ, ಚನ್ನರಾಯಪಟ್ಟಣ, ಸಕಲೇಶಪುರ ತಾಲೂಕಿನಲ್ಲಿ ನಿರೀಕ್ಷಿತ ಮಳೆಯಾಗಿಲ್ಲ. ಎಲ್ಲೋ ಬಿದ್ದ ಮಳೆಯ ವರದಿಯನ್ನು ತಾಲೂಕಿಗೆ ಮಳೆ ಬಿದ್ದಿದೆ ಎಂದು ವರದಿ ನೀಡುವುದು ತಪ್ಪು. ಮಳೆ ಮಾಪನ ಎಲ್ಲ ಕಡೆಯೂ ಇಲ್ಲ. ಈ ರೀತಿ ವರದಿ ನೀಡುವುದರಿಂದ ಸಮಸ್ಯೆಯಾಗುತ್ತದೆ'' ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ, ಎಚ್‌.ಕೆ.ಕುಮಾರಸ್ವಾಮಿ, ಸಿ.ಎನ್‌.ಬಾಲಕೃಷ್ಣ ಆಕ್ಷೇಪ ವ್ಯಕ್ತಪಡಿಸಿದರು.

ತೃಪ್ತಿಕರವಲ್ಲ: ''ಮಳೆ, ಬೆಳೆ ನೀವು ನೀಡುತ್ತಿರುವ ಅಂಕಿ, ಅಂಶಕ್ಕೂ, ತಾಳೆಯಾಗುತ್ತಿಲ್ಲ. ಕೃಷಿ, ವಾಣಿಜ್ಯ ಬೆಳೆ ಎಲ್ಲ ಮಾಹಿತಿಯನ್ನು ಸಮಗ್ರವಾಗಿ ಇಟ್ಟುಕೊಳ್ಳಬೇಕು'' ಎಂದು ಸಚಿವ ಎ.ಮಂಜು ಅಸಮಾಧಾನ ವ್ಯಕ್ತಪಡಿಸಿದರು. ತೋಟಗಾರಿಕೆ ಇಲಾಖೆ ಪ್ರಗತಿ ಪರಿಶೀಲಿಸಿದ ಸಚಿವರು ಬಡವನಿಗೆ ಸರಕಾರಿ ಸೌಲಭ್ಯ ಸಿಗುವುದು ಕಡಿಮೆ. ಈ ಹಿಂದೆ ಯಾರು ಪಡೆದಿರುತ್ತಾರೋ ಪುನಃ ಅವರಿಗೆ ದೊರೆಯುತ್ತದೆ. ಇದಕ್ಕೆಲ್ಲ ಕಾರಣ ಕಾರ್ಯಕ್ರಮಗಳ ಬಗ್ಗೆ ಪ್ರಚಾರ ನೀಡದೆ ಇರುವುದು ಎಂದು ಹೇಳಿದರು.

''ಕಾರ್ಯಕ್ರಮಗಳ ಬಗ್ಗೆ ಪ್ರಚಾರ ಮಾಡಿದ್ದೇವೆ ಸಾರ್‌'' ಎಂಬ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಸಂಜಯ್‌ ಉತ್ತರಿಸುತ್ತಲೇ ''ಆಗಿದ್ದರೆ ಹೇಳಿ ಪ್ರತಿಯೊಂದು ಯೋಜನೆಗೆ ಎಷ್ಟು ಅರ್ಜಿಗಳು ಬಂದಿದೆ ? ಯಾವ ರೀತಿ ಫಲಾನುಭವಿಗಳನ್ನು ಆಯ್ಕೆ ಮಾಡಿದ್ದೀರಾ? ಲಾಟರಿ ಮೂಲಕ ಏನಾದ್ರು ಮಾಡಿದ್ದೀರಾ'' ಎಂದು ಸಚಿವರು ಪ್ರಶ್ನೆಗಳ ಸುರಿಮಳೆ ಗೈದರು. ''ಇಲ್ಲ ಸಾರ್‌ ಫಲಾನುಭವಿಗಳು ಕಡಿಮೆ ಸಂಖ್ಯೆಯಲ್ಲಿ ಅರ್ಜಿ ಹಾಕಿದ್ದರಿಂದ ಲಾಟರಿ ಎತ್ತಿಲ್ಲ'' ಎಂದು ಹೇಳುತ್ತಲ್ಲೇ ''ಅದಕ್ಕೆ ಹೇಳಿದ್ದು , ಪ್ರಚಾರವಾಗಿಲ್ಲ'' ಎಂದು ಸಚಿವರು ತಿಳಿಸಿದರು. ''ಈ ಕೂಡಲೇ ಗ್ರಾಪಂ ಮಟ್ಟದಲ್ಲಿ ಸಮರ್ಪಕ ಮಾಹಿತಿ ಫಲಕ ಹಾಕಬೇಕು, ಜನತೆಗೆ ಮಾಹಿತಿ ನೀಡಬೇಕು'' ಎಂದು ಸೂಚಿಸಿದರು. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನವೀನ್‌ರಾಜ್‌ಸಿಂಗ್‌, ಜಿಲ್ಲಾಧಿಕಾರಿ ಚೈತ್ರಾ, ಜಿಪಂ ಅಧ್ಯಕ್ಷೆ ಶ್ವೇತ ದೇವರಾಜ್‌, ಉಪಾಧ್ಯಕ್ಷ ಶ್ರೀನಿವಾಸ್‌, ಸಿಇಒ ವೆಂಕಟೇಶ್‌ಕುಮಾರ್‌, ಎಸ್‌ಪಿ ರಾಹುಲ್‌ಕುಮಾರ್‌ ಶಹಪುರವಾಡ್‌ ಹಾಜರಿದ್ದರು.

ಕೇಂದ್ರ ಮತ್ತು ರಾಜ್ಯ ಸರಕಾರದ ಯೋಜನೆಗಳ ಅನುಷ್ಠಾನ ಸಂಬಂಧ ಪ್ರತಿ 15 ದಿನಕ್ಕೆ ಒಮ್ಮೆ ತಹಸೀಲ್ದಾರ್‌ ಮತ್ತು ಎಸಿ ಮಟ್ಟದಲ್ಲಿ ಪ್ರಗತಿ ಪರಿಶೀಲಿಸಿ ವರದಿ ನೀಡಬೇಕು. ಪರಿಶಿಷ್ಟ ಜಾತಿ ಮತ್ತು ವರ್ಗದ ಜನರಿಗೆ ಮೀಸಲಾದ ಯೋಜನೆ ಶೇ.100 ಗುರಿ ಸಾಧಿಸಬೇಕು. ಒಟ್ಟಾರೆ ಯೋಜನೆ ಪ್ರಗತಿ ಬಗ್ಗೆ ಪ್ರತಿ ತಿಂಗಳು ಜಿಲ್ಲಾಧಿಕಾರಿ ತಮಗೆ ವರದಿ ನೀಡಬೇಕು.

- ಎ.ಮಂಜು ಉಸ್ತುವಾರಿ ಸಚಿವರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ