ಆ್ಯಪ್ನಗರ

ಎರಡು ಸಾವಿರ ಚೀಲ ಸಬ್ಸಿಡಿ ಯೂರಿಯ ಅಕ್ರಮ ದಾಸ್ತಾನು ಪತ್ತೆ

ನಗರದ ಕೈಗಾರಿಕಾ ಬಡಾವಣೆಯಲ್ಲಿರುವ ಮಂಜುನಾಥ್‌ ಪ್ಲ್ಯೂಯೆಲ್‌ ಬ್ರಿಕೆಟ್ಸ್‌ ಇಂಡಸ್ಟ್ರಿಯಲ್ಲಿ ಅನಧಿಕೃತವಾಗಿ ಶೇಖರಿಸಿದ್ದ ಎರಡು ಸಾವಿರ ಚೀಲ ಸಬ್ಸಿಡಿ ಯೂರಿಯವನ್ನು ಮುಟ್ಟುಗೊಲು ಹಾಕಿಕೊಂಡು ತಪ್ಪಿತಸ್ಥರ ವಿರುದ್ದ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ಅಕ್ರಂ ಪಾಷ ಸೂಚನೆ ನೀಡಿದ್ದಾರೆ.

Vijaya Karnataka 30 Jul 2019, 5:00 am
ಹಾಸನ : ನಗರದ ಕೈಗಾರಿಕಾ ಬಡಾವಣೆಯಲ್ಲಿರುವ ಮಂಜುನಾಥ್‌ ಪ್ಲ್ಯೂಯೆಲ್‌ ಬ್ರಿಕೆಟ್ಸ್‌ ಇಂಡಸ್ಟ್ರಿಯಲ್ಲಿ ಅನಧಿಕೃತವಾಗಿ ಶೇಖರಿಸಿದ್ದ ಎರಡು ಸಾವಿರ ಚೀಲ ಸಬ್ಸಿಡಿ ಯೂರಿಯವನ್ನು ಮುಟ್ಟುಗೊಲು ಹಾಕಿಕೊಂಡು ತಪ್ಪಿತಸ್ಥರ ವಿರುದ್ದ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ಅಕ್ರಂ ಪಾಷ ಸೂಚನೆ ನೀಡಿದ್ದಾರೆ.
Vijaya Karnataka Web HSN-HSN29N10


ಸೋಮವಾರ ಕಾರ್ಖಾನೆಗೆ ಪೊಲೀಸ್‌ ಮತ್ತು ಕೃಷಿ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದ ಜಿಲ್ಲಾಧಿಕಾರಿ, ದಾಸ್ತಾನು ಮಾಡಲಾಗಿರುವ ಯೂರಿಯಾ ಗೊಬ್ಬರವನ್ನು ಮಹಜರು ಮಾಡಿ ವಶಕ್ಕೆ ಪಡೆದು ಸಹಕಾರಿ ಗೊಬ್ಬರ ಮಾರಾಟ ಸಂಸ್ಥೆಗಳ ಮೂಲಕ ಕೂಡಲೇ ವಿಲೇವಾರಿ ಮಾಡುವಂತೆ ಜಂಟಿ ಕೃಷಿ ನಿರ್ದೇಶಕರಿಗೆ ಸೂಚನೆ ನೀಡಿದರು.

ಜಿಲ್ಲೆಯ ಇತರೆಡೆಯೂ ಇಂತಹ ಅಕ್ರಮಗಳು ನಡೆಯುತ್ತಿರುವ ದೂರುಗಳಿದ್ದು, ಅದನ್ನು ಪತ್ತೆ ಹಚ್ಚಿ ಅಗತ್ಯ ಕ್ರಮ ವಹಿಸುವಂತೆಯೂ ಅಕ್ರಂ ಪಾಷ ತಿಳಿಸಿದರು.

ರೈತರಿಗೆ ನೀಡುವ ಸಬ್ಸಿಡಿ ಗೊಬ್ಬರವನ್ನು ದುರ್ಬಳಕೆ ಮಾಡಿಕೊಂಡಿರುವುದು ಅಪರಾಧವಾಗಿದೆ. ಈ ಸಂದರ್ಭ ಈ ಗೊಬ್ಬರ ಎಲ್ಲೆಲ್ಲಿಂದ ಸರಬರಾಜಾಗಿದೆ, ಇದಕ್ಕೆ ಸಹಕಾರ ನೀಡುತ್ತಿರುವವರು ಯಾರು ಎಂಬುದನ್ನು ಸಮಗ್ರವಾಗಿ ಪರಿಶೀಲಿಸಿ ಎಲ್ಲರ ವಿರುದ್ಧ ಪ್ರಕರಣ ದಾಖಲಿಸಿ ಎಂದು ಅಧಿಕಾರಿಗಳಿಗೆ ಆದೇಶಿಸಿದರು.

ಮೇಲ್ನೊಟಕ್ಕೆ ಗಮನಿಸಿದಾಗ ಈ ಎಲ್ಲಾ ಗೊಬ್ಬರ ಬೇರೆ ಜಿಲ್ಲೆ ಹಾಗೂ ರಾಜ್ಯದಿಂದ ಪೂರೈಕೆಯಾದಂತೆ ಕಂಡು ಬರುತ್ತಿದ್ದು, ವಿವರವಾದ ತನಿಖೆಯಿಂದ ಎಲ್ಲಾ ಅಂಶಗಳು ಬಹಿರಂಗಗೊಳ್ಳಲಿವೆ ಎಂದು ಜಿಲ್ಲಾಧಿಕಾರಿ ಅಕ್ರಂಪಾಷಾ ಸುದ್ದಿಗಾರರಿಗೆ ತಿಳಿಸಿದರು.

ಸಬ್ಸಿಡಿದರದಲ್ಲಿ ದೊರೆಯುತ್ತಿದ್ದ ಯೂರಿಯವನ್ನು ಸಂಗ್ರಹಿಸಿರುವ ಮಂಜುನಾಥ್‌ ಪ್ಲ್ಯೂಯೆಲ್‌ ಬ್ರಿಕೆಟ್ಸ್‌ನಲ್ಲಿ ವೈಜ್ಞಾನಿಕವಾಗಿ ಕರಗಿಸಿ ದ್ರವರೂಪದಲ್ಲಿ ಫ್ಲೈವುಡ್‌ ತಯಾರಿಕಾ ಸಂಸ್ಥೆಗೆ ಫೀವಿಕಲ್‌ (ಗಮ್‌) ಆಗಿ ಬಳಸಲು ಸರಬರಾಜಾಗುತ್ತಿತ್ತು ಎನ್ನಲಾಗಿದೆ.

ಪ್ರಭಾರ ಎಸ್‌.ಪಿ.ನಂದಿನಿ ಅವರು ಮಹಜರು ಮಾಡಿ ಎಲ್ಲಾ ಗೊಬ್ಬರ ದಾಸ್ತಾನು ಮುಟ್ಟುಗೊಲು ಹಾಕಿ ಕೃಷಿ ಇಲಾಖೆಗೆ ಹಸ್ತಾಂತರಿಸಲಾಗುವುದು ಎಂದರು.

ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ ಮಧು ಸೂಧನ್‌ ಪೊಲೀಸ್‌ ಇಲಾಖೆ ರಸಗೊಬ್ಬರ ಹಸ್ತಾಂತರಿಸಿದ ನಂತರ ಉತ್ತಮ ಗೊಬ್ಬರ ಮಾರಾಟ ಸಂಸ್ಥೆಗಳ ಮೂಲಕ ಅದನ್ನು ವಿಲೇವಾರಿ ಮಾಡಲಾಗುವುದು ಎಂದರು. ಈ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಸಿಪಿಐ ಸತ್ಯನಾರಾಯಣ್‌ ತಿಳಿಸಿದರು.

ನೋಟಿಸ್‌: ರಸಗೊಬ್ಬರ ದಾಸ್ತಾನು ಸಂಬಂಧ ದಾಖಲೆ ಇದ್ದರೆ ಒದಗಿಸುವಂತೆ ಮಂಜುನಾಥ್‌ ಪ್ಲ್ಯೂಯೆಲ್‌ ಬ್ರಿಕೆಟ್ಸ್‌ ಇಂಡಸ್ಟ್ರಿಯ ಕಿರಿಟ್‌ ಅವರಿಗೆ ನೋಟಿಸ್‌ ಜಾರಿ ಮಾಡಲಾಗಿದೆ ಎಂದು ಸಹಾಯಕ ಕೃಷಿ ಅಧಿಕಾರಿ ಹರೀಶ್‌ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ