ಆ್ಯಪ್ನಗರ

ಹಾಸನದಲ್ಲಿ ಮುಂದುವರೆದ ಕೊರೊನಾ ನಾಗಾಲೋಟ..! 31 ಮಂದಿಗೆ ಸೋಂಕು ದೃಢ, ಮತ್ತೊಂದು ಬಲಿ

ಹಾಸನದಲ್ಲಿ ಕೊರೊನಾ ವೈರಸ್‌ ಆರ್ಭಟ ಮುಂದುವರೆದಿದ್ದು, ಭಾನುವಾರ 31 ಪಾಸಿಟಿವ್‌ ಕೇಸ್‌ಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 366ಕ್ಕೆ ಏರಿದೆ. ಇದು ಇವರೆಗೆ ಜಿಲ್ಲೆಯಲ್ಲಿ ಕಂಡುಬಂದ ಅತಿಹೆಚ್ಚು ಪ್ರಕರಣಗಳಾಗಿವೆ

Vijaya Karnataka Web 29 Jun 2020, 12:18 am
ಹಾಸನ: ಪೌರಕಾರ್ಮಿಕರು, ಶಿಕ್ಷಕರು, ಭದ್ರತಾ ಸಿಬ್ಬಂದಿ ಸೇರಿ ಭಾನುವಾರ ಒಂದೇ ದಿನ 31 ಮಂದಿಗೆ ಕೊರೊನಾ ವೈರಸ್‌ ದೃಢಪಟ್ಟಿದೆ. ಈವರೆಗೆ ವರದಿಯಾದ ಗರಿಷ್ಠ ಪ್ರಕರಣ ಇದಾಗಿದ್ದು, ಸೋಂಕಿತರ ಸಂಖ್ಯೆ 366ಕ್ಕೆ ಏರಿದೆ. ಈ ನಡುವೆ ಹಾಸನ ತಾಲೂಕಿನ 65 ವರ್ಷದ ವೃದ್ಧೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದು, ಇದರಿಂದ ಜಿಲ್ಲೆಯಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ ಎರಡಕ್ಕೆ ಏರಿಕೆಯಾಗಿದೆ.
Vijaya Karnataka Web 31 new coronavirus positive cases and one death reported in hasana
ಹಾಸನದಲ್ಲಿ ಮುಂದುವರೆದ ಕೊರೊನಾ ನಾಗಾಲೋಟ..! 31 ಮಂದಿಗೆ ಸೋಂಕು ದೃಢ, ಮತ್ತೊಂದು ಬಲಿ


31 ಪ್ರಕರಣಗಳ ಪೈಕಿ 6 ಮತ್ತು ತಲಾ 4 ವರ್ಷದ ಮೂವರು ಮಕ್ಕಳು ಸೇರಿದ್ದಾರೆ. ಉಳಿದಂತೆ ಹಾಸನ ತಾಲೂಕಿನ ಇಬ್ಬರು, ಹೊಳೆನರಸೀಪುರದ 13, ಅರಸೀಕೆರೆಯ 11, ಆಲೂರು 1, ಅರಕಲಗೂಡು 2, ಮೈಸೂರು ಜಿಲ್ಲೆ ಕೆ.ಆರ್.ನಗರ ಮತ್ತು ಚಿಕ್ಕಮಗಳೂರು ಜಿಲ್ಲೆ ಕಡೂರಿನ ತಲಾ ಒಬ್ಬರಿಗೆ ಸೋಂಕು ತಗುಲಿದೆ.

ಈವರೆಗೂ ಹೊರಗಿನಿಂದ ಬಂದವರಲ್ಲಿ ಕಾಣಿಸಿಕೊಳ್ಳುತ್ತಿದ್ದ ಕೊರೊನಾ ವೈರಸ್‌, ಇದೀಗ ಸೋಂಕಿತರ ಸಂಪರ್ಕಿತರು ಹಾಗೂ ಸ್ಥಳೀಯವಾಗಿ ಹರಡಲಾರಂಭಿಸಿದೆ. ಕೋವಿಡ್‌ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಆತಂಕ ಇಮ್ಮಡಿಗೊಳಿಸಿದೆ. ಈವರೆಗೆ 25 ಪಾಸಿಟಿವ್ ಪ್ರಕರಣ ಕಾಣಿಸಿಕೊಂಡಿದ್ದು ಅತ್ಯಧಿಕ ದಾಖಲೆಯಾಗಿತ್ತು.

16 ಮಂದಿಗೆ ರ್‍ಯಾಂಡಮ್‌ ಪರೀಕ್ಷೆಯಿಂದ ಪಾಸಿಟಿವ್ ಇರುವುದು ದೃಢಪಟ್ಟಿದ್ದು, ಇವರಲ್ಲಿ ಹೊಳೆನರಸೀಪುರದ ಐವರು ಪೌರಕಾರ್ಮಿಕರು ಸೇರಿದ್ದಾರೆ. ಅರಸೀಕೆರೆಯ ಮೂವರು ಸವಿತಾ ಸಮಾಜದವರಲ್ಲಿ ಸೋಂಕು ದೃಢಪಟ್ಟಿದ್ದು, ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆ ಸೇರಿದ್ದ ನಾಲ್ವರಿಗೆ, ಹೊರ ರಾಜ್ಯದಿಂದ ಬಂದಿದ್ದ ಮೂವರಿಗೆ ಸೋಂಕು ತಗುಲಿದೆ. ಈ ವರೆಗೆ 238 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 120ಕ್ಕೆ ಇಳಿದಿದೆ.

ಹಾಸನದಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗೆ ಕೊರೊನಾ! 18 ವಿದ್ಯಾರ್ಥಿಗಳ ಭವಿಷ್ಯ ಅತಂತ್ರ!

ಜೂನ್ 17ರಂದು ಮುಂಬೈನಿಂದ ಬಂದಿದ್ದ ವೃದ್ಧೆಯನ್ನು ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ರಕ್ತದೊತ್ತಡ, ಮಧುಮೇಹದಿಂದ ಬಳಲುತ್ತಿದ್ದ, ಇವರಿಗೆ ಸೋಂಕು ಕಾಣಿಸಿಕೊಂಡಿತ್ತು. ಸರಕಾರ ಮಾರ್ಗಸೂಚಿ ಪ್ರಕಾರ ಅಂತ್ಯಕ್ರಿಯೆ ನಡೆಸಲು ಜಿಲ್ಲಾಡಳಿತ ಕ್ರಮ ಕೈಗೊಂಡಿದೆ. ಜೂನ್ 12ರಂದು ಕೊರೊನಾಗೆ ಮೊದಲ ಬಲಿಯಾಗಿತ್ತು. ಕೊರೊನಾ ಪ್ರಕರಣ ಹೆಚ್ಚುತ್ತಿರುವ ಕಾರಣ ಹೆಚ್ಚು ಪರೀಕ್ಷೆ ನಡೆಸಲು ಜಿಲ್ಲಾ ಆರೋಗ್ಯ ಇಲಾಖೆ ಮುಂದಾಗಿದೆ.

ಈಗಾಗಲೇ 30ಕ್ಕೂ ಹೆಚ್ಚು ಮಕ್ಕಳು, ಮಹಿಳೆಯರು, ಪುರುಷರು, ಸೈನಿಕ, ವ್ಯಾಪಾರಿ, ಪೊಲೀಸ್ ಕಾನ್‌ಸ್ಟೇಬಲ್‌‌, ಬಿಎಂಟಿಸಿ ಚಾಲಕ, ಸೆಸ್ಕಾಂ ಎಂಜಿನಿಯರ್, ವಿದ್ಯಾರ್ಥಿ ಸೇರಿ ಎಲ್ಲಾ ವರ್ಗದವರಿಗೂ ಸೋಂಕು ಹರಡಿರುವುದು ಹೆಚ್ಚಿನ ಭೀತಿಗೆ ಕಾರಣವಾಗಿದೆ.

ಹಾಸನದಲ್ಲಿ ಆಗಸ್ಟ್‌ ವೇಳೆಗೆ ಸೋಂಕು 3700 ಗಡಿ ದಾಟುವ ಅಂದಾಜು

18 ವಿದ್ಯಾರ್ಥಿಗಳ ವರದಿ ನೆಗೆಟಿವ್ಅರಕಲಗೂಡು ತಾಲ್ಲೂಕು ಮಲ್ಲಿ ಪಟ್ಟಣ ಪರೀಕ್ಷಾ ಕೇಂದ್ರದಲ್ಲಿ ಸೋಂಕಿತ ವಿದ್ಯಾರ್ಥಿ ಜೊತೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದ ಇತರೆ 18 ವಿದ್ಯಾರ್ಥಿಗಳ ಗಂಟಲು ಮಾದರಿ ವರದಿ ನೆಗೆಟಿವ್‌ ಬಂದಿದ್ದು, ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಸಮಾಧಾನ ಮೂಡಿದೆ. ಈ ವಿದ್ಯಾರ್ಥಿಗಳಿಗೆ ಮುಂದಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದ್ದು, ಎಲ್ಲರೂ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ, 18 ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಸಲು ನಿರ್ಧರಿಸಲಾಗಿದೆ ಎಂದು ‌ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸತೀಶ್‌ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ