ಆ್ಯಪ್ನಗರ

ಅರಕಲಗೂಡಿನಲ್ಲಿ ಮುಂಗಾರು ದುರ್ಬಲ

ತಾಲೂಕಿನಲ್ಲಿ ಮುಂಗಾರು ಮಳೆ ದುರ್ಬಲಗೊಂಡ ಹಿನ್ನೆಲೆ ಕೃಷಿ ಚಟುವಟಿಕೆಗೆ ಹಿನ್ನಡೆ ಉಂಟಾಗಿದೆ.

Vijaya Karnataka 20 May 2019, 5:00 am
ಅರಕಲಗೂಡು : ತಾಲೂಕಿನಲ್ಲಿ ಮುಂಗಾರು ಮಳೆ ದುರ್ಬಲಗೊಂಡ ಹಿನ್ನೆಲೆ ಕೃಷಿ ಚಟುವಟಿಕೆಗೆ ಹಿನ್ನಡೆ ಉಂಟಾಗಿದೆ.
Vijaya Karnataka Web HSN-HSN19ARK3A


ವಾಡಿಕೆಯಂತೆ ಮುಂಗಾರು ಮಳೆಯ ಅಬ್ಬರ ಏಪ್ರಿಲ್‌ ಮತ್ತು ಮೇ ತಿಂಗಳಲ್ಲಿ ಕಂಡುಬರುತ್ತಿತ್ತು. ಮೇ ತಿಂಗಳು ಅಂತ್ಯಗೊಳ್ಳುತ್ತಾ ಬಂದಿದ್ದು ನಿರೀಕ್ಷಿತ ಮಟ್ಟದಲ್ಲಿ ಮಳೆ ಬೀಳದ ಪರಿಣಾಮ ಪ್ರಮುಖ ವಾಣಿಜ್ಯ ಬೆಳೆ ಆಲೂಗಡ್ಡೆ, ಮೆಕ್ಕೆಜೋಳ ಬಿತ್ತನೆ ಇನ್ನೂ ಆರಂಭಗೊಂಡಿಲ್ಲ.

ತಾಲೂಕಿನ ಕೊಣನೂರು, ರಾಮನಾಥಪುರ, ದೊಡ್ಡಮಗ್ಗೆ ಹೋಬಳಿಗಳ ಕೆಲವು ಭಾಗಗಳ ನೀರಾವರಿ ಆಶ್ರಿತ ಪ್ರದೇಶದಲ್ಲಿ ವಾಣಿಜ್ಯ ಬೆಳೆ ತಂಬಾಕು ಬಿತ್ತನೆ ಆರಂಭಗೊಂಡಿರುವುದನ್ನು ಹೊರತು ಪಡಿಸಿದರೆ ಉಳಿದಂತೆ ದ್ವಿದಳ ಧಾನ್ಯ ಬೆಳೆಗಳ ಬಿತ್ತನೆಗೂ ಸಹ ಹಿನ್ನಡೆಯಾಗಿದೆ.

ಕಸಬಾ ಹೋಬಳಿಯ ಪ್ರಮುಖ ವಾಣಿಜ್ಯ ಬೆಳೆ ಆಲೂಗಡ್ಡೆ ಬಿತ್ತನೆ ಮೇ ಮೊದಲ ವಾರದಲ್ಲಿ ಆರಂಭಗೊಳ್ಳಬೇಕಿತ್ತು. ಮಳೆ ಬೀಳದ ಪರಿಣಾಮ ಇನ್ನೂ ಕೂಡ ರೈತರು ಜಮೀನನ್ನು ಹದಗೊಳಿಸಿಕೊಂಡಿಲ್ಲದಿರುವುದು ಕಂಡುಬಂದಿದೆ. ಅಲ್ಲದೆ ಮೆಕ್ಕೆಜೋಳ ಬಿತ್ತನೆ ಸಹ ಇದೇ ಹಂತದಲ್ಲಿ ನಡೆಯಬೇಕಿದ್ದು,ಅದು ಸಹ ಮಳೆಯ ಕೊರತೆಯಿಂದ ಇನ್ನೂ ಆರಂಭಗೊಂಡಿಲ್ಲ.

ಕಳೆದ ಎರಡುಮೂರು ದಿನಗಳ ಹಿಂದೆ ಹಾಸನದ ಮಾರುಕಟ್ಟೆಯಲ್ಲಿ ಬಿತ್ತನೆ ಬೀಜದ ಆಲೂಗಡ್ಡೆ ಮಾರಾಟ ಆರಂಭಗೊಂಡಿದ್ದು, ತಾಲೂಕಿನ ರೈತರು ಮಳೆ ಇಲ್ಲದ ಪರಿಣಾಮ ಖರೀದಿಗೆ ಮುಂದಾಗಿಲ್ಲ. ಕೇವಲ ತೋಟಗಾರಿಕೆ ಇಲಾಖೆಯಲ್ಲಿ ನೂರಾರು ಮಂದಿ ರೈತರು ರಿಯಾಯಿತ ದರದ ಬಿತ್ತನೆ ಆಲೂಗಡ್ಡೆ ಖರೀದಿಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ. ಕೃಷಿ ಇಲಾಖೆಯಲ್ಲಿಯೂ ಕೂಡ ಮೆಕ್ಕೆಜೋಳ ಸೇರಿದಂತೆ ಇತರೆ ದ್ವಿದಳ ಧಾನ್ಯ ಬಿತ್ತನೆ ಬೀಜವನ್ನು ದಾಸ್ತಾನುಮಾಡಿಕೊಂಡಿದ್ದು, ಅಲ್ಲಿಯೂ ಕೂಡ ರೈತರು ಖರೀದಿಗೆ ತೆರಳದೆ ಇರುವುದು ಕಂಡುಬಂದಿದೆ.

ಮುಂದಿನ ಜೂನ್‌ ಮೊದಲ ವಾರದಲ್ಲಿ ಮಳೆ ಆರಂಭಗೊಂಡರೇ ಆಲೂಗಡ್ಡೆ, ಮೆಕ್ಕೆಜೋಳ ಬಿತ್ತನೆಗೆ ತೀವ್ರತರನಾದ ಸಮಸ್ಯೆ ಎದುರಾಗಲಿದೆ. ನೀರಾವರಿ ಮೂಲಗಳನ್ನು ಹೊಂದಿರುವವರು ಸಹ ಇನ್ನೂ ಆಲೂಬಿತ್ತನೆಗೆ ಮುಂದಾಗಿಲ್ಲ. ಭೂಮಿಯ ತಾಪಮಾನ ಅಧಿಕವಾಗಿರುವ ಹಿನ್ನೆಲೆ ಬಿತ್ತನೆ ಮಾಡಿದ ಆಲೂ ಕೊಳೆಯುವ ಸಾಧ್ಯತೆ ಇದೆ. ಮಳೆ ಬಿದ್ದರೆ ಭೂಮಿ ಹದವಾದ ವಾತಾವರಣ ಕಂಡುಬರಲಿದೆ. ಇದರ ನಿರೀಕ್ಷೆಯಲ್ಲಿ ರೈತರು ಇದ್ದಾರೆ.

ನೀರಿನ ಕೊರತೆ: ಈಗಾಗಲೇ ಮಳೆ ಬೀಳದ ಪರಿಣಾಮ ತಾಲೂಕಿನ ಬಹುತೇಕ ಕೆರೆಕಟ್ಟೆಗಳಲ್ಲಿ ನೀರು ಬತ್ತತೊಡಗಿದೆ. ಒಂದರಡು ಕೆರೆಗಳಲ್ಲಿ ಮಳೆಯ ಅಲ್ಪಪ್ರಮಾಣದ ನೀರು ಸಂಗ್ರಹಣೆಯಾಗಿದ್ದು, ಬಿಸಿಲಿನ ತಾಪದ ಹಿನ್ನೆಲೆ ಅದು ಸಹ ಬತ್ತುತ್ತಿದೆ. ಮೇವು, ಕುಡಿಯುವ ನೀರಿನ ಲಭ್ಯತೆ ಕ್ಷೀಣಿಸಿದ ಪರಿಣಾಮ ದೂರದ ಊರುಗಳಿಂದ ಕುರಿಮಂದೆಯನ್ನು ಕಳೆದ ಡಿಸೆಂಬರ್‌ನಲ್ಲಿ ಹೊಡೆದುಕೊಂಡುಬಂದಿದ್ದವರು ಪಟ್ಟಣದ ಮೂಲಕ ಕುರಿಗಳನ್ನು ಹೊಡೆದುಕೊಂಡು ಸ್ವಗ್ರಾಮಗಳತ್ತ ತೆರಳುತ್ತಿದ್ದಾರೆ.

ಇದೇ ಪರಿಸ್ಥಿತಿ ಮುಂದುವರಿದರೆ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಕೊರತೆ, ಜಾನುವಾರುಗಳಿಗೆ ಮೇವಿನ ಸಮಸ್ಯೆ ತಲೆದೂರುವ ಸಾಧ್ಯತೆ ಹೆಚ್ಚಿದೆ. ತಾಲೂಕಿನ ಮಲ್ಲಿಪಟ್ಟಣ ಹೋಬಳಿ ಸಹ ಮಲೆನಾಡಿನಿಂದ ಕೂಡಿದ್ದು, ಅಲ್ಲಿಯೂ ಕೂಡ ನಿರೀಕ್ಷಿತ ಮಳೆ ಆಗಿಲ್ಲ. ಇದರಿಂದ ಇಲ್ಲಿನ ರೈತರು ಸಹ ರಾತ್ರಿ ಹಗಲು ಎನ್ನದೇ ಕಾಫಿ ತೋಟಗಳಿಗೆ ನೀರನ್ನು ಪಂಪ್‌ಗಳಿಂದ ಸಿಂಪರಣೆ ಮಾಡುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ