ಆ್ಯಪ್ನಗರ

ಅರಕಲಗೂಡು ಪಪಂ: ಟಿಕೆಟ್‌ಗೆ ಆಕಾಂಕ್ಷಿಗಳ ಕಸರತ್ತು

ಅರಕಲಗೂಡು ಪಟ್ಟಣ ಪಂಚಾಯಿತಿ ಚುನಾವಣಾ ದಿನಾಂಕ ನಿಗದಿಯಾದ ಬೆನ್ನಲ್ಲೇ ಟಿಕೆಟ್‌ಗಾಗಿ ಆಕಾಂಕ್ಷಿಗಳ ಲಾಬಿ ಜೋರಾಗಿದೆ. ರಾಜಕೀಯ ಚಟುವಟಿಕೆ ಗರಿಗೆದರಿದೆ.

Vijaya Karnataka 8 May 2019, 5:00 am
ವಿಜಯಕುಮಾರ್‌ ಅರಕಲಗೂಡು
Vijaya Karnataka Web arakalgud pp election aspirants try to grab ticket
ಅರಕಲಗೂಡು ಪಪಂ: ಟಿಕೆಟ್‌ಗೆ ಆಕಾಂಕ್ಷಿಗಳ ಕಸರತ್ತು


ಅರಕಲಗೂಡು ಪಟ್ಟಣ ಪಂಚಾಯಿತಿ ಚುನಾವಣಾ ದಿನಾಂಕ ನಿಗದಿಯಾದ ಬೆನ್ನಲ್ಲೇ ಟಿಕೆಟ್‌ಗಾಗಿ ಆಕಾಂಕ್ಷಿಗಳ ಲಾಬಿ ಜೋರಾಗಿದೆ. ರಾಜಕೀಯ ಚಟುವಟಿಕೆ ಗರಿಗೆದರಿದೆ.

ಪಪಂ ಚುನಾವಣೆಗೆ ಚುನಾವಣಾ ಆಯೋಗ ಮೇ 29ಕ್ಕೆ ದಿನಾಂಕ ನಿಗದಿಗೊಳಿಸಿದ ಕೂಡಲೇ ಪಟ್ಟಣದ 17 ವಾರ್ಡ್‌ಗಳಲ್ಲಿ ಆಯಾ ವಾರ್ಡಿನ ಜಾತಿ, ಪಕ್ಷ ಮತ್ತು ಹಣದ ಪ್ರಾಬಲ್ಯ ಹೊಂದಿರುವವರು ಟಿಕೆಟ್‌ಗಾಗಿ ಕಸರತ್ತು ಆರಂಭಿಸಿದ್ದಾರೆ.

ಈ ಬಾರಿಯ ವಾರ್ಡ್‌ ಮೀಸಲಾತಿ ಪಟ್ಟಿಯಲ್ಲಿ ಸಾಮಾನ್ಯ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ಸಿಕ್ಕಿರುವ ಕಾರಣ ಮತ್ತು ಚುನಾವಣೆಗೂ ಮುನ್ನವೇ ಅಧ್ಯಕ್ಷ , ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟಗೊಂಡಿರುವುದು ವಿಶೇಷ. ಈ ಸ್ಥಾನಗಳು ಸಾಮಾನ್ಯ ಕ್ಷೇತ್ರಕ್ಕೆ ಒಲಿದಿರುವ ಹಿನ್ನೆಲೆಯಲ್ಲಿ ಈ ಬಾರಿಯ ಚುನಾವಣಾ ಕಣ ಕಾವೇರುವ ಸಾಧ್ಯತೆ ಹೆಚ್ಚಿದೆ.

ಪಪಂ ಈ ಹಿಂದೆ 15 ವಾರ್ಡುಗಳನ್ನು ಒಳಗೊಂಡಿತ್ತು. ಈ ಬಾರಿ ಜನಸಂಖ್ಯೆಯ ಆಧಾರದ ಮೇಲೆ 2 ವಾರ್ಡುಗಳನ್ನು ಅಧಿಕಗೊಳಿಸಿದ್ದು, ಒಟ್ಟು 17 ವಾರ್ಡುಗಳಿಗೆ ಚುನಾವಣೆ ನಡೆಯಲಿದೆ. ಈ ಪೈಕಿ 9 ವಾರ್ಡುಗಳ ಮೀಸಲಾತಿ ಸಾಮಾನ್ಯ ಮತ್ತು ಸಾಮಾನ್ಯ ಮಹಿಳೆಗೆ ಮೀಸಲಾಗಿರುವುದರಿಂದ ಈ ಬಾರಿಯ ಚುನಾವಣೆ ಕುತೂಹಲ ಕೆರಳಿಸಿದೆ.

ಅಧ್ಯಕ್ಷ ಸ್ಥಾನದ ಮೇಲೆ ಪ್ರಭಾವಿಗಳ ಕಣ್ಣು

ಅರಕಲಗೂಡು ಪಟ್ಟಣ ಪಂಚಾಯಿತಿ ವ್ಯಾಪ್ತಿಯ 9 ವಾರ್ಡ್‌ಗಳಲ್ಲಿ ಸಾಮಾನ್ಯ ವರ್ಗಕ್ಕೆ ಮೀಸಲಾದ ಕಾರಣ ಈ 9 ವಾರ್ಡುಗಳಲ್ಲಿ ಟಿಕೆಟ್‌ ಆಕಾಂಕ್ಷಿಗಳ ಪಟ್ಟಿಯು ಹನುಮಂತನ ಬಾಲದಂತೆ ಬೆಳೆಯುತ್ತಿದೆ. ತಮ್ಮ ಪಕ್ಷ ದ ನಾಯಕರುಗಳ ಮನವೊಲಿಕೆಗೆ ಮುಂದಾಗಲು ಆ ವಾರ್ಡಿನ ಸಾರ್ವಜನಿಕರ ಮನಸಳೆಯುತ್ತಿದ್ದಾರೆ. ಚುನಾವಣಾ ದಿನಾಂಕ ಪ್ರಕಟಗೊಳ್ಳುವ ಮೊದಲಿನಿಂದಲೂ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಕೆಲ ಪ್ರಭಾವಿಗಳು 8 ತಿಂಗಳ ಹಿಂದೆಯೆ ಪ್ರಕಟಗೊಂಡ ಮೀಸಲಾತಿ ಪಟ್ಟಿಯ ಮೇರೆಗೆ ಆ ವಾರ್ಡುಗಳಲ್ಲಿ ತಮ್ಮ ಪ್ರಾಬಲ್ಯ ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.

ರಾಜಕೀಯ ಪಕ್ಷ ಗಳ ಸಭೆ

ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಧರ್ಮ ಪಾಲನೆಯಲ್ಲಿದ್ದ ಕಾಂಗ್ರೆಸ್‌, ಜೆಡಿಎಸ್‌ ಸ್ಥಳೀಯ ಚುನಾವಣೆಯಲ್ಲಿ ಎದುರಾಳಿಗಳಾಗಿವೆ. ಈಗಾಗಲೇ ಬಿಜೆಪಿ ಹಾಗೂ ಜೆಡಿಎಸ್‌ ಮುಖಂಡರು ಸಭೆ ನಡೆಸಿ ಆಕಾಂಕ್ಷಿ ಅಭ್ಯರ್ಥಿಗಳ ಕುರಿತು ಚರ್ಚಿಸಿದ್ದಾರೆ. ಆದರೆ, ಕಾಂಗ್ರೆಸ್‌ ಇನ್ನೂ ಸಭೆ ನಡೆಸಿಲ್ಲ. ಕಳೆದ ಚುನಾವಣೆ ವೇಳೆ ಮಾಜಿ ಸಚಿವ ಎ.ಮಂಜು ಕಾಂಗ್ರೆಸ್‌ ಶಾಸಕರಾಗಿದ್ದರು. ಯೋಗರಮೇಶ್‌ ಪೊಟ್ಯಾಟೋ ಕ್ಲಬ್‌ನಲ್ಲಿದ್ದರು. ಎ.ಟಿ.ರಾಮಸ್ವಾಮಿ ಜೆಡಿಎಸ್‌ ಮಾಜಿ ಶಾಸಕರಾಗಿದ್ದರು. ಆದರೆ, ಈ ಬಾರಿಯ ಚುನಾವಣೆ ವೇಳೆ ಮಂಜು ಬಿಜೆಪಿಯಲ್ಲಿದ್ದು, ಯೋಗರಮೇಶ್‌ ಕಾಂಗ್ರೆಸ್‌ನಲ್ಲಿದ್ದಾರೆ. ರಾಮಸ್ವಾಮಿ ಹಾಲಿ ಶಾಸಕರಾಗಿದ್ದಾರೆ. ಯೋಗರಮೇಶ್‌ ಮೂವರು ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡಿದ್ದರು. ಕಾಂಗ್ರೆಸ್‌ 7, ಜೆಡಿಎಸ್‌-5, ಯೋಗರಮೇಶ್‌ ಬೆಂಬಲಿತ -3 ಮಂದಿ ಪಕ್ಷೇತರ ಸದಸ್ಯರು ಗೆದ್ದಿದ್ದರು. ಈ ಬಾರಿಯ ಚುನಾವಣೆ ವೇಳೆಗೆ ರಾಜಕೀಯ ಮುಖಂಡರು ಪಕ್ಷಾಂತರ ಮಾಡಿರುವ ಹಿನ್ನೆಲೆಯಲ್ಲಿ ಯಾವ ಪಕ್ಷ ಕ್ಕೆ ಬಹುಮತ ದೊರೆಯಲಿದೆ ಎನ್ನವುದನ್ನು ಕಾದು ನೋಡಬೇಕು.

ರಾಜಕೀಯ ವೇದಿಕೆಯಾದ ಪಪಂ ಚುನಾವಣೆ

ಮಾಜಿ ಸಚಿವ ಎ.ಮಂಜು ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ್ದಾರೆ. ಯೋಗರಮೇಶ್‌ ಕೂಡ ಬಿಜೆಪಿ ಬಿಟ್ಟು ಕಾಂಗ್ರೆಸ್‌ ಸೇರಿದ್ದಾರೆ. ಜೆಡಿಎಸ್‌ ಶಾಸಕ ರಾಮಸ್ವಾಮಿ ಹಾಲಿ ಇದ್ದಾರೆ. ಕಳೆದ ಬಾರಿ ಒಂದು ಸ್ಥಾನದ ಕೊರತೆಯಿಂದ ಪಪಂ ಆಡಳಿತ ಜೆಡಿಎಸ್‌ಗೆ ಕೈತಪ್ಪಿತ್ತು. ಕಾಂಗ್ರೆಸ್‌ ಅಧಿಕಾರದಲ್ಲಿತ್ತು. ಮೂವರು ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಕಾಂಗ್ರೆಸ್‌, ಜೆಡಿಎಸ್‌ ಪಕ್ಷ ಕ್ಕೆ ಯೋಗರಮೇಶ್‌ ಆಡಳಿತದಲ್ಲಿ ಸ್ಪರ್ಧೆ ನೀಡಿದ್ದರು. ಪಪಂ ಆಡಳಿತವನ್ನು ತನ್ನ ಪಕ್ಷ ದ ತೆಕ್ಕೆಗೆ ತೆಗೆದುಕೊಳ್ಳುವ ಸಲುವಾಗಿ ಶಾಸಕ ರಾಮಸ್ವಾಮಿ ಸೂಕ್ತ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ಗೆ ಸ್ಪರ್ಧೆ ನೀಡಿ ಗೆಲ್ಲುವ ತವಕದಲ್ಲಿರುವ ಮಾಜಿ ಸಚಿವ ಎ.ಮಂಜು ಕೂಡ ಮೊದಲ ಬಾರಿಗೆ ಪಪಂ ಆಡಳಿತವನ್ನು ಬಿಜೆಪಿಗೆ ತೆಗೆದುಕೊಳ್ಳುವ ಛಲದಲ್ಲಿ ಈಗಾಗಲೇ ಕಾರ್ಯಪ್ರವೃತ್ತವಾಗಿದ್ದಾರೆ. ಇದೇ ನಿಟ್ಟಿನಲ್ಲಿ ಕಾಂಗ್ರೆಸ್‌ ಪಕ್ಷ ಕ್ಕೆ ಪುನಃ ಪಪಂ ಆಡಳಿತವನ್ನು ಮುಂದುವರಿಸಲು ಯೋಗರಮೇಶ್‌ ಹಾಗೂ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಪ್ರಸನ್ನಕುಮಾರ್‌ ತಂತ್ರಗಾರಿಕೆ ಹೆಣೆಯುತ್ತಿದ್ದಾರೆ.

ವಾರ್ಡ್‌ ಮೀಸಲಾತಿ ವಿವರ

ಪ.ಪಂ.ನ ವಾರ್ಡ್‌- 1 ಪರಿಶಿಷ್ಟ ಜಾತಿ ಮಹಿಳೆ, ವಾರ್ಡ್‌-2 ಹಿಂದುಳಿದ ವರ್ಗ ಎ - ಮಹಿಳೆ, ವಾರ್ಡ್‌-3 ಹಿಂದುಳಿದ ವರ್ಗ ಎ, ವಾರ್ಡ್‌-4 ಸಾಮಾನ್ಯ ಮಹಿಳೆ, ವಾರ್ಡ್‌-5 ಸಾಮಾನ್ಯ, ವಾರ್ಡ್‌-6 ಸಾಮಾನ್ಯ ಮಹಿಳೆ, ವಾರ್ಡ್‌-7 ಸಾಮಾನ್ಯ, ವಾರ್ಡ್‌-8 ಸಾಮಾನ್ಯ, ವಾರ್ಡ್‌-9 ಪರಿಶಿಷ್ಟ ಜಾತಿ, ವಾರ್ಡ್‌-10 ಹಿಂದುಳಿದ ವರ್ಗ ಬಿ,ವಾರ್ಡ್‌-11 ಪರಿಶಿಷ್ಟ ಪಂಗಡ, ವಾರ್ಡ್‌-12 ಸಾಮಾನ್ಯ ಮಹಿಳೆ, ವಾಡ್‌-13 ಸಾಮಾನ್ಯ, ವಾರ್ಡ್‌-14 ಸಾಮಾನ್ಯ ಮಹಿಳೆ, ವಾರ್ಡ್‌-15 ಪರಿಶಿಷ್ಟ ಜಾತಿ - ಮಹಿಳೆ, ವಾರ್ಡ್‌-16 ಪರಿಶಿಷ್ಟ ಜಾತಿ, ವಾರ್ಡ್‌-17 ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ