Please enable javascript.ಎತ್ತಿನಹೊಳೆ ಯೋಜನೆ: 28ಕ್ಕೆ ಟೆಂಡರ್ ಪ್ರಕ್ರಿಯೆ ಪೂರ್ಣ - ಎತ್ತಿನಹೊಳೆ ಯೋಜನೆ: 28ಕ್ಕೆ ಟೆಂಡರ್ ಪ್ರಕ್ರಿಯೆ ಪೂರ್ಣ - Vijay Karnataka

ಎತ್ತಿನಹೊಳೆ ಯೋಜನೆ: 28ಕ್ಕೆ ಟೆಂಡರ್ ಪ್ರಕ್ರಿಯೆ ಪೂರ್ಣ

ವಿಕ ಸುದ್ದಿಲೋಕ 13 Jan 2014, 8:48 pm
Subscribe

ಎತ್ತಿನಹೊಳೆ ಯೋಜನೆ ಅನುಷ್ಠಾನಕ್ಕೆ 3,269.50 ಕೋಟಿ ರೂ. ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ನೀಡಿ ರಾಜ್ಯ ಸರಕಾರ ಟೆಂಡರ್ ಕರೆದಿದ್ದು, ಜ. 28ರಂದು ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಮಾಜಿ ಸಚಿವ ಬಿ.ಶಿವರಾಂ ಹೇಳಿದ್ದಾರೆ.

 28
ಎತ್ತಿನಹೊಳೆ ಯೋಜನೆ: 28ಕ್ಕೆ ಟೆಂಡರ್ ಪ್ರಕ್ರಿಯೆ ಪೂರ್ಣ
ಹಾಸನ: ಎತ್ತಿನಹೊಳೆ ಯೋಜನೆ ಅನುಷ್ಠಾನಕ್ಕೆ 3,269.50 ಕೋಟಿ ರೂ. ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ನೀಡಿ ರಾಜ್ಯ ಸರಕಾರ ಟೆಂಡರ್ ಕರೆದಿದ್ದು, ಜ. 28ರಂದು ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಮಾಜಿ ಸಚಿವ ಬಿ.ಶಿವರಾಂ ಹೇಳಿದ್ದಾರೆ.

ಯೋಜನೆಯ ಡಿಪಿಆರ್ ಆಗಿದ್ದು, 255 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಆಗಲಿದ್ದು, ಫೆ. 15ರ ಒಳಗೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಸೋಮವಾರ ದಾಖಲೆ ಸಹಿತ ಮಾಹಿತಿ ನೀಡಿದರು.

ಮೂಲ ಯೋಜನೆಗೆ ಒಟ್ಟು 8,532 ಕೋಟಿಯಾಗಿದ್ದು, ಪರಿಷ್ಕೃತ ಅಂದಾಜು 12,439 ಕೋಟಿ ರೂ. ಕ್ರಿಯಾಯೋಜನೆ ಸಿದ್ಧಪಡಿಸಲಾಗಿದೆ. 19 ಹೆಕ್ಟೇರ್ ಅರಣ್ಯ ಪ್ರದೇಶ ಸ್ವಾಧೀನ ಸಂಬಂಧ ಕೇಂದ್ರ ಪರಿಸರ ಸಚಿವಾಲಯದಿಂದ ಅನುಮತಿ ಪಡೆಯಲಾಗಿದೆ. ಒಟ್ಟು 239 ಹೆಕ್ಟೇರ್ ಭೂಮಿ ಯೋಜನೆಗೆ ಬಳಕೆಯಾಗಲಿದೆ ಎಂದು ತಿಳಿಸಿದರು.

ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಭಾಗದ ಜನರಿಗೆ ಕುಡಿಯುವ ನೀರನ್ನು ಒದಗಿಸಲು ರಾಜ್ಯ ಸರಕಾರ ತನ್ನ ಬದ್ಧತೆ ಪ್ರದರ್ಶಿಸುವ ಮೂಲಕ ಯೋಜನೆ ಅನುಷ್ಠಾನಕ್ಕೆ ಮುಂದಾಗಿದೆ. ಸಾಲಗಾಮೆ, ಅರಸೀಕೆರೆ ತಾಲೂಕಿನ ಕೆಲ ಭಾಗಕ್ಕೂ ಯೋಜನೆಯ ಪ್ರಯೋಜನ ದೊರೆಯಲಿದೆ ಎಂದು ಹೇಳಿದರು.

ಎತ್ತಿನಹೊಳೆ, ಹೊಂಗ್ರಳ್ಳ, ಕಾಡುಮನೆ ಪ್ರದೇಶದ ನೀರನ್ನು ಅರುವನಹಳ್ಳಿ ಬಳಿ ಸಂಗ್ರಹಿಸಲಾಗುವುದು. ಒಟ್ಟು 24 ಟಿಎಂಸಿ ನೀರು ಯೋಜನೆ ಲಭ್ಯವಾಗಲಿದೆ. ಪರಮಶಿವಯ್ಯ ವರದಿ ಅನ್ವಯ ಎಸ್.ಎಂ.ಕೃಷ್ಣ ನೇತೃತ್ವದ ಅಂದಿನ ಸರಕಾರ ಸರ್ವೆಗೆ ಹತ್ತು ಕೋಟಿ ನೀಡಿತ್ತು. ನಂತರ ಬಂದ ಸರಕಾರಗಳು ಉದಾಸೀನ, ನಿರ್ಲಕ್ಷ್ಯ ತೋರಿದ ಪರಿಣಾಮ ಯೋಜನೆ ಅನುಷ್ಠಾನ ವಿಳಂಬವಾಯಿತು ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಯೋಜನೆ ಅನುಷ್ಠಾನಕ್ಕೆ ಪ್ರಾಥಮಿಕವಾಗಿ ಒಂದು ಸಾವಿರ ಕೋಟಿ ರೂ.ಅನುದಾನ ಒದಗಿಸಿದ್ದಾರೆ. ಅರಸೀಕೆರೆ, ಕಡೂರು ಭಾಗಕ್ಕೂ ಕನಿಷ್ಠ ಮೂರು ಟಿಎಂಸಿ ನೀರು ಕೊಡಬೇಕು ಎಂಬುದು ಪಕ್ಷದ ಮುಖಂಡರ ಇಚ್ಛಾಶಕ್ತಿ ಹಾಗೂ ಒತ್ತಾಯವಾಗಿದ್ದು, ಸರಕಾರ ಇದನ್ನು ಅರ್ಥ ಮಾಡಿಕೊಳ್ಳುವ ಭರವಸೆ ಇದೆ ಎಂದರು.

ಕಣ್ಣೀರು-ಕಪಟ: ಎತ್ತಿನಹೊಳೆ ಯೋಜನೆ ಪ್ರಕ್ರಿಯೆ ಇಷ್ಟೆಲ್ಲ ಆದರೂ ಎಚ್.ಡಿ.ದೇವೇಗೌಡರು ಮಾತ್ರ ಚಕಾರ ಎತ್ತುತ್ತಿಲ್ಲ ಎಂಬುದನ್ನು ಗಮನಿಸಿದರೆ ಅವರಿಗೆ ಯೋಜನೆ ಬಗ್ಗೆ ಇರುವ ಕಾಳಜಿ ತೋರುತ್ತದೆ ಎಂದು ಶಿವರಾಂ ಟೀಕಿಸಿದರು.

ಅಂತರ್ಜಲಮಟ್ಟ ಕುಸಿದಿದೆ, ತೆಂಗಿನಮರ ನಾಶವಾಗಿವೆ ಎಂದು ತೆಂಗಿನಮರ ತಬ್ಬಿಕೊಂಡು ಕಣ್ಣೀರಿಡುವ ಕಪಟ ನಾಟಕ ಬಿಟ್ಟು ಅರಸೀಕೆರೆ ಸೇರಿದಂತೆ ಜಿಲ್ಲೆಯ ನೀರಾವರಿ ಯೋಜನೆಗೆ ಜೆಡಿಎಸ್ ಕೊಡುಗೆ ಏನು? ಎಂದು ಪ್ರಶ್ನಿಸಿದರು.

ಮಾಜಿ ಸಚಿವ ದಿ.ಜಿ.ಪುಟ್ಟಸ್ವಾಮಿಗೌಡರು ಆರಂಭಿಸಿದರು ಎಂಬ ದುರುದ್ದೇಶಕ್ಕೆ ಕಾಚೇನಹಳ್ಳಿ ಏತನೀರಾವರಿ ಯೋಜನೆ ಪೂರ್ಣಗೊಳ್ಳಲು ಬಿಡುತ್ತಿಲ್ಲ, ಗಂಡಸಿ ಹೋಬಳಿ ಮೂರನೇ ಅಂತದ ಯೋಜನೆಗೆ ತಡೆಯೊಡ್ಡಿದರು ಎಂದರು.

ಕೋಲಾರ, ಚಿಕ್ಕಬಳ್ಳಾಪುರ ಭಾಗಕ್ಕೆ ನೀರು ಹರಿಸಲು ಸಾಧ್ಯವಾದರೆ, ಸುದೀರ್ಘ ರಾಜಕಾರಣ ಮಾಡಿದ ಜೆಡಿಎಸ್ ಸಂಸದರಿಗೆ ಜಿಲ್ಲೆಯ ಬರಪೀಡಿತ ತಾಲೂಕಿಗೆ ನೀರು ಹರಿಸಲು ಏಕೆ ಸಾಧ್ಯವಾಗಲಿಲ್ಲ ಎಂಬುದನ್ನು ಮತದಾರ ಅರ್ಥಮಾಡಿಕೊಳ್ಳಬೇಕು ಎಂದರು.

ಎತ್ತಿನಹೊಳೆ ಯೋಜನೆ ಆಗಬಾರದು ಎಂಬ ಮನಸ್ಥಿತಿ ಹೊಂದಿರುವ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವೈಜ್ಞಾನಿಕ ಯೋಜನೆ, ಕೇಂದ್ರ ಸಚಿವ ವೀರಪ್ಪಮೊಯ್ಲಿ ಸುಳ್ಳುಬುರುಕ ಎಂದಿದ್ದಾರೆ. ಕುಟುಂಬ ರಾಜಕಾರಣಕ್ಕಾಗಿಯೇ ಕೊನೆಯುಸಿರಿನವರೆಗೆ ಹೋರಾಟ ಮಾಡುತ್ತೇನೆ ಎನ್ನುತ್ತಿದ್ದಾರೆ ಹೊರತು ರಾಜ್ಯದ ಉದ್ಧಾರಕಲ್ಲ ಎಂದು ಟೀಕಿಸಿದರು. ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ನಾರಾಯಣಗೌಡ, ಪಟೇಲ್ ಶಿವಪ್ಪ, ಅಮೀರ್‌ಜಾನ್, ಬಸವರಾಜು ಹಾಜರಿದ್ದರು.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ