ಆ್ಯಪ್ನಗರ

ಬೆಂಡೆಕಾಡಿನಲ್ಲಿ ಪುಂಡಾನೆ ಸೆರೆ

ತಾಲೂಕಿನ ವಡೂರು ಗ್ರಾಮದ ಸಮೀಪ ಬೆಂಡೆಕಾಡು ಎಂಬಲ್ಲಿ ಇಪ್ಪತ್ತು ವರ್ಷದ ಮತ್ತೊಂದು ಗಂಡಾನೆಯನ್ನು ಸೆರೆಹಿಡಿಯುವಲ್ಲಿ ಅರಣ್ಯ ಇಲಾಖೆ ಗುರುವಾರ ಯಶಸ್ವಿಯಾಗಿದೆ.

Vijaya Karnataka 15 Dec 2017, 3:00 am
ಸಕಲೇಶಪುರ: ತಾಲೂಕಿನ ವಡೂರು ಗ್ರಾಮದ ಸಮೀಪ ಬೆಂಡೆಕಾಡು ಎಂಬಲ್ಲಿ ಇಪ್ಪತ್ತು ವರ್ಷದ ಮತ್ತೊಂದು ಗಂಡಾನೆಯನ್ನು ಸೆರೆಹಿಡಿಯುವಲ್ಲಿ ಅರಣ್ಯ ಇಲಾಖೆ ಗುರುವಾರ ಯಶಸ್ವಿಯಾಗಿದೆ.
Vijaya Karnataka Web bende forest wild elephant arrest
ಬೆಂಡೆಕಾಡಿನಲ್ಲಿ ಪುಂಡಾನೆ ಸೆರೆ


ಸೋಮವಾರ ನಡೆದ ಕಾರ್ಯಾಚರಣೆ ವೇಳೆ ಅರವಳಿಕೆ ಚುಚ್ಚುಮದ್ದು ನೀಡಿದರೂ ಪ್ರಜ್ಞೆ ಕಳೆದುಕೊಳ್ಳದೆ ತಪ್ಪಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಗುರುವಾರ ಮಧ್ಯಾಹ್ನ 2ರ ಸುಮಾರಿಗೆ ಸಲಗ ಬೀಡು ಬಿಟ್ಟಿರುವ ತಾಣವನ್ನು ಇಲಾಖೆ ಸಿಬ್ಬಂದಿ ಪತ್ತೆಹಚ್ಚಿದರು.

ಬಳಿಕ ಪಳಗಿದ ಐದು ಆನೆಗಳೊಂದಿಗೆ ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ತಂಡ ಆನೆಗೆ ಅರವಳಿಕೆ ಚುಚ್ಚುಮದ್ದು ನೀಡಿತು. ಬಂಡೀಪುರದ ಅಭಯಾರಣ್ಯ ವಲಯದ ವೈದ್ಯ ಡಾ.ನಾಗರಾಜು, ನಾಗರಹೊಳೆ ಆನೆ ಧಾಮದ ಡಾ.ಮುಜೀಬ್‌, ಶಿವಮೊಗ್ಗದ ವಿನಯ್‌ ಕುಮಾರ್‌ ಹಾಗೂ ಇತರರ ತಂಡ ಕಾರ್ಯಾಚರಣೆ ಯಲ್ಲಿ ಭಾಗವಹಿಸಿದ್ದರು.

ಮೂರು ಬಾರಿ ಅರವಳಿಕೆ ನೀಡಿದ ಪರಿಣಾಮ, ಆನೆ ನೆಲಕ್ಕುರುಳದೆ ನಿಂತಲ್ಲೆ ಪ್ರಜ್ಞಾಹೀನ ಸ್ಥಿತಿಗೆ ತಲುಪಿತು. ಇದನ್ನು ಅರಿತ ತಂಡ, ಅಂತಿಮವಾಗಿ ಪಳಗಿದ ಆನೆಗಳ ಸಹಾಯದಿಂದ ಹಗ್ಗದಲ್ಲಿ ಕಟ್ಟಿ ಸಲಗವನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಯಿತು. ಬಂಧಿಯಾದ ಆನೆ ವಾಹನವೇರಲು ಒಂದಷ್ಟು ಸತಾಯಿಸಿತಾದರೂ, ಪಳಗಿದ ಆನೆಗಳು ಛಲ ಬಿಡದೆ ವಾಹನಕ್ಕೆ ತಳ್ಳಿದವು. ಸಲಗವನ್ನು ಸಕ್ರೆಬೈಲು ಆನೆ ಕ್ಯಾಂಪ್‌ಗೆ ಸಾಗಿಸಲಾಯಿತು.

ಕಾರಾರ‍ಯಚರಣೆ ಸಂದರ್ಭ ಮುಖ್ಯಅರಣ್ಯ ಸಂರಕ್ಷ ಣಾಧಿಕಾರಿ ಎ.ಕೆ.ಸಿಂಹ, ಡಿಎಫ್‌ಒ ಮಂಜುನಾಥ್‌, ಎಸಿಎಫ್‌ ಲಿಂಗರಾಜು, ಯಸಳೂರು ವಲಯ ಅರಣ್ಯಾಧಿಕಾರಿ ಅಭಿಲಾಷ್‌, ಸಕಲೇಶಪುರ ವಲಯದ ಮೋಹನ್‌ ಮುಂತಾದವರು ಹಾಜರಿದ್ದರು.

ಕಳೆದ ವಾರ ತಾಲೂಕಿನ ಹಳೆ ಹೊಂಕರಹಳ್ಳಿಯಲ್ಲಿ ವ್ಯಕ್ತಿಯ ಪ್ರಾಣ ಹಾನಿ ಆದ ನಂತರ ಸರಕಾರ ಎರಡು ಪುಂಡ ಆನೆಗಳನ್ನು ಹಿಡಿಯಲು ಆದೇಶ ಹೊರಡಿಸಿತ್ತು. ಇದರನ್ವಯ ನಾಲ್ಕು ದಿನಗಳ ಹಿಂದೆ ಬಾಳ್ಳು ಪೇಟೆಯ ರಾಜೇಂದ್ರಪುರದಲ್ಲಿ ಸಲಗವನ್ನು ಹಿಡಿದು ಸಾಗಿಸಲಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ