ಆ್ಯಪ್ನಗರ

ಕಾಡಾನೆ ಹಾವಳಿ ಪ್ರದೇಶದಲ್ಲಿ ರೈಲುಹಳಿ ತಡೆಗೋಡೆ ನಿರ್ಮಾಣ

ಹಾಸನ: ಕಾಡಾನೆ ಹಾವಳಿ ಪ್ರದೇಶ ಆಲೂರು ತಾಲೂಕಿನ ದೊಡ್ಡಬೆಟ್ಟ ಸುತ್ತ,ಮುತ್ತ 10ರಿಂದ 12 ಕಿಮೀ ವ್ಯಾಪ್ತಿಯಲ್ಲಿ ರೈಲುಹಳಿ ತಡೆಗೋಡೆ ನಿರ್ಮಾಣಕ್ಕೆ ಅರಣ್ಯ ಇಲಾಖೆ ಈ ಹಿಂದೆಯೇ ಪ್ರಸ್ತಾವ ಸಲ್ಲಿಸಿದ್ದು ರಾಜ್ಯಬಜೆಟ್‌ನಲ್ಲಿ 100 ಕೋಟಿ ಘೋಷಿಸಿರುವುದು ತಡೆಗೋಡೆ ನಿರ್ಮಾಣದ ಕನಸು ನನಸಾಗುವ ಸಾಧ್ಯತೆ ಹೆಚ್ಚಿದೆ.

Vijaya Karnataka 11 Feb 2019, 5:00 am
ಹಾಸನ: ಕಾಡಾನೆ ಹಾವಳಿ ಪ್ರದೇಶ ಆಲೂರು ತಾಲೂಕಿನ ದೊಡ್ಡಬೆಟ್ಟ ಸುತ್ತ,ಮುತ್ತ 10ರಿಂದ 12 ಕಿಮೀ ವ್ಯಾಪ್ತಿಯಲ್ಲಿ ರೈಲುಹಳಿ ತಡೆಗೋಡೆ ನಿರ್ಮಾಣಕ್ಕೆ ಅರಣ್ಯ ಇಲಾಖೆ ಈ ಹಿಂದೆಯೇ ಪ್ರಸ್ತಾವ ಸಲ್ಲಿಸಿದ್ದು ರಾಜ್ಯಬಜೆಟ್‌ನಲ್ಲಿ 100 ಕೋಟಿ ಘೋಷಿಸಿರುವುದು ತಡೆಗೋಡೆ ನಿರ್ಮಾಣದ ಕನಸು ನನಸಾಗುವ ಸಾಧ್ಯತೆ ಹೆಚ್ಚಿದೆ.
Vijaya Karnataka Web elephant problem railway tracks wall construction
ಕಾಡಾನೆ ಹಾವಳಿ ಪ್ರದೇಶದಲ್ಲಿ ರೈಲುಹಳಿ ತಡೆಗೋಡೆ ನಿರ್ಮಾಣ


ಆಲೂರು-ಸಕಲೇಶಪುರ, ಅರಕಲಗೂಡು ಭಾಗದಲ್ಲಿ ಕಳೆದ ಹತ್ತಾರು ವರ್ಷಗಳಿಂದ ಕಾಡಾನೆ ಸಮಸ್ಯೆ ಜ್ವಲಂತವಾಗಿದೆ. ಆನೆದಾಳಿಗೆ 63 ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 2013ರಿಂದ 2018ರ ಅವಧಿಯಲ್ಲಿ 20 ಜನ ಮೃತಪಟ್ಟಿದ್ದು, ತಲಾ ಐದು ಲಕ್ಷ ರೂ.ಪರಿಹಾರ ವಿತರಿಸಲಾಗಿದೆ. ಕಾಡಾನೆ ಹಾವಳಿ ತಡೆಗೆ ಶಾಶ್ವತ ಪರಿಹಾರ ರೂಪಿಸಬೇಕೆಂಬ ಈ ಭಾಗದ ಜನರ ಒತ್ತಾಯದ ಜತೆಗೆ ಪ್ರತಿಭಟನೆಯ ಬಿಸಿಯೂ ಸರಕಾರಕ್ಕೆ ಪದೇಪದೆ ಮುಟ್ಟುತ್ತಲೇ ಇದೆ.

ಸಬೂಬು:

ಸಾವು-ನೋವು ಸಂಭವಿಸಿದಾಗಲೆಲ್ಲ ಪುಂಡಾನೆ ಹಿಡಿದು ಸಾಗಿಸುತ್ತೇವೆ ಎನ್ನುವುದು ಒಂದಾನೆ ಹಿಡಿದು ಸಾಗಿಸಿ ಕೈಕಟ್ಟಿ ಕೂರುವುದು. ಮತ್ತೊಮ್ಮೆ ಕೂಗು ಮೊಳಗಿದಾಗ ಆನೆ ಕಾರಿಡಾರ್‌ ಮಾಡುತ್ತೇವೆ, ಸೋಲಾರ್‌ ಫೆನ್ಸಿಂಗ್‌ ಮಾಡುತ್ತೇವೆ ಎನ್ನುವ ಭರವಸೆ ಕೇಳಿ ಕೇಳಿ ರೈತಾಪಿವರ್ಗ ಹಾಗೂ ಈಭಾಗದ ಜನತೆ ರೋಸಿಹೋಗಿದ್ದಾರೆ. ಕಾಡಾನೆ ಜನತೆಯ ಹೋರಾಟದ ಫಲ ಎಂಬಂತೆ ರಾಜ್ಯ ಬಜೆಟ್‌ನಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಕಾಡಾನೆ ಪ್ರದೇಶದಲ್ಲಿ ರೈಲ್ವೆಹಳಿ ತಡೆಗೋಡೆ ನಿರ್ಮಿಸಲು 100 ಕೋಟಿ ಘೋಷಣೆ ಮಾಡಿದ್ದಾರೆ. ಅದರಲ್ಲಿ ಜಿಲ್ಲೆಗೆ ದಕ್ಕಬಹುದಾದ ಹಣವೆಷ್ಟು ಎಂಬುದರ ಸ್ಪಷ್ಟತೆ ಇಲ್ಲ.

ಪ್ರಸ್ತಾವ: ಅರಣ್ಯ ಇಲಾಖೆ ಮಾತ್ರ ಆಲೂರು ತಾಲೂಕಿನ ದೊಡ್ಡಬೆಟ್ಟ ಸುತ್ತ 10ರಿಂದ 12 ಕಿಮೀ ವ್ಯಾಪ್ತಿಯಲ್ಲಿ ರೈಲ್ವೆಹಳಿ ತಡೆಗೋಟೆ ನಿರ್ಮಾಣ ಅಗತ್ಯ ಎಂದು ಪ್ರಸ್ತಾವ ಸಲ್ಲಿಸಿದೆ. ಈ ರೀತಿ ತಡೆಗೋಡೆಗೆ ಪ್ರತಿ ಕಿಮೀಗೆ ಅಂದಾಜು ಒಂದುಕೋಟಿ ಎಂಬುದು ಸರಕಾರಿ ಲೆಕ್ಕಾಚಾರ. ಅದರಂತೆ 12 ಕೋಟಿ ಅಗತ್ಯವಿದ್ದು, ಅಷ್ಟು ಹಣ ಮಂಜೂರು ಮಾಡಿಸಿಕೊಂಡು ಬರುವುದು ಜಿಲ್ಲಾ ಉಸ್ತುವಾರಿ ಹಾಗೂ ಸೂಪರ್‌ ಸಿಎಂ ಎಚ್‌.ಡಿ.ರೇವಣ್ಣ ಅವರಿಗೆ ದೊಡ್ಡ ಕೆಲಸವಲ್ಲ ಎಂಬುದು ಜನಾಭಿಪ್ರಾಯ.

ವರ್ಷಬೇಕು: ಬಜೆಟ್‌ನಲ್ಲಿ ರೈಲ್ವೆಹಳಿ ತಡರಗೋಡೆ ಯೋಜನೆ ಘೋಷಣೆ ಆಗಿದ್ದು, ಅಧಿವೇಶನದಲ್ಲಿ ಅನುಮೋದನೆ ಪಡೆದು, ಅನುದಾನ ಬಿಡುಗಡೆಗೊಂಡು ಅನುಷ್ಠಾನಗೊಳಿಸಬೇಕಾದರೆ ಕನಿಷ್ಠ ವರ್ಷಬೇಕು ಎನ್ನಲಾಗಿದೆ. ಈ ಯೋಜನೆಯಿಂದ ಕಾಡಾನೆ ಸಮಸ್ಯೆ ನಿವಾರಣೆ ಆಗುವುದೇ ಎಂಬ ಪ್ರಶ್ನೆಗೆ ರೈತರ ಉತ್ತರ ಆಗಲ್ಲ ಎಂಬುದೇ ಆಗಿದೆ. ಜತೆಗೆ ಕಾಡನ್ನು ಇನ್ನಷ್ಟು ಹಾಳುಮಾಡಿ, ಸರಕಾರದ ಹಣ ಪೋಲು ಮಾಡುವುದೇ ಆಗಿದೆ ಎಂದು ಆಕ್ರೋಶದ ಮಾತು ಕೇಳಿಬರುತ್ತಿದೆ. ಇದರ ಬದಲು ಕಾಡಾನೆ ಪ್ರದೇಶದಲ್ಲಿ ಇರುವ ಕಾಡಾನೆಗಳು ನಾಡಿನತ್ತ ಬರದಂತೆ ಒಳಭಾಗದಲ್ಲಿ ಬಿದಿರು, ಬಾಳೆ ಸೇರಿದಂತೆ ಆಹಾರ ಉತ್ಪಾದನೆ, ಕುಡಿಯುವ ನೀರು ಇದನ್ನು ಒದಗಿಸುವುದು ಬಿಟ್ಟು ಕಂಬಿ ಹಾಕಿದರೆ ಅವಕ್ಕೆ ದಾಟುವ ಬುದ್ಧಿ ಇಲ್ಲವೇ? ಮನುಷ್ಯನಿಗಿಂತ ಬುದ್ದಿವಂತ ಕಾಡಾನೆಗಳನ್ನು ಕಂಬಿಹಾಕಿ ತಡೆಯುವುದು ಕಷ್ಟ,ಕಷ್ಟ ಎನ್ನುತ್ತಾರೆ ಪರಿಸರವಾದಿಗಳು.

ಪ್ರತ್ಯೇಕ ಶಾಲೆ ಆಗುವುದೆ?: ಕಾಡಾನೆ ಪ್ರದೇಶದ ವಿದ್ಯಾರ್ಥಿಗಳ ವ್ಯಾಸಂಗದ ದೃಷ್ಟಿಯಿಂದ ಸುರಕ್ಷಿತ ಪ್ರದೇಶದಲ್ಲಿ ವಸತಿ ಶಾಲೆ,ಕಾಲೇಜು ಪ್ರಾರಂಭಿಸಲಾಗುವುದು ಎಂದು ಸಚಿವ ಎಚ್‌.ಡಿ.ರೇವಣ್ಣ ಇತ್ತೀಚಿನ ದಿನದಲ್ಲಿ ಪ್ರಸ್ತಾಪಿಸುತ್ತಲೇ ಬಂದಿದ್ದರು. ಆದರೆ ಆ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪವಾಗಿಲ್ಲ.
----------
ಆಲೂರು ತಾಲೂಕಿನ ದೊಡ್ಡಬೆಟ್ಟ ಸುತ್ತ 10ರಿಂದ 12 ಕಿಮೀ ವ್ಯಾಪ್ತಿಯಲ್ಲಿ ರೈಲ್ವೆ ಹಳಿ ತಡೆಗೋಟೆ ನಿರ್ಮಾಣ ಅಗತ್ಯ ಎಂದು ಪ್ರಸ್ತಾವ ಸಲ್ಲಿಸಿದೆ. ಇದರೊಂದಿಗೆ ಸೋಲಾರ್‌ ಅಳವಡಿಕೆ ಕುರಿತು ಪ್ರಸ್ತಾವ ಸಲ್ಲಿಸಲಾಗಿದೆ.
-ಸಿವರಾಂಬಾಬು ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಸನ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ