ಆ್ಯಪ್ನಗರ

ಕಾಫಿ ಬೀಜ ಮಾರಾಟ ವಿವಾದ: ಮಗನನ್ನೇ ಗುಂಡಿಟ್ಟು ಕೊಂದ ತಂದೆ

ಕಾಫಿಬೀಜ ತುಂಬುತ್ತಿದ್ದಾಗ ಕಾಫಿ ಬೀಜ ಮಾರಾಟ ಮಾಡುವ ಬಗ್ಗೆ ತಂದೆ ಮಗ ನಡುವೆ ನಡೆದ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿದೆ. ಆ ನಂತರ ತಂದೆಯೇ ಮಗನನ್ನು ಗುಂಡಿಟ್ಟು ಕೊಂದಿದ್ದಾರೆ.

Vijaya Karnataka Web 17 Feb 2019, 7:50 am
ಬೇಲೂರು: ಕಾಫಿ ಬೀಜ ಮಾರಾಟ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ತಂದೆ ಮತ್ತು ಮಗನ ನಡುವೆ ನಡೆದ ಜಗಳ ವಿಕೋಪಕ್ಕೆ ತಿರುಗಿ ತಂದೆಯೇ ಮಗನನ್ನು ಗುಂಡಿಟ್ಟು ಕೊಂದ ಘಟನೆ ತಾಲೂಕಿನ ಅರೇಹಳ್ಳಿ ಹೋಬಳಿ ಸುಳುಗಳಲೆ ಶನಿವಾರ ನಡೆದಿದೆ.
Vijaya Karnataka Web ಶೂಟಿಂಗ್‌
ಶೂಟಿಂಗ್‌


ಬಸಪ್ಪಗೌಡ ಎಂಬುವವರ ಪುತ್ರ ಉಮೇಶ್‌(42) ಕೊಲೆಯಾದವರು. ಅವರಿಗೆ ಪತ್ನಿ, 7 ವರ್ಷದ ಮಗಳಿದ್ದು ಹತ್ಯೆ ಮಾಡಿರುವ ತಂದೆ ತಲೆಮರೆಸಿಕೊಂಡಿದ್ದಾರೆ.

ಬಸಪ್ಪಗೌಡನಿಗೆ 10 ಎಕರೆಯಷ್ಟು ಕಾಫಿ ತೋಟವಿದ್ದು , ಮೂವರು ಪುತ್ರರು ಹಾಗೂ ಓರ್ವ ಪುತ್ರ ಇದ್ದಾರೆ. ಇವರಲ್ಲಿ ಮೂರು ಜನ ಗಂಡು ಮಕ್ಕಳು ಇತರ ಉದ್ಯೋಗದ ನಿಮಿತ್ತ ಹೊರಗಡೆ ಇದ್ದಾರೆ. ಪುತ್ರ ಉಮೇಶನೊಂದಿಗೆ ತಂದೆ ಬಸಪ್ಪಗೌಡ ವಾಸಿಸುತ್ತಿದ್ದರು. ಶನಿವಾರ ಬೆಳಗ್ಗೆ ಸುಳುಗಳಲೆಯಲ್ಲಿರುವ ತಮ್ಮ ವಾಸದ ಮನೆಯ ಸಮೀಪ ಕಾಫಿಬೀಜ ತುಂಬುತ್ತಿದ್ದಾಗ ಕಾಫಿ ಬೀಜ ಮಾರಾಟ ಮಾಡುವ ಬಗ್ಗೆ ಉಮೇಶ್‌, ತಂದೆಯ ಬಳಿ ವಿಷಯ ಪ್ರಸ್ತಾಪಿಸಿದ್ದಾರೆ. ಆಗ ಕಾಫಿ ಮಾರಾಟಕ್ಕೆ ಬಸಪ್ಪಗೌಡ ವಿರೋಧಿಸಿದ್ದಾರೆ ಎನ್ನಲಾಗಿದೆ.

ಇದೇ ವಿಚಾರಕ್ಕೆ ಸಂಬಂಧಪಟ್ಟಂತೆ ಇಬ್ಬರ ನಡುವೆ ಜಗಳ ನಡೆದು ವಿಕೋಪಕ್ಕೆ ತಿರುಗಿದೆ. ಮಗನ ಮಾತಿಗೆ ಆಕ್ರೋಶಗೊಂಡ ತಂದೆ ಬಸಪ್ಪಗೌಡ ಮನೆಯಲ್ಲಿದ್ದ ಬಂದೂಕಿನಿಂದ ಮಗನ ಮೇಲೆ ಗುಂಡು ಹಾರಿಸಿದ್ದಾರೆ. ಗಾಯಗೊಂಡ ಉಮೇಶನನ್ನು ಹಾಸನ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲ.

ಪತ್ನಿ ನಂದಿನಿ ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಸಿಪಿಐ ಲೋಕೇಶ್‌ ಹಾಗೂ ಅರೇಹಳ್ಳಿ ಎಸ್‌ಐ ಬಾಲು ಭೇಟಿ ನೀಡಿ ಪರಿಶೀಲಿಸಿ ಮಾಹಿತಿ ಪಡೆದರು. ಆರೋಪಿ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ