ಆ್ಯಪ್ನಗರ

ಅತಿವೃಷ್ಟಿ ಹಾನಿ: ಸರಕಾರಕ್ಕೆ ನಿಖರ ವರದಿ ಸಲ್ಲಿಸಲು ಸೂಚನೆ

ಜಿಲ್ಲೆಯಲ್ಲಿ ತಲೆದೋರಿದ ಪ್ರವಾಹ ಪರಿಸ್ಥಿತಿ ಮತ್ತು ಪರಿಹಾರ ಕ್ರಮಗಳ ಕುರಿತು ಜಿಲ್ಲಾಧಿಕಾರಿ ಕಚೇರಿಯಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಮಹತ್ವದ ಸಭೆ ನಡೆದು ನಿಖರವಾಗಿ ನಷ್ಟದ ವರದಿಯನ್ನು ಸರಕಾರಕ್ಕೆ ಸಲ್ಲಿಸುವಂತೆ ಜನಪ್ರತಿನಿಧಿಗಳು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದರು.

Vijaya Karnataka 15 Aug 2019, 5:00 am
ಹಾಸನ: ಜಿಲ್ಲೆಯಲ್ಲಿ ತಲೆದೋರಿದ ಪ್ರವಾಹ ಪರಿಸ್ಥಿತಿ ಮತ್ತು ಪರಿಹಾರ ಕ್ರಮಗಳ ಕುರಿತು ಜಿಲ್ಲಾಧಿಕಾರಿ ಕಚೇರಿಯಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಮಹತ್ವದ ಸಭೆ ನಡೆದು ನಿಖರವಾಗಿ ನಷ್ಟದ ವರದಿಯನ್ನು ಸರಕಾರಕ್ಕೆ ಸಲ್ಲಿಸುವಂತೆ ಜನಪ್ರತಿನಿಧಿಗಳು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದರು.
Vijaya Karnataka Web HSN-HSN13N4


ಕಳೆದ ಒಂದು ವಾರದಲ್ಲಿ ಸುರಿದ ಜಡಿ ಮಳೆ ಜಿಲ್ಲೆಯಲ್ಲಿ ಉಂಟು ಮಾಡಿದ ಜನ, ಜಾನುವಾರುಗಳ ಜೀವಹಾನಿ, ಕೆರೆ, ರಸ್ತೆಗಳು, ಸೇತುವೆಗಳು ಸೇರಿದಂತೆ ಸಾರ್ವಜನಿಕರ ಆಸ್ತಿ ಹಾನಿಗೆ ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳ ಹಾಗೂ ಮಾಡಬೇಕಿರುವ ತಾತ್ಕಾಲಿಕ ಮತ್ತು ಶಾಶ್ವತ ಪರಿಹಾರಗಳ ಕುರಿತು ನಡೆದ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು.

ಜಿಲ್ಲೆಯಲ್ಲಿ ಪ್ರವಾಹದಿಂದ ಸಂತ್ರಸ್ತರಾದವರೆಲ್ಲರಿಗೂ ಸೂಕ್ತ ಪರಿಹಾರ ದೊರೆಯಬೇಕು. ಮನೆ ಕಳೆದುಕೊಂಡವರಿಗೆ ವಸತಿ ವ್ಯವಸ್ಥೆ ಮಾಡಬೇಕು. ಒಂದು ವೇಳೆ ಹಕ್ಕು ಪತ್ರ ಇರದಿದ್ದರೂ ಮಾನವೀಯತೆ ದೃಷ್ಟಿಯಿಂದ ಪರಿಗಣಿಸಿ ಗೃಹ ಯೋಜನೆಯಡಿ ಸೂರು ಕಲ್ಪಿಸಬೇಕು. ಆತುರ ಮಾಡದೆ ನಿಖರವಾಗಿ ನಷ್ಟವನ್ನು ಅಂದಾಜಿಸಿ ಸರಕಾರಕ್ಕೆ ವರದಿ ಸಲ್ಲಿಸುವಂತೆ ಸಂಸದರಾದ ಪ್ರಜ್ವಲ್‌ರೇವಣ್ಣ, ಶಾಸಕರಾದ ಎಚ್‌.ಡಿ.ರೇವಣ್ಣ, ಎ.ಟಿ.ರಾಮಸ್ವಾಮಿ, ಎಚ್‌.ಕೆ.ಕುಮಾರಸ್ವಾಮಿ, ಪ್ರೀತಂ.ಜೆ.ಗೌಡ, ಕೆ.ಎಂ.ಶಿವಲಿಂಗೇಗೌಡ ಮತ್ತು ವಿಧಾನ ಪರಿಷತ್‌ ಸದಸ್ಯರಾದ ಎಂ.ಎ.ಗೋಪಾಲಸ್ವಾಮಿ ಅಧಿಕಾರಿಗಳಿಗೆ ತಿಳಿಸಿದರು.

ಈ ಬಾರಿ ಹಿಂದೆಂದೂ ಕಂಡರಿಯದ ಪ್ರವಾಹ ಉಂಟಾಗಿದೆ ಕೇವಲ 5ದಿನಗಳ ಕಾಲ ಸುರಿದ ಮಳೆ ಜಿಲ್ಲೆಯ ಸಾವಿರಾರು ಜನರ ಬದುಕನ್ನು ಹೈರಾಣಾಗಿಸಿದೆ. ಸಕಲೇಶಪುರ, ಅರಕಲಗೂಡು, ಹೊಳೆನರಸೀಪುರಗಳಲ್ಲಿ ಪ್ರವಾಹದಿಂದ ನೂರಾರು ಮನೆಗಳು ಕುಸಿದಿವೆ. ಜಿಲ್ಲೆಯಾದ್ಯಂತ ನೂರಾರು ಕಿಲೋಮೀಟರ್‌ ರಸ್ತೆ ದುಸ್ಥಿತಿ ತಲುಪಿದೆ. ಕೆರೆಗಳು ಒಡೆದಿವೆ ಎಲ್ಲವನ್ನು ಸರಿಪಡಿಸಬೇಕಾಗಿದೆ. ಅದೇ ರೀತಿ ಕಾಫಿ, ಭತ್ತ, ಬಾಳೆ, ರಾಗಿ, ಆಲೂಗೆಡ್ಡೆ, ಶುಂಠಿ, ಹೊಗೆಸೊಪ್ಪು ಮತ್ತಿತರ ಬೆಳೆ ಹಾನಿಯಾಗಿದೆ. ಕಂದಾಯ, ಕೃಷಿ, ತೋಟಗಾರಿಕೆ, ರೇಷ್ಮೆ, ನೀರಾವರಿ ಇಲಾಖೆಗಳ ಅಧಿಕಾರಿಗಳು ಬೆಳೆ ಹಾನಿ ಅಂದಾಜಿತ ವರದಿ ಮಾಡಬೇಕು, ಎಲ್ಲರಿಗೂ ಸೂಕ್ತ ಪರಿಹಾರ ದೊರೆಯಬೇಕು ಎಂದು ಮನವಿ ಮಾಡಿದರು.

ಶಿರಾಡಿ ಘಾಟ್‌ ರಾಷ್ಟ್ರೀಯ ಹೆದ್ದಾರಿಯ ಹಲವು ಕಡೆ ಭೂಕುಸಿತ ಉಂಟಾಗಿದ್ದು ಶಾಶ್ವತ ಪರಿಹಾರ ಕ್ರಮ ಕೈಗೊಳ್ಳಬೇಕು, ಹಾಸನದಿಂದ ದೋಣಿಗಲ್‌ ವರೆಗೆ ರಸ್ತೆ ಅಭಿವೃದ್ಧಿ ಕಾರ್ಯ ಕುಂಠಿತವಾಗಿದ್ದು, ಕೂಡಲೇ ಗುತ್ತಿಗೆದಾರರನ್ನು ಬದಲಿಸಿ ಬೇಗ ಕೆಲಸ ಮುಗಿಸಲು ಇಲಾಖಾ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಸಂಸದರು ಹಾಗೂ ಶಾಸಕರು ಸಭೆಯಲ್ಲಿ ಒತ್ತಾಯಿಸಿದರು.

ಒಡೆದ ಕೆರೆಗಳು ಬೇಗ ದುರಸ್ತಿಯಾಗಬೇಕು, ರಸ್ತೆಗಳ ಸುರಕ್ಷ ತೆಗೆ ಹೆಚ್ಚು ನಿಗಾವಹಿಸಬೇಕು ಎಂದು ಶಾಸಕರು ಮನವಿ ಮಾಡಿದರು. ಇದೇ ವೇಳೆ ಕಳೆದ ಮುಂಗಾರಿನಲ್ಲಾದ ಹಾನಿಯ ಎರಡನೇ ಹಂತದ ಕಾಮಗಾರಿ ಕೈಗೆತ್ತಿಕೊಳ್ಳಲು ಆಗುತ್ತಿರುವ ವಿಳಂಬ, ಪಾರದರ್ಶಕ ಕಾಯ್ದೆ ವಿನಾಯಿತಿಗೆ ಆಗುತ್ತಿರುವ ಅಡೆತಡೆ, ಕಾಮಗಾರಿಗಳ ತುಂಡು ಗುತ್ತಿಗೆ ನೀಡುವ ಕುರಿತು ಚರ್ಚೆ ನಡೆದು 4 ಜಿ ವಿನಾಯಿತಿಗಾಗಿ ಮುಂದಿನ 8 ದಿನಗಳ ಕಾಲಕಾಯ್ದು ಆನಂತರ ಟೆಂಡರ್‌ ಪ್ರಕ್ರಿಯೆ ನಡೆಸಲು ಸೂಚನೆ ನೀಡಲಾಯಿತು.

ಜಿಲ್ಲೆಯಲ್ಲಿ ಪ್ರವಾಹ ಉಂಟಾದರೂ ಹಲವೆಡೆ ಇನ್ನೂ ಮುಂದುವರೆದ ಬರ ಪರಿಸ್ಥಿತಿ, ಅತೀವೃಷ್ಟಿಯಿಂದ ರೈತರಿಗೆ ಆಗಿರುವ ಹಾನಿಯ ಬಗ್ಗೆ ಜನ ಪ್ರತಿನಿಧಿಗಳ, ಅಧಿಕಾರಿಗಳ ಗಮನ ಸೆಳೆದು ನಷ್ಟ ಪರಿಹಾರ ವಿಮಾ ಸೌಲಭ್ಯ ಒದಗಿಸುವಂತೆ ಸೂಚನೆ ನೀಡಿದರು.

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನವೀನ್‌ರಾಜ್‌ಸಿಂಗ್‌ ಮಾತನಾಡಿ, ಈ ವರೆಗೆ ಆಗಿರುವ ನಷ್ಟಗಳನ್ನು ಅಂದಾಜಿಸಲಾಗಿದೆ. ತುರ್ತು ಪರಿಹಾರ ಕ್ರಮಗಳಿಗೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಶಾಶ್ವತ ಪರಿಹಾರ ಕ್ರಮಗಳಿಗೆ ಅನುದಾನ ದೊರೆಯಲಿದೆ. ಇದಕ್ಕೆ ಜನ ಪ್ರತಿನಿಧಿಗಳ ಸಹಕಾರ ಅಷ್ಟೇ ಮುಖ್ಯ ಎಂದರು.

ಜಿಲ್ಲಾಧಿಕಾರಿ ಅಕ್ರಂ ಪಾಷ ಮಾತನಾಡಿ ,ತಮ್ಮ ಬಳಿ ಇದ್ದ ಅನುದಾನವನ್ನು ತಾಲೂಕುವಾರು ಹಂಚಿಕೆ ಮಾಡಿ ಬಿಡುಗಡೆ ಮಾಡಲಾಗಿದೆ. ಅದನ್ನು ನಾಳೆಯೇ ಡ್ರಾ ಮಾಡಿ ಪಿ.ಡಿ. ಖಾತೆಯಲ್ಲಿ ಇರಿಸಿಕೊಂಡು ಎಲ್ಲಾ ಗ್ರಾಮಗಳಿಗೂ ಅಧಿಕಾರಿಗಳನ್ನು ಕಳುಹಿಸಿ ಅತೀವೃಷ್ಟಿ ಹಾನಿ ನಷ್ಟವನ್ನು ನಿಖರವಾಗಿ ಅಂದಾಜು ಮಾಡಿ ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಕೊರತೆ ಉಂಟಾಗದಂತೆ ನಿಗಾವಹಿಸಿ ಎಂದರು.

ಈಗಾಗಲೇ ಪ್ರವಾಹ ಸಂತ್ರಸ್ತರಿಗೆ ತಾತ್ಕಾಲಿಕ ಆಶ್ರಯ ಕೇಂದ್ರಗಳನ್ನು ತೆರೆಯಲಾಗಿದ್ದು ಮನೆ ಕಳೆದುಕೊಂಡವರನ್ನು ಇನ್ನು ಒಂದಿಷ್ಟು ದಿನ ಅಲ್ಲಿಯೇ ಇರಿಸಿಕೊಳ್ಳಲಾಗುವುದು. ಎಲ್ಲಾ ರೀತಿಯ ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಒ ಎಂ.ಎಲ್‌. ವೈಶಾಲಿ, ಉಪ ಅರಣ್ಯ ಸಂರಕ್ಷ ಣಾಧಿಕಾರಿ ಸಿವರಾಂ ಬಾಬು, ಉಪ ವಿಭಾಗಾಧಿಕಾರಿ ಡಾ.ಎಚ್‌.ಎಲ್‌. ನಾಗರಾಜ್‌, ಕವಿತ ರಾಜಾರಾಂ ಮತ್ತಿತರರು ಹಾಜರಿದ್ದರು .

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ